Friday, 22nd November 2024

Basanagouda Patil Yatnal: ನಾನು ಹೇಳಿದ್ದು ಹಾಗಲ್ಲ: ತಮ್ಮ ಹೇಳಿಕೆಯ ಕಾವು ತಗ್ಗಿಸಲು ಯತ್ನಿಸಿದ ಯತ್ನಾಳ್

Basanagouda Patil Yatnal

ಬೆಂಗಳೂರು: ರಾಜ್ಯದಲ್ಲಿರುವ ಕಾಂಗ್ರೆಸ್‌ ಸರಕಾರವನ್ನು (Congress government) ಕೆಡವಲು ನಡೆದಿರುವ ಯೋಜನೆಯ ಕುರಿತು ಹೇಳಿಕೆ ನೀಡಿದ್ದ ಬಿಜೆಪಿಯ (BJP) ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal), ಇದೀಗ ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದಾರೆ. ಈ ಕುರಿತು ಇಡಿ ತನಿಖೆ, ದೂರು ದಾಖಲು ಬಗ್ಗೆ ಗೃಹಸಚಿವರು ಇಂಗಿತ ವ್ಯಕ್ತಪಡಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಸ್ಪಷ್ಟನೆ ನೀಡಿದ್ದಾರೆ.

“ನಿನ್ನೆ ದಾವಣಗೆರೆಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್‌ನಲ್ಲಿರುವ ಒಳಕಿತ್ತಾಟದಿಂದ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ, ಬೇರೆ ಆಕಾಂಕ್ಷಿಗಳು ಮುಖ್ಯಮಂತ್ರಿಗಳಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ.”‌

“ಆದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅದಕ್ಕೆ ರಾಜಕೀಯ ಲೇಪ ಬಳೆದು ಮಾಧ್ಯಮಗಳು ಬೇರೆ ಏನೋ ಅರ್ಥ ಬರುವಂತೆ ವರದಿ ಮಾಡಿದ್ದಾರೆ. ಇವೆಲ್ಲ ಶುದ್ಧ ಸುಳ್ಳಾಗಿದ್ದು, ಈ ರೀತಿಯಾದ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡುತ್ತೇನೆ.”

“ಕದ್ದು-ಮುಚ್ಚಿ ಸಭೆ ನಡೆಸುತ್ತಿರುವ ಕಾಂಗ್ರೆಸ್‌ನ ಪ್ರಭಾವಿ ಸಚಿವರು ತಮ್ಮ ಸಭೆಯಲ್ಲಿ ಏನು ಚರ್ಚೆಯಾಯಿತು ಎಂಬುದನ್ನು ಮೊದಲು ಜನತೆಗೆ ತಿಳಿಸಲಿ. ಬೆಂಗಳೂರಿನಲ್ಲಿ ಪಾಕ್ ಪ್ರಜೆಗಳು ನಕಲಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಪಡೆದು ಅಪಾರ್ಟ್ಮೆಂಟ್ ಒಂದರಲ್ಲಿ ನೆಲೆಸಿದ್ದರೂ ಪತ್ತೆಹಚ್ಚಲು ವಿಫಲರಾದ ಪೊಲೀಸ್ ಇಲಾಖೆ ಜಾಲತಾಣಗಳಲ್ಲಿ ಯಾರು ಸರ್ಕಾರದ ವಿರುದ್ಧ ಬರೆದರು ಎಂಬುದನ್ನು ಗಮನಿಸುವಲ್ಲಿ ನಿರತರಾಗಿದ್ದಾರೆ.”

“ನನ್ನನ್ನು ದೂಷಿಸಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡುವುದು ಇವರ ತಂತ್ರಗಾರಿಕೆ ಆಗಿದೆ. ಇವೆಲ್ಲ ಷಡ್ಯಂತ್ರಗಳನ್ನು, ಊಹಾಪೋಹಗಳನ್ನು, ತಪ್ಪು ವರದಿಗಳನ್ನು ನಂಬಬಾರದು ಎಂದು ಮತ್ತೊಮ್ಮೆ ನಿಮಗೆ ಮನವರಿಕೆ ಮಾಡಿಕೊಳ್ಳುತ್ತೇನೆ.”

ಯತ್ನಾಳ್‌ ಹೇಳಿದ್ದೇನು?

“ಕಾಂಗ್ರೆಸ್‌ ಸರಕಾರವನ್ನು ಕೆಡವಲು ಬಿಜೆಪಿ 1200 ಕೋಟಿ ರೂಪಾಯಿಗಳನ್ನು ಎತ್ತಿಟ್ಟಿದೆ” ಎಂದು ದಾವಣಗೆರೆಯಲ್ಲಿ ಯತ್ನಾಳ್‌ ಹೇಳಿದ್ದಾಗಿ ವರದಿಯಾಗಿತ್ತು. ಬಿಜೆಪಿ ನಾಯಕರು ಈ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಕಾಂಗ್ರೆಸ್‌ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಜಾರಿ ನಿರ್ದೇಶನಾಲಯಕ್ಕೆ ದೂರು ಕೊಡಲು ಮುಂದಾಗಿತ್ತು. ಯತ್ನಾಳ್‌ ಹೇಳಿಕೆಯಿಂದ ಬಿಜೆಪಿಯಲ್ಲೂ ಮುಜುಗರದ ಪರಿಸ್ಥಿತಿ ಸೃಷ್ಟಿಯಾಗಿದೆ.

ಇದನ್ನೂ ಓದಿ: High Court: ಭಾರತೀಯ ನ್ಯಾಯ ಸಂಹಿತೆಯ ಮೊದಲ ತೀರ್ಪು ಕರ್ನಾಟಕ ಹೈಕೋರ್ಟ್‌ನಿಂದ! ಇದು ಯತ್ನಾಳ್‌ ಕೇಸು