ಚೆನ್ನೈ: 18ನೇ ಆವೃತ್ತಿಯ ಐಪಿಎಲ್‌ನ(IPL 2025) ಮೆಗಾ ಹರಾಜು ಪ್ರಕ್ರಿಯೆ(ipl 2025 mega auction) ವರ್ಷಾಂತ್ಯದಲ್ಲಿ ನಡೆಯಲಿದೆ. ಈಗಾಗಲೇ ಬಿಸಿಸಿಐ ಹರಾಜಿನ ನಿಯಮಗಳನ್ನು ಪ್ರಕಟಿಸಿದೆ. ರಿಟೇನ್ಗೆ(ipl 2025 retention) ಸಂಬಂಧಿಸಿದಂತೆ ಪ್ರತಿ ಫ್ರಾಂಚೈಸಿಗಳು ಯಾವ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು ಎಂಬ ಸಂಭಾವ್ಯ ಪಟ್ಟಿಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಚರ್ಚೆ ನಡೆಸುತ್ತಿದ್ದಾರೆ.
ಕಳೆದ ಐದು ವರ್ಷಗಳಿಂದ ಬಿಸಿಸಿಐ ಒಪ್ಪಂದವನ್ನು ಹೊಂದಿರದ ಭಾರತೀಯ ಆಟಗಾರರಿಗೆ ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲು ಅವಕಾಶ ನೀಡಲಾಗಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್(chennai super kings) ಎಂ.ಎಸ್ ಧೋನಿಯವರನ್ನು(MS Dhoni) ಅನ್ ಕ್ಯಾಪ್ಡ್ ಕೋಟಾದಲ್ಲಿ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ಧೋನಿ ಈ ಬಾರಿಯ ಐಪಿಎಲ್‌ನಲ್ಲಿಯೂ ಆಡಬಹುದು ಎಂದು ಅಭಿಮಾನಿಗಳ ನಿರೀಕ್ಷೆ. ಆದರೆ, ತಂಡದ ಸಿಇಒ ಕಾಶಿ ವಿಶ್ವನಾಥನ್ ನೀಡಿರುವ ಹೇಳಿಕೆಯೊಂದದು ಧೋನಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಹರಾಜು ಪ್ರಕ್ರಿಯ ಬಗ್ಗೆ ಮಾತನಾಡುವ ವೇಳೆ ವಿಶ್ವನಾಥನ್, ಧೋನಿ ಅವರನ್ನು ರಿಟೇನ್ ಮಾಡುವ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಈ ವಿಚಾರವಾಗಿ ನಾವು ಅವರೊಂದಿಗೆ ಇನ್ನೂ ಚರ್ಚಿಸಿಲ್ಲ. ಮುಂದಿನ ವಾರ ಧೋನಿ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ. ಅಭಿಮಾನಿಗಳಂತೆ ನನಗೂ ಕೂಡ ಅವರು ಆಡಬೇಕು ಎಂಬ ಬಯಕೆ ಇದೆ. ಆಡಬೇಕೋ? ಬೇಡವೋ? ಎನ್ನುವುದು ಅವರ ಆಯ್ಕೆಗೆ ಬಿಟ್ಟ ವಿಚಾರ ಎಂದು ವಿಶ್ವನಾಥನ್ ಹೇಳಿದ್ದಾರೆ.
ಇದನ್ನೂ ಓದಿ IND vs BAN: ಬಾಂಗ್ಲಾದ ಶಕೀಬ್‌ಗೆ ಬ್ಯಾಟ್ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ 5 ವರ್ಷ ಕಳೆದಿದ್ದರೆ ಅಂಥ ಆಟಗಾರರನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸುವ ನಿಯಮವನ್ನು ಬಿಸಿಸಿಐ 2008ರಲ್ಲಿ ಪರಿಚಯಿಸಿತ್ತು. ಆದರೆ, ಈ ಅವಕಾಶವನ್ನು ಈ ವರೆಗೂ ಯಾವ ತಂಡವೂ ಬಳಕೆ ಮಾಡಿಕೊಂಡಿಲ್ಲ. 2021ರಲ್ಲಿ ಈ ನಿಯಮವನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ನಿಯಮವನ್ನು ಜಾರಿಗೆ ತಂದಿದೆ. ಕೆಲವರು ಧೋನಿ ಐಪಿಎಲ್ ಆಡಲೆಂದೇ ಈ ನಿಯಮ ಜಾರಿ ಮಾಡಲಾಗಿದೆ ಎಂದು ಹೇಳಲಾರಂಭಿಸಿದ್ದಾರೆ. ಆದರೆ ಧೋನಿ ಈ ಬಾರಿ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.