ತಿರುವನಂತಪುರ: ಕೇರಳದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದು ದಾಖಲಾಗಿದ್ದು, (Shocking News) ಎಂಬಿಬಿಎಸ್ (ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ) ಎರಡನೇ ವರ್ಷದ ತರಬೇತಿಯೂ ಪೂರ್ಣಗೊಳಿಸದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹೃದಯ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅದು ವಿಫಲಗೊಂಡು ರೋಗಿ ಮೃತಪಟ್ಟಿದ್ದಾರೆ.
ಕೋಯಿಕ್ಕೋಡ್ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ವಿನೋದ್ ಕುಮಾರ್ ಎಂಬ 60 ವರ್ಷದ ಹೃದಯ ರೋಗಿ ಮೃತಪಟ್ಟಿದ್ದರು. ತನಿಖೆ ನಡೆಸಿದಾಗ ಎಂಬಿಬಿಎಸ್ ಫೇಲ್ ಆಗಿರುವ ವ್ಯಕ್ತಿ ಶಸ್ತ್ರ ಚಿಕಿತ್ಸೆ ನಡೆಸಿದ್ದು ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 23 ರಂದು ಈ ಘಟನೆ ನಡೆದಿದ್ದು, ವೈದ್ಯಕೀಯ ಅಧಿಕಾರಿ ತನ್ನ ವೈದ್ಯಕೀಯ ಶಿಕ್ಷಣವನ್ನು ಸಹ ಪೂರ್ಣಗೊಳಿಸಿಲ್ಲ ಎಂಬುದು ಗೊತ್ತಾಯಿತು. ಇದು ಆಕ್ರೋಶಕ್ಕೆ ಕಾರಣವಾಯಿತು.
ತೀವ್ರ ಎದೆ ನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿನೋದ್ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತರ ಪುತ್ರ ಅಶ್ವಿನ್ ಎಂಬುವರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ವೈದ್ಯ ಇನ್ನೂ ಎರಡನೇ ವರ್ಷದ ಎಂಬಿಬಿಎಸ್ ಪಾಸ್ ಮಾಡಿಲ್ಲ ಎಂಬುದಾಗಿ ಆರೋಪಿಸಿದ್ದರು.
ಚಿಕಿತ್ಸೆ ನೀಡಿದ ವ್ಯಕ್ತಿ ಇನ್ನೂ 2ನೇ ವರ್ಷದ ಎಂಬಿಬಿಎಸ್ ಕೋರ್ಸ್ ಪೂರ್ತಿ ಮಾಡಿಲ್ಲ. 2011ರಲ್ಲಿ ಅವರ ಕೋರ್ಸ್ಗೆ ಸೇರಿಕೊಂಡಿದ್ದರೂ ಇನ್ನೂ ಪರೀಕ್ಷೆಗಳಲ್ಲಿ ಪಾಸಾಗಲು ಸಾಧ್ಯವಾಗಿಲ್ಲ. ಅಂತಹ ಅನರ್ಹರು ನನ್ನ ತಂದೆಯ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಮುಂದಾಗಿದ್ದು ಎಂದು ಪುತ್ರ ಆರೋಪಿಸದ್ದಾರೆ.
ವೈದ್ಯರ ಅರ್ಹತೆ ಪರಿಶೀಲಿಸುವಲ್ಲಿನ ತಮ್ಮಿಂದಾದ ಲೋಪವನ್ನು ಆಸ್ಪತ್ರೆ ಒಪ್ಪಿಕೊಂಡಿದೆ. ಆರೋಪಿಯನ್ನು ಅಬು ಅಬ್ರಹಾಂ ಲ್ಯೂಕ್ ಎಂದು ಗುರುತಿಸಲಾಗಿದ್ದು, ಆತನನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಲ್ಯೂಕ್ ಅವರನ್ನು ನೇಮಿಸಿಕೊಳ್ಳುವ ಮೊದಲು ಅವರ ವೈದ್ಯಕೀಯ ನೋಂದಣಿ ಸಂಖ್ಯೆಯನ್ನು ಮಾತ್ರ ಪರಿಶೀಲಿಸಲಾಗಿದೆ. ಮುಂದಿನ ವಿವರಗಳನ್ನು ಸಂಗ್ರಹಿಸಿಲ್ಲ ಎಂದು ಆಸ್ಪತ್ರೆಯ ವ್ಯವಸ್ಥಾಪಕರು ಹೇಳಿದ್ದಾರೆ.
ಇದನ್ನೂ ಓದಿ: Monsoon 2024 : ಭಾರತದಲ್ಲಿ ಈ ಮುಂಗಾರು ಮಳೆಯ ಅನಾಹುತಕ್ಕೆ ಮೃತಪಟ್ಟವರು 1400 ಮಂದಿ
ವೈದ್ಯ ನಮ್ಮ ಆಸ್ಪತ್ರೆಗೆ ಬರುವ ಕೋಯಿಕೋಡ್ ಮತ್ತು ಮಲಪ್ಪುರಂನ ಅನೇಕ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. ನಾವು ಅವರ ವೈದ್ಯಕೀಯ ನೋಂದಣಿ ಸಂಖ್ಯೆ ಪರಿಶೀಲಿಸಿದ್ದೇವೆ. ಅವರು ಈ ಹಿಂದೆ ನಮಗಿಂತ ದೊಡ್ಡ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. ಆದ್ದರಿಂದ ನಾವು ನೇಮಕ ಮಾಡಿಕೊಂಡೆವು. ಅವರು ಉತ್ತಮ ವೈದ್ಯರಾಗಿದ್ದರು. ಅವರು ಇಲ್ಲದಿದ್ದರೆ ರೋಗಿಗಳು ತಮ್ಮ ಅಪಾಯಿಂಟ್ಮೆಂಟ್ಗಳನ್ನು ಕ್ಯಾನ್ಸಲ್ ಮಾಡುತ್ತಿದ್ದರು. ಅವರು ರೋಗಿಗಳೊಂದಿಗೆ ಉತ್ತಮವಾಗಿ ವರ್ತಿಸುತ್ತಿದ್ದರು. ಹೆಚ್ಚು ಗೌರವದಿಂದ ನೋಡುತ್ತಿದ್ದರು. ಆದ್ದರಿಂದ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.