Friday, 22nd November 2024

JDS Protest: ಎಸ್ಐಟಿ ಎಡಿಜಿಪಿ ಎಂ. ಚಂದ್ರಶೇಖರ್ ವಿರುದ್ಧ ಜೆಡಿಎಸ್ ಭಾರಿ ಪ್ರತಿಭಟನೆ

JDS Protest

ಬೆಂಗಳೂರು: ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ ಐಪಿಎಸ್ ಅಧಿಕಾರಿ, ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಎಂ.ಚಂದ್ರಶೇಖರ್ (Lokayukta SIT ADGP M Chandrasekhar) ವಿರುದ್ಧ ಜೆಡಿಎಸ್ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಕಚೇರಿ ಮುಂಭಾಗದಲ್ಲಿ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಟಿ.ಎ. ಶರವಣ, ಜವರಾಯಿ ಗೌಡ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಸೇರಿದಂತೆ ಅನೇಕ ನಾಯಕರು, ನೂರಾರು ಕಾರ್ಯಕರ್ತರು ಭಾಗವಹಿಸಿ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | HD Kumaraswamy: ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳಿಸಲು ಸರ್ಕಾರದಿಂದ ಸಂಚು: ಎಚ್.ಡಿ.ಕೆ

ಈ ಸಂದರ್ಭದಲ್ಲಿ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಓರ್ವ ಅಧಿಕಾರಿಯಾಗಿ ಚಂದ್ರಶೇಖರ್ ಅವರು ಕೇಂದ್ರ ಸಚಿವರ ಬಗ್ಗೆ ಬಳಕೆ ಮಾಡಿರುವ ಭಾಷೆ ಸರಿ ಇಲ್ಲ. ಅದಕ್ಕೆ ಕ್ಷಮೆ ಕೇಳಬೇಕು ಹಾಗೂ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಅವರ ಹೇಳಿಕೆಯಿಂದ ಕುಮಾರಸ್ವಾಮಿ ಅವರ ಅಭಿಮಾನಿಗಳು ಹಾಗೂ ಅಸಂಖ್ಯಾತ ಜೆಡಿಎಸ್ ಕಾರ್ಯಕರ್ತರ ಭಾವನೆಗಳಿಗೆ ಘಾಸಿ ಉಂಟಾಗಿದೆ. ಕಾಂಗ್ರೆಸ್ ಸರ್ಕಾರ, ನಮ್ಮ ನಾಯಕರ ವಿರುದ್ಧ ಅಧಿಕಾರಿಗಳನ್ನು ಎತ್ತಿ ಕಟ್ಟುತ್ತಿದೆ ಎಂದು ಅವರು ಆರೋಪಿಸಿದರು.

ಇದೇ ವೇಳೆ ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ ಅವರು ಕೂಡಾ ಎಡಿಜಿಪಿ ಹೇಳಿಕೆಯನ್ನು ಕಟುವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು ಪಕ್ಷದ ಕಚೇರಿಯ ಮುಖ್ಯರಸ್ತೆಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಅಧಿಕಾರಿ ಚಂದ್ರಶೇಖರ್ ವಿರುದ್ಧ ಧಿಕ್ಕಾರ ಕೂಗಿದರು ಹಾಗೂ ಅಧಿಕಾರಿ ಕೂಡಲೇ ಕೇಂದ್ರ ಸಚಿವರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಕ್ಷಮೆ ಕೇಳದಿದ್ದರೆ ನಗರದ ಎಲ್ಲೆಡೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಹಾಗೂ ಮುಂದೆ ಆಗಬಹುದಾದ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನೂ ಓದಿ | Karnataka Rain: ಕರಾವಳಿ, ಮಲೆನಾಡಿನಲ್ಲಿ ಮುಂದಿನ ಒಂದು ವಾರ ವ್ಯಾಪಕ ಮಳೆ ಮುನ್ಸೂಚನೆ

ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ರಾವ್, ತುಳಸೀ ರಾಮ್‌, ಪಾಲಿಕೆಯ ಮಾಜಿ ಸದಸ್ಯ ತಿಮ್ಮೇಗೌಡ, ವಕ್ತಾರರುಗಳಾದ ದೇವರಾಜು, ಪೂರ್ಣಿಮ ಗೌಡ, ಬೆಂಗಳೂರು ಘಟಕದ ವಿವಿಧ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.