ಬೆಂಗಳೂರು: ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್.ಆರ್. ಸನತ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಅರಸು ಅವರ ಸಹ ನಿರ್ಮಾಣವಿರುವ ಹಾಗೂ ಆರ್. ರವೀಂದ್ರ ನಿರ್ದೇಶನದ “ಗೋಪಿಲೋಲ” ಚಿತ್ರ (Gopilola Movie) ನವರಾತ್ರಿಯ ಶುಭ ಸಂದರ್ಭದಲ್ಲಿ ಅಕ್ಟೋಬರ್ 4 ರಂದು (Kannada New Movie) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಗೂ ಮುನ್ನ ಚಿತ್ರತಂಡದ ಸದಸ್ಯರು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜನಾಥಸ್ವಾಮಿ ದರ್ಶನ ಪಡೆದುಕೊಂಡರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು “ಗೋಪಿಲೋಲ” ಚಿತ್ರದ ಪೋಸ್ಟರ್ ಹಾಗೂ ಹಾಡೊಂದನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ಆಶೀರ್ವದಿಸಿದರು.
ನೈಸರ್ಗಿಕ ಕೃಷಿಯೇ ಶ್ರೇಷ್ಠ ಎಂಬ ಮುಖ್ಯ ಕಥಾಹಂದರವುಳ್ಳ ಈ ಚಿತ್ರದಲ್ಲಿ ಲವ್, ಆಕ್ಷನ್ ಸೇರಿದಂತೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ನೋಡುಗರೆ ಮನ ಗೆದ್ದಿದೆ.
“ಗೋಪಿಲೋಲ” ಚಿತ್ರಕ್ಕೆ ನಿರ್ಮಾಪಕ ಎಸ್.ಆರ್. ಸನತ್ ಕುಮಾರ್ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಕೇಶವಚಂದ್ರ ಅವರದು. ಸೂರ್ಯಕಾಂತ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಮಿಥುನ್ ಅಶೋಕನ್ ಚೆನ್ನೈ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಕೇಶ್ ಆಚಾರ್ಯ ಅವರದು.
ಈ ಸುದ್ದಿಯನ್ನೂ ಓದಿ | Navaratri Colour Tips: ನವರಾತ್ರಿಯ ಮೊದಲ ದಿನ ಹಳದಿ ಎಥ್ನಿಕ್ ವೇರ್ಸ್‌ನಲ್ಲಿ ಕಂಗೊಳಿಸಲು 5 ಸ್ಟೈಲಿಂಗ್ ಟಿಪ್ಸ್
ಸಹ ನಿರ್ಮಾಪಕರಾಗಿರುವ ಮಂಜುನಾಥ್ ಅವರೆ ನಾಯಕರಾಗಿ ನಟಿಸಿದ್ದು, ನಾಯಕಿಯಾಗಿ ನಿಮಿಷ ಕೆ. ಚಂದ್ರ ಅಭಿನಯಿಸಿದ್ದಾರೆ. ಎಸ್. ನಾರಾಯಣ್, ಸಪ್ತಗಿರಿ (ತೆಲುಗು, ತಮಿಳು ಖ್ಯಾತ ನಟ), ಜಾಹ್ನವಿ, ಜೋಸೈಮನ್, ನಾಗೇಶ್ ಯಾದವ್, ಪದ್ಮಾ ವಾಸಂತಿ, ಸ್ವಾತಿ, ಹನುಮಂತೇ ಗೌಡ, ಡಿಂಗ್ರಿ ನಾಗರಾಜ್, ಕೆಂಪೇಗೌಡ, ಸಚಿನ್, ರಾಧ ರಾಮಚಂದ್ರ, ರೇಖಾದಾಸ್, ಸತೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.