ಕೊಚ್ಚಿ: ನಟಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿಗೆ (Pulsar Suni) ವಿಚಾರಣಾ ನ್ಯಾಯಾಲಯ ಜಾಮೀನು ಸಿಕ್ಕಿದೆ. ಇದರಿಂದಾಗಿ ಜೈಲಿನಿಂದ ಬಿಡುಗಡೆಯಾದ ನಂತರ ಸುನಿ ಐಷಾರಾಮಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದು ಮತ್ತು ದುಬಾರಿ ಉತ್ಪನ್ನಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಹಾಗಾಗಿ ಅವನ ಆರ್ಥಿಕ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನ್ಯಾಯಾಲಯಕ್ಕೆ ಹಾಜರಾದಾಗ ಸುನಿ 7,000 ರೂ.ಗಳ ಚಪ್ಪಲಿ ಮತ್ತು 4,000 ರೂ.ಗಳ ಶರ್ಟ್ ಧರಿಸಿದ್ದ ಎಂದು ರಹಸ್ಯ ಗುಪ್ತಚರರು ವರದಿ ಮಾಡಿದ್ದಾರೆ. ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿರುವುದರಿಂದ ಯಾರಾದರೂ ಸುನಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆಯೇ ಮತ್ತು ನ್ಯಾಯಾಲಯವು ನೇರ ಪ್ರಶ್ನೆಗಳನ್ನು ಕೇಳಿದಾಗ ಅವರು ಯಾರ ಪರವಾಗಿಯಾದರೂ ಉತ್ತರಿಸುತ್ತಾರೆಯೇ ಎಂದು ತನಿಖಾ ತಂಡ ಪರಿಶೀಲಿಸುತ್ತಿದೆ.
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸುನಿಗೆ ಜಾಮೀನು ಸಿಕ್ಕಿತ್ತು. ಕಠಿಣ ಷರತ್ತುಗಳೊಂದಿಗೆ ಜಾಮೀನು ನೀಡಲಾಯಿತು. ಆತ ಎರ್ನಾಕುಲಂ ಬಿಟ್ಟು ಹೋಗಬಾರದು, ಸಾಕ್ಷಿಗಳನ್ನು ನಾಶ ಮಾಡುವ ಪ್ರಯತ್ನ ಮಾಡಬಾರದು, ಮಾಧ್ಯಮಗಳೊಂದಿಗೆ ಮಾತನಾಡಬಾರದು, ಕೇವಲ ಒಂದು ಸಿಮ್ ಬಳಸಬೇಕು, ಆರೋಪಿ ಅಥವಾ ಸಾಕ್ಷಿಗಳನ್ನು ಸಂಪರ್ಕಿಸಬಾರದು ಎಂಬಂತಹ ಷರತ್ತುಗಳನ್ನು ನ್ಯಾಯಾಲಯ ಹಾಕಿತ್ತು. ಅಲ್ಲದೇ ಸುನಿ ಮೇಲೆ ಯಾವುದೇ ದಾಳಿಯಾಗದಂತೆ ಗ್ರಾಮೀಣ ಪೊಲೀಸರು ರಕ್ಷಣೆ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.
ಇದನ್ನೂ ಓದಿ: ಹೆಂಡತಿಯನ್ನು ಅತಿಥಿಗಳ ಜತೆ ಮಲಗಲು ಕಳುಹಿಸುವುದೇ ಈ ಬುಡಕಟ್ಟು ಸಮುದಾಯದ ಶ್ರೇಷ್ಠ ಸಂಪ್ರದಾಯ
ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ 10 ಆರೋಪಿಗಳಿದ್ದಾರೆ. ಸಾಮೂಹಿಕ ಅತ್ಯಾಚಾರದ ಅಪರಾಧ ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಆರೋಪ ಹೊರಿಸಲಾಗಿದೆ. ಉಳಿದವರ ವಿರುದ್ಧ ಪಿತೂರಿ ಆರೋಪ ಹೊರಿಸಲಾಗಿದೆ. ಇದರಲ್ಲಿ 261 ಸಾಕ್ಷಿಗಳಿದ್ದಾರೆ. ಈ ಪ್ರಕರಣದಲ್ಲಿ 1600 ದಾಖಲೆಗಳನ್ನು ಹಸ್ತಾಂತರಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.