Friday, 22nd November 2024

iPhone 15: ಆನ್‌ಲೈನ್‌ ಶಾಪಿಂಗ್‌ ಪ್ರಿಯರೇ ಎಚ್ಚರ; ಡೆಲಿವರಿ ಬಾಯ್‌ ಹೆಸರಲ್ಲಿ ನಡೆಯುತ್ತೆ ಮೋಸ!

iPhone 15

ಬೆಂಗಳೂರು: ಸದ್ಯ ಆನ್‌ಲೈನ್‌ ಶಾಪಿಂಗ್‌ ಜನಪ್ರಿಯವಾಗಿದೆ. ಹಿಂದೆಲ್ಲ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಲಭ್ಯವಿದ್ದ ಈ ಸೌಲಭ್ಯ ಇದೀಗ ಹಳ್ಳಿ ಹಳ್ಳಿಗೂ ತಲುಪಿದೆ. ಈ ಮೂಲಕ ಶಾಪಿಂಗ್‌ ಸಂಸ್ಕೃತಿಯೇ ಬದಲಾಗಿದೆ. ನಾವಿದ್ದಲ್ಲಿಗೇ, ನಾವು ಬಯಸಿದ ವಸ್ತು ಅದೂ ಕಡಿಮೆ ಬೆಲೆಗೆ ತಲುಪುತ್ತದೆ. ಇಷ್ಟೆಲ್ಲ ಅನುಕೂಲವಿದ್ದರೂ ಕೆಲವೊಮ್ಮೆ ಸ್ವಲ್ಪ ಎಚ್ಚರ ತಪ್ಪಿದರೂ ಯಾಮಾರಬೇಕಾಗುತ್ತದೆ. ವಂಚಕರು ಇಲ್ಲೂ ಮೋಸ ಮಾಡಲು ಹೊಸ ಹೊಸ ವಿಧಾನಗಳ ಮೊರೆ ಹೋಗುತ್ತಿದ್ದಾರೆ. ಕೆಲವೊಮ್ಮೆ ನಕಲಿ ವೆಬ್‌ಸೈಟ್‌ಗಳು ನಮ್ಮಿಂದ ಹಣ ಪೀಕಿ ಮೋಸ ಮಾಡುತ್ತವೆ. ದುಬಾರಿ ಮೊಬೈಲ್‌ ಆರ್ಡರ್‌ ಮಾಡಿದವರಿಗೆ ಸೋಪ್‌ ಡೆಲಿವರಿ ಆಗಿದ್ದನ್ನೂ ನೋಡಿದ್ದೇವೆ, ಗೇಮಿಂಗ್‌ ಉಪಕರಣದ ಬದಲಿಗೆ ಹಾವು ತಲುಪಿದ್ದನ್ನೂ ಕೇಳಿದ್ದೇವೆ. ಇದೀಗ ವಂಚಕರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ನಕಲಿ ‌ʼಡೆಲಿವರಿ ಬಾಯ್‌ʼಗಳನ್ನೂ ಪರಿಚಯಿಸಿದ್ದಾರೆ. ಬೆಂಗಳೂರಿನಲ್ಲಿ ದುಬಾರಿ ಬೆಲೆಯ ಐಫೋನ್‌ (iPhone 15) ಆರ್ಡರ್‌ ಮಾಡಿದ ಮಹಿಳೆಗೆ ಡೆಲಿವರಿ ಬಾಯ್‌ ವೇಷದಲ್ಲಿ ಬಂದರು ವಂಚಕನೊಬ್ಬ ಟೋಪಿ ಹಾಕಲು ಮುಂದಾದ ಘಟನೆ ನಡೆದಿದೆ. ಮಹಿಳೆ ಮತ್ತು ಆಕೆಯ ಸಹೋದರನ ಸಮಯಪ್ರಜ್ಞೆಯಿಂದ ಅವರು ಮೋಸದ ಬಲೆಯಿಂದ ತಪ್ಪಿಸಿಕೊಂಡಿದ್ದಾರೆ (Viral News).

ಸದ್ಯ ಈ ವಿಚಾರ ವೈರಲ್‌ ಆಗಿದೆ. ಮಹಿಳೆಯ ಸಹೋದರ ಘಟನೆಯನ್ನು ವಿವರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಐಫೋನ್‌ ಡೆಲಿವರಿ ಮಾಡಲು ಬಂದಾತ ಬಾಕ್ಸ್‌ ತೆರೆಯಲು ನಿರಾಕರಿಸಿದಾಗ ವಂಚನೆಯ ಕರಾಳ ಮುಖ ಅನಾವರಣಗೊಂಡಿದೆ.

Flipkart scammers beware
byu/taau_47 inbangalore

ಏನಿದು ಘಟನೆ?

ಜನಪ್ರಿಯ ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ (Flipkart) ಈಗ ಬಿಗ್‌ ಬಿಲಿಯನ್‌ ಡೇ ವಾರ್ಷಿಕ ದರ ಕಡಿತ ಮಾರಾಟ ನಡೆಸುತ್ತಿದೆ. ಈ ಮೂಲಕ ವಿವಿಧ ಉತ್ಪನ್ನಗಳಿಗೆ ಭಾರಿ ರಿಯಾಯಿತಿ ಘೋಷಿಸಿದೆ. ಅದರಂತರೆ ಬೆಂಗಳೂರಿನ ಮಹಿಳೆಯೊಬ್ಬರು ಐಫೋನ್‌ 15 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿದ್ದರು. 256 ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್ 15 ಫೋನ್‌ಗಾಗಿ ಮುಂಚಿತವಾಗಿಯೇ ಹಣ ಪಾವತಿಸಿದ್ದರು. ಜತೆಗೆ ಅವರು ಓಪನ್ ಬಾಕ್ಸ್ ಡೆಲಿವರಿ ಆಪ್ಶನ್‌ (Open Box Delivery) ಆಯ್ಕೆ ಮಾಡಿಕೊಂಡಿದ್ದರು. ಈ ಆಯ್ಕೆಯು ಸೀಲ್ ಮಾಡಿದ ಬಾಕ್ಸ್‌ ಅನ್ನು ಡೆಲಿವರಿಗೆ ಮುಂಚಿತವಾಗಿ ತೆರೆದು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ಹಾನಿಗೊಳಗಾದ ಅಥವಾ ನಕಲಿ ಸರಕುಗಳಲ್ಲ ಎನ್ನುವುದನ್ನು ಗ್ರಾಹಕರಿಗೆ ಖಚಿತಪಡಿಸಲು ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್‌ಗಳಂತಹ ಆನ್‌ಲೈನ್‌ ಶಾಪಿಂಗ್‌ ತಾಣಗಳು ಈ ಸೌಲಭ್ಯವನ್ನು ನೀಡುತ್ತವೆ.

ತಮಗೆ ಮೋಸ ಮಾಡಲು ಮುಂದಾದ ಘಟನೆಯನ್ನು ಮಹಿಳೆಯ ಸಹೋದರ ವಿವರವಾಗಿ ಹೀಗೆ ಬರೆದುಕೊಂಡಿದ್ದಾರೆ. “ನನ್ನ ಸಹೋದರಿ ಬಳಿಗೆ ಫ್ಲಿಪ್‌ಕಾರ್ಟ್‌ ಡೆಲಿವರಿ ಬಾಯ್‌ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಬಂದಿದ್ದ. ಸಹೋದರಿ ಓಪನ್ ಬಾಕ್ಸ್ ಡೆಲಿವರಿ ಆಪ್ಶನ್‌ ಆಯ್ಕೆ ಮಾಡಿಕೊಂಡಿದ್ದು, ಪಾರ್ಸೆಲ್‌ ಅನ್ನು ತೆರೆಯುವಂತೆ ಆತನಲ್ಲಿ ಮನವಿ ಮಾಡಿದಳು. ಆದರೆ ಆತ ಬಾಕ್ಸ್‌ ತೆರೆಯಲು ನಿರಾಕರಿಸಿದ. ಜತೆಗೆ ಪಾರ್ಸೆಲ್‌ ತೆಗೆದುಕೊಳ್ಳುವಂತೆ ಒತ್ತಡ ಹೇರಲು ಆರಂಭಿಸಿದ. ಇದರಿಂದ ಅನುಮಾನಗೊಂಡು ನಾನು ನಮ್ಮ ಸಂಭಾಷಣೆಯನ್ನು ಚಿತ್ರೀಕರಿಸಲು ಆರಂಭಿಸಿದೆ. ಜತೆಗೆ ಪಾರ್ಸೆಲ್‌ ಸ್ವೀಕರಿಸಲು ನಿರಾಕರಿಸಿದೆವು. ಇದರಿಂದ ಆತನಿಗೆ ಭಯ ಮೂಡಿತು. ಬಳಿಕ ಆತ ಅಲ್ಲಿಂದ ಜಾಗ ಖಾಲಿ ಮಾಡಿದ. ಕೆಲವೇ ಹೊತ್ತಲ್ಲಿ ನಿಜವಾದ ಫ್ಲಿಪ್‌ಕಾರ್ಟ್‌ ಡೆಲಿವರಿ ಎಕ್ಸಿಕ್ಯೂಟಿವ್‌ ಆಗಮಿಸಿ ಐಫೋನ್ 15 ಹಸ್ತಾಂತರಿಸಿದರುʼʼ ಎಂದು ಹೇಳಿದ್ದಾರೆ.

ʼʼನಾನು ಈ ಎಲ್ಲ ಘಟನೆಗಳನ್ನು ಚಿತ್ರೀಕರಿಸದಿದ್ದರೆ ಆತ ಖಂಡಿತವಾಗಿಯೂ ನಮಗೆ ನಕಲಿ ಉತ್ಪನ್ನ ನೀಡಿರುತ್ತಿದ್ದʼʼ ಎಂದು ಹೇಳಿದ್ದಾರೆ. ಸದ್ಯ ಈ ಘಟನೆ ನೆಟ್ಟಿಗರ ಗಮನ ಸೆಳೆದಿದ್ದು, ವಂಚನೆಯ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Phone Snatching: ಬೈಕ್‌ನಲ್ಲಿ ಹೋಗುತ್ತಿದ್ದಾಗಲೇ ಡೆಲಿವರಿ ಬಾಯ್‌ನ ಮೊಬೈಲ್‌ ದೋಚಿದ ಕಳ್ಳರು; ವಿಡಿಯೊ ಸೆರೆ