Wednesday, 30th October 2024

Ramanand Sharma Column: ತರವಲ್ಲ ವಲಸಿಗರ ಧೋರಣೆ

ಒಡಲಾಳ

ರಮಾನಂದ ಶರ್ಮಾ

ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತದ ಮಹಿಳೆಯೊಬ್ಬಳು ಬೆಂಗಳೂರು ಮತ್ತು ಕನ್ನಡಿಗರ ಬಗೆಗೆ ಹರಿಯಬಿಟ್ಟ ಅವಹೇಳನಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಆಕೆ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಆಕೆ ಕೆಲಸ ಮಾಡುತ್ತಿದ್ದ ಕಂಪನಿಯು ಕನ್ನಡಪರ ಹೋರಾಟ ಗಾರರ ಮನವಿಗೆ ಸ್ಪಂದಿಸಿ, ಮುಂದಾಗಬಹುದಾದ ಅನಪೇಕ್ಷಿತ ಘಟನೆಗಳನ್ನು ಗ್ರಹಿಸಿ ಆಕೆಯನ್ನು ಸೇವೆಯಿಂದ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ.

ಆಕೆ ತನ್ನ ಘನಂದಾರಿ ಕೆಲಸಕ್ಕೆ ಕ್ಷಮೆ ಯಾಚಿಸಿದರೂ ಆಕೆಯ ವಿರುದ್ಧದ ಆಕ್ರೋಶ ತಣ್ಣಗಾಗುತ್ತಿಲ್ಲ. ಪ್ರಾದೇಶಿಕತೆ, ಧರ್ಮ, ಜಾತಿಯಂತೆ ಭಾಷೆಯೂ ಒಂದು ಭಾವನಾತ್ಮಕ ಅಂಶವಾಗಿದ್ದು ಈ ವಿಷಯದಲ್ಲಾಗುವ ಎಂಥದೇ
ಅವಮಾನವನ್ನು ಜನರು ಸಹಿಸುವುದಿಲ್ಲ. ಇಂಥ ಪ್ರಾದೇಶಿಕ ಮತ್ತು ಭಾಷಾ ಸಂಘರ್ಷ ಬೆಂಗಳೂರಿಗೆ ಹೊಸದಲ್ಲ. ವಾರಗಳ ಹಿಂದೆ ಆನೇಕಲ್‌ನಲ್ಲಿ ಸ್ಥಳೀಯ ಕೆಲಸಗಾರರನ್ನು ವಲಸಿಗ ಕೆಲಸಗಾರರು ಥಳಿಸಿದ್ದು ವರದಿಯಾಗಿತ್ತು. ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆ ಪೈಕಿ ಹೆಚ್ಚಿನವು ಮಾಧ್ಯಮಗಳಲ್ಲಿ ವರದಿಯಾಗುವುದಿಲ್ಲ.

ಈ ಬಾರಿ ಮಾತ್ರ ಇದು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಘಟನೆಯ ಪರ ಮತ್ತು ವಿರುದ್ಧವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ/ರೋಷ ವ್ಯಕ್ತವಾಗುತ್ತಿವೆ. ವಿಡಿಯೋದಲ್ಲಿನ ಆ ಮಹಿಳೆಯ ಒಂದೊಂದು ಹಾವಭಾವ, ಕೊಂಕುಮಾತು ಕನ್ನಡಿಗರನ್ನು, ಮುಖ್ಯವಾಗಿ ಬೆಂಗಳೂರಿಗರನ್ನು ಕೆರಳಿಸಿದೆ. ಇಂಥವುಗಳಿಗೆ ತೀರಾ ಇತ್ತೀಚಿನವರೆಗೆ ಸಮಾಜದ ಕೆಲವೇ ವರ್ಗ ಪ್ರತಿಕ್ರಿಯಿಸುತ್ತಿತ್ತು; ಆದರೆ ಈ ಬಾರಿ ಸುಶಿಕ್ಷಿತರು, ಸಮಾಜದ ಮೇಲ್ವರ್ಗ ದವರು ಎಂಬ ಹಣೆಪಟ್ಟಿ ಕಟ್ಟಿಕೊಂಡವರು, ಪ್ರಗತಿಪರರು, ಬುದ್ಧಿಜೀವಿಗಳು ಕೂಡ ಸಿಡಿದೆದ್ದಿದ್ದಾರೆ. ಇದು ಅತಿರೇಕಕ್ಕೆ ಮುಟ್ಟಿದೆ ಎನ್ನುತ್ತಿದ್ದಾರೆ.

ಕನ್ನಡಿಗರ ತಾಳ್ಮೆ ಮತ್ತು ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಇದು ಕನ್ನಡಿಗರ ಸ್ವಾಭಿ ಮಾನ- ಘನತೆ-ಗೌರವಗಳನ್ನು ಚುಚ್ಚಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ರೋಮ್‌ನಲ್ಲಿ ಇರುವಾಗ ರೋಮನ್ನನಂತೆ ಬದುಕು’ ಎಂಬುದು ಎಲ್ಲರೂ ಒಪ್ಪಿ ಬದುಕಿನಲ್ಲಿ ಅಳವಡಿಸಿಕೊಂಡಿರುವ ಸೂತ್ರ. ಇದು ಪ್ರವಾಸಿ ಗರಿಗೆ ಅಷ್ಟಾಗಿ ಅನ್ವಯಿಸುವುದಿಲ್ಲ; ಈ ಸೂತ್ರವಿರುವುದು ಬದುಕನ್ನರಸಿ ತನ್ನೂರನ್ನು ಬಿಟ್ಟು ಇನ್ನೊಂದು
ಊರಿಗೆ ಹೋಗುವವರಿಗೆ. ಇಂಥ ಅನಿವಾರ್ಯತೆಯಲ್ಲಿ ಬದುಕು ಸಿಹಿಯಾಗಬೇಕಿದ್ದರೆ, ವ್ಯಕ್ತಿಯೊಬ್ಬನು ತಾನು ಬದುಕನ್ನರಸಿಕೊಂಡು ಬಂದ ನಾಡನ್ನು ಅಲ್ಲಿನ ನುಡಿ-ಸಂಸ್ಕೃತಿಯನ್ನು ಗೌರವಿಸಬೇಕಾದ್ದು, ಅಲ್ಲಿನ ಜೀವನ ವೈಖರಿಗೆ ಸ್ಪಂದಿಸಬೇಕಾದ್ದು ತೀರಾ ಅವಶ್ಯ.

ವಲಸಿಗರಾಗಿ ಬಂದಿದ್ದರೂ, ಸ್ಥಳೀಯರೇ ತಮ್ಮ ಆಸೆ-ಆಕಾಂಕ್ಷೆ, ಸಂಸ್ಕೃತಿ-ಭಾಷೆ-ಪರಂಪರೆಗೆ ಸ್ಪಂದಿಸಬೇಕೆನ್ನು ವುದು ಮೂರ್ಖತನದ ಪರಮಾವಧಿ. ಹೊಟ್ಟೆಪಾಡಿಗಾಗಿ ಉತ್ತರದ ರಾಜ್ಯದಿಂದ ಬೆಂಗಳೂರಿಗೆ ಬಂದ ಆ ಮಹಿಳೆ, ಬದುಕಿನ ಈ ಮೂಲಮಂತ್ರವನ್ನು ಬೆಂಗಳೂರಿಗೆ ಬಂದ ದಿನದಿಂದ ಆದ್ಯತೆಯ ಮೇರೆಗೆ ಅಳವಡಿಸಿಕೊಂಡಿದ್ದಿದ್ದರೆ ಹೀಗೆ ಖಂಡನೆಗೆ ಆಹಾರವಾಗುತ್ತಿರಲಿಲ್ಲ. ಇಂಗ್ಲೆಂಡ್ ಗೆ ವಲಸೆ ಹೋಗುವವರು ಅಲ್ಲಿಗೆ ಬಂದಿಳಿದ ೬ ತಿಂಗಳಲ್ಲಿ ಇಂಗ್ಲಿಷ್ ಕಲಿಯಬೇಕೆಂಬ ನಿಬಂಧನೆಯಿದೆ; ಬೆಂಗಳೂರಿನಲ್ಲಿ ಅಂಥ ಷರತ್ತೇನೂ ಇಲ್ಲ. ಹೀಗಾಗಿ ಕರ್ನಾಟಕಕ್ಕೆ ಬಂದು ದಶಕಗಳಾದರೂ ‘ಕನ್ನಡ್ ಗೊತ್ತಿಲ್ಲ’ ಎನ್ನುವವರ ಸಂಖ್ಯೆ ಗಣನೀಯವಾಗಿದೆ. ವಲಸಿಗರು ಇಲ್ಲಿ ಕನ್ನಡ ವನ್ನು ಸ್ವ ಇಚ್ಛೆಯಿಂದ ಮತ್ತು ನಿತ್ಯಜೀವನದ ಅನುಕೂಲಕ್ಕಾಗಿ ಕಲಿಯಬೇಕಷ್ಟೇ.

ಸ್ಥಳೀಯ ಬದುಕಿಗೆ ಹೊಂದಿಕೊಳ್ಳುವುದು ವಲಸಿಗರಿಗೆ ಶುರುವಿನಲ್ಲಿ ಸ್ವಲ್ಪ ಕಷ್ಟವಾಗಬಹುದು; ಕಾಲಕ್ರಮೇಣ ಮತ್ತು ಅನಿವಾರ್ಯತೆಯಿಂದಾಗಿ ಎಲ್ಲವೂ ಸಾಧ್ಯವಾಗುತ್ತದೆ. ಆದರೆ, ಸ್ಥಳೀಯರ ಬದುಕನ್ನು ಹೀಯಾಳಿಸುವುದು, ಟೀಕಿಸುವುದು, ಲೇವಡಿ ಮಾಡುವುದು, ತಾವೇ ಶ್ರೇಷ್ಠ ಎಂಬ ಆಟಿಟ್ಯೂಡ್ ತೋರಿಸುವುದು ಸದ್ಯಕ್ಕಲ್ಲದಿದ್ದರೂ ಕಾಲಕ್ರಮೇಣ ನಕಾರಾತ್ಮಕ ಫಲಿತಾಂಶವನ್ನೇ ನೀಡುತ್ತವೆ.

ವಲಸಿಗರು ಮತ್ತು ಸ್ಥಳೀಯರ ಸಂಘರ್ಷಕ್ಕೆ ಜಾಗತಿಕ ಹೆಜ್ಜೆಗುರುತುಗಳಿವೆ. ಯಾವ ದೇಶವೂ ಪ್ರದೇಶವೂ ವಲಸಿಗ ರನ್ನು ಆತ್ಮೀಯವಾಗಿ ಸ್ವಾಗತಿಸುವುದಿಲ್ಲ. ಇವರನ್ನು ಸ್ಥಳೀಯರು ‘ತಮ್ಮ ಅವಕಾಶವನ್ನು ಕಸಿದು ಕೊಳ್ಳುವವರು’ ಎಂದೇ ಭಾವಿಸುತ್ತಾರೆ, ಅದೇ ಧೋರಣೆಯಲ್ಲೇ ನಡೆದುಕೊಳ್ಳುತ್ತಾರೆ. ಅಂತೆಯೇ ಅವರ ನಡುವೆ ಪ್ರತ್ಯಕ್ಷ-ಪರೋಕ್ಷ ಸಂಘರ್ಷ ಇದ್ದೇ ಇರುತ್ತದೆ. ಆದರೆ, ಕರ್ನಾಟಕ ಮಾತ್ರ ಈ ಪ್ರವೃತ್ತಿಗೆ ಅಪವಾದ. ಕರ್ನಾಟಕವು ಲಾಗಾಯ್ತಿ ನಿಂದಲೂ ವಲಸಿಗರಿಗೆ ಕೆಂಪುಹಾಸಿನ ಸ್ವಾಗತ ನೀಡಿದೆ, ಅವರ ಸಕಲ ಅವಶ್ಯಕತೆಗಳನ್ನೂ ಪೂರೈಸುತ್ತಿದೆ. ಯಾವ ರಾಜ್ಯದಲ್ಲೂ ದೊರಕದಷ್ಟು ಸವಲತ್ತು-ಸೌಲಭ್ಯಗಳು ಅವರಿಗೆ ಕರ್ನಾಟಕದಲ್ಲಿ ದೊರೆಯುತ್ತಿವೆ.

ಭಾಷಾ ವಿಷಯದಲ್ಲಂತೂ ಕನ್ನಡಿಗರ ಔದಾರ್ಯ ವಲಸಿಗರಿಗೆ ಹೇಳಿ ಮಾಡಿಸಿದಂತಿದೆ. ರೈಲು ನಿಲ್ದಾಣ, ಏರ್‌ ಪೋರ್ಟ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಕಾಣಬರುವ ಶ್ರೀಸಾಮಾನ್ಯರು ಮಾತ್ರವಲ್ಲದೆ, ಬಡಾವಣೆಗಳಲ್ಲಿನ ಮನೆ ಮಾಲೀಕರು ಕೂಡ ವಲಸಿಗರ ಭಾಷೆಯಲ್ಲೇ ವ್ಯವಹರಿಸಿ ಅವರಿಗೆ ನೆರವಾಗುತ್ತಾರೆ. ವಲಸಿಗರು ಸ್ವಂತ ಫ್ಲ್ಯಾಟ್ ಮಾಡಿ ಬಾಡಿಗೆ ಮನೆಯನ್ನು ಬಿಡುವ ಹೊತ್ತಿಗೆ, ಮನೆ ಮಾಲೀಕರು ವಲಸಿಗರ ಷೆಯಲ್ಲಿ ಪಾರಂಗತರಾಗಿರುತ್ತಾರೆ!

ವಲಸಿಗರ ಸುಖೀಜೀವನಕ್ಕೆ ಹಲವು ಮಾರ್ಗಗಳಿವೆ. ಶಾಲಾ ಕಾಲೇಜುಗಳಲ್ಲಿ ‘ಕನ್ನಡ ಕಡ್ಡಾಯ’ವಿಲ್ಲ, ಕಾನೂನನ್ನು ತಿರುಚುವ ಅವಕಾಶವಿದೆ. ಮಾಲ್ ಮತ್ತು ಮಲ್ಟಿಪ್ಲೆಕ್ಸ್‌ಗಳು ಇರುವುದೇ ವಲಸಿಗರಿಗೆ ಎನ್ನುವುದರಲ್ಲಿ ಅತಿಶಯೋಕ್ತಿ ಯಿಲ್ಲ. ಒಂದು ಕಾಲಕ್ಕೆ ಕರಾವಳಿ ಮತ್ತು ಮಲೆನಾಡಿನವರ ಏಕಸ್ವಾಮ್ಯವಾಗಿದ್ದ ಹೋಟೆಲ್ ವ್ಯವಹಾರವು ಕ್ರಮೇಣ ಕನ್ನಡಿಗರ ಕೈತಪ್ಪುತ್ತಿದೆ. ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಕನ್ನಡವನ್ನು ಮತ್ತು ಕನ್ನಡಿಗ ಸಿಬ್ಬಂದಿಯನ್ನು ದುರ್ಬೀನ್ ಹಚ್ಚಿ ನೋಡುವಂತಾಗಿದೆ. ಕನ್ನಡ ಭಾಷಿಕರು ಬ್ಯಾಂಕುಗಳಲ್ಲಿ ಮಾಯವಾಗಿದ್ದು ಹಳೆಯ ಸುದ್ದಿ.

‘ಇಂಥವನ್ನು ಆರಂಭದಲ್ಲೇ ಸೂಕ್ಷ್ಮವಾಗಿ ಗಮನಿಸಿ ಕ್ರಮ ಕೈಗೊಂಡಿದ್ದರೆ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಇಂಥ ದುಸ್ಥಿತಿ ಬರುತ್ತಿರಲಿಲ್ಲ’ ಎನ್ನುವ ಪ್ರಜ್ಞಾವಂತ ಹಿರಿಯ ನಾಗರಿಕರ ಮಾತಿನಲ್ಲಿ ಅರ್ಥವಿದೆ. ಕನ್ನಡಿಗರ ಈ ನಿರ್ಲಿಪ್ತತೆಯನ್ನು ವಲಸಿಗರು ‘ಬಲಹೀನತೆ’ ಎಂದು ಪರಿಗಣಿಸಿ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನಬಹುದು.

ಮೇಲೆ ಉಲ್ಲೇಖಿಸಲಾಗಿರುವ ವಲಸಿಗ ಮಹಿಳೆಯ ಉದ್ಧಟತನವು ಖಂಡನೀಯ ಎಂಬುದರಲ್ಲಿ ಸಂದೇಹವಿಲ್ಲ. ಉಂಡಮನೆಗೆ ದ್ರೋಹ ಬಗೆವ ಈ ಪ್ರವೃತ್ತಿಯು ಅನಾಗರಿಕ ವರ್ತನೆಯೇ. ಆದರೆ, ವಲಸಿಗರ ಇಂಥ ವರ್ತನೆ ಅಥವಾ ಧಾರ್ಷ್ಟ್ಯಕ್ಕೆ ಕನ್ನಡಿಗರೂ ಕೆಲ ಮಟ್ಟಿಗೆ ಕಾರಣ ಎಂಬುದನ್ನು ಮರೆಯಲಾಗದು. ದಶಕಗಳ ಹಿಂದೆ ನಾನು ಉದ್ಯೋಗದ ನಿಮಿತ್ತ ಉತ್ತರದ ರಾಜ್ಯಕ್ಕೆ ಹೋದಾಗ ಮೊದಲ ದಿನವೇ ಅಂಗಡಿಯವರು ಮತ್ತು ಅಕ್ಕಪಕ್ಕದವರು ‘ಹಿಂದಿ ಮೇ ಬೋಲೋ, ಇಧರ್ ಮದ್ರಾಸಿ ನಹಿ ಚಲ್ತಾ’ ಎಂದಿದ್ದರು. ಈ ಧೋರಣೆಯ ಒಂದಂಶವಾದರೂ ನಮ್ಮಲ್ಲಿದ್ದಿದ್ದರೆ, ಆ ವಲಸಿಗ ಮಹಿಳೆ ತೋರಿದ ಉದ್ಧಟತನದಂಥ ಘಟನೆಗಳು ನಡೆಯುತ್ತಿರಲಿಲ್ಲ.

ವಲಸಿಗರು ನಮ್ಮ ಪ್ರಯತ್ನವನ್ನು ಹತ್ತಿಕ್ಕಿ ತಮ್ಮ ಭಾಷೆ-ನಡವಳಿಕೆಯನ್ನು ನಮ್ಮ ಮೇಲೆ ಹೇರಲು ಯತ್ನಿಸು ವಾಗಲೇ ಅದನ್ನು ಚಿವುಟಿದ್ದರೆ, ಅವರು ನಮ್ಮಲ್ಲಿ ಒಂದಾಗುತ್ತಿದ್ದರು. ಆದರೆ ಅದು ನಮಗೆ ಅವಶ್ಯ ಎನಿಸಲಿಲ್ಲ. ಹೀಗಾಗಿ ಈಗದು ಬೆಳೆದು ಹೆಮ್ಮರವಾಗಿದೆ. ಪೂರ್ವ ಬೆಂಗಳೂರು ಮತ್ತು ವೈಟ್‌ಫೀಲ್ಡ್ ಪ್ರದೇಶಗಳು ವಲಸಿಗರದ್ದು ಎಂಬುದು ಹಳೆಯಸುದ್ದಿ; ಈಗ ಕೋರಮಂಗಲ ಕೂಡ ಅದೇ ಹಾದಿಯಲ್ಲಿರುವಂತಿದೆ.

ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಬೇಕೆಂಬ ಯೋಜನೆಯಲ್ಲಿ ವಲಸಿಗರ ಕೈವಾಡವಿದೆ ಎನ್ನುವ ಕನ್ನಡಪರ ಹೋರಾಟಗಾರರ ಸಂದೇಹವನ್ನು ಪೂರ್ಣ ತಳ್ಳಿಹಾಕಲಾಗದು. ‘ವಲಸಿಗರು ಹೊರಟು ಹೋದರೆ ಬೆಂಗಳೂರು ಖಾಲಿ’ ಎಂಬ ವಾದದಲ್ಲಿ ಅರ್ಥವಿಲ್ಲ; ಬೆಂಗಳೂರು ಅವರು ಬರುವ ಮೊದಲೂ ಇತ್ತು, ಈಗಲೂ ಇದೆ, ಅವರು ನಿರ್ಗಮಿಸಿದರೂ ಇರುತ್ತದೆ. ಬಹುಶಃ ಇನ್ನೂ ನೆಮ್ಮದಿಯಿಂದ ಇರಬಹುದೇನೋ? ಹೈರಾಣಾಗಿರುವ ಮಧ್ಯಮವರ್ಗೀಯರ ಬದುಕು ಹಸನಾಗಬಹುದೇನೋ?

(ಲೇಖಕರು ಆರ್ಥಿಕ ಮತು ರಾಜಕೀಯ ವಿಶ್ಲೇಷಕರು)

ಇದನ್ನೂ ಓದಿ: Hindu Temple Vandalized: ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ದೇಗುಲ ವಿರೂಪ; ಭಾರತ ಖಂಡನೆ