Friday, 22nd November 2024

US Army: ಅಮೆರಿಕದ ಸೇನಾ ಜಾಲದಲ್ಲಿ ಕೊಲ್ಲಿ ರಾಷ್ಟ್ರಗಳು ಬಂಧಿ; ಮಧ್ಯಪ್ರಾಚ್ಯದ 19 ದೇಶಗಳಲ್ಲಿವೆ ಯುಎಸ್‌ ಮಿಲಿಟರಿ ಬೇಸ್‌

US Army

ಅಮೆರಿಕ ಸೇನೆ (US Army) ಮನಸ್ಸು ಮಾಡಿದರೆ ಯಾವುದೇ ದೇಶದ ಮೇಲೆ, ಯಾವಾಗ ಎಲ್ಲಿಂದ ಬೇಕಾದರೂ ಸಮರ ಸಾರಬಹುದು. ವಿಶ್ವದ ಸೂಪರ್ ಪವರ್ (world’s superpower nation) ದೇಶವೆಂದೇ ಕರೆಯಲ್ಪಡುವ ಯುಎಸ್ (US) ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮಾತ್ರ ಹೊಂದಿಲ್ಲ ಪ್ರಪಂಚದ ಪ್ರತಿಯೊಂದು ಖಂಡದಲ್ಲೂ ತನ್ನ ಸೇನಾ ನೆಲೆ ಹೊಂದಿದೆ.

ಪ್ರಪಂಚದಾದ್ಯಂತ ಇರುವ ತನ್ನ ಸೇನಾ ನೆಲೆಗಳನ್ನು ಜಗತ್ತಿನ ಎಲ್ಲಿಯಾದರೂ ಕುಳಿತಿರುವ ಶತ್ರುಗಳನ್ನು ಎದುರಿಸಲು ಮತ್ತು ತನ್ನ ಮಿತ್ರರಾಷ್ಟ್ರಗಳಿಗೆ ಸಹಾಯ ಮಾಡಲು ಯುಎಸ್ ಬಳಸಬಹುದು. ಇತ್ತೀಚೆಗೆ ಯುಎಸ್ ಮಧ್ಯಪ್ರಾಚ್ಯ (Middle East country) ಮತ್ತು ದಕ್ಷಿಣ ಏಷ್ಯಾದಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ಹೆಚ್ಚಿಸಿದೆ. ಪ್ರಸ್ತುತ ಅಮೆರಿಕ 80 ದೇಶಗಳಲ್ಲಿ ಸುಮಾರು 750 ಸೇನಾ ನೆಲೆಗಳನ್ನು ಹೊಂದಿದೆ. ಇದರಲ್ಲಿ ಹೆಚ್ಚಿನ 120 ಸೇನಾ ನೆಲೆಗಳು ಜಪಾನ್‌ನಲ್ಲಿವೆ.

ಯುಎಸ್ ನ ಸೇನಾ ನೆಲೆಗಳು ಮಧ್ಯಪ್ರಾಚ್ಯದಲ್ಲಿರುವ ಉದ್ವಿಗ್ನತೆಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇದು ಇಸ್ರೇಲ್ ಗೆ ಭದ್ರತೆಯಾಗಿದೆ. ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ಯುಎಸ್ ಸೇನಾ ನೆಲೆಗಳನ್ನು ಹೊಂದಿದ್ದು, ಅರಬ್ ದೇಶಗಳು ಬಯಸಿದರೂ ಇದನ್ನು ಹೊರಹಾಕಲು ಸಾಧ್ಯವಿಲ್ಲ.

US Army

ಮಧ್ಯಪ್ರಾಚ್ಯದ 19 ದೇಶಗಳಲ್ಲಿದೆ ಯುಎಸ್ ನ ಮಿಲಿಟರಿ

ಮಧ್ಯಪ್ರಾಚ್ಯದಲ್ಲಿ ಯುಎಸ್ ಸುಮಾರು 19 ದೇಶಗಳಲ್ಲಿ ಮಿಲಿಟರಿ ನೆಲೆಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದವುಗಳು ಕತಾರ್, ಬಹರೇನ್, ಜೋರ್ಡಾನ್ ಮತ್ತು ಸೌದಿ ಅರೇಬಿಯಾ. ಇದಲ್ಲದೇ ಟರ್ಕಿ ಮತ್ತು ಜಿಬೌಟಿಯಲ್ಲಿಯೂ ಅಮೆರಿಕ ಸೇನಾ ನೆಲೆಗಳನ್ನು ಹೊಂದಿದೆ. ಈ ದೇಶಗಳಲ್ಲಿ ಸೇನೆಯನ್ನು ಇರಿಸುವುದರಿಂದ ಇಡೀ ಮಧ್ಯಪ್ರಾಚ್ಯದ ಮೇಲೆ ಯುಎಸ್ ಗೆ ಕಣ್ಣಿಡಲು ಸಹಾಯವಾಗುತ್ತದೆ.

ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್‌ನ ಪ್ರತಿಯೊಂದು ಮೂಲೆ ಮತ್ತು ಇಡೀ ಮಧ್ಯಪ್ರಾಚ್ಯವೂ ನಮ್ಮ ವ್ಯಾಪ್ತಿಯಲ್ಲಿದೆ. ಇರಾನ್‌ನಲ್ಲಿ ನಮ್ಮ ಶಸ್ತ್ರಾಸ್ತ್ರಗಳು ತಲುಪಲು ಸಾಧ್ಯವಾಗದ ಸ್ಥಳವಿಲ್ಲ ಎಂದು ಹೇಳಿದ್ದರು.

ಅವರ ಈ ಹೇಳಿಕೆಯು ಅಮೆರಿಕದ ಸೇನಾ ನೆಲೆಗಳ ಮೇಲೆ ಅವರು ಅವಲಂಬಿತರಾಗಿರುವುದನ್ನು ಸ್ಪಷ್ಟಪಡಿಸಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಯುಎಸ್ ತನ್ನ ಸೇನಾ ನೆಲೆಗಳು 1940 ರ ದಶಕದಲ್ಲಿ ಆರಂಭಿಸಿತ್ತು. ಎರಡನೇ ವಿಶ್ವ ಸಮರದ ಬಳಿಕ ಯುಎಸ್, ಬ್ರಿಟನ್ ಜೊತೆಗೆ ಈ ಪ್ರದೇಶದಲ್ಲೂ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ನಿರ್ಧರಿಸಿತ್ತು.

ಅಮೆರಿಕ ತನ್ನ ಮೊದಲ ಶಾಶ್ವತ ಸೇನಾ ನೆಲೆಯನ್ನು 1951ರಲ್ಲಿ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸ್ಥಾಪಿಸಿತ್ತು . ಇದು ಯುಎಸ್ ಮತ್ತು ಸೌದಿ ಅರೇಬಿಯಾ ನಡುವೆ ಮಿಲಿಟರಿ ಮತ್ತು ರಾಜಕೀಯ ಸಂಬಂಧದ ಸಂಕೇತವಾಗಿ ಇಂದಿಗೂ ಉಳಿದಿದೆ. ಸೌದಿಯಲ್ಲಿರುವ ಪ್ರಮುಖ ಯುಎಸ್ ಸೇನಾ ನೆಲೆಗಳಲ್ಲಿ ಅಲ್ ಉದೇದ್ ಏರ್ ಬೇಸ್ ಮತ್ತು ಪ್ರಿನ್ಸ್ ಸುಲ್ತಾನ್ ಏರ್ ಬೇಸ್ ಸೇರಿವೆ.

US Army

ಮಧ್ಯಪ್ರಾಚ್ಯದಲ್ಲೇ ಏಕೆ ?

ಅಮೆರಿಕದ ಪ್ರತಿಯೊಂದು ಹೆಜ್ಜೆಯ ಹಿಂದೆಯೂ ಆರ್ಥಿಕ ಕಾರಣಗಳಿರುತ್ತವೆ ಎನ್ನುತ್ತಾರೆ ತಜ್ಞರು. ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸೇನೆಯನ್ನು ಇಡುವುದರಿಂದ ಆರ್ಥಿಕ ಮತ್ತು ಭದ್ರತೆ ಈ ಎರಡೂ ಪ್ರಯೋಜನವಿದೆ. ಮಧ್ಯಪ್ರಾಚ್ಯವು ವಿಶ್ವದ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ. ಇಲ್ಲಿ ತನ್ನ ಮಿಲಿಟರಿಯನ್ನು ಇಟ್ಟು ತನ್ನ ದೇಶದ ತೈಲ ಬೇಡಿಕೆಗಳನ್ನು ಈಡೇರಿಸಲು ಯುಎಸ್ ಪ್ರಯತ್ನಿಸುತ್ತದೆ.

ಇಸ್ರೇಲ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿದಕ ಮಿತ್ರರಾಷ್ಟ್ರವಾಗಿದೆ. ಎರಡೂ ಬಲವಾದ ರಾಜಕೀಯ ಮತ್ತು ಮಿಲಿಟರಿ ಸಂಬಂಧಗಳನ್ನು ಹೊಂದಿವೆ. ಇಸ್ರೇಲ್ ಎಲ್ಲಾ ಕಡೆ ಮುಸ್ಲಿಂ ದೇಶಗಳಿಂದ ಸುತ್ತುವರೆದಿರುವ ಯಹೂದಿ ದೇಶವಾಗಿದೆ. ಪ್ಯಾಲೆಸ್ತೀನ್ ಭೂಮಿಯನ್ನು ವಶಪಡಿಸಿಕೊಂಡ ಕಾರಣ ಇಸ್ರೇಲ್‌ ಜತೆ ನೆರೆ ಹೊರೆಯ ರಾಷ್ಟ್ರಗಳು ನಿರಂತರ ಸಂಘರ್ಷ ಮಾಡುತ್ತಿವೆ.

ಇನ್ನು ಮಧ್ಯಪ್ರಾಚ್ಯ ದೇಶಗಳಲ್ಲಿ ಅಮೆರಿಕ ಮಿಲಿಟರಿಯ ಉಪಸ್ಥಿತಿಗೆ ಪ್ರಮುಖ ಕಾರಣ ಭಯೋತ್ಪಾದನೆಗೆ ಕಡಿವಾಣ ಹಾಗೂ ಇರಾನ್ ನ ಪ್ರಭಾವ ತಗ್ಗಿಸುವುದಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಬಯಸುತ್ತಿರುವ ಇರಾನ್ ದೇಶದ ಶಿಯಾ ಸಿದ್ಧಾಂತ ತಮ್ಮ ಅಸ್ತಿತ್ವಕ್ಕೆ ಬೆದರಿಕೆ ಎಂದು ಯಹೂದಿ ರಾಷ್ಟ್ರಗಳು ಪರಿಗಣಿಸುತ್ತವೆ. ಹೀಗಾಗಿ ಇರಾನ್‌ನಿಂದ ರಕ್ಷಣೆಗಾಗಿ ಅವುಗಳು ಅಮೆರಿಕದ ಸಹಾಯವನ್ನು ನಿರೀಕ್ಷಿಸುತ್ತವೆ.

ಇಸ್ಲಾಮಿಕ್ ಕ್ರಾಂತಿಯ ಬಳಿಕ ಅಂದರೆ 1979ರ ಅನಂತರ ಇರಾನ್ ಅಮೆರಿಕವನ್ನು ಮಾತು ಕೇಳಲು ನಿರಾಕರಿಸಿತು. ತನ್ನನ್ನು ತಾನು ಪ್ರಮುಖ ಶಕ್ತಿಯಾಗಿ ನಿರೂಪಿಸಿತು. ಈ ಕಾರಣದಿಂದ ಅಮೆರಿಕವು ಇರಾನ್ ಅನ್ನು ತನಗೆ ದೊಡ್ಡ ಬೆದರಿಕೆ ಎಂದು ಪರಿಗಣಿಸಿದೆ.

ಅಮೆರಿಕಕ್ಕೆ ಅರಬ್ ದೇಶಗಳು ತಮ್ಮ ಭೂಮಿ ನೀಡಿದ್ದು ಏಕೆ?

ಹೆಚ್ಚಿನ ಅರಬ್ ರಾಷ್ಟ್ರಗಳು ತಮ್ಮ ದೇಶದ ಭದ್ರತೆಗೆ ಯುಎಸ್ ಮಿಲಿಟರಿ ಅತ್ಯಗತ್ಯವೆಂದು ಪರಿಗಣಿಸಿವೆ. ತನ್ನ ಸೇನಾ ನೆಲೆಯನ್ನು ಸ್ಥಾಪಿಸಲು ಅವಕಾಶ ಕೊಟ್ಟಿರುವುದಕ್ಕೆ ಪ್ರತಿಯಾಗಿ ಯುಎಸ್ ಈ ದೇಶಗಳಿಗೆ ಭದ್ರತೆಯ ಭರವಸೆ ನೀಡಿದೆ. ಈ ಮೂಲಕ ಬಡ ದೇಶಗಳಿಗೆ ಬೃಹತ್ ಮಿಲಿಟರಿ ಮತ್ತು ಆರ್ಥಿಕ ನೆರವು ಕೂಡ ಲಭಿಸಿದೆ.

ಶೀತಲ ಸಮರದ ಸಮಯದಲ್ಲಿ ಅನೇಕ ಅರಬ್ ರಾಷ್ಟ್ರಗಳು ಅಮೆರಿಕ ಜೊತೆ ಸೇರಿಕೊಂಡಿದ್ದವು. ಈ ಮೈತ್ರಿ ಅನಂತರವೂ ಮುಂದುವರಿದಿದೆ. ಇರಾನ್‌ನಿಂದ ಹೆಚ್ಚುತ್ತಿರುವ ಬೆದರಿಕೆಗಳಿಂದಾಗಿ ಸೌದಿ ಮತ್ತು ಯುಎಇಗಳು ಯುಎಸ್ ಸೈನ್ಯದ ಮೇಲೆ ಅವಲಂಬನೆಯನ್ನು ತೋರಿಸುತ್ತಿವೆ.

ಇಸ್ರೇಲ್ ಗೆ ಭಾರಿ ಲಾಭ

ಮಧ್ಯಪ್ರಾಚ್ಯದ ಸುತ್ತಲೂ ಯುಎಸ್ ನ ಸೇನಾ ನೆಲೆಗಳಿರುವುದು ಇಸ್ರೇಲ್ ಗೆ ಲಾಭದಾಯವಾಗಿದೆ. ನೆರೆಹೊರೆಯ ಯಾವುದೇ ದೇಶವು ಅದರ ವಿರುದ್ಧ ಮಿಲಿಟರಿ ಕ್ರಮ ತೆಗೆದುಕೊಳ್ಳುವ ಧೈರ್ಯ ಮಾಡುತ್ತಿಲ್ಲ. ಇರಾನ್ ಕೂಡ ಬೆದರಿಕೆಯನ್ನು ಮಾತ್ರ ಒಡ್ಡುತ್ತಿದೆ. ಆದರೆ ಯುದ್ಧರಂಗಕ್ಕೆ ಧುಮುಕುವ ಸಾಹಸ ಮಾಡುತ್ತಿಲ್ಲ.

US Army

ಕತಾರ್ ನಲ್ಲಿದೆ ಅತೀ ದೊಡ್ಡ ಸೇನಾ ನೆಲೆ

ಕತಾರ್‌ನಲ್ಲಿರುವ ಅಲ್ ಉದೇದ್ ಏರ್ ಬೇಸ್ ಅಮೆರಿಕದ ಅತಿದೊಡ್ಡ ಸೇನಾ ನೆಲೆಯಾಗಿದೆ. ಇದು ಇರಾನ್‌ನ ಮೇಲೆ ಸಂಪೂರ್ಣವಾಗಿ ನಿಗಾ ಇಡುತ್ತಿದೆ ಮತ್ತು ಯಾವುದೇ ಸಮಯದಲ್ಲಿ ಸಂಪೂರ್ಣ ಆಕ್ರಮಣ ನಡೆಸಲು ಸಿದ್ಧವಾಗಿರುತ್ತದೆ. ಹೆಜ್ಬೊಲ್ಲಾ ಮತ್ತು ಇರಾನ್ ಸೇನೆಯಿಂದ ಇಸ್ರೇಲ್ ಅನ್ನು ರಕ್ಷಿಸಲು ಯುಎಸ್ ಜೋರ್ಡಾನ್, ಸಿರಿಯಾ ಮತ್ತು ಇರಾಕ್‌ನ ತನ್ನ ಸೇನಾ ನೆಲೆಗಳನ್ನು ಬಳಸಿಕೊಳ್ಳುತ್ತಿವೆ. ಅರಬ್ ರಾಷ್ಟ್ರಗಳಿಗೆ ಭದ್ರತೆಯ ನೀಡುವ ನೆಪದಲ್ಲಿ ಅಮೆರಿಕ ಸಂಪೂರ್ಣ ಮಧ್ಯಪ್ರಾಚ್ಯವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ.

Israel Airstrike: ಹೆಜ್ಬುಲ್ಲಾಗಳಿಗೆ ಬ್ಯಾಕ್‌ ಟು ಬ್ಯಾಕ್‌ ಹೊಡೆತ; ಇಸ್ರೇಲ್‌ ದಾಳಿಗೆ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರ ಉಡೀಸ್‌

ರಾಜಕೀಯ ಸಮಸ್ಯೆ

ಅಮೆರಿಕದ ಸೇನಾ ನೆಲೆಗಳು ತಮ್ಮ ದೇಶದಲ್ಲಿರುವುದು ಬಹುತೇಕ ಅರಬ್ ರಾಷ್ಟ್ರಗಳಿಗೆ ರಾಜಕೀಯ ಸಮಸ್ಯೆಯಾಗಿ ಕಾಡುತ್ತಿದೆ. ಯಾಕೆಂದರೆ ಜನರಲ್ಲಿ ಹೆಚ್ಚುತ್ತಿರುವ ಅಮೆರಿಕದ ವಿರುದ್ಧದ ಭಾವನೆಗಳನ್ನು ನಿಯಂತ್ರಿಸುವುದು ಸರ್ಕಾರಕ್ಕೂ ಸವಾಲಾಗಿ ಪರಿಣಮಿಸಿದೆ. ಅನೇಕರು ವಿದೇಶಿ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕಾಗಿ ಇರಾಕ್ ಮತ್ತು ಜೋರ್ಡಾನ್‌ನಲ್ಲಿ ಪ್ರತಿಭಟನೆಗಳೂ ನಡೆದಿವೆ. ಆದರೂ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತಮ್ಮ ದೇಶಗಳಿಂದ ಅಮೆರಿಕದ ಮಿಲಿಟರಿ ಶಕ್ತಿಯನ್ನು ಹೊರದಬ್ಬುವುದು ಸಾಧ್ಯವಾಗಿಲ್ಲ.