Friday, 22nd November 2024

R Ashok: ಆರ್.ಅಶೋಕ್​ ವಿರುದ್ಧ ಭೂ ಕಬಳಿಕೆ ಆರೋಪ; ರಾಜೀನಾಮೆಗೆ ಕಾಂಗ್ರೆಸ್‌ ಸಚಿವರ ಆಗ್ರಹ

R Ashok

ಬೆಂಗಳೂರು: ವಿಪಕ್ಷ ನಾಯಕ ಆರ್ ಅಶೋಕ್​ ಅವರ ವಿರುದ್ಧ ಕೋಟ್ಯಂತರ ರೂಪಾಯಿ ಮೌಲ್ಯದ ಭೂಕಬಳಿಕೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಾಂಗ್ರೆಸ್‌ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಅಶೋಕ್ (R Ashok)​ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್‌, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ, ಎಚ್​​​​​.ಕೆ.ಪಾಟೀಲ್ ಅವರು ಮಹತ್ವದ ಜಂಟಿ ಸುದ್ದಿಗೋಷ್ಠಿ ನಡೆಸಿ, ಭೂಕಬಳಿಕ ಆಗಿದೆ ಎಂಬ ಆರೋಪದ ಬಗ್ಗೆ ಅಶೋಕ್​ ವಿರುದ್ಧ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ಮಾತನಾಡಿ, ಲೊಟ್ಟೆಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ರೂಪಾಯಿ ಭೂ ಹಗರಣ ನಡೆದಿದೆ. 1977ರ ಫೆ.24ರಂದು 38.32 ಗುಂಟೆ ಜಮೀನನ್ನು ಬಿಡಿಎ ಪ್ರಾಥಮಿಕ ನೋಟಿಫಿಕೇಷನ್ ಮಾಡಿತ್ತು. 1978ರಲ್ಲಿ ಫೈನಲ್‌ ನೋಟಿಫಿಕೇಷನ್‌ ಮಾಡಲಾಗಿತ್ತು. ಆದರೆ, ಜಮೀನಿನ ಮೂಲ ಮಾಲೀಕರಲ್ಲದಿದ್ದರೂ ರಾಮಸ್ವಾಮಿ ಎಂಬುವವರು ಬಿಡಿಎಗೆ ಈ ಜಮೀನು ನೀಡಿದ್ದರು. ನಂತರ ಸರ್ಕಾರಿ ಜಮೀನನ್ನು 26 ವರ್ಷದ ನಂತರ 2003, 2007ರಲ್ಲಿ ಅಶೋಕ್‌ ಜಮೀನನ್ನು ಅಕ್ರಮವಾಗಿ ಖದೀದಿಸಿದ್ದರು ಎಂದು ಆರೋಪಿಸಿದರು.

2009ರ ಅ.16ರಂದು ಜಮೀನನ್ನು ಡಿನೋಟಿಫೈ ಮಾಡಿಕೊಡಬೇಕು ಎಂದು ಮಾಲೀಕರೇ ಅಲ್ಲದ ರಾಮಸ್ವಾಮಿ ಕಡೆಯಿಂದ ಅಶೋಕ್‌ ಅರ್ಜಿ ಕೊಡಿಸಿದ್ದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡಲೇ ಡಿನೋಟಿಫೈ ಮಾಡಲು ಸೂಚಿಸಿದ್ದರು.

ಆ ನಂತರ ನಿವೃತ್ತ ವಿಂಗ್‌ ಕಮಾಂಡರ್‌ ಜಿ.ವಿ. ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ನಂತರ ಆ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಹೀಗಾಗಿ ಅಶೋಕ್‌ ಅವರು ಜಮೀನನ್ನು ವಾಪಸ್‌ ಕೊಡಲು ತೀರ್ಮಾನಿಸಿದ್ದರು. 2011ರ ಆ.27ರಂದು ರಿಜಿಸ್ಟರ್ಡ್‌ ಗಿಫ್ಟ್‌ ಮೂಲಕ ಅಶೋಕ್‌ ಅವರು ಬಿಡಿಎಗೆ ಜಮೀನು ವಾಪಸ್‌ ನೀಡಿದ್ದರು. ನಂತರ ನಿವೃತ್ತ ವಿಂಗ್‌ ಕಮಾಂಡರ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌, ಜಮೀನು ವಾಪಸ್‌ ನೀಡಿರುವುದರಿಂದ ಯಾವುದೇ ಕ್ರಿಮಿನಲ್‌ ಕೇಸ್‌ ದಾಖಲಿಸುವುದು ಅಗತ್ಯವಿಲ್ಲ ಎಂದು ಹೇಳಿತ್ತು.

ಈ ಸುದ್ದಿಯನ್ನೂ ಓದಿ | DK Shivakumar: ರಿಫೆಕ್ಸ್ ಗ್ರೂಪ್‌ನ 170 ಎಲೆಕ್ಟ್ರಿಕ್ ಕಾರುಗಳಿಗೆ ಡಿ.ಕೆ. ಶಿವಕುಮಾರ್ ಚಾಲನೆ

ಆದರೆ, ಯಾವುದೇ ತಪ್ಪಿಲ್ಲದಿದ್ದರೆ ವಿಪಕ್ಷಗಳು ಮಾಡುತ್ತಿರುವ ರಾಜಕೀಯದಿಂದಾಗಿ ಸಿಎಂ ಅವರ ಪತ್ನಿ ಮುಡಾಗೆ 14 ಸೈಟ್​​ಗಳನ್ನು ವಾಪಸ್​ ಕೊಟ್ಟಿದ್ದಾರೆ. ಆದರೆ, ಅಶೋಕ್ ಅವರೇ ನಿಮ್ಮ ಹಗರಣದ ಬಗ್ಗೆ ಏನಂತೀರಿ, ನೀವು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.