ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್
ಇತ್ತೀಚಿನ ದಿನಗಳಲ್ಲಿ ವಿಟಮಿನ್‌ಗಳು ಮತ್ತು ಖನಿಜಗಳು ಬಹಳ ಪ್ರಚಾರದಲ್ಲಿವೆ. ನಮ್ಮ ದೇಹಕ್ಕೆ ಆಹಾರದಲ್ಲಿ ಅಲ್ಲದೆ ಇವುಗಳ
ಅವಶ್ಯಕತೆ ಎಷ್ಟಿದೆ? ಈ ಬಗ್ಗೆ ಬಹಳಷ್ಟು ಅಪನಂಬಿಕೆಗಳು, ತಪ್ಪು ಕಲ್ಪನೆಗಳು ಇವೆ. ಅವುಗಳನ್ನು ಪರಿಹರಿಸಲು ಈ ಲೇಖನ ದಲ್ಲಿ ಪ್ರಯತ್ನಿಸಲಾಗಿದೆ.
ವಿಟಮಿನ್ ಮತ್ತು ದೇಹಕ್ಕೆ ಬೇಕಾದ ಸಪ್ಲಿಮೆಂಟ್ ಗಳ ಉದ್ಯಮ ಇತ್ತೀಚೆಗೆ ಅಗಾಧವಾಗಿ ಬೆಳೆದಿದೆ. 2016ರಲ್ಲಿ ಈ ಆಹಾರ ಸಪ್ಲಿಮೆಂಟ್ ಉದ್ಯಮ 133 ಬಿಲಿಯನ್ ಡಾಲರ್‌ನಷ್ಟು ವಹಿವಾಟು ನಡೆಸಿದ್ದರೆ 2022ರ ಹೊತ್ತಿಗೆ ಇದು 220 ಲಿಯನ್‌ಗಳಾಷ್ಟಾಗ ಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಅಮೆರಿಕದಲ್ಲಿ 2011-2012ರಲ್ಲಿ ಕೈಗೊಂಡ ಒಂದು ಸರ್ವೆಯ ಪ್ರಕಾರ ಜನಸಂಖ್ಯೆಯ ಶೇ.52 ವಯಸ್ಕರರು ಒಂದಲ್ಲ ಒಂದು ವಿಟಮಿನ್ ಅಥವಾ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರು. ಅಂದರೆ ಸುಮಾರು ಶೇ.32ರಷ್ಟು. ಅಂದರೆ ಮೂವರಲ್ಲಿ
ಒಬ್ಬರಾದರೂ ಈ ರೀತಿಯ ಆಹಾರ ಸಪ್ಲಿಮೆಂಟ್‌ನ್ನು ಉಪಯೋಗಿಸುತ್ತಿದ್ದರು. ಸಾಮಾನ್ಯವಾಗಿ ಜನರು ಆರೋಗ್ಯವಾಗಿರಲು ಬಯಸುವುದು ಸಹಜ. ತುಂಬಾ ದುಬಾರಿಯಲ್ಲದ ವಿಟಮಿನ್ ಮಾತ್ರೆಯನ್ನು ನುಂಗಿ ಆರೋಗ್ಯವಂತ, ಸುದೀರ್ಘ ಜೀವನ
ಜೀವಿಸುವುದಾದರೆ ಜನರು ಇದನ್ನೇ ಒಪ್ಪಿಕೊಳ್ಳುತ್ತಾರೆ, ವಿಟಮಿನ್ ಗುಳಿಗೆ ನುಂಗುತ್ತಾರೆ. ಹಾಗಾಗಿಯೇ ಈ ತರಹದ ಗುಳಿಗೆಗಳು ತುಂಬಾ ಜನಪ್ರಿಯವಾಗಿವೆ.
ಅದರಲ್ಲೂ ಈ ಸಪ್ಲಿಮೆಂಟರಿ ಉದ್ಯಮದವರಿಗೆ ಜನರ ಈ ಮನೋಭಾವದ ಸ್ಪಷ್ಟ ಅರಿವಿದೆ. ಹಾಗಾಗಿ ಅವರ ಜಾಹೀರಾತಿನ ಮಹಿಮೆಯೂ ಇದರಲ್ಲಿ ಸ್ವಲ್ಪ ಕೆಲಸ ಮಾಡಿ ಹೆಚ್ಚೆಚ್ಚು ಜನರು ಈ ತರಹದ ಗುಳಿಗೆಯ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಜೊತೆಗೆ
ಇವು ವೈದ್ಯರ ಶಿಫಾರಸ್ಸಿನ ಮೇಲೆ ತೆಗೆದುಕೊಳ್ಳುವ ನಿಯಮಿತ ಔಷಧಗಳಲ್ಲ. ಹಾಗಾಗಿ ಅಂಗಡಿಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಮುಕ್ತವಾಗಿ ದೊರೆಯುತ್ತವೆ. ಈ ಉದ್ಯಮಕ್ಕೆ ಈ ಅಂಶವೂ ಬಹಳ ಸಹಕಾರಿಯಾಗಿದೆ.
ಹಾಗೆಂದು ಈ ವಿಟಮಿನ್ ಮತ್ತು ಮಿನರಲ್‌ಗಳು ಕೆಲವೊಂದು ವರ್ಗದ ಜನರಲ್ಲಿ ಅವಶ್ಯಕ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಸಂಸ್ಥೆಯು ಗರ್ಭಿಣಿ ಮಹಿಳೆಯರಿಗೆ ಫೋಲಿಕ್ ಆಸಿಡ್ ಸಪ್ಲಿಮೆಂಟ್ಸ್‌ಗಳನ್ನು ಶಿಫಾರಸ್ಸು ಮಾಡುತ್ತದೆ. ಹಾಗೆಯೇ ವಿಪರೀತ ಚಳಿ ಪ್ರದೇಶಗಳಲ್ಲಿ ಅಥವಾ ಚಳಿಗಾಲದ ದಿನಗಳಲ್ಲಿ ವಿಟಮಿನ್ ಡಿ ಯನ್ನು ಹೆಚ್ಚುವರಿ ಯಾಗಿ ತೆಗೆದುಕೊಳ್ಳಲು ಶಿಫಾರಸ್ಸು ಮಾಡಲಾಗುತ್ತದೆ. ಏಕೆಂದರೆ ಆ ದಿನಗಳಲ್ಲಿ ಸೂರ್ಯನ ಕಿರಣ, ಬೆಳಕು ವಿರಳವಾಗಿ ದೊರಕುವುದರಿಂದ ಸಹಜವಾದ ವಿಟಮಿನ್ ಡಿ ದೇಹಕ್ಕೆ ದೊರಕುವುದಿಲ್ಲ.
ಹಾಗಾಗಿ ಇಂತಹ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಬೇರೆಯವರು ವೈದ್ಯರ ಸಲಹೆ ಇಲ್ಲದೆ ಅನಗತ್ಯವಾದ ಈ ರೀತಿಯ ವಿಟಮಿನ್‌ಗಳು ಮತ್ತು ಸಪ್ಲಿಮೆಂಟ್‌ಗಳನ್ನು ಸೇವಿಸಬಾರದು. ಸರಿಯಾಗಿ ಊಟ ಉಪಹಾರ ಮಾಡಿ ಹಣ್ಣು ಹಂಪಲು ಸೇವಿಸುವವರಿಗೆ ಈ ರೀತಿಯವು ಅನಗತ್ಯ ಎಂದು ಮೊದಲಿನ ಸಂಸ್ಥೆಯ ಅಭಿಮತ. ಆದರೆ ಈ ವಸ್ತು ವಿಜ್ಞಾನ ಮತ್ತು ಮಾರ್ಕೆಟಿಂಗ್ ನಿರ್ವಹಣೆ ಈ ಎರಡರ ಮಧ್ಯೆ ಇರುವುದರಿಂದ ಹಲವು ತಪ್ಪು ಕಲ್ಪನೆಗಳು ಜನ ಸಾಮಾನ್ಯರಲ್ಲಿ ಮೂಡಿವೆ. ಅಂತಹ ತಪ್ಪು ಕಲ್ಪನೆಗಳೆಂದರೆ,
ತಪ್ಪು ಕಲ್ಪನೆ 1: ಜನರು ವಿಟಮಿನ್‌ಗಳ ವಿಚಾರದಲ್ಲಿ ಹೆಚ್ಚು ಸೇವಿಸಿದರೆ ಬಹಳ ಒಳ್ಳೆಯದು ಎಂದು ಭಾವಿಸಿದ್ದಾರೆ. ಆದರೆ ಈ ಕಲ್ಪನೆ ಶುದ್ಧ ತಪ್ಪು. ವಿಟಮಿನ್‌ಗಳ ವಿಚಾರದಲ್ಲಿ ಹೆಚ್ಚು ಸೇವಿಸುವುದು ಖಂಡಿತಾ ಒಳ್ಳೆಯದಲ್ಲ. ಮೊದಲೇ ತಿಳಿಸಿದಂತೆ ಈ ವಿಟಮಿನ್ ಮತ್ತು ಮಿನರಲ್ ಗಳು ಬೇಕಾಬಿಟ್ಟಿ ದೊರಕುವುದರಿಂದ ಯಾವುದೇ ಪ್ರಮಾಣದಲ್ಲೂ ದೇಹಕ್ಕೆ ಹಾನಿ ಇಲ್ಲ ಎಂದು ಸಾಮಾನ್ಯರು ಭಾವಿಸಿದ್ದಾರೆ.
ಹೆಚ್ಚಿನ ಪ್ರಮಾಣದ ವಿಟಮಿನ್‌ಗಳು ದೇಹದೊಳಗಿನ ಹಲವು ಸಾಮಾನ್ಯ ವ್ಯವಸ್ಥೆಗಳನ್ನು ಏರು ಪೇರು ಮಾಡಬಲ್ಲವು. ಅಮೆರಿಕದ ಕ್ಯಾನ್ಸರ್ ಸೊಸೈಟಿಯ ಪ್ರಕಾರ – ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ದೇಹವು ತಾಮ್ರವನ್ನು ಹೀರಿಕೊಳ್ಳುವ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ. ಹಾಗೆಯೇ ಅಧಿಕ ಪ್ರಮಾಣದ ವಿಟಮಿನ್ ಎ, ಡಿ ಮತ್ತು ಕೆ ಗಳನ್ನು ದೇಹವು
ವಿಸರ್ಜಿಸಲು ಸಾಧ್ಯವಾಗದೆ, ಅವು ಅಪಾಯಕಾರಿ ಮಿತಿ ಮೀರಿದ ಮಟ್ಟವನ್ನು ಮುಟ್ಟುತ್ತವೆ.
ಹಾಗೆಯೇ ಜಾಸ್ತಿ ಪ್ರಮಾಣದ ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂಗಳು ದೇಹದಲ್ಲಿ ಹೊಟ್ಟೆೆ ನೋವು ಮತ್ತು ಬೇಧಿ ಉಂಟು ಮಾಡುತ್ತವೆ. ದೀರ್ಘಕಾಲ ಹೆಚ್ಚು ಪ್ರಮಾಣದ ವಿಟಮಿನ್ ಡಿ ಸೇವಿಸಿದಾಗ ದೇಹದಲ್ಲಿ ಕ್ಯಾಲ್ಸಿಯಂ ವಿಪರೀತ ಶೇಖರಗೊಂಡು ಹೈಪರ್ ಕ್ಯಾಲ್ಸೀಮಿಯಾ ಎನ್ನುವ ಸ್ಥಿತಿ ಉಂಟಾಗುತ್ತದೆ. ಈ ಸ್ಥಿತಿ ದೇಹದ ಮೂಳೆಗಳನ್ನು ಶಿಥಿಲಗೊಳಿಸುತ್ತವೆ. ಹಾಗೆಯೇ ಹೃದಯ ಮತ್ತು ಕಿಡ್ನಿಗೆ ತೊಂದರೆ ತರಬಲ್ಲವು.
ತಪ್ಪು ಕಲ್ಪನೆ 2: ಹೊರಗಿನ ಲೇಬಲ್ ಮೇಲೆ ನೈಸರ್ಗಿಕ ಅಂತಿದ್ದರೆ ಅದು ಸುರಕ್ಷಿತವೇ ಇರಬೇಕು. ಈ ಸಪ್ಲಿಮೆಂಟ್‌ಗಳ ವಿಚಾರ ದಲ್ಲಿ ಅದರ ಸುರಕ್ಷತೆ ಮತ್ತು ಕೆಲಸದ ಪರಿಣಾಮ ಇವುಗಳನ್ನು ಗಣಿಸಿದಾಗ ನೈಸರ್ಗಿಕ ಎನ್ನುವ ಶಬ್ದ ದಾರಿ ತಪ್ಪಿಸುತ್ತದೆ. ಫರ್ನ್ ಗಿಡಗಳು ನೈಸರ್ಗಿಕವಾಗಿ ಸಯನೈಡ್‌ಗಳನ್ನು ಉತ್ಪಾದಿಸುತ್ತವೆ. ಹಾಗಾದರೆ ಇದು ಸುರಕ್ಷಿತವೇ? ಸಯನೈಡ್ ಎಷ್ಟು
ಅಪಾಯಕಾರಿ, ವಿಷಕಾರಿ ಎಂದು ಎಲ್ಲರಿಗೂ ಗೊತ್ತಿದೆ. ಹಲವು ನೈಸರ್ಗಿಕ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿವೆ. ಆದರೆ ಅಷ್ಟೇ ಅಲ್ಲ. ಹಲವು ವಿಶೇಷತೆಗಳೂ ಇವೆ. ಡೆಂಡೇಲಿಯನ್ ಎಂಬ ಗಿಡದ ಬೇರುಗಳು ಮಲಬದ್ಧತೆ ನೀಗಲು ಉಪಯೋಗ
ವಾಗುತ್ತವೆ. ಆದರೆ ಅದರ ಎಲೆಗಳು ಮೂತ್ರವು ಜಾಸ್ತಿ ಬರುವಂತೆ ಮಾಡುತ್ತವೆ. ಜೊತೆಯಲ್ಲಿ ಇದರಲ್ಲಿ ಇನ್ನೊಂದು ವಿಚಾರವಿದೆ. ಸಸ್ಯದಿಂದ ಬರುವ ಈ ರೀತಿಯ ಔಷಧೀಯ ವಸ್ತುಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಬೆರೆಸಬೇಕು ಎಂಬ ಅಂಶ ಯಾವಾಗಲೂ ಚರ್ಚಾಸ್ಪದ.
ಹೆಚ್ಚಿನ ಸಂದರ್ಭಗಳಲ್ಲಿ ಈ ಸಪ್ಲಿಮೆಂಟ್‌ಗಳಲ್ಲಿ ಸಸ್ಯದ ಔಷಧೀಯ ಅಂಶ ತುಂಬಾ ಕಡಿಮೆ ಇರಬಹುದು ಅಥವಾ ವಿಪರೀತ ಜಾಸ್ತಿ ಇರಬಹುದು. ಎರಡು ರೀತಿಯವೂ ಅಪಾಯಕಾರಿ.
ತಪ್ಪು ಕಲ್ಪನೆ 3: ಬೇರೆ ಎಲ್ಲಾ ಔಷಧಗಳ ಜೊತೆ ಈ ಸಪ್ಲಿಮೆಂಟ್”ಗಳನ್ನು ತೆಗೆದುಕೊಂಡರೆ ತೊಂದರೆ ಇಲ್ಲ. ಮೇಲೆ ತಿಳಿಸಿ ದಂತೆ ಈ ಸಪ್ಲಿಮೆಂಟ್‌ಗಳು ಸುಲಭವಾಗಿ ದೊರಕುವುದರಿಂದ ಹಾಗೂ ಅವು ನೈಸರ್ಗಿಕ ಎಂದು ಬಹಳ ಜನ ತಿಳಿದಿರುವುದರಿಂದ ಅವು ಬೇರೆಯ ಔಷಧಗಳ ಜೊತೆ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಭಾವಿಸಿದ್ದಾರೆ. ಆದರೆ ಈ ಸಪ್ಲಿಮೆಂಟ್’ನಲ್ಲಿರುವ ಎಷ್ಟೋ ವಸ್ತುಗಳು ವಿವಿಧ ಔಷಧಗಳ ಜೊತೆ ಭಿನ್ನ ರೀತಿಯಲ್ಲಿ ವರ್ತಿಸಬಹುದು. ಕೆಲವು ಸಪ್ಲಿಮೆಂಟ್‌ಗಳು ವ್ಯಕ್ತಿ ತೆಗೆದು ಕೊಳ್ಳುತ್ತಿರುವ ಔಷಧದ ಪರಿಣಾಮವನ್ನು ಕಡಿಮೆ ಅಥವಾ ಜಾಸ್ತಿ ಮಾಡಬಹುದು.
ಈ ಬಗ್ಗೆ 2012ರಲ್ಲಿ ಒಂದು ದೊಡ್ಡ ಸರ್ವೆ ಮಾಡಲಾಯಿತು. ಈ ಸಪ್ಲಿಮೆಂಟ್ ಮತ್ತು ಸಸ್ಯ ಜನ್ಯ ಔಷಧಗಳಿಗೂ ಮತ್ತು ವ್ಯಕ್ತಿ ತೆಗೆದುಕೊಳ್ಳುತ್ತಿರುವ ಅಲೋಪತಿ ಔಷಧಗಳಿಗೂ ಇರುವ ಪರಸ್ಪರ ಕ್ರಿಯೆಗಳ ಬಗ್ಗೆೆ ಸರ್ವೆ ಮಾಡಿದಾಗ 1491 ರೀತಿಯ ಇವುಗಳ ಮಧ್ಯೆ ಪರಸ್ಪರ ಕ್ರಿಯೆಗಳ ಬಗ್ಗೆ ಪುರಾವೆ ದೊರೆಯಿತು. ಅದರಲ್ಲಿಯೂ ಮೆಗ್ನೀಸಿಯಂ, ಕ್ಯಾಲ್ಸಿಯಂ, ಜಿಂಕೋಗಳು ಇರುವ ಸಪ್ಲಿಮೆಂಟ್‌ಗಳು ಹೆಚ್ಚು ಪರಸ್ಪರ ಕ್ರಿಯೆಯನ್ನು ಹೊಂದಿದ್ದವು.
ಇದರಲ್ಲಿ ಮತ್ತೊಂದು ಸಮಸ್ಯೆ ಎಂದರೆ ಈ ರೀತಿಯ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವ ವ್ಯಕ್ತಗಳು ಈ ಬಗ್ಗೆ ತಮ್ಮ ವೈದ್ಯರಲ್ಲಿ ಸ್ಪಷ್ಟವಾಗಿ ಹೇಳುವುದಿಲ್ಲ.
ತಪ್ಪು ಕಲ್ಪನೆ 4: ವಿಟಮಿನ್ ಮತ್ತು ಖನಿಜಗಳನ್ನು ತೆಗೆದುಕೊಳ್ಳುವುದು ತಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು
ಎಂದು ತಿಳಿದಿದ್ದಾರೆ. 2018ರಲ್ಲಿ ಈ ಬಗ್ಗೆ ಒಂದು ದೊಡ್ಡ ಅಧ್ಯಯನ ಕೈಗೊಳ್ಳಲಾಗಿ ಈ ಸಪ್ಲಿಮೆಂಟ್ ಗಳು ಹೃದಯದ ತೊಂದರೆ ಬರುವುದನ್ನು ನಿಲ್ಲಿಸುವುದೂ ಇಲ್ಲ. ಹೃದಯದ ಕಾಯಿಲೆ ಬಂದು ಮರಣ ಹೊಂದುವ ಪ್ರಮಾಣವನ್ನು ಕಡಿಮೆ ಮಾಡುವುದೂ ಇಲ್ಲ – ಎಂದು ಸ್ಪಷ್ಟವಾಗಿ ಕಂಡುಕೊಂಡಿದ್ದಾರೆ.
ತಪ್ಪು ಕಲ್ಪನೆ 5: ವಿಟಮಿನ್ ಸಿ ಶೀತ, ಥಂಡಿಯನ್ನು ಬರದಿರುವಂತೆ ಮಾಡುತ್ತದೆ. ಈ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ.
2013ರಲ್ಲಿ ಈ ಬಗ್ಗೆ ಒಂದು ಕೊಕ್ರೇನ್ ರಿವ್ಯೂ ಎಂದು ಕೈಗೊಳ್ಳಲಾಯಿತು. ಅದರಲ್ಲಿ ಅವರು ಈ ವಿಟಮಿನ್ ಸಿ ಬಹಳಷ್ಟು ದಿನ ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಶೀತ ಬರುವ ಅವಧಿ ಮತ್ತು ತೀವ್ರತೆ ಕಡಿಮೆ ಮಾಡುತ್ತದಾ ಎಂದು ವೀಕ್ಷಿಸಿದರು. ಸಾಮಾನ್ಯ ಜನರಿಗೆ ಶೀತ ಬರುವುದನ್ನು ವಿಟಮಿನ್ ಸಿ ತಡೆಯುವುದಿಲ್ಲ. ಆದರೆ ಸ್ವಲ್ಪ ಪ್ರಮಾಣದಲ್ಲಿ ಅವಧಿ ಮತ್ತು ತೀವ್ರತೆ ಕಡಿಮೆ ಮಾಡುತ್ತದೆ ಎಂದು ಕಂಡುಕೊಂಡರು. ಕಡಿಮೆ ಅವಧಿಯ ದೈಹಿಕ ಶ್ರಮ ಹಾಕುವವರಲ್ಲಿ ಅಂದರೆ ಮ್ಯಾರಥಾನ್ ಓಟಗಾರರಲ್ಲಿ ಇದು ಸಹಾಯ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ತಪ್ಪು ಕಲ್ಪನೆ 6: ಕ್ಯಾನ್ಸರ್ ಬರದಿರುವಂತೆ ವಿಟಮಿನ್ ಡಿ ಮಾಡುತ್ತದೆ. ಕ್ಯಾನ್ಸರ್ ಬರದಿರುವಂತೆ ವಿಟಮಿನ್ ಡಿ ಮಾಡುತ್ತದೆಯಾ ಅಥವಾ ಅದನ್ನು ಚಿಕಿತ್ಸೆಯಾಗಿ ಉಪಯೋಗಿಸಬಹುದಾ ಎಂದು ಹಲವಾರು ಅಧ್ಯಯನ ಕೈಗೊಂಡಿದ್ದಾರೆ. ಆದರೆ ಈ ಬಗ್ಗೆ ಯಾವ ಪುರಾವೆಯೂ ಇದುವರೆಗೆ ದೊರಕಿಲ್ಲ. 2018ರಲ್ಲಿ ಈ ಬಗ್ಗೆ 25871 ರೋಗಿಗಳಲ್ಲಿ ಅಧ್ಯಯನ ಮಾಡ ಲಾಯಿತು. ವಿಟಮಿನ್ ಡಿ ಕ್ಯಾನ್ಸರ್ ಅಥವಾ ಹೃದಯ ಸಂಬಂಧಿ ಕಾಯಿಲೆ ಬರುವುದನ್ನು ತಡೆಯುವ ಯಾವ ಪರಿಣಾಮ ವನ್ನೂ ಹೊಂದಿಲ್ಲ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ತಪ್ಪು ಕಲ್ಪನೆ 7: ಪ್ರೊಬಯಾಟಿಕ್ಸ್ ಮತ್ತು ಪ್ರಿಬಯಾಟಿಕ್ಸ್ಗಳು ಎಲ್ಲವನ್ನೂ ಗುಣಪಡಿಸಬಲ್ಲವು. ಪ್ರೊಬಯಾಟಿಕ್ಸ್
ಎಂದರೆ ಸೂಕ್ಷ್ಮ ಜೀವಿಗಳನ್ನು ಹೊಂದಿರುವ ಆಹಾರ ವಸ್ತುಗಳು ಅಥವಾ ಔಷಧಗಳು. ಪ್ರಿಬಯಾಟಿಕ್ಸ್ ಎಂದರೆ ನಮ್ಮ ಕರುಳಿನಲ್ಲಿ ಬ್ಯಾಕ್ಟೀರಿಯಾಗಳನ್ನು ವೃದ್ಧಿಸುವ ಸಪ್ಲಿಮೆಂಟ್‌ಗಳು ಅಥವಾ ಆಹಾರದ ವಸ್ತುಗಳು. ಇತ್ತೀಚಿನ ದಿನಗಳಲ್ಲಿ ನಮ್ಮ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತವೆ ಎಂದು ಹೇಳುವ ಹಲವಾರು ವಸ್ತುಗಳು ಮಾರುಕಟ್ಟೆಗೆ ಬಂದಿವೆ.
ಹಾಗಾಗಿ ಈ ಪ್ರೊಬಯಾಟಿಕ್ಸ್ ಮತ್ತು ಪ್ರಿಬಯಾಟಿಕ್ಸ್ ಗಳು ಈಗೀಗ ಬಹಳ ಶಬ್ದ ಮಾಡುತ್ತಿವೆ. ನಮ್ಮ ಆರೋಗ್ಯಕ್ಕೆ ಕರುಳಿನ ಬ್ಯಾಕ್ಟೀರಿಯಾಗಳು ಬಹಳ ಮುಖ್ಯ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗೆಗಿನ ವಿಜ್ಞಾನ ಇನ್ನೂ ತುಂಬಾ ಹೊಸದು.
ಆಗಲೇ ಇದನ್ನು ಏರುರಕ್ತದೊತ್ತಡ (Hypertension ), ಡಯಾಬಿಟಿಸ್ ಮತ್ತು ಚಿತ್ತವೈಕಲ್ಯತೆ (Depression) ಕಾಯಿಲೆಗಳಲ್ಲಿ
ಮಹತ್ವದ ಪಾತ್ರ ಹೊಂದಿದೆ ಎಂದು ಬಿಂಬಿಸಲಾಗುತ್ತಿದೆ.
ಕರುಳಿನಲ್ಲಿರುವ ಸೂಕ್ಷ್ಮ ಜೀವಿಗಳಿಗೂ ಮತ್ತು ನಮ್ಮ ದೇಹದ ಆರೋಗ್ಯಕ್ಕೂ ಇರುವ ಸ್ಪಷ್ಟ ಕಲ್ಪನೆ ಇದುವರೆಗೆ ನಮಗಾಗಲಿಲ್ಲ. ಇವುಗಳ ಸಂಬಂಧ ತುಂಬಾ ಸಂಕೀರ್ಣ ಮತ್ತು ತೊಡಕಿನದ್ದು ಎಂದು ತಜ್ಞರ ಅಭಿಮತ. ಪ್ರೊಬಯಾಟಿಕ್ಸ್‌ಗಳು ಆಂಟಿಬಯೋಟಿಕ್ಸ್‌ಗಳನ್ನು ತೆಗೆದುಕೊಂಡು ಉಂಟಾಗುವ ಭೇದಿಯ ಲಕ್ಷಣಕ್ಕೆ ಮತ್ತು ಇರಿಟಬಲ್ ಬವೆಲ್ ಸಿಂಡ್ರೋಮ್ (IBS) ಕಾಯಿಲೆಯ ಹಲವು ಲಕ್ಷಣಗಳನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತ ಎಂದು ಕಂಡುಕೊಳ್ಳಲಾಗಿದೆ. ಇವುಗಳನ್ನು ಬಿಟ್ಟರೆ ಉಳಿದ ಕಾಯಿಲೆಗಳಲ್ಲಿ ಸ್ಪಷ್ಟ ಪುರಾವೆ ಇನ್ನೂ ದೊರಕಿಲ್ಲ.
ಇನ್ನೂ ಈ ಬಗ್ಗೆ ಹೆಚ್ಚು ಸಂಶೋಧನೆಗಳಾಗಬೇಕು ಎಂಬುದು ತಜ್ಞರ ಅಭಿಪ್ರಾಯ. ಆದರೆ ಪ್ರಸ್ತುತ ಈ ಪ್ರೊಬಯಾಟಿಕ್ಸ್
ಮತ್ತು ಪ್ರಿಬಯಾಟಿಕ್ಸ್‌ಗಳನ್ನು ಕರುಳಿನ ಆರೋಗ್ಯಕ್ಕೆ ಮತ್ತು ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೆ ಬಹಳ ಸಹಾಯಕಾರಿ ಎಂದು ಮಾರ್ಕೆಟ್ ಮಾಡಲಾಗುತ್ತಿದೆ ಎಂಬುದು ವಸ್ತುಸ್ಥಿತಿ.
ನ್ಯಾಷನಲ್ ಸೆಂಟರ್ ಫಾರ್ ಕಾಂಪ್ಲಿಮೆಂಟರಿ ಮತ್ತು ಇಂಟಿಗ್ರೇಟೆಡ್ ಹೆಲ್ತ್ ಪ್ರಕಾರ ಯಾವ ಪ್ರೊಬಯಾಟಿಕ್ಸ್‌ಗಳು ಉಪಯುಕ್ತ, ಯಾವುದು ಪರಿಣಾಮಕಾರಿಯಲ್ಲ ಎಂಬ ಬಗ್ಗೆ ಇನ್ನೂ ಗೊತ್ತಿಲ್ಲ. ಎಷ್ಟು ಪ್ರಮಾಣದಲ್ಲಿ ಇರಬೇಕು, ಯಾರಿಗೆ ಉಪಯುಕ್ತ – ಈ ಬಗ್ಗೆಯೂ ನಮಗೆ ನಿಖರವಾಗಿ ಗೊತ್ತಿಲ್ಲ ಎನ್ನುತ್ತಾರೆ ಅವರು. ಇವು ಎಲ್ಲೆಂದರಲ್ಲಿ ದೊರೆಯುವುದರಿಂದ ಬಹಳಷ್ಟು ದುರುಪಯೋಗವಾಗುತ್ತಿವೆ ಎಂದು ವೈದ್ಯರುಗಳ ಅಭಿಮತ.
ತಪ್ಪು ಕಲ್ಪನೆ 8: ಆಂಟಿ ಆಕ್ಸಿಡೆಂಟ್‌ಗಳು ಆಯುಷ್ಯವನ್ನು ವೃದ್ಧಿಸುತ್ತವೆ. ನಮ್ಮ ದೇಹದಲ್ಲಿ ಹಲವು ಕ್ರಿಯೆಗಳು ನಿರಂತರವಾಗಿ ಜರುಗುತ್ತಿರುತ್ತವೆ. ಅದರಲ್ಲಿ ಆಕ್ಸಿಡೇಷನ್ ಎಂಬ ಕ್ರಿಯೆಯೂ ಒಂದು. ಇದು ಒಂದು ರಾಸಾಯನಿಕ ಕ್ರಿಯೆ. ಈ ಕ್ರಿಯೆಯು
ಸ್ವತಂತ್ರವಾದ ರಾಡಿಕಲ್ಸ್ಗಳನ್ನು ಹೊರಬೀಳುವಂತೆ ಮಾಡುತ್ತವೆ. ಇವು ರಾಸಾಯನಿಕವಾಗಿ ತುಂಬಾ ಶಕ್ತಿಶಾಲಿಯಾದವುಗಳು. ಹಾಗೆಯೇ ಆರೋಗ್ಯವಂತ ಜೀವಕೋಶಗಳಿಗೆ ಹಾನಿ ಉಂಟು ಮಾಡುತ್ತವೆ.
ಆಂಟಿ ಆಕ್ಸಿಡೆಂಟ್‌ಗಳು ಈ ಆಕ್ಸಿಡೇಷನ್ ಆಗುವುದನ್ನು ನಿಲ್ಲಿಸುವ ವಸ್ತುಗಳು. ಅವು ಮುಖ್ಯವಾಗಿ ವಿಟಮಿನ್ ಸಿ, ವಿಟಮಿನ್ ಈ,
ಸೆಲೆನಿಯಮ್ ಮತ್ತು ಕೆರಟಿನಾಯ್ಡ್ಗಳು. ಉದಾಹರಣೆಗೆ ಬೀಟಾ ಕೆರಟೀನ್‌ಗಳು. ಸಾಮಾನ್ಯವಾಗಿ ಹಣ್ಣು ತರಕಾರಿಗಳಲ್ಲಿ ಬಹಳ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದಲೇ ಈ ಹಣ್ಣು ತರಕಾರಿಗಳು ನಮಗೆ ಒಳ್ಳೆಯದು ಎಂದೇನೂ ಇಲ್ಲ. ಹೆಚ್ಚು ಹಣ್ಣು ತರಕಾರಿ ಸೇವಿಸುವವರಿಗೆ ಹಲವು ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ. ಆದರೆ ಅವುಗಳಲ್ಲಿ ಈ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದಲೇ ಈ ಪರಿಣಾಮ ಅಂತಲ್ಲ. ಹಣ್ಣು ತರಕಾರಿ ಗಳಲ್ಲಿರುವ ಬೇರೆಯ ಅಂಶಗಳಿಗೂ ಆಗಿರಬಹುದು. ಹಾಗೂ ವ್ಯಕ್ತಿಯ ಆಹಾರದ ಇನ್ನಿತರ ಅಂಶಗಳಿಂದಲೂ ಈ ಲಾಭ ಇರಬಹುದು ಅಥವಾ ವ್ಯಕ್ತಿಯ ಜೀವನ ಕ್ರಮದಿಂದಲೂ ಇರಬ ಹುದು. ಹಾಗಾಗಿ ಆಂಟಿ ಆಕ್ಸಿಡೆಂಟ್‌ಗಳಿಂದಲೇ ವಿಶೇಷ ಲಾಭ ಎಂಬ ಅಭಿಪ್ರಾಯ ತಪ್ಪು.