Friday, 22nd November 2024

Swachh Bharat: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸ್ವಚ್ಛತಾ ಅಭಿಯಾನ; ವಿಡಿಯೊ ನೋಡಿ

Swachh Bharat

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆರಂಭಿಸಿರುವ ಸ್ವಚ್ಛ ಭಾರತ (Swachh Bharat) ಅಭಿಯಾನಕ್ಕೆ 10 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಅವರು ಇಂದು (ಅಕ್ಟೋಬರ್‌ 2) ದಿಲ್ಲಿಯಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸೇರಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ‘ಸ್ವಚ್ಛ ಭಾರತ ಮಿಷನ್ʼ (Swachh Bharat Mission) ಈ ಶತಮಾನದ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಆಂದೋಲನವಾಗಿದ್ದು, ಇದನ್ನು ಅನೇಕ ವರ್ಷಗಳ ನಂತರವೂ ಜನರು ನೆನಪಿಸಿಕೊಳ್ಳುತ್ತಾರೆ ಎಂದು ಮೋದಿ ಹೇಳಿದರು.

ಸ್ವಚ್ಛ ಭಾರತ ಅಭಿಯಾನವು ಸಾರ್ವಜನಿಕರ ಭಾಗವಹಿಸುವಿಕೆ ಮತ್ತು ಸಾರ್ವಜನಿಕ ನಾಯಕತ್ವದ ಮೂಲಕ ಜನರ ಶಕ್ತಿಯನ್ನು ಪ್ರತಿಬಿಂಬಿಸಿದೆ ಎಂದು ಪ್ರಧಾನಿ ಹೇಳಿದರು. “ಸ್ವಚ್ಛ ಭಾರತ ಅಭಿಯಾನವು ಕೋಟ್ಯಂತರ ಭಾರತೀಯರ ನಿಸ್ವಾರ್ಥ ಸೇವೆಯ ಸಂಕೇತ ಎನಿಸಿಕೊಂಡಿದೆ ಮತ್ತು ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ಭಾರತೀಯರು ಈ ಅಭಿಯಾನವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಮತ್ತು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ” ಎಂದು ಮೋದಿ ಬಣ್ಣಿಸಿದರು.

“ಇಂದಿನಿಂದ 1,000 ವರ್ಷಗಳ ನಂತರ, 21ನೇ ಶತಮಾನದ ಭಾರತದ ಬಗ್ಗೆ ಅಧ್ಯಯನಗಳನ್ನು ನಡೆಸಿದಾಗ ಸ್ವಚ್ಛ ಭಾರತ ಅಭಿಯಾನವನ್ನು ನೆನಪಿಸಿಕೊಳ್ಳಲಾಗುತ್ತದೆ. ಈ ಶತಮಾನದಲ್ಲಿ ಸ್ವಚ್ಛ ಭಾರತವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನರ ಸಂಕಲ್ಪವಾಗಿದ್ದು, ಜನರೇ ಇದನ್ನು ಮುನ್ನಡೆಸುತ್ತಿದ್ದಾರೆʼʼ ಎಂದು ಅವರು ತಿಳಿಸಿದರು.

ನೈರ್ಮಲ್ಯ, ಸ್ವಚ್ಛತೆಯನ್ನು ಉತ್ತೇಜಿಸಲು ಮತ್ತು ಬಯಲು ಮಲವಿಸರ್ಜನೆಯನ್ನು ತೊಡೆದುಹಾಕಲು ದೇಶಾದ್ಯಂತ ಆರಂಭಿಸಿದ ಯೋಜನೆಯೇ ಸ್ವಚ್ಛ ಭಾರತ ಅಭಿಯಾನ. ಈ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2014ರ ಅಕ್ಟೋಬರ್ 2ರಂದು ಪ್ರಾರಂಭಿಸಿದರು.

ʼʼಈ ಅಭಿಯಾನ ಯಶಸ್ಸು ಗಳಿಸಿದಷ್ಟೂ ದೇಶ ಇನ್ನಷ್ಟು ಬೆಳಗಲಿದೆ. 15 ದಿನಗಳ ಸೇವಾ ಪಖ್ವಾಡ ಯೋಜನೆಯಡಿ ದೇಶಾದ್ಯಂತ ಸುಮಾರು 27 ಲಕ್ಷದಷ್ಟು ಕಾರ್ಯಕ್ರಮ ಆಯೋಜಿಸಲಾಗಿದೆ. ಜತೆಗೆ 28 ಕೋಟಿಗಿಂತ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿರಂತರ ಪ್ರಯತ್ನಗಳಿಂದ ನಾವು ನಮ್ಮ ದೇಶವನ್ನು ಸ್ವಚ್ಛಗೊಳಿಸೋಣʼʼ ಎಂದು ಮೋದಿ ಕರೆ ನೀಡಿದರು.

ಅಭಿಯಾನದಲ್ಲಿ ಭಾಗವಹಿಸಿದ್ದಕ್ಕಾಗಿ ದೇಶದ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ, “ಈ ಮಹತ್ವದ ದಿನದಂದು, ಸುಮಾರು 10,000 ಕೋಟಿ ರೂ.ಗಳ ಸ್ವಚ್ಛತೆಗೆ ಸಂಬಂಧಿಸಿದ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ. ಮಿಷನ್ ಅಮೃತ್ ಯೋಜನೆ ಅಡಿಯಲ್ಲಿ ದೇಶದ ಅನೇಕ ನಗರಗಳಲ್ಲಿ ನೀರು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗುವುದು. ಇದರಲ್ಲಿ ನಮಾಮಿ ಗಂಗೆಗೆ ಸಂಬಂಧಿಸಿದ ಕಾಮಗಾರಿ, ತ್ಯಾಜ್ಯದಿಂದ ಜೈವಿಕ ಅನಿಲವನ್ನು ಉತ್ಪಾದಿಸುವ ಗೋವರ್ಧನ್ ಸ್ಥಾವರ ಸೇರಿದೆ. ಈ ಕಾರ್ಯಗಳು ಸ್ವಚ್ಛ ಭಾರತ ಅಭಿಯಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆʼʼ ಎಂದು ತಿಳಿಸಿದರು.

“ಇಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ. ನಾನು ಭಾರತ ಮಾತೆಯ ಮಕ್ಕಳಿಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ. ಗಾಂಧೀಜಿ ಮತ್ತು ದೇಶದ ಮಹಾನ್ ವ್ಯಕ್ತಿಗಳು ಕಂಡ ಭಾರತದ ಕನಸನ್ನು ನಾವೆಲ್ಲರೂ ಒಟ್ಟಾಗಿ ನನಸು ಮಾಡೋಣ. ಇಂದು ಸ್ವಚ್ಛ ಭಾರತ ಅಭಿಯಾನದ ಪ್ರಯಾಣವು 10 ವರ್ಷಗಳ ಮೈಲಿಗಲ್ಲನ್ನು ತಲುಪಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸುದ್ದಿಯನ್ನೂ ಓದಿ: Narendra Modi: ಮಹಾತ್ಮ ಗಾಂಧೀಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಕೊಡುಗೆ ಸ್ಮರಿಸಿದ ಪ್ರಧಾನಿ ಮೋದಿ