Sunday, 6th October 2024

Muda Case: ಸಿಎಂ ಪತ್ನಿಯ 14 ನಿವೇಶನಗಳ ಖಾತೆ ರದ್ದು; ವಶಕ್ಕೆ ಪಡೆದ ಮುಡಾ

Muda Case

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ಸೈಟ್‌ಗಳನ್ನು ವಾಪಸ್‌ ಪಡೆಯಲು ಮುಡಾಗೆ ಪತ್ರ ಬರೆದ ಬೆನ್ನಲ್ಲೇ ನಿವೇಶನಗಳ ಖಾತೆ ರದ್ದುಗೊಂಡಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ನಿ ಪಾರ್ವತಿ ಅವರು ಮನನೊಂದು, ತಮಗೆ ನೀಡಿರುವ ಸೈಟ್‌ಗಳನ್ನು ವಾಪಸ್‌ ಪಡೆಯಲು ಮುಡಾಗೆ ಪತ್ರ ಬರೆದಿದ್ದರು. ಅಲ್ಲದೇ ಮಂಗಳವಾರ ಮೈಸೂರಿನ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ ಒಟ್ಟು 14 ಮುಡಾ ನಿವೇಶನಗಳ (Muda Case) ಖಾತೆ ರದ್ದು ಮಾಡಿಸಿದ್ದಾರೆ.

ಈ ಬಗ್ಗೆ ಮುಡಾ ಆಯುಕ್ತ ರಘುನಂದನ್​ ಅವರು ಪ್ರತಿಕ್ರಿಯಿಸಿ, ಸಿಎಂ ಪತ್ನಿಯವರ 14 ಸೈಟ್​ಗಳು ಮುಡಾಗೆ ವಾಪಸ್​ ಆಗಿದ್ದು, ಈಗ ಸೈಟ್​ಗಳ ಕ್ರಯಪತ್ರ ರದ್ದಾಗಿದೆ. ಅವರು ಸ್ವಇಚ್ಛೆಯಿಂದ ಬಂದು ಮನವಿ ಕೊಟ್ಟಿದ್ದಕ್ಕೆ ನಾವು ಸ್ವೀಕರಿಸಿದ್ದೇವೆ. ಇದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.

ಮೈಸೂರು ತಾಲೂಕು ಕಸಬಾ ಹೋಬಳಿಯ ಕೆಸರೆ ಗ್ರಾಮದ ಸರ್ವೇ ಸಂಖ್ಯೆ 464 ರಲ್ಲಿ 3 ಎಕರೆ 16 ಗುಂಟೆ ವಿಸ್ತೀರ್ಣದ ನನ್ನ ಜಮೀನನ್ನು ಭೂಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದ್ದಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರವಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ವಿವಿಧ ಅಳತೆಯ 14 ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಡಾ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇನ್ನು ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರಿಂದ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಅಲ್ಲದೇ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯವೂ ಪ್ರಕರಣ (ECIR) ದಾಖಲಿಸಿಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮನನೊಂದ ಸಿಎಂ ಪಾರ್ವತಿ ಅವರು, ತಮಗೆ ನೀಡಿದ್ದ 14 ಸೈಟ್‌ಗಳನ್ನು ವಾಪಸ್‌ ಪಡೆಯಲು ಮುಡಾಕ್ಕೆ ಪತ್ರ ಬರೆದಿದ್ದರು.

ಈ ಸುದ್ದಿಯನ್ನೂ ಓದಿ | MUDA Case: ಸಂವಿಧಾನಕ್ಕೆ ದೊರೆತ ಜಯ: ಅಶೋಕ್‌; ರಾಜೀನಾಮೆ ಕೊಡಿ: ಜೋಶಿ

ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ದೊಡ್ಡದಲ್ಲ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನನ್ನೂ ನನಗಾಗಲೀ, ನನ್ನ ಕುಟುಂಬಕ್ಕಾಗಲೀ ಬಯಸದೇ ಇದ್ದ ನನಗೆ ಈ ನಿವೇಶನಗಳು ತೃಣಕ್ಕೆ ಸಮ. ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ ಎಂದು ಸಿಎಂ ಪತ್ನಿ ಪಾರ್ವತಿ ಅವರು ಪತ್ರ ಬರೆದ ಹಿನ್ನೆಲೆಯಲ್ಲಿ ಅವರಿಗೆ ನೀಡಿದ್ದ ನಿವೇಶನಗಳನ್ನು ಮುಡಾ ವಶಕ್ಕೆ ಪಡೆದಿದೆ.