ಮುಂಬಯಿ: ಸ್ವಚ್ಛ ಭಾರತ್ ಮಿಷನ್ ಯೋಜನೆ(Swachh Bharat Mission) ಜಾರಿಯಾಗಿ ಇಂದಿಗೆ(ಅ.2 ಬುಧವಾರ) 10 ವರ್ಷಗಳು ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಅ.2ರಂದು ಈ ಯೋಜನೆಯನ್ನು ಜಾರಿಗೊಳಿಸಿದ್ದರು. ಈ ಯೋಜನೆಗೆ 10 ವರ್ಷ(10 Years Of Swacch Bharat Mission) ತುಂಬಿದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರು ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ವಿಶೇಷ ವಿಡಿಯೊದ ಮೂಲಕ ಸ್ವಚ್ಛತೆಯ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ವಿಡಿಯೊದಲ್ಲಿ ಮಾತನಾಡಿದ ಸಚಿನ್, ಸ್ವಚ್ಛತೆಯನ್ನು ಜೀವನಶೈಲಿಯಾಗಿ ಮಾಡಿಕೊಂಡು ಮುಂದಿನ ಪೀಳಿಗೆಗೆ ಆರೋಗ್ಯಕರ ಭಾರತವನ್ನು ನಿರ್ಮಿಸೋಣ ಎಂದು ಸಂದೇಶ ನೀಡಿದ್ದಾರೆ. ಸಚಿನ್ ಕೂಡ ಈ ಹಿಂದೆ ಹಲವು ಬಾರಿ ಪೊರಕೆ ಹಿಡಿದು ಸ್ವತ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೋದಿ ಅವರು ಇಂದು 9600 ಕೋಟಿ ರೂ. ಮೌಲ್ಯದ ನೈರ್ಮಲ್ಯ ಮತ್ತು ಸ್ವತ್ಛತಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೇ ಇನ್ನೂ ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದು ಅಮೃತ್ ಮತ್ತು ಅಮೃತ್ 2.0 ಅಡಿಯಲ್ಲಿ 6,800 ಕೋಟಿ ರೂಪಾಯಿ ಮೌಲ್ಯದ ನಗರ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸುವ/ಹೆಚ್ಚಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಕೂಡ ಒಳಗೊಂಡಿರುತ್ತದೆ. ಗಂಗಾ ಜಲಾನಯನ ಪ್ರದೇಶಗಳಲ್ಲಿನ ನೀರಿನ ಗುಣಮಟ್ಟ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು 1550 ಕೋಟಿ ರೂಪಾಯಿ ಮೌಲ್ಯದ 10 ಯೋಜನೆಗಳು ಮತ್ತು ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್ ಅಡಿಯಲ್ಲಿ 15 ಸಂಕುಚಿತ ಜೈವಿಕ ಅನಿಲ (ಸಿಬಿಸಿ) ಸ್ಥಾವರ ಯೋಜನೆಗಳು ಹಾಗೂ ಗೋಬರ್ ಧನ್ ಯೋಜನೆಯಡಿಯಲ್ಲಿ 1332 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಕೂಡ ಒಳಗೊಂಡಿರುತ್ತದೆ.
ಇದನ್ನೂ ಓದಿ Chickballapur News: ಸ್ವಚ್ಚತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ-ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಕ್ರಮಿಸಬೇಕಾದ ದಾರಿ ಬಹಳ ದೂರವಿದೆ
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸ್ವಚ್ಛತೆಗೆ ಎಲ್ಲಿಲ್ಲದ ಆದ್ಯತೆಯನ್ನು ನೀಡುತ್ತಿದ್ದರು. ಸ್ವತಃ ಅವರೇ ಸ್ವಚ್ಛತಾ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಆಶ್ರಮದ ಇತರರಿಗೆ ಪ್ರೇರಣೆಯನ್ನು ಒದಗಿಸುತ್ತಿದ್ದರು. ಈಗ ಕೇಂದ್ರ ಸರ್ಕಾರ ಕೂಡ ಬಾಪೂಜಿಯ ಈ ಆದ್ಯತೆಗೆ ಸಾಂಸ್ಥಿಕ ರೂಪ ನೀಡಿ, ಭಾರತವನ್ನು ಕಸಮುಕ್ತ ರಾಷ್ಟ್ರವಾಗಿ ರೂಪಿಸುವಲ್ಲಿ ಮುಂದಡಿ ಇಡುತ್ತಿದೆ. ಕಳೆದ 10 ವರ್ಷದಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ ಸಾಕಷ್ಟು ಸಾಧನೆ ಮಾಡಿದ್ದರೂ, ಇನ್ನೂ ಕ್ರಮಿಸಬೇಕಾದ ದಾರಿ ಬಹಳ ದೂರವಿದೆ. ಅಂಕಿ-ಸಂಖ್ಯೆಗಳು ಏನೇ ಹೇಳಲಿ. ಈಗಲೂ ಭಾರತೀಯರ ಮಾನಸಿಕತೆಯಲ್ಲಿ ಸಂಪೂರ್ಣ ಬದಲಾವಣೆಯಾಗಿಲ್ಲ. ಪ್ರಧಾನಿ ಕರೆ ನೀಡಿದರು ಎಂಬ ಕಾರಣಕ್ಕೆ ಅಕ್ಟೋಬರ್ 2ರಂದು ಕೈಯಲ್ಲಿ ಪೊರಕೆ ಹಿಡಿದು, ಫೋಟೋ ತೆಗೆಸಿಕೊಳ್ಳುವುದಕ್ಕೆ ಮಾತ್ರವೇ ಸಿಮೀತವಾದ ಉದಾಹರಣೆಗಳು ಬೇಕಾದಷ್ಟಿವೆ.
ನಮ್ಮ ಸುತ್ತಲಿನ ಪರಿಸರವನ್ನು, ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರಲ್ಲಿ ನಾವು ಇನ್ನೂ ಹಿಂದೆ ಬಿದ್ದಿವೆ. ಈ ಸ್ವಚ್ಛತೆಯ ನಡವಳಿಕೆ ಯಾವುದೇ ನಿಯಮಗಳಿಂದ ಮೂಡವಂಥದ್ದಲ್ಲ. ಅದು ನಮ್ಮೊಳಗಿಂದ, ನಮ್ಮ ಪ್ರಜ್ಞೆಯೊಳಗಿಂದ ಮೂಡಿ ಬರಬೇಕು. ಆಗ ನಾವು ಕಾಲಿಡುವ ಸ್ಥಳವೆಲ್ಲ ಶುಭ್ರವೇ ಆಗಿರುತ್ತದೆ. ಹಾಗಾಗಿ, ಕೇವಲ ಪ್ರಧಾನಿ ಹೇಳಿದರು ಎಂಬ ಕಾರಣಕ್ಕೂ, ಗಾಂಧಿ ಜಯಂತಿ ಎಂಬ ಕಾರಣಕ್ಕೂ ನಾವು ಒಂದು ದಿನ ಸ್ವಚ್ಛತಾ ವೀರರು ಆಗುವುದು ಬೇಡ. ವರ್ಷದ ಎಲ್ಲ ದಿನಗಳನ್ನು ಸ್ವಚ್ಛತಾ ಹಿ ಸೇವೆ ಎಂದು ಭಾವಿಸೋಣ ಮತ್ತು ಅದರಂತೆ ನಡೆದುಕೊಳ್ಳೋಣ.