Monday, 25th November 2024

Dr N Someswara Column: ಮಿಯಾಸ್ಮ ಎಂಬ ಮೌಢ್ಯವು ಛಿದ್ರವಾದಾಗ !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಮನುಷ್ಯನಿಗೆ ಕಾಯಿಲೆಯು ಯಾವ ಕಾರಣದಿಂದ ಬರುತ್ತದೆ? ಇದು ಅನಾದಿ ಕಾಲದ ಪ್ರಶ್ನೆ. ನಮ್ಮ ಪೂರ್ವಜರಲ್ಲಿ
ಕೆಲವರು ದೈವ ಪ್ರಕೋಪದಿಂದ ಕಾಯಿಲೆಗಳು ಬರುತ್ತವೆ ಎಂದು ನಂಬಿದ್ದರೆ, ದೆವ್ವಗಳ ಕಾಟದಿಂದ ಕಾಯಿಲೆಗಳು ಬರುತ್ತವೆ ಎಂದು ಹಲವರು ಭಾವಿಸಿದ್ದರು. ಮೃತ ಹಿರಿಯರ ಆತ್ಮಗಳು ಅತೃಪ್ತವಾದಾಗಲೂ, ಕಾಯಿಲೆಗಳು ಕಂಡು ಬರುತ್ತವೆ ಎಂದು ತಿಳಿದವರೂ ಸಾಕಷ್ಟು ಇದ್ದರು.

ಮಿಯಾಸ್ಮ: ಮಧ್ಯಯುಗದ ಯುರೋಪ್. ಸೋಂಕು ರೋಗಗಳು, ಅದರಲ್ಲೂ ಪಿಡುಗನ್ನು ಉಂಟು ಮಾಡುವಂಥ ಸೋಂಕು ರೋಗಗಳು ಹುಟ್ಟಲು ಹಾಗೂ ಹರಡಲು ‘ಮಿಯಾಸ್ಮ’ ಕಾರಣ ಎಂಬ ಸಿದ್ಧಾಂತವನ್ನು ಯುರೋ
ಪಿಯನ್ ಆಳರಸರು, ವೈದ್ಯರು, ವಿಜ್ಞಾನಿಗಳು ಹಾಗೂ ಜನ ಸಾಮಾನ್ಯರು ನಂಬಿದ್ದರು. ಮಿಯಾಸ್ಮ ಎಂದರೆ ‘ಕೊಳೆ
ಯುವ ವಸ್ತುಗಳಿಂದ ಉತ್ಪಾದನೆಯಾಗುವ ಕೆಟ್ಟ ವಾಸನೆ ಮತ್ತು ವಿಷಾನಿಲಗಳು’ ಎಂದರ್ಥ. ಇವು ಗಾಳಿಯ
ಮೂಲಕ ಒಬ್ಬರಿಂದ ಒಬ್ಬರಿಗೆ ಹರಡಿ ನಾನಾ ಕಾಯಿಲೆಗಳನ್ನು ತರುತ್ತವೆ ಎನ್ನುವುದು ಮಿಯಾಸ್ಮದ ಒಟ್ಟು
ಸಾರಾಂಶ. ಇಂಥ ಪರಿಕಲ್ಪನೆಯನ್ನು ಮೊದಲ ಬಾರಿಗೆ ಮಂಡಿಸಿದವನು ಹಿಪ್ಪೋಕ್ರೇಟ್ಸ್ (ಕ್ರಿ.ಪೂ.460-
ಕ್ರಿ.ಪೂ.370). ಅವನ ನಂತರ ಬಂದ ಪ್ರಖ್ಯಾತ ರೋಮನ್ ವೈದ್ಯ ಗ್ಯಾಲನ್ (ಕ್ರಿ.ಶ.129-ಕ್ರಿ.ಶ.216) ಮಿಯಾಸ್ಮ
ಸಿದ್ಧಾಂತವನ್ನು ಮತ್ತಷ್ಟು ಬಲಗೊಳಿಸಿದ. ಕೊಳೆಯೇ ಎಲ್ಲ ಸಮಸ್ಯೆಗಳಿಗೆ ಮೂಲವೆಂದ.

ಪ್ಲೇಗ್ ಪಿಡುಗು ಮಧ್ಯಯುಗದ ಯುರೋಪನ್ನು ಉಗ್ರ ಸ್ವರೂಪದಲ್ಲಿ ಕಾಡಿತು. 1347ರಿಂದ 1351ರ ನಡುವೆ ಕಂಡು ಬಂದ ಪ್ಲೇಗ್, ಯುರೋಪಿನ ಶೇ.30ರಿಂದ ಶೇ.60ರಷ್ಟು ಜನಸಂಖ್ಯೆಯನ್ನು, ಅಂದರೆ ಸರಿಸುಮಾರು 75-200 ದಶಲಕ್ಷ ಜನರನ್ನು ಬಲಿತೆಗೆದುಕೊಂಡಿತು. ಈ ಪಿಡುಗಿಗೆ ಕಾರಣ ‘ಯೆರ್ಸೀನಿಯ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯ. ಇದು ಇಲಿ ಮುಂತಾದ ದಂಶಕಗಳಲ್ಲಿ ಕಾಯಿಲೆಯನ್ನು ಉಂಟುಮಾಡುತ್ತದೆ. ಚಿಗಟಗಳೆಂಬ ಮಧ್ಯವರ್ತಿ ಜೀವಿಯಿಂದ ಮನುಷ್ಯರಿಗೆ ಹರಡುತ್ತದೆ. ಈ ಸತ್ಯವನ್ನು ತಿಳಿಯದ ಮಧ್ಯಯುಗದ ವೈದ್ಯರು ಮತ್ತೆ ಮಿಯಾಸ್ಮ ಸಿದ್ಧಾಂತವನ್ನು ಮುನ್ನೆಲೆಗೆ ತಂದರು.

ಜನರೂ ಇದನ್ನು ನಂಬಿದರು. ಈ ನಂಬಿಕೆಯು ಹುಸಿಯೆನ್ನುವುದನ್ನು ತೋರಿಸಿಕೊಟ್ಟ ಪ್ರಾತಃಸ್ಮರಣೀಯರಲ್ಲಿ ಡೆನ್ಮಾರ್ಕಿನ ವೈದ್ಯ ಡಾ.ಪೀಟರ್ ಲಡ್ವಿಗ್ ಪ್ಯಾನಮ್ (1820-1885) ಪ್ರಮುಖ.

ದಡಾರ: ದಡಾರವು ಒಂದು ಸೋಂಕುರೋಗ. ಇದಕ್ಕೆ ಕಾರಣ ದಡಾರ ವೈರಸ್. ಇದು ಪ್ರಧಾನವಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಮೊದಲು ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ಮೂಗಿನಲ್ಲಿ ಸೋರುವಿಕೆ, ಕಣ್ಣುಗಳು ಕೆಂಪಗಾಗುವಿಕೆ, ಬಾಯಿಯ ಒಳಭಾಗದಲ್ಲಿ ಬಿಳಿಯ ಚುಕ್ಕೆಗಳು, ಮುಖ ಮತ್ತು ಕುತ್ತಿಗೆಯ ಮೇಲೆ ಗಂಧೆಗಳು ಕಾಣಿಸಿಕೊಂಡು ಕ್ರಮೇಣ ದೇಹದ ಉಳಿದ ಭಾಗಗಳಿಗೆ ಹರಡುತ್ತವೆ. ದಡಾರವನ್ನು ಗುಣಪಡಿಸುವ ಯಾವುದೇ ಚಿಕಿತ್ಸೆಯಿಲ್ಲ. ಸಾಮಾನ್ಯವಾಗಿ ಈ ರೋಗಲಕ್ಷಣಗಳು ತಮಗೆ ತಾವೇ ಕಡಿಮೆಯಾಗುವುದುಂಟು. ಆದರೆ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಮಕ್ಕಳಲ್ಲಿ ರೋಗಲಕ್ಷಣಗಳು ಉಲ್ಬಣವಾಗಿ ಕಿವಿಗಳಿಗೆ, ಶ್ವಾಸಕೋಶಗಳಿಗೆ ಹಾಗೂ ಮಿದುಳಿಗೆ ಹರಡಬಹುದು. ಸಾವು ನೋವಿಗೆ ಕಾರಣವಾಗಬಹುದು. ಒಬ್ಬರಿಗೆ ಒಂದು ಸಲ ದಡಾರ ಬಂದಿತೆಂದರೆ, ಮತ್ತೆ ಅವರಿಗೆ ಅದು ಬರುವುದಿಲ್ಲ. ಅವರಿಗೆ ಜೀವಮಾನ ರೋಗರಕ್ಷಣೆಯು ದೊರೆಯುತ್ತದೆ.

ಡೆನ್ಮಾರ್ಕ್: ಜರ್ಮನಿಯ ಮುಂದುವರಿದ ಪರ್ಯಾಯ ದ್ವೀಪವೇ ಡೆನ್ಮಾರ್ಕ್. ಪರ್ಯಾಯ ದ್ವೀಪವು ಡೆನ್ಮಾರ್ಕಿನ
2/3 ಭಾಗವನ್ನು ರೂಪಿಸಿದರೆ, ಉಳಿದ 1/3 ಭಾಗವನ್ನು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಸುಮಾರು 400 ಚಿಕ್ಕ ಪುಟ್ಟ ದ್ವೀಪಗಳು ರೂಪಿಸುತ್ತವೆ. ಇವನ್ನು ‘ಫ್ಯಾರೋಸ್ ದ್ವೀಪಗಳು’ ಎಂದು ಕರೆಯುವುದುಂಟು. ಯುರೋಪನ್ನು
ಕಾಡಿದ ಪ್ಲೇಗ್ ಮಹಾಪಿಡುಗಿಗೆ ಡೆನ್ಮಾರ್ಕ್ ಸಹ ತುತ್ತಾಗಿತ್ತು. ಡೆನ್ಮಾರ್ಕ್ ದೇಶಕ್ಕೆ ಪ್ಲೇಗ್ ಬಹುದೊಡ್ಡ ಆರ್ಥಿಕ
ಹೊಡೆತವನ್ನು ನೀಡಿತ್ತು. ಹಾಗಾಗಿ ಡೆನ್ಮಾರ್ಕಿನ ಆಳರಸರು ತಮ್ಮ ಪ್ರಜೆಗಳ ಆರೋಗ್ಯಕ್ಕೆ ಆದ್ಯತೆಯನ್ನು ನೀಡಿದರು.

ಜನಸಾಮಾನ್ಯರಿಗೆ ಆರೋಗ್ಯದ ಮೂಲಭೂತ ಅನುಕೂಲತೆಗಳನ್ನು ಮಾಡಿಕೊಟ್ಟರು. ಕಟ್ಟುನಿಟ್ಟಿನ ಕಾನೂನು ಗಳನ್ನು ಜಾರಿಗೊಳಿಸಿದರು. ಉದಾಹರಣೆಗೆ 1810ರಲ್ಲಿ ಪ್ರತಿಯೊಬ್ಬರೂ ಸಿಡುಬು ಲಸಿಕೆಯನ್ನು ತೆಗೆದುಕೊಳ್ಳ ಬೇಕಾಗಿತ್ತು, ಇಲ್ಲವೇ ಈ ಹಿಂದೆ ಸಿಡುಬು ಬಂದು ಹೋದುದಕ್ಕೆ ಪುರಾವೆಯನ್ನು ಲ್ಯಾದರ್ನ್ ಚರ್ಚಿಗೆ ನೀಡಬೇಕಿತ್ತು. ಡೆನ್ಮಾರ್ಕಿನ ಪ್ರಜೆಗಳು ಶಾಲೆಗೆ, ಕೆಲಸಕ್ಕೆ ಸೇರುವುದಕ್ಕೆ, ಸೈನ್ಯದಲ್ಲಿ ಭರ್ತಿಯಾಗಲಿಕ್ಕೆ, ಮತದಾನವನ್ನು ಮಾಡಲಿಕ್ಕೆ ಕೊನೆಗೆ ಮದುವೆಯಾಗುವುದಕ್ಕೂ ಚರ್ಚಿನ ಪರವಾನಗಿಯನ್ನು ತೋರಿಸಲೇಬೇಕಾಗಿತ್ತು.

ಡೆನ್ಮಾರ್ಕಿನ ಪ್ರಭುತ್ವವು ತನ್ನ ಎಲ್ಲ ಆರೋಗ್ಯ ಸವಲತ್ತುಗಳನ್ನು ಡೆನ್ಮಾರ್ಕಿನ ಪರ್ಯಾಯ ದ್ವೀಪಕ್ಕೆ ಸೀಮಿತ ಗೊಳಿಸಿತ್ತು. ಫ್ಯಾರೋಸ್ ದ್ವೀಪಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ಫ್ಯಾರೋಸ್ ದ್ವೀಪಗಳಲ್ಲಿ ಡೇನ್ ಮೂಲದ (ಡ್ಯಾನಿಶ್) ಜನರಿಗಿಂತ ನಾರ್ವೆ ಮೂಲದ ಜನರೇ ಪ್ರಧಾನವಾಗಿ ವಾಸಿಸುತ್ತಿದ್ದರು.

ಅವ್ಯಾಪ್ತ ಸಮುದಾಯ: 1846. ಫ್ಯಾರೋ ದ್ವೀಪಗಳಲ್ಲಿ ಒಮ್ಮೆಲೇ ದಡಾರವು ಕಾಣಿಸಿಕೊಂಡಿತು. ಈ ಹಿಂದೆ ದಡಾರವು 1781ರಲ್ಲಿ ಬಂದಿತ್ತು. ಅದಾಗಿ 65 ವರ್ಷಗಳಿಗೂ ಹೆಚ್ಚಿನ ಕಾಲದಿಂದ ಫ್ಯಾರೋ ದ್ವೀಪಗಳಲ್ಲಿ ದಡಾರವು ಕಾಣಿಸಿಕೊಂಡಿರಲಿಲ್ಲ. ಹೀಗೆ ಬಹುಕಾಲ ರೋಗರಹಿತವಾಗಿರುವ ಸಮುದಾಯವನ್ನು ‘ಅವ್ಯಾಪ್ತ ಸಮುದಾಯ’ ಅಥವಾ ‘ವರ್ಜಿನ್ ಕಮ್ಯುನಿಟಿ’ ಎಂದು ಕರೆಯುವ ಪದ್ಧತಿಯಿದೆ.

ಇಂಥ ಸ್ವಚ್ಛ, ರೋಗರಹಿತ ಹಾಗೂ ನೆಮ್ಮದಿಯ ಸಮುದಾಯದಲ್ಲಿ ಹಠಾತ್ ದಡಾರವು ಕಾಣಿಸಿಕೊಂಡಿತು.
ದಡಾರವು ಮೂಲತಃ ಮಕ್ಕಳ ಕಾಯಿಲೆಯಾದರೂ, ಇಲ್ಲಿ ಮಕ್ಕಳು, ವಯಸ್ಕರು, ಮುದುಕರೆನ್ನದೇ ಎಲ್ಲರಲ್ಲೂ ಕಾಣಿಸಿಕೊಂಡಿತು. ಏಕೆಂದರೆ ಇವರಾರಿಗೂ ಬಾಲ್ಯದಲ್ಲಿ ದಡಾರ ಸೋಂಕು ಆಗಿರಲಿಲ್ಲ. ಈ ದ್ವೀಪಗಳಲ್ಲಿ 7864 ಜನರು ವಾಸ ಮಾಡುತ್ತಿದ್ದರು. ಇವರಲ್ಲಿ 6100 ಜನಕ್ಕೆ ದಡಾರವು ಬಂದಿತು. ಇವರಲ್ಲಿ 170 ಜನರು ಸತ್ತರು. ಅಂದರೆ ಫ್ಯಾರೋಸ್ ದ್ವೀಪಗಳಲ್ಲಿದ್ದವರಲ್ಲಿ ಶೇ.2.8ರಷ್ಟು ಜನರು ದಡಾರ ಮಾರಿಗೆ ಬಲಿಯಾದರು. ಡೆನ್ಮಾರ್ಕ್ ಸರಕಾರವು ಎಚ್ಚೆತ್ತುಕೊಂಡಿತು; ಈ ದಡಾರ ಪಿಡುಗು ಏಕೆ ಇಷ್ಟು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದೆ ಹಾಗೂ ಅಪಾರ ಸಾವು-ನೋವು ಗಳಿಗೆ ಕಾರಣವಾಗಿದೆ ಎನ್ನುವುದನ್ನು ತಿಳಿಯಲು ಡಾ. ಪೀಟರ್ ಲಡ್ವಿಗ್ ಪ್ಯಾನಮ್ ಎಂಬ ವೈದ್ಯನನ್ನು ನೇಮಿಸಿತು.

ಪೀಟರ್ ಪ್ಯಾನಮ್: ಈತ ಜನಿಸಿದ್ದು ಡೆನ್ಮಾರ್ಕಿನ ಬಾರ್ನ್ ಹೋಮ್ ಎಂಬಲ್ಲಿ. ಈತನ ತಂದೆಯು ಬಾರ್ನ್‌ ಹೋಮ್ ನಲ್ಲಿ ಸೈನ್ಯದ ಶಸವೈದ್ಯನಾಗಿದ್ದ. ಪ್ಯಾನಮ್ 16 ವರ್ಷ ಗಳನ್ನು ತಲುಪುವ ಮೊದಲೇ ಅವನ ತಂದೆ ತೀರಿಕೊಂಡ. ಪ್ಯಾನಮ್ ಡೆನ್ಮಾರ್ಕಿನ ರಾಜಧಾನಿ ಕೋಪನ್ ಹೇಗನ್‌ಗೆ ಬಂದ. ಶಾಲಾ ಅಧ್ಯಾಪಕನಾದ. ಒಂದಷ್ಟು ಹಣವನ್ನು ಸಂಪಾದಿಸಿಕೊಂಡ. ನಂತರ ವೈದ್ಯಕೀಯ ಶಿಕ್ಷಣವನ್ನು ಪಡೆದ. 1845ರಲ್ಲಿ ಕೋಪನ್‌ಹೇಗನ್ ವಿಶ್ವವಿದ್ಯಾಲಯ ದಿಂದ ವೈದ್ಯಕೀಯ ಪದವಿಯನ್ನು ಪಡೆದ. ಅದರ ಮರು ವರ್ಷವೇ ಫ್ಯಾರೋಸ್ ದ್ವೀಪಗಳಲ್ಲಿ ದಡಾರ ಪಿಡುಗು ಉಗ್ರವಾಯಿತು.

ಹಾಗಾಗಿ ಅರಸೊತ್ತಿಗೆಯು ಪ್ಯಾನಮ್ ಹಾಗೂ ಮತ್ತೊಬ್ಬ ವೈದ್ಯನನ್ನು ಫ್ಯಾರೋಸ್ ದ್ವೀಪಗಳಿಗೆ ಕಳುಹಿಸಿತು. ಪ್ಯಾನಮ್ ಸುಮಾರು 5 ತಿಂಗಳಿಗೂ ಹೆಚ್ಚು ಕಾಲ ದ್ವೀಪಗಳಲ್ಲಿ ಓಡಾಡಿದ. 1000ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಯನ್ನು ನೀಡಿದ. ಅವನು ಅತ್ಯಂತ ಕ್ರಮಬದ್ಧವಾಗಿ ದಡಾರ ಪಿಡುಗಿನ ಅಧ್ಯಯನವನ್ನು ಮಾಡಿದ. ತನ್ನ ಫಲಿತಾಂಶವನ್ನು ‘-ರೋಸ್ ದ್ವೀಪಗಳಲ್ಲಿ ದಡಾರ ಪಿಡುಗು ಕಂಡಬಂದಾಗ ನಡೆಸಿದ ಅವಲೋಕನ-1846’ ಎಂಬ
ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ. ಅವನ ಈ ಸಂಶೋಧನೆಯು ‘ಮಿಯಾಸ್ಮ’ ಸಿದ್ಧಾಂತವನ್ನು ನುಚ್ಚುನೂರು
ಗೊಳಿಸಿತು!

ರೋಗ ನಿರೋಧಕತೆ: ಫ್ಯಾರೋಸ್ ದ್ವೀಪಗಳು 1387ರಿಂದ ಡೆನ್ಮಾರ್ಕ್ ದೇಶಕ್ಕೆ ಸೇರಿದ್ದರೂ, ಈ ದ್ವೀಪಗಳಲ್ಲಿ ಪ್ರಧಾನವಾಗಿ ನಾರ್ವೇಜಿಯನ್ ಪ್ರಜೆಗಳು ವಾಸಮಾಡುತ್ತಿದ್ದರು. ಡೆನ್ಮಾರ್ಕ್ ಅರಸೊತ್ತಿಗೆಯವರು ಇವರ ಬಗ್ಗೆ ಉದಾಸೀನತೆಯನ್ನು ತಳೆದಿದ್ದರು. ಹಾಗಾಗಿ ಫ್ಯಾರೋಸ್ ದ್ವೀಪವಾಸಿಗಳ ಆಹಾರ ಪದ್ಧತಿ, ಜೀವನಶೈಲಿ, ಉಡುಪು, ವಾಸಸ್ಥಳ, ಸ್ವಚ್ಛತೆ ಮತ್ತು ನೈರ್ಮಲ್ಯ, ವೈದ್ಯರು, ದಾದಿಯರು ಮತ್ತು ಆಸ್ಪತ್ರೆಗಳ ಅನುಪಸ್ಥಿತಿ ಇತ್ಯಾದಿಗಳೆಲ್ಲ ಡೆನ್ಮಾರ್ಕ್ ಪರ್ಯಾಯ ದ್ವೀಪಗಳಿಗೆ ಹೋಲಿಸಿದರೆ ತೀರಾ ಅಧ್ವಾನ ಸ್ಥಿತಿಯಲ್ಲಿತ್ತು.

ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಜತೆಗೆ ಫ್ಯಾರೋಸ್ ದ್ವೀಪಗಳಲ್ಲಿ ವಾಸಿಸುವವರಿಗೆ ಸಾಕಷ್ಟು ಮಾನಸಿಕ
ಕಾಯಿಲೆಗಳಿದ್ದವು. ಅವರ ಸ್ಥಿತಿಯು ಅತ್ಯಂತ ಶೋಚನೀಯವಾಗಿತ್ತು. ಅವರ ಆಹಾರವೆಂದರೆ ಗಾಳಿಗೆ ಒಣಗಲಿಟ್ಟ
ಮಾಂಸ! ಅದು ಪೂರ್ಣ ಒಣಗಿರುತ್ತಿರಲಿಲ್ಲ. ಅರೆಬರೆ ಒಣಗಿದ ಮಾಂಸವನ್ನು ತಿಂದಕೂಡಲೇ ವಾಂತಿ-ಬೇಧಿಯಾ
ಗುತ್ತಿತ್ತು. ಎಲ್ಲ ಋತುಗಳಲ್ಲೂ ಒಂದೇ ರೀತಿಯ ಉಡುಪು.

ಚಳಿಗಾಲದ ಹೊಡೆತಕ್ಕೆ ಏನೇನೂ ಸಾಲದಂಥ ಕನಿಷ್ಠ ಉಡುಪು. ಮನೆಮಂದಿಯೆಲ್ಲ ಒಂದು ಪಾತ್ರೆಯಲ್ಲಿ ಮೂತ್ರ ವನ್ನು ಮಾಡುತ್ತಿದ್ದರು. ಅದರಲ್ಲಿ ತಮ್ಮ ಬಟ್ಟೆಗಳನ್ನು ನೆನೆಸುತ್ತಿದ್ದರು. ಸಾಧ್ಯವಾದಷ್ಟು ಒಣಗಿಸಿ ಧರಿಸುತ್ತಿದ್ದರು. ಗಬ್ಬುನಾತ ಬೀರುವ ಆ ಉಡುಪನ್ನು ಅವರು ಹೇಗೆ ಧರಿಸುತ್ತಿದ್ದರೋ ಏನೋ!? ಮನೆಯ ಒಳಗಡೆ ಕಸಕಡ್ಡಿ, ತರಗೆಲೆ ಗಳನ್ನು ಉರಿಸುತ್ತಿದ್ದರು. ಆದರೆ ಹೊಗೆಯು ಹೊರಗೆ ಹೋಗಲು ಯಾವುದೇ ಚಿಮಣಿಗಳಿರುತ್ತಿರಲಿಲ್ಲ.

ಎಲ್ಲಕ್ಕಿಂತಲೂ ಮಿಗಿಲಾಗಿ ಎಲ್ಲರ ಮನೆಗಳಲ್ಲಿ ಹೇನುಗಳು ತುಂಬಿ ತುಳುಕುತ್ತಿದ್ದವು. ಫ್ಯಾರೋಸ್ ದ್ವೀಪವಾಸಿಗಳಲ್ಲಿ
ರೋಗ ನಿರೋಧಕ ಶಕ್ತಿಯು ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಸ್ವಚ್ಛತೆಯ ಪರಿಕಲ್ಪನೆಯೇ ಇಲ್ಲದ ಜನರಲ್ಲಿ ದಡಾರ
ಕಾಳ್ಗಿಚ್ಚಿನಂತೆ ಹರಡಿತ್ತು. ಇಂಥ ಪರಿಸರದಲ್ಲಿ ಪ್ಯಾನಮ್ ತನ್ನ ಅಧ್ಯಯನವನ್ನು ಆರಂಭಿಸಿದ. ಅವನ ಅಧ್ಯಯ ನದ ಸಾರಾಂಶವನ್ನು ಹೀಗೆ ಸಂಗ್ರಹಿಸಬಹುದು: ಉಗ್ರ ಸೋಂಕು: ದಡಾರವು ತೀವ್ರ ಸ್ವರೂಪದ ಸೋಂಕು ರೋಗ. ಇದು ಸೋಂಕುಗ್ರಸ್ತನೊಡನೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರಿಗೂ ಹರಡುತ್ತದೆ.

ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು: ದಡಾರವು ಸೋಂಕುಗ್ರಸ್ತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬಂದವರಿಗೆಲ್ಲಾ ಬರುತ್ತದೆ. ಉಳಿದವರಿಗೆ ಬರುತ್ತಿರಲಿಲ್ಲ. ಅಂದರೆ ‘ಮಿಯಾಸ್ಮ ಸಿದ್ಧಾಂತ’ ಸುಳ್ಳೆಂದಾಯಿತು.

ಕಾವಿನವಧಿ: ಸೋಂಕುಗ್ರಸ್ತ ಮನುಷ್ಯನ ಸಂಪರ್ಕಕ್ಕೆ ಬಂದು 12-14 ದಿನಗಳ ಅವಧಿಯಲ್ಲಿ ಸೋಂಕುಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದವು. ಇದನ್ನು ಪ್ಯಾನಮ್ ಅತ್ಯಂತ ನಿಖರವಾಗಿ ದಾಖಲಿಸಿದ. ಅಂಥವರನ್ನು ಜನಸಾಮಾನ್ಯರಿಂದ
ದೂರವಿಟ್ಟ.

ಜೀವಮಾನ ರಕ್ಷಣೆ: 1781ರಲ್ಲಿ ಯಾರಿಗೆ ದಡಾರ ಬಂದಿತ್ತೋ, ಅಂಥವರಲ್ಲಿ ಒಬ್ಬರಿಗೂ ದಡಾರ ಅಂಟಿಕೊಂ
ಡಿರಲಿಲ್ಲ. ಹಾಗಾಗಿ 1764 ಜನರಿಗೆ ದಡಾರ ಅಂಟಿರಲಿಲ್ಲ. ಇದನ್ನು ಗಮನಿಸಿದ ಪ್ಯಾನಮ್, ದಡಾರ ಒಬ್ಬರಿಗೆ ಒಂದು ಸಲ ಬಂದಿತೆಂದರೆ, ಮತ್ತೆ ಅವರಿಗೆ ಅದು ಬರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದ. ಬಹುಶಃ ಅವರಿಗೆ ಜೀವಮಾನ ಪೂರ್ಣ ರಕ್ಷಣೆಯು ದೊರೆಯುತ್ತದೆ ಎಂದು ಭಾವಿಸಿದ.

ಪ್ರತ್ಯೇಕತೆ: 1781ರಲ್ಲಿ ಕೆಲವರಿಗೆ ದಡಾರ ಬಂದಾಗ, ಅವರನ್ನು ಜನವಸತಿಯಿಲ್ಲದ ದೂರ ಪ್ರದೇಶಗಳಲ್ಲಿ ಪ್ರತ್ಯೇ
ಕವಾಗಿರಿಸಿದ್ದರು. ಅವರು ಗುಣಮುಖರಾದರು ಹಾಗೂ ಸೋಂಕು ಹರಡುವುದು ಕಡಿಮೆಯಾಗಿತ್ತು. ಅದನ್ನು
ಪ್ಯಾನಮ್ ಆಚರಣೆಗೆ ತಂದ. ಐಸೋಲೇಶನ್ ಮತ್ತು ಕ್ವಾರಂಟೈನ್ ಎಂಬ ಹೊಸ ಪರಿಕಲ್ಪನೆಯನ್ನು ರೂಪಿಸಿದ.
ಪೀಟರ್ ಪ್ಯಾನಮ್ ನಡೆಸಿದ ಅಧ್ಯಯನವು ಮಿಯಾಸ್ಮ ಸಿದ್ಧಾಂತವನ್ನು ಬುಡಸಮೇತ ಕಿತ್ತು ಹಾಕಿತು. ಜತೆಗೆ, ರೋಗಗಳಿಗೆ ಯಾವುದೋ ಒಂದು ರೋಗಕಾರಕ ಇರಲೇಬೇಕೆಂಬ ಗುಮಾನಿಯನ್ನು ಹುಟ್ಟುಹಾಕಿತು.

ಮುಂದೆ ಲೂಯಿ ಪ್ಯಾಶ್ಚರ್ ಹಾಗೂ ರಾಬರ್ಟ್ ಕಾಚ್ ಮುಂತಾದವರು ‘ಸೂಕ್ಷ್ಮಜೀವಿ ಸಿದ್ಧಾಂತ’ವನ್ನು ಹುಟ್ಟು ಹಾಕಿದರು. ಇದರ ಹಿನ್ನೆಲೆಯಲ್ಲಿ ಪ್ರತಿಯೊಂದು ಸೋಂಕುರೋಗಕ್ಕೂ ಒಂದು ರೋಗಕಾರಕವಿರುವುದನ್ನು ಪತ್ತೆ ಹಚ್ಚಿದರು. ಇದರ ಜತೆಗೆ, ಸೋಂಕುಗ್ರಸ್ತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸುವುದರ ಮೂಲಕ ಪಿಡುಗನ್ನು ಹತೋಟಿಗೆ ತರಬಹುದು ಎಂಬ ಮಹತ್ತರವಾದ ವಿಚಾರವನ್ನು ಮಂಡಿಸಿದರು, ‘ಪಿಡುಗು ವಿಜ್ಞಾನ’ ಅಥವಾ ‘ಎಪಿಡೆಮಿಯಾಲಜಿ’ ಎಂಬ ವೈದ್ಯಕೀಯ ವಿಜ್ಞಾನ ಶಾಖೆಯನ್ನು ಆರಂಭಿಸಿದರು.

ರೋಗ ಗಳು, ರೋಗ ಜನಕಗಳು, ರೋಗ ಹರಡುವ ವಿಧಾನ, ರೋಗಲಕ್ಷಣಗಳು ಕಾಣಿಸಿಕೊಳ್ಳುವ ಕಾವಿನವಧಿ, ಪಿಡುಗು ವ್ಯಾಪಿಸುವ ಪರಿ, ರೋಗಿಯನ್ನು ಪ್ರತ್ಯೇಕಿಸುವುದರ ಮಹತ್ವ, ರೋಗ ಚಿಕಿತ್ಸೆ ಮತ್ತು ಲಸಿಕೆ ಇತ್ಯಾದಿಗಳ ಮೂಲಕ ಮುನ್ರಕ್ಷಣೆ ಇತ್ಯಾದಿಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿದರು. ಕೊರೋನ ಹಿನ್ನೆಲೆಯಲ್ಲಿ ಪಿಡುಗು ವಿಜ್ಞಾನದ ಮಹತ್ವ ಏನೆಂದು ನಮಗೆ ಅರಿವಾಗಿದೆ. ಪೀಟರ್ ಲಡ್ವಿಗ್ ಪ್ಯಾನಮ್! ನಿಮಗೆ ಮನುಕುಲವು ಆಭಾರಿ ಯಾಗಿದೆ.

ಇದನ್ನೂ ಓದಿ: Dr N Someshwara Column: ಸ್ಪೂರ್ತಿ ಸೆಲೆಯೋ, ಕ್ರೂರ ರಕ್ಕಸಿಯೋ ?