Sunday, 6th October 2024

Rohit Sharma : ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿಭಿನ್ನ ಸಾಧನೆ ಮಾಡಿದ ರೋಹಿತ್ ಶರ್ಮಾ

Rohit Sharma

ಬೆಂಗಳೂರು: ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಟೆಸ್ಟ್ ಇನಿಂಗ್ಸ್‌ ಒಂದರ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ನಾಲ್ಕನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಈ ಪಟ್ಟಿಯಲ್ಲಿರುವ ನಾಲ್ವರು ಆಟಗಾರರಲ್ಲಿ ಮೂವರು ಭಾರತೀಯರು.

ಕಾನ್ಪುರದ ಗ್ರೀನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಬಾಂಗ್ಲಾದೇಶವನ್ನು 233 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಫಾರ್ಮ್‌ನಲ್ಲಿರುವ ವೇಗಿ ಹಸನ್ ಮಹಮೂದ್ ವಿರುದ್ಧ ಮೊದಲ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಹೊಡೆಯುವ ಮೂಲಕ ಯಶಸ್ವಿ ಜೈಸ್ವಾಲ್‌ ತಂಡವನ್ನು ಮುನ್ನಡೆಸಿದರು. ಬಳಿಕ ರೋಹಿತ್ ಶರ್ಮಾ ಸ್ಟ್ರೈಕ್ ತೆಗೆದುಕೊಂಡು ಖಲೀಲ್ ಅಹ್ಮದ್ ಎದುರಿಸಿದರು.

ರೋಹಿತ್ ತಮ್ಮ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದರು. ಎಸ್ಜಿ ಚೆಂಡನ್ನು ಲಾಂಗ್-ಆನ್‌ನಲ್ಲಿ ಬೌಂಡರಿ ಗೆರೆಯಾಚೆ ದಾಟಿಸಿದರು. ಬಳಿಕ 37 ವರ್ಷದ ಆಟಗಾರ ಟ್ರೇಡ್ಮಾರ್ಕ್ ಪುಲ್ ಶಾಟ್ ಮೂಲಕ ಡೀಪ್‌ ಸ್ಕ್ವೇರ್‌ ಮೂಲಕ ಸಿಕ್ಸರ್ ಬಾರಿಸಿದರು. ಈ ಮೂಲಕ ಮೊದಲ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಫಾಫಿ ವಿಲಿಯಮ್ಸ್, ಸಚಿನ್ ತೆಂಡೂಲ್ಕರ್ ಮತ್ತು ಉಮೇಶ್ ಯಾದವ್ ಅವರೊಂದಿಗೆ ಸೇರಿಕೊಂಡರು.

ಇದನ್ನೂ ಓದಿ: IPL 2025: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಕಾರಣವೇನು?

ಕಾನ್ಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿರುವ ಬಾಂಗ್ಲಾದೇಶ ತಂಡ 233 ರನ್ ಬಾರಿಸಿದರು. 74.2 ಓವರ್‌ಗಳ ಆಟದಲ್ಲಿ ಬಾಂಗ್ಲಾದ ಮೊಮಿನುಲ್ ಹಕ್‌ (107 ರನ್‌) ಶತಕ ಬಾರಿಸಿದರು. ನಾಯಕ ನಜ್ಮುಲ್ ಹೊಸೈನ್ 31 ರನ್ ಬಾರಿಸಿದರು. ಮೆಹೆದಿ ಹಸನ್ 20 ರನ್ ಬಾರಿಸಿದರು. ಶದ್ಮನ್ ಇಸ್ಲಾಮ್ 24 ರನ್ ಬಾರಿಸಿದರು.