Saturday, 16th November 2024

Theft Case: ಮಂತ್ರಾಲಯಕ್ಕೆ ಹೋದವರ ಮನೆಗೆ ಕನ್ನ ಹಾಕಿದ್ದವ, ಮಂಜುನಾಥನ ದರ್ಶನಕ್ಕೆ ಹೋಗಿ ಸಿಕ್ಕಿಬಿದ್ದ!

ಬೆಂಗಳೂರು: ಪ್ರವಾಸಕ್ಕೆ ತೆರಳುವವರ ಮನೆಗಳನ್ನೇ ಟಾರ್ಗೆಟ್​ ಮಾಡಿ ತಮ್ಮ ಕೈಚಳಕ ತೋರುತ್ತಿದ್ದ ಖದೀಮರಿಬ್ಬರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಸಂಬಂಧಿಕರು ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರು ಮಂತ್ರಾಲಯಕ್ಕೆ ಹೋದ ವಿಷಯ ತಿಳಿದು, ಆ ಮನೆಗೆ ನುಗ್ಗಿದ್ದ ಆರೋಪಿಗಳು, 1ಕೆಜಿ 800 ಗ್ರಾಂ ಚಿನ್ನಾಭರಣ ಸೇರಿ ನಗದು ದೋಚಿದ್ದರು(Theft Case). ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕಳವಾಗಿದ್ದ ಚಿನ್ನಾಭರಣ ಮತ್ತು ನಗದು ವಶಕ್ಕೆ ಪಡೆದಿದ್ದಾರೆ.

ಆರೋಪಿ ಸನ್ಯಾಸಿಮಠ ನಂದೀಶ್ ಮತ್ತು ನಂದೀಶ್ ಪ್ರತಾಪ್ ಬಂಧಿತ ಆರೋಪಿಗಳು. ಕಳ್ಳತನ ನಡೆದ 12 ಗಂಟೆಯಲ್ಲೇ ಸುಬ್ರಮಣ್ಯ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಬ್ರಮಣ್ಯ ನಗರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದವರಿಗೆ ಆರೋಪಿ ಸನ್ಯಾಸಿಮಠ ನಂದೀಶ್​​ ಸಂಬಂಧಿಕನಾಗಿದ್ದಾನೆ. ಆ ಮನೆಯ ಮಾಲೀಕರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ ಎಂದು ಹೇಗೋ ತಿಳಿದುಕೊಂಡು ನಂದೀಶ್ ಕಳ್ಳತನಕ್ಕೆ ಪ್ಲಾನ್ ಮಾಡಿದ್ದ.

ಮನೆಯ ಮಾಲೀಕನ ಕುಟುಂಬ ಮಂತ್ರಾಲಯಕ್ಕೆ ಯಾವಾಗ ಹೋಗುತ್ತದೆ ಎಂದು ಆರೋಪಿಗಳು ನಿತ್ಯ ನೋಡುತ್ತಿದ್ದರು. ಒಂದು ದಿನ ಮನೆಯವರು ಮಂತ್ರಾಲಯಕ್ಕೆ ಹೋಗಿದ್ದಾರೆ. ಹೀಗಾಗಿ ಕಳ್ಳರು, ಮನೆಯ ಹಿಂಬದಿ ಕಿಟಕಿಯನ್ನು ಗ್ಯಾಸ್ ಕಟರ್​ನಿಂದ ಕಟ್ ಮಾಡಿ ಮನೆಯೊಳಗೆ ನುಗ್ಗಿ, ಮನೆಯಲ್ಲಿದ್ದ 1ಕೆಜಿ 800 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದರು. ಕದ್ದ ಚಿನ್ನವನ್ನು ಸನ್ಯಾಸಿಮಠ ನಂದೀಶ್​ ತನ್ನ ರೂಮ್‌ನಲ್ಲಿ ಇಟ್ಟು, ಚಿನ್ನ ಕದ್ದ ಖುಷಿಯಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದ.

ಈ ಸುದ್ದಿಯನ್ನೂ ಓದಿ | Chaithra Kundapura: ಹಣದ ಸುರಿಮಳೆ: ಒಂದು ದಿನಕ್ಕೆ ಚೈತ್ರಾ ಕುಂದಾಪುರಗೆ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತೇ?

ಮನೆ ಮಾಲೀಕರು ಮಂತ್ರಾಲಯದಿಂದ ವಾಪಸ್ ಬಂದು ನೋಡಿದಾಗ, ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮಾಲೀಕರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ತನಿಖೆ ಅರಂಭಿಸಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬೆನ್ನು ಹತ್ತಿದ್ದರು. ಸನ್ಯಾಸಿಮಠ ನಂದೀಶ್​ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಬಳಿಕ, ಮತ್ತೊಬ್ಬ ಆರೋಪಿ ನಂದೀಶ್​ ಪ್ರತಾಪ್​ನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1ಕೆಜಿ 800 ಗ್ರಾಂ ಚಿನ್ನ ಹಾಗೂ 18 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.