ದುಬೈ: ಮೊದಲ ಸಲ ವಿಶ್ವ ಕಪ್‌ಗೆ ಮುತ್ತಿಕ್ಕುವ ಇರಾದೆಯೊಂದಿಗೆ ಭಾರತ ಮಹಿಳಾ ತಂಡ 9ನೇ ಆವೃತ್ತಿಯ ಟಿ20 ವಿಶ್ವಕಪ್(Womens T20 World Cup) ಆಡಲು ಸಜ್ಜಾಗಿದೆ. ನಾಳೆ(ಶುಕ್ರವಾರ) ನ್ಯೂಜಿಲ್ಯಾಂಡ್(INDW vs NZW) ವಿರುದ್ಧ ಕಣಕ್ಕಿಳಿಯಲಿದೆ. ಮೊದಲ ಪಂದ್ಯವನ್ನೇ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡುವುದು ಹರ್ಮನ್‌ಪ್ರೀತ್ ಕೌರ್ ಬಳಗದ ಯೋಜನೆ.
ಕಳೆದ ಒಂದು ವರ್ಷಗಳಿಂದ ಭಾರತ ಉತ್ತಮ ಸಾಧನೆಯನ್ನು ಕಾಯ್ದುಕೊಂಡು ಬಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂಥ ಬಲಿಷ್ಠ ತಂಡಗಳನ್ನು ಮಣಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಆದರೆ ಕೊನೆಯ ಹಂತದಲ್ಲಿ ಒತ್ತಡ ನಿಭಾಯಿಸಲಾಗದೆ ಸೋಲು ಕಾಣುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ. ಈ ಬಾರಿಯ ಅದೃಷ್ಟ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.
ಕಳೆದ ಬಾರಿಯ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋತು ಹೊರಬಿದಿತ್ತು. ಈ ಬಾರಿ ತಂಡದ ಆಟಗಾರ್ತಿಯರೆಲ್ಲರೂ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಭಾರತ ಈ ಬಾರಿ ನೆಚ್ಚಿನ ತಂಡಗಳಲ್ಲೊಂದು. ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ರಿಚಾ ಘೋಷ್ ಇರುವ ತಂಡದ ಬ್ಯಾಟಿಂಗ್ ಸಹಜವಾಗಿಯೇ ಬಲಿಷ್ಠ. ಹಾಗೆಯೇ ಬೌಲಿಂಗ್‌ನಲ್ಲಿ ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಒಳಗೊಂಡ ಬೌಲಿಂಗ್ ವಿಭಾಗವೂ ವೈವಿಧ್ಯಮಯವಾಗಿದೆ.
ಇದನ್ನೂ ಓದಿ Womens T20 World Cup: ಟೂರ್ನಿಯ ಮಾದರಿ, ವೇಳಾಪಟ್ಟಿಯ ವಿವರ ಹೀಗಿದೆ
ನ್ಯೂಜಿಲ್ಯಾಂಡ್ ಕೂಡ ಇದುವರೆಗೂ ವಿಶ್ವ ಕಪ್ ಗೆದ್ದಿಲ್ಲ. 2 ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಚೊಚ್ಚಲ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ ಕಿವೀಸ್ ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಶರಣಾಗಿತ್ತು. ಮುಂದಿನ ಆವೃತ್ತಿಯಲ್ಲಿಯೂ ನ್ಯೂಜಿಲ್ಯಾಂಡ್ ಫೈನಲ್ ಪ್ರವೇಶಿಸಿತ್ತು. ಇಲ್ಲಿ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು. 2 ಬಾರಿಯ ರನ್ನರ್ ಅಪ್ ಈ ಬಾರಿ ವಿನ್ನರ್ ಆಗುವ ಪಣ ತೊಟ್ಟಿದೆ. ಹೀಗಾಗಿ ಭಾರತ ಎಚ್ಚರಿಕೆಯಿಂದ ಆಡಬೇಕು. ಪಂದ್ಯ ದುಬೈನಲ್ಲಿ ನಡೆಯಲಿದೆ.
ಸಂಭಾವ್ಯ ತಂಡಗಳು
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿ.ಕೀ), ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಆಶಾ ಸೋಭಾನಾ.
ನ್ಯೂಜಿಲ್ಯಾಂಡ್: ಸೋಫಿ ಡಿವೈನ್ (ನಾಯಕಿ), ಸುಜಿ ಬೇಟ್ಸ್, ಇಜ್ಜಿ ಗೇಜ್, ಮ್ಯಾಡಿ ಗ್ರೀನ್, , ಫ್ರಾನ್ ಜೊನಾಸ್, ಲೀ ಕ್ಯಾಸ್ಪರೆಕ್, ಅಮೆಲಿ ಕೆರ್(ವಿ.ಕೀ), ಜೆಸ್ ಕೆರ್, ರೋಸ್ಮರಿ ಮೈರ್, ಮೊಲ್ಲಿ ಪೆನ್‌ಫೋಲ್ಡ್, ಜಾರ್ಜಿಯಾ ಪ್ಲಿಮ್ಮರ್, ಹನ್ನಾ ರೋವ್/ ಲಿಯಾ ತಹುಹು.
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಆರಂಭ: ರಾತ್ರಿ. 7.30
ಸ್ಥಳ: ದುಬೈ