Saturday, 23rd November 2024

Supreme Court: ನಾಗರಿಕರ ಸುರಕ್ಷತೆ ಮುಖ್ಯ.. ಅತಿಕ್ರಮಣ ಮಾಡಿರುವ ದೇವಸ್ಥಾನ, ಮಸೀದಿ ತೆರವು ಖಂಡಿತ; ಸುಪ್ರೀಂ ಕೋರ್ಟ್‌

Supreme Court

ನವದೆಹಲಿ: ಸರ್ಕಾರಿ ಆಸ್ತಿ ಪಾಸ್ತಿಗಳನ್ನು ಅತಿಕ್ರಮಣ ಮಾಡಿಕೊಂಡಿರುವ ಯಾವುದೇ ಧಾರ್ಮಿಕ ಕಟ್ಟಡ(Religious structure)ಗಳನ್ನು ತೆರವುಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್‌(Supreme Court) ಮಹತ್ವದ ಆದೇಶ ನೀಡಿದೆ. ಅತಿಕ್ರಮಣ ಆಸ್ತಿಗಳ ಮೇಲೆ ಬುಲ್ಡೋಜರ್ (Bulldozer Justice) ಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ನ್ಯಾ. ಬಿ.ಆರ್ ಗವಾಯಿ ಅವರಿದ್ದ ಪೀಠವು‌ ಅರ್ಜಿಗಳ ವಿಚಾರಣೆ ನಡೆಸಿದ್ದು, ಸಾರ್ವಜನಿಕ ಸುರಕ್ಷತೆಯು ಅತ್ಯುನ್ನತವಾಗಿದೆ ಮತ್ತು ರಸ್ತೆ, ಜಲಮೂಲಗಳು ಅಥವಾ ರೈಲು ಹಳಿಗಳ ಮೇಲೆ ಅತಿಕ್ರಮಣ ಮಾಡುವ ಯಾವುದೇ ಧಾರ್ಮಿಕ ಕಟ್ಟಡಗಳು ತೆರವುಗೊಳ್ಳಲೇ ಬೇಕು ಎಂದು ಖಡಕ್‌ ಆಗಿ ಹೇಳಿದೆ.

ಭಾರತವು ಜಾತ್ಯತೀತ ರಾಷ್ಟ್ರವಾಗಿದೆ. ಒತ್ತುವರಿ ತೆರವು ಕಾರ್ಯ ಧರ್ಮ, ಜಾತಿಯನ್ನು ಲೆಕ್ಕಿಸದೇ ನಡೆಯಬೇಕು. ದೇವಸ್ಥಾನವಿರಲಿ, ದರ್ಗಾವಿರಲಿ ಅವುಗಳು ಅತಿಕ್ರಮಣ ಮಾಡಿಕೊಂಡ ಪ್ರದೇಶದಲ್ಲಿದ್ದೆ ಎಂಬುದು ಸಾಬೀತಾದರೆ ಅವುಗಳ ತೆರವು ಖಂಡಿತ ಆಗಲೇಬೇಕು. ಸಾರ್ವಜನಿಕ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ನೇತೃತ್ವದ ದ್ವಿಸದಸ್ಯ ಪೀಠವು ಸ್ಪಷ್ಟಪಡಿಸಿದೆ.

ಇನ್ನು ಕೊಲೆ, ಅತ್ಯಾಚಾರ, ಸುಲಿಗೆದಂತಹ ಅಪರಾಧ ಹಿನ್ನೆಲೆಯುಳ್ಳವರ ಮನೆ, ಆಸ್ತಿ ಮೇಲೆ ಬುಲ್ಡೋಜರ್‌ ಮೂಲಕ ಧ್ವಂಸ ಮಾಡುವ ಸರ್ಕಾರದ ಕ್ರಮಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಆರೋಪಿಗಳ ಮೇಲೆ ಬುಲ್ಡೋಜರ್ ಕ್ರಮವನ್ನು ಪ್ರಯೋಗಿಸುವಾಗ ಅಕ್ರಮ ಕಟ್ಟಡಗಳನ್ನು ಮಾತ್ರ ಕೆಡವಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಯಾವುದೇ ʼಬುಲ್ಡೋಜರ್ ನ್ಯಾಯʼ ನಡೆಯಬಾರದು ಎಂದು ಹೇಳಿತ್ತು. ಅಕ್ಟೋಬರ್ 1ರವರೆಗೆ ಕಟ್ಟಡ ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅಕ್ರಮ ನೆಲಸಮದ ಒಂದು ನಿದರ್ಶನವಿದ್ದರೂ ಅದು ಸಂವಿಧಾನದ ನೀತಿಗಳಿಗೆ ವಿರುದ್ಧವಾಗಿರುತ್ತದೆ ಎಂದು ಹೇಳಿತ್ತು.

ಪೂರ್ವಾನುಮತಿಯಿಲ್ಲದೆ ಕಟ್ಟಡ ನೆಲಸಮ ಮಾಡುವಂತಿಲ್ಲ ಎನ್ನುವ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್‌ 30) ಅಸ್ಸಾಂ ಸರ್ಕಾರಕ್ಕೆ ನ್ಯಾಯಾಂಗ ನಿಂದನೆಯ ನೋಟಿಸ್ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು 3 ವಾರಗಳಲ್ಲಿ ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ ಮತ್ತು ಮುಂದಿನ ವಿಚಾರಣೆಯವರೆಗೆ ಪ್ರಸ್ತುತ ಇರುವ ಪರಿಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ನಿರ್ದೇಶನ ನೀಡಿದೆ.

ಈ ಸುದ್ದಿಯನ್ನೂ ಓದಿ: Supreme Court: ಆದೇಶ ಉಲ್ಲಂಘಿಸಿ ʼಬುಲ್ಡೋಜರ್ ನ್ಯಾಯʼ ಜಾರಿ; ಅಸ್ಸಾಂ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌