Friday, 22nd November 2024

Chikkaballapur News: ದೇಶವನ್ನು ಮುನ್ನಡೆಸುವಲ್ಲಿ ಯುವಶಕ್ತಿಯ ಪಾತ್ರ ಪ್ರಧಾನವಾಗಿದೆ-ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಚಿಕ್ಕಬಳ್ಳಾಪುರ: ಭಾರತದ ಅಂತಃಶಕ್ತಿಯಾಗಿರುವ ಯುವಶಕ್ತಿ ತಮ್ಮ ತಮ್ಮ ಜವಾಬ್ದಾರಿಯನ್ನರಿತು ಮುನ್ನಡೆ ದಲ್ಲಿ ಬಲಿಷ್ಟ ಭಾರತ ನಿರ್ಮಾಣ ಸುಲಭ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಪ್ರಾಯ ಪಟ್ಟರು.

ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಗೋಲ್ಡ್ನ್ ಗ್ಲೀಮ್ಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ಆಹ್ವಾನ-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಲೇಜು ಶಿಕ್ಷಣವು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ.ಪದವಿ ಪೂರ್ವ ಮತ್ತು ಪದವಿ ಎರಡೂ ಅವಧಿ ಯಲ್ಲಿ ನಮ್ಮನ್ನು ನಾವೇ ಸ್ವಯಂ ವಿಮರ್ಶೆಗೆ ಒಳಪಡಿಕೊಳ್ಳಲು ಉತ್ತಮ ಅವಕಾಶ ನೀಡುತ್ತದೆ. ಈ ವೇಳೆಯಲ್ಲಿ ಗುರುಹಿರಿಯ ಮಾರ್ಗದರ್ಶನದೊಂದಿಗೆ ಸ್ಪಷ್ಟವಾದ ಗುರಿಯತ್ತ ಸಾಗಬೇಕು. ಕೀಳರಿಮೆ ಬಿಟ್ಟು ಸತತ ಅಭ್ಯಾಸದಲ್ಲಿ ತೊಡಗಿದರೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದರು.

ರ‍್ಯಾಂಕ್ ಪಡೆದವರು ಮಾತ್ರ ಬುದ್ದಿವಂತರು, ಕಡಿಮೆ ಅಂಕ ಪಡೆದವರು ದಡ್ಡರು ಎಂದು ಭಾವಿಸುವ ಅಗತ್ಯವಿಲ್ಲ. ವಿದ್ಯಾದೇವತೆ ಸರಸ್ವತಿ ಬಂಡೆಯಮೇಲೆ ಕುಳಿತಿರುವ ಚಿತ್ರ ಬರೀ ಚಿತ್ರ ಮಾತ್ರವಲ್ಲ. ವಿದ್ಯಾರ್ಥಿ ದಿಸೆಯಲ್ಲಿ ಯಾರು ಬಂಡೆಯಂತೆ ದೃಢವಿಶ್ವಾಸವನ್ನು ಇಟ್ಟುಕೊಂಡು ಅಧ್ಯಯನದಲ್ಲಿ ತೊಡಗುವರೋ ಅವರು ಸಾಧಕರಾಗುತ್ತಾರೆ ಎನ್ನುವುದನ್ನು ತೋರಿಸುತ್ತಿದೆ. ಗೂಗಲ್ ಇಂದು ಮಾಹಿತಿಯ ಕಣಜವಾಗಿದ್ದು ಕುಳಿತಲ್ಲಿಯೇ ಬೇಕಾದ ಮಾಹಿತಿ ಪಡೆದು ಗುರಿಮುಟ್ಟಬಹುದು ಎಂದರು.

ನಮ್ಮ ನಿಜವಾದ ಶತ್ರು ಕೀಳರಿಮೆ ಆಗಿದೆ.ಒಳ್ಳೆಯ ಅಭ್ಯಾಸ ಸುತ್ತ ಪರಿಶ್ರಮ ಯಶಸ್ಸೀನ ಗುಟ್ಟು. ರ್ಯಾಂಕ್ ಪಡೆದವರೆಲ್ಲಾ ಜೀವನದಲ್ಲಿ ಯಶಸ್ಸು ಕಂಡಿಲ್ಲ. ಸರಸ್ವತಿ ಬಂಡೆ ಮೇಲೆ ಕೂತಿದ್ದಾಳೆ. ಬಂಡೆ ಯಂತೆ ಗಟ್ಟಿಯಾಗಿ ಸಾಧನೆ ಮಾಡಬೇಕು. ಗೂಗಲ್ ಮಾಹಿತಿ ಕಣಜವಾಗಿದೆ. ತಾಂತ್ರಿಕತೆ ಯಶಸ್ಸಿಗೆ ಸಮರ್ಥವಾಗಿ ಬಳಸಿಕೊಳ್ಳಿ. ಪೋಷಕರ ಕಷ್ಟ ಅರಿಯಬೇಕು. ಕಾಲೇಜು ಜೀವನದ ಮಹತ್ವವನ್ನು ಅರಿತು ಓದಿರಿ. ಇಲ್ಲವಾದಲ್ಲಿ ಜೀವನ ಪೂರ್ತಿ ಕಷ್ಟದಲ್ಲಿ ಬದುಕಬೇಕಾಗುತ್ತದೆ.

ಪದವಿ ಪಡೆದರೆ ಸಾಲದು ಪದವಿಗೆ ತಕ್ಕಂತೆ ಕೌಶಲ್ಯ ಬೆಳೆಸಿಕೊಳ್ಳಬೇಕು. ಇದರಿಂದ ಮಾತ್ರ ಉದ್ಯೋಗ ಪಡೆಯಲು ಸಾಧ್ಯ.ಯಾವ ಉದ್ಯೋಗವೂ ಕನಿಷ್ಠ ಅಲ್ಲ. ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಬೇಕಾದ ಕೌಶಲ್ಯ ನೀವೇ ಕಂಡುಕೊಳ್ಳಬೇಕು. ವಿದ್ಯೆ ಸಾಧಕನ ಸೊತ್ತು ಎಂದು ಸುಮ್ಮನೆ ಹೇಳಿಲ್ಲ. ಸಾಧನೆ ನಿರಂತರವಾಗಿ ಇದ್ದಾಗ ಶ್ರೇಯಸ್ಸು ನಿಮ್ಮದಾಗಲಿದೆ. ತಾಳಿಕೆಕಿಂತ ತಪೋಬಲ ಬೇರಿಲ್ಲ. ಕೇಳುವ ಗುಣ ಬೆಳೆಸಿಕೊಳ್ಳಬೇಕು, ಪೋಷಕರ ಮಾತು ಆಲಿಸಿ, ಅವರನ್ನು ಗೌರವಿಸಿ, ಎಲ್ಲಿ ಶ್ರದ್ದೆ ಇರುತ್ತದೆಯೋ ಅಲ್ಲಿ ಜ್ಞಾನ ನೆಲೆಸುತ್ತದೆ. ಇದೇ ಭಾರತೀಯ ಸಂಸ್ಕೃತಿ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮರಿಸ್ವಾಮಿ ಮಾತನಾಡಿ ನಗರದ ಉತ್ತಮ ಫಲಿತಾಂಶ ನೀಡಿದ ಕಾಲೇಜುಳಲ್ಲಿ ಗೋಲ್ಡನ್ ಗ್ಲೀಮ್ಸ್ ಕಾಲೇಜು ಮೊದಲ ಸಾಲಿನಲ್ಲಿದೆ. ಆಹ್ವಾನ ಹೆಸರಿನಲ್ಲಿ ನಡೆಯುತ್ತಿರುವ ಸ್ವಾಗತ ಸಮಾರಂಭದಲ್ಲಿ ಭಾಗಿಯಾಗಿರುವ ನಿಮಗೆಲ್ಲಾ ಏಕಲವ್ಯ ಗುರುವಾಗಲಿ.ಋಣಾತ್ಮಕ ಚಿಂತನೆ ಬಿಟ್ಟು ಗುಣಾತ್ಮಕ ಚಿಂತನೆ ಮಾಡಿದರೆ ಖಂಡಿತವಾಗಿ ನೀವೆಲ್ಲಾ ಸಾಧಕರಾಗುತ್ತೀರಿ ಎಂದರು.

ಶಿಕ್ಷಣ ತಜ್ಞ ಡಾ.ಶಿವರಾಮ ರೆಡ್ಡಿ ಮಾತನಾಡಿ ಎಲ್ಲವನ್ನೂ ಸಮಾನವಾಗಿ ಕಾಣುವ ಶಕ್ತಿ ಶಿಕ್ಷಣಕ್ಕಿದೆ. ಇಂತಹ ಶಿಕ್ಷಣ ನೀಡಿ ನಿಮ್ಮ ಬಾಳು ಬೆಳಗುತ್ತಿರುವ ಪೋಷಕರನ್ನು ಸದಾ ಗೌರವಿಸುವುದನ್ನು ಕಲಿತರೆ ಗುರಿ ಮುಟ್ಟಲು ನೆರವಾಗ ಲಿದೆ. ನಾನು ಪಡೆಯುವ ಶಿಕ್ಷಣ ನಮಗೆ ಉದ್ಯೋಗದ ದಾರಿ ತೋರಲಿಲ್ಲ ಎಂದರೆ ಅಂತಹ ಪದವಿಗೆ ಬೆಲೆಯಿಲ್ಲ. ಐಎಎಸ್ ಕೆಎಎಸ್ ಮಾಡುವವರು ತಮ್ಮ ಖಾಸಗಿ ಬದುಕನ್ನು ಮರೆತು ಓದಿನಲ್ಲಿ ಮಗ್ನರಾಗಿರುತ್ತಾರೆ. ಜಿಲ್ಲಾಧಿಕಾರಿ ಗಳು ಸಭೆಗೆ ಬಂದಾಗ ಎಲ್ಲರೂ ಎದ್ದು ನಿಂತ ಸ್ವಾಗತಿಸಿದ್ದು ಅವರ ಸಾಧನೆಗೆ ಸಿಕ್ಕಗೌರವವಾಗಿದೆ. ನೀವೂ ಕೂಡ ಹೀಗೆ ಸಾಧಕರಾಗಬೇಕು ಎಂದು ಪ್ರೋತ್ಸಾಹಿಸಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಪದವಿಯಿದ್ದರೆ ಸಾಲದು, ಸಂವಹನವೂ ಬಹಳ ಮುಖ್ಯ. ಕನ್ನಡ ಮಾತೃಭಾಷೆ ನಿಜ, ಆದರೆ ಇಂಗ್ಲಿಷ್ ಉದ್ಯೋಗದ ಭಾಷೆಯಾಗಿದೆ. ನಿಮ್ಮ ಬದುಕಿಗೆ ದಾರಿತೋರುವ ಯಾವ ಭಾಷೆಯನ್ನಾದರೂ ಕಲಿಯಿರಿ ತಪ್ಪಲ್ಲ. ಬದುಕಲು ಬೇಕಾದ ಭಾಷೆ ಕಲಿಯುವುದು ತಪ್ಪಲ್ಲ ಕಲಿಯುವ ಆಸಕ್ತಿ ಬೆಳೆಸಿಕೊಂಡರೆ ಯಾವ ಉದ್ಯೋಗ ಬೇಕಾದರೂ, ಯಾವ ದೇಶದಲ್ಲಿ ಬೇಕಾದರೂ ಅನಾಯಾಸವಾಗಿ ದೊರೆಯು ತ್ತದೆ ಎಂದು ಮಾರ್ಟಿನ್ ಲೂಥರ್‌ಕಿಂಗ್ ಜೂನಿಯರ್ ಯಶೋಗಾಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಓದುವ ಮುನ್ನ ನಾವು ಏನಾಗಬೇಕು ಎಂದುಕೊಂಡಿದ್ದೇವೋ ಅದರತ್ತ ಮಾತ್ರ ಆಸಕ್ತಿಯಿಡಬೇಕು. ಎಲ್ಲವೂ ಆಗಬೇಕು ಎನ್ನುವ ಬದಲಿಗೆ ನಾನು ಇದೇ ಆಗುತ್ತೇನೆ ಎಂದು ನಿಶ್ಚಿತ ಗುರಿಯತ್ತ ಸಾಗಿದರೆ ಉತ್ತಮ ಬದುಕು ಭವಿಷ್ಯ ನಿಮ್ಮದಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಾಧನೆ ಮಾಡಿರುವ ಕಾಲೇಜಿನ ವಿದ್ಯಾರ್ಥಿಗಳನ್ನು, ಕಾರ್ಯಕ್ರಮಕ್ಕೆ ಬಂದು ಯಶಸ್ಸಿಗೆ ಕಾರಣರಾದ ಗಣ್ಯರನ್ನು ಸನ್ಮಾನಿಸಲಾಯಿತು,

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಬಾಹುಬಲಿ, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ರಾಜಣ್ಣ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವಾಣಿಜ್ಯ ಮಂಡಳಿ ಅಧ್ಯಕ್ಷ ಡಾ.ಎಸ್.ಮುರಳೀಧರ್, ಕಾಲೇಜಿನ ಪ್ರಾಂಶುಪಾಲ ಸಿ.ಎಂ.ಮುನಿಕೃಷ್ಣ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಇದನ್ನೂ ಓದಿ: Chikkaballapur News: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಪಾಡಿ ಕೊಳ್ಳದ ವ್ಯಾಪಾರಿಗೆ ದಂಡ ವಿಧಿಸಿದ ಅಧಿಕಾರಿಗಳು