Tuesday, 5th November 2024

Money Tips: Health Insurance ಮಾಡಿಸುವ ತಿಳಿದಿರಲೇ ಬೇಕಾದ ಅಂಶಗಳಿವು

Health Insurance

ಬೆಂಗಳೂರು: ಕಾಯಿಲೆ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬರದಂತೆ ತಡೆಯಬೇಕು ಎನ್ನುತ್ತಾರೆ ಹಿರಿಯರು. ಆದರೆ ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಹದಗೆಡುತ್ತಿರುವ ವಾತಾವರಣ, ಹೆಚ್ಚುತ್ತಿರುವ ಪರಿಸರ ಮಾಲಿನ್ಯ- ಈ ಎಲ್ಲ ಕಾರಣಗಳಿಂದ ಪ್ರಸ್ತುತ ಕಾಯಿಲೆ ಬರದಂತೆ ತಡೆಯುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ಹೀಗಾಗಿ ಆರ್ಥಿಕ ತಜ್ಞರು ಉದ್ಯೋಗಕ್ಕೆ ಸೇರುತ್ತಿದ್ದಂತೆ ಆರೋಗ್ಯ ವಿಮೆ (Health Insurance) ಮಾಡಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಅಲ್ಲದೆ ಸಮಗ್ರ ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿರುವುದರಿಂದ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ನಿಮ್ಮ ಕುಟುಂಬದ ಸದಸ್ಯರ ಆರೋಗ್ಯವನ್ನು ಸಂರಕ್ಷಿಸಲು ಮತ್ತು ನಿಮ್ಮ ಉಳಿತಾಯದ ಹಣವನ್ನು ರಕ್ಷಿಸಲು, ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಇಡೀ ಕುಟುಂಬಕ್ಕೆ ಆರೋಗ್ಯ ವಿಮೆಯ ಕವರೇಜ್‌ ಮಾಡಿಸುವುದು ಅತ್ಯಗತ್ಯ. ಇಂದಿನ ಮನಿ ಟಿಪ್ಸ್‌ (Money Tips)ನಲ್ಲಿ ಹೆಲ್ತ್‌ ಇನ್ಶೂರೆನ್ಸ್‌ ಮಾಡಿಸುವ ಮುನ್ನ ಗಮನಿಸಬೇಕಾದ ಅಂಶಗಳು ಯಾವುವು ಎನ್ನುವ ವಿವರವಿದೆ.

ಕವರೇಜ್‌

ಮೊದಲಿಗೆ ಆರೋಗ್ಯ ವಿಮಾ ಪಾಲಿಸಿ ನಿಮ್ಮ ಎಲ್ಲ ಅಗತ್ಯಗಳನ್ನು ಒಳಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಅಂದರೆ ನೀವು ಖರೀದಿಸಲು ಉದ್ದೇಶಿಸಿರುವ ಪಾಲಿಸಿ ಆಸ್ಪತ್ರೆ ವೆಚ್ಚಗಳು, ಆಂಬ್ಯುಲೆನ್ಸ್‌ ಶುಲ್ಕ, ಹೊರರೋಗಿ ವೆಚ್ಚಗಳು ಮತ್ತು ರೋಗನಿರ್ಣಯ ಪರೀಕ್ಷೆಗಳಂತಹ ಸೌಲಭ್ಯಗಳನ್ನು ಒಳಗೊಂಡಿದೆಯೇ ಎನ್ನುವುದನ್ನು ಪರಿಶೀಲಿಸಿ. ಯಾವುದೇ ನಿರ್ದಿಷ್ಟ ವೈದ್ಯಕೀಯ ಸೌಲಭ್ಯ ಅಗತ್ಯವಿದ್ದರೆ ಅಂತಹ ಪಾಲಿಸಿಯನ್ನು ಆಯ್ಕೆ ಮಾಡಿ.

ವೈಯಕ್ತಿಕ ಅಥವಾ ಕುಟುಂಬ ಪಾಲಿಸಿ

ಹೆಲ್ಸ್‌ ಇನ್ಶೂರೆನ್ಸ್‌ ಮುಖ್ಯವಾಗಿ ನಿಮಗೆ ಯಾಕೆ ಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಿ. ನಿರ್ಧಿಷ್ಟವಾಗಿ ಇಂತಹದ್ದೇ ಆರೋಗ್ಯ ಸಮಸ್ಯೆಗೆ ಪಾಲಿಸಿ ಬೇಕೆ? ಅಥವಾ ನಿಮ್ಮ ಕುಟುಂಬಕ್ಕೆ ಪಾಲಿಸಿ ಅಗತ್ಯವಿದೆಯೇ? ಎನ್ನುವುದನ್ನು ನೋಡಿಕೊಂಡು ಪಾಲಿಸಿಯನ್ನು ನಿರ್ಧರಿಸಿ. ವೈಯಕ್ತಿಕ ಆರೋಗ್ಯ ವಿಮೆಕ್ಕಿಂತ ಇಡೀ ಕುಟುಂಬವನ್ನು ಒಳಗೊಳ್ಳುವ ಪಾಲಿಸಿ ಖರೀದಿಸುವುದು ಉತ್ತಮ. ಆದಷ್ಟು ಹಿರಿಯರು ಸೇರಿದಂತೆ ಇಡೀ ಕುಟುಂಬವನ್ನು ಒಳಗೊಂಡಿರುವ ಒಂದೇ ಪಾಲಿಸಿ ವಿಧವಾದ ಫ್ಯಾಮಿಲಿ ಫ್ಲೋಟರ್ ಯೋಜನೆಯನ್ನು ಆಯ್ಕೆ ಮಾಡಿ.

ಪಾಲಿಸಿ ವಿನಾಯಿತಿಗಳು

ಆರೋಗ್ಯ ವಿಮಾ ಪಾಲಿಸಿಗಳು ಎಲ್ಲ ಚಿಕಿತ್ಸೆಯನ್ನೂ ಒಳಗೊಳ್ಳುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ. ಸೌಂದರ್ಯವರ್ಧಕ ಚಿಕಿತ್ಸೆ ಅಥವಾ ಅಪಾಯಕಾರಿ ಚಟುವಟಿಕೆಗಳಿಂದ ಉಂಟಾಗುವ ಗಾಯಗಳ ಚಿಕಿತ್ಸೆಗಳನ್ನು ಪಾಲಿಸಿಯಿಂದ ಹೊರಗಿಡಲಾಗುತ್ತದೆ. ಜತೆಗೆ ವಿಮಾ ಪಾಲಿಸಿಗಳು ನಿರ್ದಿಷ್ಟ ಚಿಕಿತ್ಸೆಗಳು ಅಥವಾ ಕಾಯಿಲೆಗಳ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ಆರಂಭದಲ್ಲೇ ತಿಳಿದುಕೊಳ್ಳಿ.

ಕಾಯುವ ಅವಧಿ

ಕಾಯುವ ಅವಧಿ ಪ್ರತಿಯೊಂದು ಕಂಪೆನಿಗೆ ಅನುಗುಣವಾಗಿ ವ್ಯತ್ಯಸ್ತವಾಗಿರುತ್ತದೆ. ನೀವು ಪಾಲಿಸಿ ಕೊಂಡುಕೊಳ್ಳುವ ಮೊದಲು ಕಾಯುವ ಅವಧಿಗಳನ್ನು ಅರ್ಥ ಮಾಡಿಕೊಳ್ಳಿ. ಆರೋಗ್ಯ ವಿಮಾ ಪಾಲಿಸಿಗಳು ಸಾಮಾನ್ಯವಾಗಿ ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆ, ಹೆರಿಗೆ ಪ್ರಯೋಜನಗಳು ಅಥವಾ ಕೆಲವು ಚಿಕಿತ್ಸೆಗಳಂತಹ ನಿರ್ದಿಷ್ಟ ವಿಚಾರಗಳಿಗೆ ಕಾಯುವ ಅವಧಿ ಹೊಂದಿರುತ್ತವೆ. ಚಿಕಿತ್ಸೆ ಪಡೆಯಲು ನೀವು ಪಾಲಿಸಿ ಖರೀದಿಸಿ ನಿರ್ಧಿಷ್ಟ ಸಮಯ ಕಳೆದಿರಬೇಕು ಎಂದಿರುತ್ತದೆ. ಇದನ್ನೂ ಗಮನಿಸಿ.

ಷರತ್ತುಗಳನ್ನು ಅರ್ಥ ಮಾಡಿಕೊಳ್ಳಿ

ಮೊದಲೇ ಹೇಳಿದಂತೆ ಕಂಪೆನಿಗಳಿಗೆ ಅನುಗುಣವಾಗಿ ಷರತ್ತುಗಳಲ್ಲಿ ವ್ಯತ್ಯಾಸಗಳಿರುತ್ತವೆ. ಇವನ್ನು ಸರಿಯಾಗಿ ಗಮನಿಸಿ. ಯಾವುದನ್ನು ಒಳಗೊಂಡಿದೆ ಮತ್ತು ಯಾವುದನ್ನು ಒಳಗೊಂಡಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕೆಲವು ವಿಮಾ ಪಾಲಿಸಿಗಳು ಕೊಠಡಿ ಬಾಡಿಗೆ, ವೈದ್ಯರ ಶುಲ್ಕ ಅಥವಾ ನಿರ್ದಿಷ್ಟ ಚಿಕಿತ್ಸೆಗಳಂತಹ ಕೆಲವು ಪ್ರಯೋಜನಗಳ ಮೇಲೆ ಉಪ-ಮಿತಿಗಳನ್ನು ಹೊಂದಿರುತ್ತವೆ. ಇವನ್ನು ಗಮನಿಸುವುದು ಮುಖ್ಯ.

ಕ್ಲೈಮ್ ಇತ್ಯರ್ಥ ಪ್ರಕ್ರಿಯೆ

ಕ್ಲೈಮ್ ಇತ್ಯರ್ಥ ಪ್ರಕ್ರಿಯೆಯ ಬಗ್ಗೆ ಮೊದಲೇ ಮಾಹಿತಿ ಪಡೆಯಿರಿ. ಕ್ಲೈಮ್ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳಿ. ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ. ಇವು ವಾರ್ಷಿಕ ಮತ್ತು ಮಾಸಿಕ ಕಂತುಗಳಲ್ಲಿ ಲಭ್ಯವಿದೆ. ನಿಮಗೆ ಅನುಕೂಲವಾಗಿರುವುದನ್ನು ಆಯ್ಕೆ ಮಾಡಿ.

ಆರೋಗ್ಯ ಸ್ಥಿತಿ ಮುಚ್ಚಿಡಬೇಡಿ

ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ನಿಮ್ಮ ವೈದ್ಯಕೀಯ ಇತಿಹಾಸ ಅಥವಾ ಇತರ ಯಾವುದೇ ಸಂಬಂಧಿತ ಮಾಹಿತಿಯನ್ನು ಬಹಿರಂಗಪಡಿಸಿ. ಇದನ್ನು ನೀವು ನೀಡಲು ವಿಫಲವಾದರೆ ಅಥವಾ ತಪ್ಪಾಗಿ ನಿರೂಪಿಸಿದರೆ ವಿಮಾ ಕಂಪೆನಿ ಕ್ಲೈಮ್ ನಿರಾಕರಿಸುವ ಸಾಧ್ಯತೆ ಇದೆ. ವಿಮೆಗೆ ಅರ್ಜಿ ಸಲ್ಲಿಸುವಾಗ ನಿಮ್ಮ ವೈದ್ಯಕೀಯ ಸ್ಥಿತಿಯ ವಿವರವನ್ನು ಪ್ರಾಮಾಣಿಕವಾಗಿ ನೀಡಿ. ನಿಮ್ಮ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಬಹಿರಂಗಪಡಿಸಿ. ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಯನ್ನೂ ನಮೂದಿಸಿ. ಮನೋವೈದ್ಯಕೀಯ ಚಿಕಿತ್ಸೆ ಸಹ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಕವರ್ ಆಗುತ್ತದೆ. ಇದನ್ನೂ ಗಮನಿಸಿ. ಆಯುರ್ವೇದ, ಯೋಗ ಮತ್ತು ಇತರ ಆಯುಷ್ ಚಿಕಿತ್ಸೆಗಳು ನಿಮಗೆ ಮುಖ್ಯವಾಗಿದ್ದರೆ ಅವುಗಳ ವ್ಯಾಪ್ತಿಯ ಬಗ್ಗೆ ಕೇಳಿ.

ಈ ಸುದ್ದಿಯನ್ನೂ ಓದಿ: Money Tips: 2 ಪ್ಯಾನ್‌ ಕಾರ್ಡ್‌ ಹೊಂದಿದ್ದರೆ ಈಗಲೇ ಒಂದನ್ನು ಕ್ಯಾನ್ಸಲ್‌ ಮಾಡಿ; ಇಲ್ಲದಿದ್ದರೆ ಕಾದಿದೆ ಭಾರಿ ದಂಡ