Thursday, 12th December 2024

Bengaluru Bulls: ಬುಲ್ಸ್‌ ತಂಡಕ್ಕೆ ಪ್ರದೀಪ್ ನರ್ವಾಲ್ ನೂತನ ನಾಯಕ

Bengaluru Bulls

ಬೆಂಗಳೂರು: ಬಹುನಿರೀಕ್ಷಿತ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌(pro kabaddi) ಅಕ್ಟೋಬರ್ 18ರಿಂದ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡವು ಬೆಂಗಳೂರು ಬುಲ್ಸ್‌(Bengaluru Bulls) ತಂಡವನ್ನು ಎದುರಿಸಲಿದೆ. ಬುಲ್ಸ್‌ ತಂಡ ಪ್ರದೀಪ್ ನರ್ವಾಲ್(Pardeep Narwal) ಅವರನ್ನು ನೂತನ ನಾಯಕನಾಗಿ ನೇಮಕ ಮಾಡಿದೆ.

ಪ್ರದೀಪ್‌ 2015ರಲ್ಲಿ ಬೆಂಗಳೂರು ಪರ ಆಡುವ ಮೂಲಕವೇ ಪ್ರೊ ಕಬಡ್ಡಿ ಅಭಿಯಾನ ಆರಂಭಿಸಿದ್ದರು. ಬಳಿಕ ಪಾಟ್ನಾ ಪೈರೇಟ್ಸ್‌ ಹಾಗೂ ಯುಪಿ ಯೋಧಾಸ್‌ ತಂಡಗಳನ್ನು ಪ್ರತಿನಿಧಿಸಿದ್ದರು. ಇದೀಗ 9 ವರ್ಷಗಳ ಬಳಿಕ ಮತ್ತೆ ಮಾಜಿ ತಂಡಕ್ಕೆ ನಾಯಕನಾಗಿ ಮರಳಿದ್ದಾರೆ. ಇತ್ತೀಚೆಗೆ ನಡೆದ ಹರಾಜಿನಲ್ಲಿ ಪ್ರದೀಪ್‌ಗೆ 70 ಲಕ್ಷ ರು. ನೀಡಿ ಬುಲ್ಸ್‌ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು.

27 ವರ್ಷದ ಪ್ರದೀಪ್‌ ಟೂರ್ನಿ ಇತಿಹಾಸದಲ್ಲಿ ಅತ್ಯಧಿಕ ಅಂಕ ಕಲೆಹಾಕಿದ ದಾಖಲೆ ವೀರ. ಇದುವರೆಗೆ 170 ಪಂದ್ಯಗಳನ್ನಾಡಿ ಬರೋಬ್ಬರಿ 1690 ರೈಡ್‌ ಅಂಕಗಳನ್ನು ಸಂಪಾದಿಸಿದ್ದಾರೆ. ಆರಂಭಿಕ ಕೆಲ ಆವೃತ್ತಿಯಲ್ಲಿ ಅಮೋಘ ರೈಡಿಂಗ್‌ ನಡೆಸುವ ಮೂಲಕ ಗಮನಸೆಳೆದಿದ್ದ ಪ್ರದೀಪ್‌ ಕಳೆದ 2 ಆವೃತ್ತಿಯಲ್ಲಿ ಫಾರ್ಮ್‌ ಕಳೆದುಕೊಂಡು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಈ ಬಾರಿ ಅವರ ಫಾರ್ಮ್‌ ಹೇಗಿರಲಿದೆ ಎನ್ನುವುದು ಕೂಡ ಮುಖ್ಯ. ಒಂದೊಮ್ಮೆ ಅವರು ಹಳೆಯ ಲಯಕ್ಕೆ ಮರಳಿದ್ದೇ ಆದಲ್ಲಿ ಅವರನ್ನು ತಡೆದು ನಿಲ್ಲಿಸುವುದು ಸುಲಭದ ಮಾತಲ್ಲ.

ಇದನ್ನೂ ಓದಿ ‌Virat Kohli: ಬೆಂಗಾಳಿ ಮಾತನಾಡಿದ ವಿರಾಟ್‌ ಕೊಹ್ಲಿ; ವಿಡಿಯೊ ವೈರಲ್

ರೈಡಿಂಗ್‌ಗೆ ಹೋದರೆ ಎದುರಾಳಿಗಳ ಮೇಲೆ ಹುಲಿಯಂತೆ ಘರ್ಜಿಸುತ್ತಾರೆ. ಚಿಗರೆಯ ವೇಗದಲ್ಲಿ ನುಗ್ಗಿ ಎದುರಾಳಿಯನ್ನು ಔಟ್‌ ಮಾಡಿ, ಚಿಂಕೆಯಂತೆ ನೆಗೆಯುತ್ತಾ ತನ್ನ ಕೋರ್ಟ್‌ಗೆ ಮರಳುವ ಚಾಕಚಕ್ಯತೆ ಇವರದ್ದು. ಎರಡು ಆವೃತ್ತಿಯಲ್ಲಿ ಪಾಟ್ನಾ ಚಾಂಪಿಯನ್‌ ಪಟ್ಟ ಅಲಂಕರಿಸುವಲ್ಲಿ ಪ್ರದೀಪ್‌ ಪಾತ್ರ ಮಹತ್ವದಾಗಿತ್ತು.

ಬುಲ್ಸ್‌ ತಂಡದ ಬಲ ಹೇಗಿದೆ?

ಈ ಬಾರಿ ಬುಲ್ಸ್‌ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಹರಾಜಿನಲ್ಲಿ ಹಲವು ಸ್ಟಾರ್‌ ಆಟಗಾರರನ್ನು ತೆಕ್ಕೆಗೆ ಹಾಕಿಕೊಂಡಿದೆ. ಕಳೆದ 2 ವರ್ಷಗಳಲ್ಲಿ ಜೈಪುರ ತಂಡದ ಪರ ಗಮನಾರ್ಹ ಪ್ರದರ್ಶನ ತೋರಿದ್ದ ಅಜಿತ್​ ಈ ಬಾರಿ ಬುಲ್ಸ್‌ ಸೇರಿದ್ದಾರೆ. ಜತೆಗೆ ಜೈ ಭಗವಾನ್​ ತಂಡ ಸೇರಿದ್ದು ತಂಡದ ಬಲ ಹೆಚ್ಚಿದೆ. ಎಂ. ಚಂದ್ರನಾಯ್ಕ್​ ಈ ಬಾರಿಯ ಪ್ರೊ ಕಬಡ್ಡಿ ಲೀಗ್​ನಲ್ಲಿರುವ ಏಕೈಕ ಕನ್ನಡಿಗ.

ಬೆಂಗಳೂರು ಬುಲ್ಸ್​ ತಂಡ

ಅಜಿಂಕ್ಯ ಪವಾರ್‌, ಪ್ರದೀಪ್‌ ನರ್ವಾಲ್‌, ಲಕ್ಕಿ ಕುಮಾರ್‌, ಮಂಜೀತ್‌, ಚಂದ್ರನಾಯ್ಕ ಎಂ., ಹಾಸುನ್‌ ತೊಂಕ್ರುಯಿಯ, ಪ್ರಮೋದ್‌ ಸಾಯಿಸಿಂಗ್‌, ನಿತಿನ್‌ ರಾವಲ್‌, ಜೈ ಭಗವಾನ್‌, ಜತಿನ್‌. ಉಳಿಸಿಕೊಳ್ಳಲಾಗಿದ್ದ ಆಟಗಾರರು: ಪೊನ್ಪರ್ತಿಬನ್‌ ಸುಬ್ರಮಣಿಯನ್‌, ಸುಶೀಲ್‌, ರೋಹಿತ್‌ ಕುಮಾರ್‌, ಸೌರಭ್‌ ನಂದಲ್‌, ಆದಿತ್ಯ ಪವಾರ್‌, ಅಕ್ಷಿತ್‌, ಅರುಲ್‌ನಂತಬಾಬು, ಪ್ರತೀಕ್‌.