ಚಂಡೀಗಢ: ಕೆಲವರು ತಮ್ಮ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಅದು ಕೆಲವರ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿ ಉಳಿದುಬಿಡುತ್ತದೆ. ಆದರೆ ಮೈಶಾ ದೀಕ್ಷಿತ್ ಎನ್ನುವ ಹುಡುಗಿಗೆ 13ನೇ ವರ್ಷದ ಹುಟ್ಟುಹಬ್ಬದ ಆಚರಣೆ ತುಂಬಾ ಆಘಾತವನ್ನುಂಟುಮಾಡಿದೆ. ಭಾನುವಾರ ಚಂಡೀಗಢದ ಇಂಡಸ್ಟ್ರೀಯಲ್ ಏರಿಯಾ ಹಂತ 1ರ ಎಲಾಂಟೆ ಮಾಲ್ನಲ್ಲಿ ಮೈಶಾ ಅವಳ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಆ ದಿನ ಮೈಶಾ ದೀಕ್ಷಿತ್ ಆ ಮಾಲ್ನಲ್ಲಿ ಪೋಟೊಗಳನ್ನು ತೆಗೆಯುತ್ತಿದ್ದಳು. ಆಗ ಕಂಬದಿಂದ ದೊಡ್ಡ ಗ್ರಾನೈಟ್ ಚಪ್ಪಡಿಯೊಂದು ಕುಸಿದು ಬಿದ್ದಿದೆ. ಇದರ ಪರಿಣಾಮ 13 ವರ್ಷದ ಮೈಶಾ ಮತ್ತು ಅವಳ ಚಿಕ್ಕಮ್ಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲಾಂಟೆ ಮಾಲ್ಗೆ ಮೈಶಾ ಅವರ ಬರ್ತ್ಡೇಯನ್ನು ಆಚರಿಸಲು ಆಕೆಯ ಕುಟುಂಬ ಬಂದಾಗ ಈ ಘಟನೆ ನಡೆದಿದೆ. ಚಂಡೀಗಢದ ಸೆಕ್ಟರ್ 22ರ ನಿವಾಸಿ ಮೈಶಾ ಮತ್ತು ಆಕೆಯ ಚಿಕ್ಕಮ್ಮ ಸುರಭಿ ಜೈನ್ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಶಾಳ ಸೊಂಟದ ಮೂಳೆ ಮುರಿತಕ್ಕೊಳಗಾಗಿದ್ದು, ಮತ್ತು ಪಕ್ಕೆಲುಬುಗಳ ಮೇಲೆ ಗಾಯಗಳಾಗಿದೆ. ಆಕೆಯ ಚಿಕ್ಕಮ್ಮನ ತಲೆಗೆ ಗಂಭೀರ ಗಾಯಗಳಿಗಾಗಿ ಹೊಲಿಗೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬರ್ತ್ಡೇ ಸೆಲೆಬ್ರೆಷನ್ ಬಳಿಕ ಕುಟುಂಬದ ಎಂಟು ಸದಸ್ಯರು ಮಾಲ್ನೊಳಗಿನ ರೆಸ್ಟೋರೆಂಟ್ನಲ್ಲಿ ಊಟ ಮಾಡುತ್ತಿದ್ದಾಗ, ಮೈಶಾ ಮತ್ತು ಅವಳ ಚಿಕ್ಕಮ್ಮ ಇಬ್ಬರೂ ನೆಲಮಹಡಿಯಲ್ಲಿ ಕಂಬದ ಬಳಿ ಪೋಟೊಗಳನ್ನು ಕ್ಲಿಕಿಸಿಕೊಳ್ಳಲು ಹೋಗಿದ್ದರು. ಸುರಭಿ ಅವರ ಪತಿ ಸಾಹಿಲ್ ಜೈನ್ ತಿಳಿಸಿದ ಪ್ರಕಾರ, ಕಂಬದ ಮೇಲಿಂದ ಕಪ್ಪು ಗ್ರಾನೈಟ್ ಇಬ್ಬರ ಮೇಲೆ ಬಿದ್ದಿದೆ ಎಂಬುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋದಲ್ಲಿ ‘ಆಜ್ ಕಿ ರಾತ್’ ಹಾಡಿಗೆ ಮೈಚಳಿ ಬಿಟ್ಟು ನಟಿಸಿದ ಮಹಿಳೆ; ವಿಡಿಯೊ ಇದೆ
ಈ ಬಗ್ಗೆ ಸಂತ್ರಸ್ತರ ಕುಟುಂಬದವರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಾಯಗೊಂಡ ಇಬ್ಬರು ಹೇಳಿಕೆ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಘಟನೆಯು ಆ ಸಮಯದಲ್ಲಿ ಮಾಲ್ನಲ್ಲಿದ್ದ ಎಲ್ಲರನ್ನೂ ಬೆಚ್ಚಿಬೀಳಿಸಿತು. ಘಟನೆಯ ನಂತರ, ಮಾಲ್ ಅಧಿಕಾರಿಗಳು ಈ ಪ್ರದೇಶವನ್ನು ಸುತ್ತುವರೆದಿದ್ದಾರೆ. ಮತ್ತು ಎಲಾಂಟೆ ಆಡಳಿತ ಮಂಡಳಿ, ಮಾಲ್ ಅಧಿಕಾರಿಗಳು ಆವರಣವನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಏತನ್ಮಧ್ಯೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.