ಸ್ಫೂರ್ತಿಪಥ ಅಂಕಣ: ಆ ವೃದ್ಧರ ಮಕ್ಕಳು ತೀರಿಹೋದ ಅಪ್ಪನ ಫೋಟೋ ಮುಂದೆ ನಿಂತು ಕಣ್ಣೀರು ಸುರಿಸಿದ್ದು ಯಾಕೆ?
- ರಾಜೇಂದ್ರ ಭಟ್ ಕೆ.
Pitru Paksha: ಇದು ನಿಜವಾಗಿಯೂ ನಡೆದ (real incident) ಘಟನೆ. ಅದನ್ನು ನಡೆದ ಹಾಗೆ ಬರೆಯುತ್ತೇನೆ.
ಒಂದೂರಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅವರು ತುಂಬಾ ಪ್ರಾಯ ಆದ ನಂತರ ಒಂದು ಹೋಟೆಲು ಉದ್ಯಮ ಆರಂಭಿಸಿದ್ದರು. ವ್ಯಾಪಾರವು ಚೆನ್ನಾಗಿಯೇ ಇತ್ತು.
ಮುಂದೆ ಆ ವೃದ್ಧರು ಶುಗರ್ ಕಾಯಿಲೆಯಿಂದ ಬಳಲಿದರು.
ಆದರೆ ಮುಂದೆ ಒಮ್ಮೆ ಅವರು ನಿಶ್ಯಕ್ತಿಯಾಗಿ ತಲೆ ತಿರುಗಿ ಬಿದ್ದರು. ಪರೀಕ್ಷೆ ಮಾಡಲು ಆಸ್ಪತ್ರೆಗೆ ಹೋದಾಗ ವೈದ್ಯರು ರಕ್ತ ಪರೀಕ್ಷೆ ಮಾಡಿಕೊಂಡು ಬರಲು ಚೀಟಿ ಕೊಟ್ಟರು. ಪರೀಕ್ಷೆ ಮಾಡಿದಾಗ ನಿಜವಾದ ಶಾಕಿಂಗ್ ನ್ಯೂಸ್ ಕಾದಿತ್ತು. ಅವರ ಬ್ಲಡ್ ಶುಗರ್ ಮಟ್ಟವು ನಿಯಂತ್ರಣ ತಪ್ಪಿ 400 ದಾಟಿತ್ತು! ಅದು ಅಪಾಯಕಾರಿ ಎಂದೂ, ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದೂ ವೈದ್ಯರು ಹೇಳಿದ್ದರು. ಆಗ ಇನ್ಸುಲಿನ್ ಸೂಜಿ ಬೆಳಿಗ್ಗೆ ಮತ್ತು ಸಂಜೆ ಚುಚ್ಚಿಸಿಕೊಳ್ಳುವ ಪ್ರಮೇಯವು ಅವರಿಗೆ ಎದುರಾಯಿತು. ಆದರೂ ಶ್ಯುಗರ್ ಲೆವೆಲ್ ನಿಯಂತ್ರಣಕ್ಕೆ ಬಾರದೇ ಅವರು ಹಾಸಿಗೆ ಹಿಡಿದರು. ಅವರ ಕಾಲಿಗೆ ಆದ ಒಂದು ಗಾಯವು ಗ್ಯಾಂಗ್ರೀನ್ ಆಗಿ ಇಡೀ ಬಲಗಾಲು ಕೊಳೆತು ಹೋಗುವ ಮಟ್ಟಕ್ಕೆ ಬಂದಿತು. ಆಗ ಅವರ ಇಬ್ಬರು ಗಂಡು ಮಕ್ಕಳು ಉಪಾಯದಿಂದ ಹೋಟೆಲನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಆಗಲೇ ಒಬ್ಬಂಟಿ ಮತ್ತು ಅಸಹಾಯಕರಾದ ಅವರು ಮಕ್ಕಳು ತೋರಿಸಿದಲ್ಲಿಗೆ ಸಹಿ ಮಾಡುತ್ತಾ ಹೋದರು. ಅವರ ಹೆಂಡತಿ ತೀರಿಹೋಗಿ ತುಂಬಾ ವರ್ಷಗಳೇ ಆಗಿದ್ದವು. ಹಾಸಿಗೆಯಲ್ಲಿ ಮಲಗಿ ಕಣ್ಣೀರು ಹಾಕುತ್ತಾ ಅವರು ದೇವರನ್ನು ಪ್ರಾರ್ಥನೆ ಮಾಡುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಿತ್ತು?
ಅವರ ಮಕ್ಕಳು ಮತ್ತು ಸೊಸೆಯರು ಅವರನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ!
ಅವರ ಮಕ್ಕಳು, ಸೊಸೆಯಂದಿರು ಅವರನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ. ಔಷಧಿ, ಇನ್ಸುಲಿನ್, ಸೂಜಿ ಎಲ್ಲವೂ ನಿಯಂತ್ರಣ ತಪ್ಪಿತು. ಒಂದು ದಿನ ಕೊಳೆತು ಹೋದ ಅವರ ಬಲಗಾಲನ್ನು ವೈದ್ಯರು ಕತ್ತರಿಸಿ ತೆಗೆದರು. ಆ ವೃದ್ಧರು ನೋವಿನಲ್ಲಿ ನರಳಿದರು.
ಆಗಲೂ ಅವರ ಮಂದಿ ಅವರನ್ನು ನಿರ್ಲಕ್ಷ್ಯ ಮಾಡಿದರು. ಸ್ನಾನ ಮಾಡದೆ, ಬ್ಯಾಂಡೇಜ್ ಬದಲಾವಣೆ ಮಾಡದೆ, ಗಾಯವು ಗುಣ ಆಗದೇ ಅವರು ಹಗಲೂ ರಾತ್ರಿ ನೋವಿನಲ್ಲಿ ಬೊಬ್ಬೆ ಹೊಡೆದರು. ಅವರ ಮನೆಯವರು ಅವರನ್ನು ಉಪಾಯ ಮಾಡಿ ಒಂದು ವೃದ್ಧಾಶ್ರಮಕ್ಕೆ ವರ್ಗಾವಣೆ ಮಾಡಿ ಕೈ ತೊಳೆದುಕೊಂಡರು.
ಆ ವೃದ್ಧರು ಅಲ್ಲಿ ನೋವಿನಲ್ಲಿ ನರಳಿ, ನರಳಿ ಒಂದು ದಿನ ತಮ್ಮ ಪ್ರಾಣವನ್ನೇ ಕಳೆದುಕೊಂಡರು.
ಈಗ ಆರಂಭ ಆಯಿತು ನೋಡಿ ಕಣ್ಣೀರ ನಾಟಕ!
ಅದುವರೆಗೂ ತಾತ್ಸಾರ ಮಾಡಿದ ಮನೆಯ ಮಂದಿ ಈಗ ಅವರ ಹೆಣದ ಮುಂದೆ ಗೊಳೋ ಎಂದು ಕಣ್ಣೀರು ಸುರಿಸಿದರು. ಅಪ್ಪನ ಹೆಣವನ್ನು ತಬ್ಬಿಕೊಂಡು ಕೂಗಿದರು. ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ದಹನ ಮಾಡಿಬಂದರು. ಊರವರ ಬಾಯಿ ಮುಚ್ಚಿಸಲು ಅಪ್ಪನ ಸಪಿಂಡೀಕರಣ ಶ್ರಾದ್ಧದ ಕಾರ್ಯಕ್ರಮ ಆರಂಭ ಆಯಿತು. ಕಾಗದ ಪ್ರಿಂಟ್ ಮಾಡಿ ಇಡೀ ಊರಿನವರನ್ನು, ಸಂಬಂಧಿಕರನ್ನು ಕಾಗದ ಕೊಟ್ಟು ಕರೆದರು. ಪುರೋಹಿತರು ಹೇಳಿದ ಪ್ರಕಾರ ವಿಧಿ, ವಿಧಾನಗಳು ನಡೆದವು. ಇಬ್ಬರೂ ಮಕ್ಕಳು ತಲೆ ಬೋಳಿಸಿಕೊಂಡು ಅಪ್ಪನ ಶ್ರಾದ್ಧಕರ್ಮಕ್ಕೆ ಕುಳಿತರು. ಶಾಸ್ತ್ರದ ಪ್ರಕಾರ ಎಲ್ಲವೂ ಪೂರ್ತಿ ಆಯಿತು. ಇನ್ನು ಎಲ್ಲರನ್ನೂ ಊಟಕ್ಕೆ ಕೂರಿಸಿ ದಕ್ಷಿಣೆ, ದಾನ ಕೊಡುವುದು ಬಾಕಿ ಇತ್ತು.
ಇನ್ನು ಕರ್ಮಾಂಗದ ಒಂದು ಭಾಗ ಮಾತ್ರ ಉಳಿದಿತ್ತು!
ಗೋಶಾಲೆಗೆ ಹೋಗಿ ಗೋ ಗ್ರಾಸ ಇಟ್ಟಾಯಿತು. ಬಯಲಲ್ಲಿ ಕಾಗೆಗೆ (ಅಂದರೆ ಪಿತೃಗಳಿಗೆ) ಪಿಂಡವನ್ನು ಇಟ್ಟಾಯಿತು. ಆದರೆ ಅಂದು ಎಷ್ಟು ಕರೆದರೂ ಒಂದು ಕಾಗೆ ಕೂಡ ಬರಲಿಲ್ಲ! ಕಾಗೆ ಬಂದು ಪಿಂಡವನ್ನು ಒಡೆಯದೆ ಹೋದರೆ ಯಾವ ಬ್ರಾಹ್ಮಣರೂ ಭೋಜನ ಸ್ವೀಕಾರ ಮಾಡುವುದಿಲ್ಲ ಅನ್ನುತ್ತದೆ ಶಾಸ್ತ್ರ. ಅಲ್ಲಿ ಕರ್ಮಾಂಗವನ್ನು ಮಾಡಿದ ಪುರೋಹಿತರು ಹೆಚ್ಚು ಶಾಸ್ತ್ರಗಳನ್ನು ಆಚರಣೆ ಮಾಡುವವರು. ಅವರು ಊಟ ಮಾಡಲು ಒಪ್ಪಲೇ ಇಲ್ಲ.
ಬ್ರಾಹ್ಮಣರು ಊಟ ಮಾಡದೇ ಹೋದರೆ ಸಾರ್ವಜನಿಕರು ಉಣ್ಣುವ ಹಾಗಿಲ್ಲ! ಒಟ್ಟಾರೆ ಆ ಕುಟುಂಬದವರಿಗೆ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡ ಪರಿಸ್ಥಿತಿಯು ಎದುರಾಯಿತು.
ಇಡೀ ಊಟದ ಪೆಂಡಾಲ್‌ನಲ್ಲಿ ಗದ್ದಲವೋ ಗದ್ದಲ!
ಆಗಲೇ ಸಾವಿರಾರು ಜನ ಬಂದು ಊಟಕ್ಕೆ ಸಾಲು ಕೂತಿದ್ದರು. ಮಧ್ಯಾಹ್ನ ಎರಡೂವರೆ ಘಂಟೆ ದಾಟಿದ್ದರಿಂದ ಎಲ್ಲರೂ ಹಸಿವೆಯಿಂದ ಕಂಗಾಲಾಗಿದ್ದರು. ಎಷ್ಟೋ ಜನ ಬಯ್ಯುತ್ತಾ ಎದ್ದುಹೋದರು. ಸಾವಿರಾರು ಮಂದಿಗೆ ಅಡುಗೆ ರೆಡಿ ಆಗಿತ್ತು. ಆದರೆ ಕಾಗೆ ಬಂದು ಪಿಂಡ ಒಡೆಯದೆ ಯಾರಿಗೆ ಊಟ ಬಡಿಸುವುದು? ಇಡೀ ಪೆಂಡಾಲಿನಲ್ಲಿ ಜ್ವಾಲಾಮುಖಿಯ ಸನ್ನಿವೇಶ ಉಂಟಾಗಿತ್ತು. ಆ ಕುಟುಂಬದವರಿಗೆ ಅಪಮಾನ ಸಹಿಸಿಕೊಳ್ಳುವುದು ಕಷ್ಟ ಆಗಿತ್ತು.
ಆಗ ಆ ಗಂಡು ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಅವರು ತಮ್ಮ ತಪ್ಪನ್ನು ಪುರೋಹಿತರ ಜೊತೆ ಹೇಳಿ ಕ್ಷಮೆಯನ್ನು ಕೇಳಿದರು. ತಾವು ತಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಂಡಿಲ್ಲ, ವಿಶೇಷವಾಗಿ ಅವರು ಕಾಲು ತುಂಡಾಗಿ ನರಳುತ್ತಿದ್ದಾಗ ನಿರ್ಲಕ್ಷ್ಯ ಮಾಡಿ ಅವರನ್ನು ವೃದ್ಧಾಶ್ರಮಕ್ಕೆ ಹಾಕಿದ್ದನ್ನೂ ಹೇಳಿ ಕೈಮುಗಿದು ನಿಂತರು.
ಅಪ್ಪನ ಫೋಟೋದ ಮುಂದೆ ಮಕ್ಕಳು, ಸೊಸೆಯಂದಿರು ಕಣ್ಣೀರು ಸುರಿಸಿದರು!
ಆಗ ಸಿಟ್ಟಾದ ಪುರೋಹಿತರು ಅವರನ್ನು ಎಳೆದುಕೊಂಡು ಹೋಗಿ ಅವರ ತಂದೆಯ ದೊಡ್ಡ ಫೋಟೋದ ಮುಂದೆ ನಿಲ್ಲಿಸಿ ಕ್ಷಮೆ ಕೇಳುವಂತೆ ಹೇಳಿದರು. ಆ ಇಬ್ಬರೂ ಮಕ್ಕಳು ಈಗ ಅಪ್ಪನ ಫೋಟೋದ ಮುಂದೆ ನಿಂತು ನಿಜವಾಗಿ ಕಣ್ಣೀರು ಹಾಕಿ ಕ್ಷಮಿಸಿ ಅಪ್ಪ ಎಂದರು. ತಮ್ಮಿಂದ ಸರ್ವಾಂಗ ತಪ್ಪು ಆಗಿದೆ ಎಂದು ಗೋಳಾಡಿದರು.
ಪ್ರಾರ್ಥನೆ ಮುಗಿಯುತ್ತಿದ್ದಂತೆ ಕಾಗೆ ಬಂದೇ ಬಿಟ್ಟಿತ್ತು!
ಏನಾಶ್ಚರ್ಯ ಅಂದರೆ ಐದು ನಿಮಿಷದಲ್ಲಿ ಒಂದು ಕಾಗೆ ಕಾ ಕಾ ಎಂದು ಕೂಗುತ್ತ ಪಿಂಡದ ಮುಂದೆ ಬಂದು ಕೂತಿತು. ಈಗ ಎಲ್ಲರ ಗಮನ ಕಾಗೆಯ ಕಡೆಗೆ ಹೋಯಿತು. ಆ ಕಾಗೆಯು ಒಮ್ಮೆಲೇ ಕೊಕ್ಕಿಂದ ಒಡೆದು ಆ ಪಿಂಡವನ್ನು ಒಡೆಯಿತು! ಎಲ್ಲೆಡೆ ಹರ್ಷೋದ್ಗಾರ ಕೇಳಿ ಬಂತು. ಆದರೆ ಸೂಕ್ಷ್ಮವಾಗಿ ನೋಡಿದಾಗ ಏನು ಗೊತ್ತಾಯ್ತು ಅಂದರೆ ಆ ಕಾಗೆಗೂ ಒಂದೇ ಕಾಲಿತ್ತು! ಆ ವೃದ್ಧರಿಗೂ ಸಾಯುವಾಗ ಒಂದೇ ಕಾಲಿತ್ತು!
ಭರತ ವಾಕ್ಯ
ಎಲ್ಲರಿಗೂ ಮಹಾಲಯ ಪಿತೃ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು. ಹಿಂದೂ ಧರ್ಮವು ವಿಧಿಸಿದ ಷೋಡಶ (16) ಸಂಸ್ಕಾರಗಳಲ್ಲಿ ಶ್ರಾದ್ಧ ಕರ್ಮವೂ ಒಂದು. ಅದು ನಮ್ಮ ಗತಿಸಿದ ಹಿರಿಯರಿಗೆ ನಾವು ಕೊಡುವ ಗೌರವದ ಪ್ರತೀಕವೇ ಆಗಿದೆ. ಶ್ರಾದ್ಧ ಅಂದರೆ ಶ್ರದ್ಧೆ ಎಂಬ ಪದದ ಇನ್ನೊಂದು ರೂಪವೇ ಆಗಿದೆ. ಹಿಂದೂ ಧರ್ಮದ ಎಲ್ಲ ತತ್ವ ಮತ್ತು ಆಚರಣೆಗಳು ವಿಜ್ಞಾನಕ್ಕೆ ಹತ್ತಿರ ಇವೆ ಅನ್ನುವುದೇ ಇಂದಿನ ಭರತವಾಕ್ಯ.
ಇದನ್ನೂ ಓದಿ: Mandolin Srinivas: ಸ್ಫೂರ್ತಿಪಥ ಅಂಕಣ: ಮ್ಯಾಂಡೊಲಿನ್ ಮೂಲಕ ಪೂರ್ವ ಮತ್ತು ಪಶ್ಚಿಮಗಳನ್ನು ಬೆಸೆದ ಯು. ಶ್ರೀನಿವಾಸ್!