ಬೆಂಗಳೂರು: ಕನ್ನಡ ನಾಡಿನ ಜಾನಪದ ಪರಂಪರೆಯ ಸಂರಕ್ಷಣೆ, ಪ್ರಸಾರಕ್ಕೆ ಸ್ಥಾಪನೆಯಾಗಿರುವ ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ ಲಭಿಸಿದೆ. ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕಾಗಿ ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ (UNESCO recognition) ದೊರೆತಿದೆ.
2024ರ ಜೂನ್ ತಿಂಗಳಿನಲ್ಲಿ ಯುನೆಸ್ಕೋ ಪ್ರಧಾನ ಕಚೇರಿಯಲ್ಲಿ ನಡೆದ ಹತ್ತನೇ ಅಧಿವೇಶನದ ಸಮಯದಲ್ಲಿ ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ ಘೋಷಿಸಲಾಗಿದೆ. 1979ರಲ್ಲಿ ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತು ಕಳೆದ 45 ವರ್ಷಗಳಿಂದಲೂ ಜಾನಪದ ಕ್ಷೇತ್ರದಲ್ಲಿ ಅಮೂಲ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ ಕರ್ನಾಟಕ ಜಾನಪದ ಪರಿಷತ್ತು ನಿರ್ಮಾಣ ಮಾಡಿರುವ ʼಜಾನಪದ ಲೋಕʼವು ಕನ್ನಡ ನಾಡಿನಲ್ಲಷ್ಟೇ ಅಲ್ಲ. ಭಾರತದಲ್ಲಿಯೇ ಅತ್ಯಂತ ಅಪರೂಪದ ವೈಶಿಷ್ಟ್ಯಗಳಿಂದ ಕೂಡಿದ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಪ್ರತಿಷ್ಠಿತ ಯುನೆಸ್ಕೋ ಮಾನ್ಯತೆ ಕರ್ನಾಟಕ ಜಾನಪದ ಪರಿಷತ್ತನ್ನು ವಿಶ್ವದ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ ಒಂದು ಎಂದು ಗುರುತಿಸಿರುತ್ತದೆ. ಯುನೆಸ್ಕೋದ “ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಅಂತರಿಕ ಸಮಿತಿಗೆ ಸಲಹೆಗಳನ್ನು ನೀಡಲು ಈಗ ಪರಿಷತ್ತು ಮಾನ್ಯತೆ ಪಡೆದಿದೆ. ಈ ಮಾನ್ಯತೆಯಿಂದ ಕರ್ನಾಟಕ ಜಾನಪದ ಪರಿಷತ್ತು ಕರ್ನಾಟಕದ ಶ್ರೀಮಂತ ಮತ್ತು ವೈವಿಧ್ಯಮಯ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪರಿಷತ್ತಿನ ಬದ್ಧತೆಯನ್ನು ಹೆಚ್ಚಿಸಿದೆ.
ಈ ಸುದ್ದಿಯನ್ನೂ ಓದಿ | UN Recognition: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಗೆ ವಿಶ್ವಸಂಸ್ಥೆಯ ಮಾನ್ಯತೆ!
ಈ ಬಗ್ಗೆ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿ, “ಯುನೆಸ್ಕೋದಿಂದ ನೀಡಿರುವ ಈ ಮಾನ್ಯತೆಯನ್ನು ನಾವು ತುಂಬು ಗೌರವದಿಂದ ಸ್ವೀಕರಿಸಲು ಸಂತೋಷ ಪಡುತ್ತೇವೆ. ಇದು ನಾಡೋಜ ಎಚ್. ಎಲ್. ನಾಗೇಗೌಡರ ಜನಪದ ಕಳಕಳಿಗೆ ಗೌರವ ತಂದುಕೊಟ್ಟಿರುವುದಲ್ಲದೇ, ಕರ್ನಾಟಕದ ಜಾನಪದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಸಂವರ್ಧನೆ ಮತ್ತು ಪ್ರಸಾರ, ಪ್ರಚಾರ, ದಾಖಲಾತಿಗಳ ಈ ನಮ್ಮ ಕಾರ್ಯದ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಈ ಮಾನ್ಯತೆ ನಮ್ಮನ್ನು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಜಾಗತಿಕ ಸಂವಾದಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಉತ್ತೇಜಿಸುತ್ತದೆ. ಇದರಿಂದ ಕರ್ನಾಟಕ ಜಾನಪದ ಪರಿಷತ್ತು ಅಂತರರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ತನ್ನ ಪಾತ್ರವನ್ನು ಹೆಚ್ಚಿಸಿಕೊಂಡಿದೆ” ಎಂದು ತಿಳಿಸಿದ್ದಾರೆ.