Sunday, 15th December 2024

ವಸ್ತು ಎಲ್ಲಿದೆ ಅಂತ ಗೊತ್ತಿದ್ದರೆ ಅದು ಕಳೆದ ಹಾಗಲ್ಲ, ಅಲ್ಲವೇ?

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಒಂದೂರಿನಲ್ಲಿ ಒಬ್ಬ ರಾಜನಿದ್ದ, ರಾಜನೆಂದ ಮೇಲೆ ರಾಣಿ ಇರಲೇಬೇಕು ಇದ್ದಳು. ಆಕೆಗೊಬ್ಬ ನಿಷ್ಠಾವಂತ ಸೇವಕಿ, ರಾಣಿಯ
ಆಭರಣಗಳನ್ನೆಲ್ಲ ನೋಡಿಕೊಳ್ಳುವಾಕೆ, ಭದ್ರವಾಗಿಟ್ಟು ಅವನ್ನು ರಾಣಿಕೇಳಿದಾಗೆಲ್ಲ ಕೊಡುವಾಕೆ, ಆಕೆ ತೊಟ್ಟುಕೊಂಡಿದ್ದನ್ನು ನೋಡಿ ಸಂತೋಷಪಡುವಾಕೆ ಅವುಗಳನ್ನು ಸ್ವಚ್ಛವಾಗಿ ತೊಳೆದಿಡುವುದು, ಪಾಲಿಶ್ ಹಾಕಿಸುವದು ಆಕೆಯದ್ದೇ ಕೆಲಸ, ಒಟ್ಟಿ ನಲ್ಲಿ ಆಕೆ ರಾಣಿಯ ಮೂವಿಂಗ್ ಸೇಫ್‌ ಲಾಕರ್.

ಒಮ್ಮೆ ಸೇವಕಿ ರಾಣಿಯ ಆಭರಣಗಳನ್ನೆಲ್ಲ ಸ್ವಚ್ಛ ಮಾಡಲು ಆ ಕಾಲದ ಎಲ್ಲ ಪುಡಿಗಳು, ಮಿಶ್ರಣ, ಸೋಪುಗಳನ್ನು ತೆಗೆದು ಕೊಂಡು ಒಡವೆಗಳನ್ನೆಲ್ಲ ಒಂದು ಬಕೆಟ್‌ನಲ್ಲಿ ಹಾಕಿಕೊಂಡು ನದಿ ತಟಕ್ಕೆ ಒಯ್ದು ಸೇವಕಿ ಎಲ್ಲ ಆಭರಣಗಳನ್ನು ಬೇರೆ ಬೇರೆ ಯಾಗೇ ತಿಕ್ಕಿ ತೊಳೆದು, ಬ್ರಷ್‌ನಿಂದ ಸಂದು ಗೊಂದುಗಳ ಕೊಳೆಯನ್ನು ತೆಗೆಯಲು ಬ್ರಷ್ ಹಾಕಿ ಉಜ್ಜಿ ಉಜ್ಜಿ ತೊಳೆಯುವಾಗ ರಾಣಿಗೆ ಇಷ್ಟವಾದ ಒಂದು ಅಪರೂಪದ ಕೈ ಬೆರಳಿನ ಮುತ್ತಿನ ಉಂಗುರ ಕೈ ಜಾರಿ ನೀರಿನಲ್ಲಿ ಬಿದ್ದು ಹಿಡಿ, ಹಿಡಿಯುವಲ್ಲಿ ಮೆಲ್ಲಗೆ ದಾಸಿ ನೋಡು ನೋಡುತ್ತಿದ್ದಂತೆಯೇ ನದಿಯ ತಿಳಿ ನೀರಿನಲ್ಲಿ ಕೆಳಕೆಳಗೆ ಹೋಗುತ್ತಾ ನದಿಯ ತಳ ಸೇರಿತು.

ಉದಾಹರಣೆಗೆ ಟೈಟಾನಿಕ ಸಿನಿಮಾದ ಹೀರೋ, ತನ್ನ ನಾಯಕಿಯನ್ನು ನೀರಿನ ತೆಪ್ಪದ ಮೇಲೆ ಮಲಗಿಸಿ, ತಾನು, ಮಂಜುಗಡ್ಡೆಯ ನೀರಿನಲ್ಲಿ ನಿಂತಲ್ಲಿಯೇ ಪ್ರಾಣಬಿಟ್ಟು ಈಕೆ ನೋಡು ನೋಡುತ್ತಿದ್ದಂತೆ ಇಡೀ ದೇಹ ನೀರಿನೊಳಗೆ ಇಳಿ ಇಳಿಯುತ್ತಾ ದಡ ಸೇರುವದಿಲ್ಲವೇ? ಅಂಥ ಕರುಣಾಜನಕ ದೃಶ್ಯದಂತೆಯೇ ರಾಣಿಯ ಉಂಗುರವೂ ದಾಸಿಯ ಕಣ್ಣೆೆದುರೇ ನೀರಿನ ತಳ ಸೇರಿತು.

ದಾಸಿಗೆ ಗಾಬರಿಯಾಯಿತು. ರಾಣಿಯ ಇಷ್ಟದ ಉಂಗುರ ಅದು ಗಾಬರಿಯಾದ ಅವಳು, ಉಳಿದ ಆಭರಣಗಳನ್ನು ತೊಳೆದು ಬೇಗ ಬೇಗ ಅರಮನೆ ಸೇರಿದಳು. ಎರಡು ಮೂರು ದಿನ ಹೀಗೇ ಗಾಬರಿಯಲ್ಲೇ ಕಳೆದಳು. ರಾಣಿಗೆ ಹೇಳುವ ಧೈರ್ಯವಾಗಲೇ ಇಲ್ಲ. ಆಗಲೇ ಯಾವುದೋ ಒಂದು ಸಮಾರಂಭಕ್ಕೆ ರಾಜನ ಖಾಸಗಿ ಭೇಟಿಗಾಗಿ ಹೋಗುವಾಗ ಎಲ್ಲ ಆಭರಣಗಳನ್ನು ಧರಿಸಿದ ರಾಣಿ, ರಾಜನೇ ನೀಡಿದ ಆ ಮುತ್ತಿನ ಉಂಗುರ ಧರಿಸಲು, ದಾಸಿಯತ್ತ ಕೈಚಾಚಿದಳು, ದಾಸಿಗೆ ದಿಗಿಲಾಯಿತು ಆದರೂ, ಪೆಟ್ಟಿಗೆಯಲ್ಲೆಲ್ಲಾ ಹುಡುಕಾಡಿದಂತೆ ನಟಿಸಿದಳು, ಎಲ್ಲವನ್ನು ಎತ್ತಿ, ಸುರಿದು, ಬಗ್ಗಿಸಿ ನೊಡಿದರೂ ಉಂಗುರ ಕಾಣೆಯಾದಾಗ ಅದು ಕಳೆದಿದೆ ಎಂದೆ ತೀರ್ಮಾನಿಸಿ, ಮಹಾರಾಣಿಗೆ ಈ ಪ್ರಶ್ನೆ ಕೇಳಿದಳು, ಮಹಾರಾಣಿ ಒಂದು ವಸ್ತು ಎಲ್ಲಿದೆ ಎಂದು ಗೊತ್ತಿದ್ದರೆ ಅದು ಕಳೆದ ಹಾಗೆ
ಅಲ್ಲ, ಅಲ್ಲವೇ ಮಹಾರಾಣಿ ಏನು ಅದನ್ನು ಕಳೆದೆಯಾ ಅಥವಾ ಕಳ್ಳತನ ಮಾಡಿದೆಯಾ ಎಂದೇ ಗದರಿಸಿದಾಗ ಇಲ್ಲ ಮಹಾ ರಾಣಿ, ಅದು ಎಲ್ಲಿದೆ ಎಂದು ಗೊತ್ತಿದೆ ಹಾಗಾಗಿ ನೀವು ಅದನ್ನು ಕಳೆದಿಲ್ಲ ಎಂದು ಭಾವಿಸಬಾರದು, ಎಂದು ಸಮಾಜಾಯಿಶಿ ನೀಡಿದಳು, ಹೇಳು ಎಲ್ಲಿದೆ, ಗೊತ್ತಿದ್ದರೆ ತೆಗೆದು ಕೊಂಡು ಬಾ ನನಗೆ ಹೊತ್ತಾಗುತ್ತಿದೆ ಎಂದಳು, ಹೇಳಿದ ಮಾತು ಅದು ಎಲ್ಲಿದೆ ಎಂದರೆ ಕಳೆದ ಹಾಗಲ್ಲ ಅಲ್ಲವೆ? ಹಾಗಾದರೆ ಅದು ನದಿಯ ತಳದಲ್ಲಿದೆ ಎಂದು ಆದ ಅನಾಹುತವನ್ನು ವಿವರಿಸಿದಾಗ, ರಾಣಿ
ಸೇವಕಿಯ ಜಾಣ್ಮೆಗೆ ಮೆಚ್ಚಿದಳು, ಹಳೆಯ ವಿಶ್ವಾಸಿಕ ದಾಸಿಯಲ್ಲವೇ? ಕ್ಷಮಿಸಿಯೂ ಬಿಟ್ಟಳು.

ಆ ಮೇಲೆ ಆ ಉಂಗುರವನ್ನು ಹೊರ ತೆಗೆಯಲಾಯಿತೋ ಇಲ್ಲವೋ, ನಾ ಓದಿದ ಕಥೆಯಲ್ಲಿ ಇಲ್ಲ, ಹೀಗಾಗಿ ನನ್ನ ಈ ಲೇಖನದಲ್ಲಿ
ನಿಮಗದನ್ನು ಹೇಳಲಾರೆ ಸರೀನಾ? ಈ ಕಥೆ ಏಕೆ ನನಗೆ ನೆನಪಾಗಿ ನಿಮಗೆ ಹೇಳಬೇಕೆನಿಸಿತೆಂದರೆ, ನಮ್ಮ ಹಾಸ್ಯಕಾರರ ಭಾಷಣ ತಂಡದ ನನ್ನ ಶಿಷ್ಯ ಗಣದ ಅಗ್ರಜ ನರಸಿಂಹ ಜೋಶಿಯ ಮಾತುಗಳು, ಅವನು ತಂದೊಡ್ಡುವ ಸಮಸ್ಯೆಗಳು ಹೀಗೇ ಇರುತ್ತವೆ ‘ನಘರ್ ಕಾ ನ ಘಾಟಕಾ’ ನಮ್ಮ ಜೋಶಿಯೂ ಹೀಗೆಯೇ ಯಾರಾದರೂ ಪೆನ್ ಇದೆಯೇ ಎಂದು ಕೇಳಿದರೆ, ಎಂದೂ ಇಲ್ಲ ಎನ್ನುವುದಿಲ್ಲ.

ಇದೆ ಎನ್ನುತ್ತಾನೆ ಕೊಡಿ ಎಂದು ಅವರು, ತಮ್ಮ ಕೈಯಲ್ಲಿರುವ ಪೇಪರ್ ಕೆಳಗೆ ಹಾಸಿ ಸಹಿ ಮಾಡಲು ಅಣಿಯಾಗಿ, ಬಲಗೈಯನ್ನು ಪೆನ್ನಿಗಾಗಿ ನೀಡಿದರೆ ನಿನ್ನೆ ಬುಕ್ ಶಾಪ್‌ಗೆ ಹೋಗಿದ್ದೆ ಅಲ್ಲಿ ಹತ್ತು ರೂಪಾಯಿ ಪೆನ್ನಿನಿಂದ ಹಿಡಿದು ಎರಡು ಸಾವಿರ ಪೆನ್ನುಗಳ ವರೆಗೆ ಇದ್ದವು, ಎಲ್ಲ ಬಣ್ಣದವು, ಪತ್ತಿಪೆನ್, ಬಾಲ್‌ಪೆನ್, ಟೇಬಲ್ ಪೆನ್, ಎಲ್ಲ ವೆರೈಟಿ, ನನ್ನ ಬಳಿ ಹಣ ಇರಲಿಲ್ಲ ಏಕೆಂದರೆ, ಹಣ ಇಟ್ಟಿದ್ದ ಜೇಬಿನ ಅಂಗಿಬಿಟ್ಟು ನಾನು ಬೇರೆ ಶರ್ಟ್ ಹಾಕಿಕೊಂಡಿದ್ದೆ ಎಂದು ಬಿಡುತ್ತಾನೆ.

ಅಲ್ಲಿಗೆ ಅವರು, ಲೊಚ್‌ಗುಟ್ಟುತ್ತಾ ಬೇರೆ ಪೆನ್ನಿರುವವನ್ನು ಹುಡುಕುತ್ತಾ ಹೊರಡುತ್ತಾರೆ ಪಾಪ! ಮೊನ್ನೆ ಯಾರೋ ನಮ್ಮ ಹುಡುಗನಿಗೆ ಒಂದು ಕನ್ಯೆ ಇದ್ದರೆ ನೊಡ್ರಿ ಎಂದರು. ಕನ್ಯೆಯೇ ಫಸ್ಟ್‌ಕ್ಲಾಸ್ ಕನ್ಯೆಯಿದೆ, ಒಬ್ಬಳೆ ಮಗಳು, ಹುಡುಗಿಗೆ ತಂದೆ ಇಲ್ಲ ಆ ಹುಡುಗಿಗೂ ಬ್ಯಾಂಕನಲ್ಲೇ ನೌಕರಿ, ನಿಮ್ಮ ಜಾತಿಯವರೇ, ಎನ್ನುತ್ತಾನೆ. ಹೌದೆ? ಎಲ್ಲಿ ಯಾವ ಊರವರು, ಈ ಸಂಡೆ ಕನ್ಯೆ ನೋಡಲು ಹೋಗೋಣವೆ? ವಿಳಾಸ ಕೊಡಿ’ ಎಂದರೆ ಎಸ್.ಪುಣ್ಯ ಮಾಡಿರಬೇಕು ಆ ಹುಡುಗೀನ ಮಾಡಿಕೊಳ್ಳಲು, ಅಷ್ಟು
ಓದಿ, ನೌಕರಿ ಮಾಡುತ್ತಿದ್ದರೂ ಒಂದು ಚೂರು ಜಂಭವಿಲ್ಲ ಎನ್ನುತ್ತಾನೆ.

ಆಗ ವರನ ತಂದೆ ಹೌದೆ? ಇಷ್ಟು ದಿನ ಕಾದಿದ್ದೂ ಸಾರ್ಥಕವಾಯಿತು, ನಮ್ಮ ಹುಡುಗನಿಗೆ ಅಡಿಗೆ ಊಟದ್ದು ತುಂಬಾ ತೊಂದರೆ ಆಗಿದೆ, ಬೇಗ ಈ ಕರೋನಾ ಮುಗಿದ ಕೂಡಲೇ ಡೇಟ್ ಫಿಕ್ಸ್‌ ಮಾಡೋಣ ಎನ್ನುತ್ತಾರೆನ್ನಿ’ ಅಡಿಗೆ ಬರುತ್ತದೆಯೋ ಎಂದು ಕೇಳು ತ್ತೀರಾ? ಪಂಚಭಕ್ಷ್ಯ ಪರಮಾನ್‌ನ್‌ ಮಾಡ್ತಾಳೆ ಸ್ವಾಮಿ, ಇಂಥಾದ್ದು ಬರಲ್ಲ ಅನ್ನೊ ಹಾಗಿಲ್ಲರೀ, ಟಿ.ವಿ.ಲಿ ಬರೋ ಹೊಸರುಚಿ ಕಾರ್ಯಕ್ರಮಕ್ಕೆ ಒಮ್ಮೆ ಗೆಸ್ಟ್‌ ಬೇರೆ ಆಗಿ ಹೋಗಿದ್ಲು ಗೊತ್ತಾ, ಎಲ್ಲ ಹಬ್ಬ ಹುಣ್ಣಿಮೆಗಳನ್ನೂ ವೃತ, ನೇಮಗಳನ್ನೂ ಮಾಡ್ತಾಳೆ, ವರನ ತಂದೆಗೆ ಸ್ವರ್ಗ ಮೂರು ಗೇಣು ಹೌದೇ? ನಡೀರಿ ಅವರಿರುವಲ್ಲಿಗೆ ಹೋಗೋಣಾ, ಟ್ಯಾಕ್ಸಿ ಕರೆಯಲಾ? ಎನ್ನುತ್ತಾರೆ ಪಾಪ!

ಆಗ ಜೋಶಿ ಇಂಥ ಹುಡುಗೀನ ಬಿಡ್ತಾರೇನ್ರಿ ಯಾರಾದ್ರೂ ಈ ಆರು ತಿಂಗಳ ಹಿಂದೆ ಆ ಹುಡುಗಿದು ಮದುವೆ ಆತು, ನನಗೆ ಹೇಳಲು ನೀವು ಲೇಟ್ ಮಾಡಿದ್ರಿ ಅಂದು ಬಿಡುತ್ತಾನೆ, ಪಾಪ, ಅವರು ಆಟೋ ಎಂದು ಕೂಗಿ, ಅದನ್ನು ಏರಿ ಈತನಿಂದ ದೂರ ಹೋಗಿ ಬಿಡುತ್ತಾರೆ. ಯಾರಾದರೂ ಒಂದು ಒಳ್ಳೆ ಏರಿಯಾದಲ್ಲಿ ಬಾಡಿಗೆಗೆ ಮನೆಯಿದ್ದರೆ ಹೇಳೀಪ್ಪಾ ಎಂದರೆ ಮನೆನಾ? ಫಸ್ಟ್ ಕ್ಲಾಸ್
ಮನೆಯಿದೆ.

60*40 ಸೈಟ್‌ನಲ್ಲಿದೆ ಮನೆ, ಮೂರು ಬೆಡ್ ರೂಂ, ಒಳ್ಳೇ ಲೊಕ್ಯಾಲಿಟಿ, ಸುತ್ತ ಎಲ್ಲ ಆಫೀಸರ‍್ಸ್ ಮನೆಗಳು, ಪುಟ್ಟದಾಗಿ ಗಾರ್ಡನ್ ಇದೆ. ಮನೆ ಮುಂದೆ ಇಪ್ಪತ್ನಾಲ್ಕು ಗಂಟೆ ನೀರು, ಮಡಿ ನೀರು ಬೇಕಾದರೆ ಕಂಪೌಂಡು ಒಳಗಡೆನೇ ಬಾ ಇದೆ. ಮನೆಗೆ, ಐವತ್ತು
ಹೆಜ್ಜೆಲಿ ರಾಯರಮಠ, ಆಂಜನೇಯ ದೇವಸ್ಥಾನ, ಮನೆ ಬಳಿ ಆಟೋ ಸ್ಟ್ಯಾಂಡ್, ಸಿಟಿ ಬಸ್ ಸ್ಟಾಪ್ ಎನ್ನುತ್ತಾನೆ, ಪಾಪ, ಅವರು, ‘ಅಯ್ಯೋ ಸಾರ್, ಓನರ್ ನಂಬರ್ ಕೊಡಿ, ಬಾಡಿಗೆ ಎಷ್ಟಾದರೂ ಆಗಲಿ, ಅಡ್ವಾನ್ಸ್ ಕೊಡ್ತೆನೆ, ಡಿಪಾಸಿಟ್ಟು ಎಷ್ಟು? ಅಂದರೆ, ಅದು ಬಾಡಿಗೆಗೆ ಕೊಡಲ್ಲ, ಖರೀದಿಗೇ ಇದೆ ಎಂಬತ್ತು ಲಕ್ಷ ಹೇಳ್ತಾರೆ, ನಿನ್ನೆಯೇ ಯಾರೋ ಖರೀದಿ ಮಾಡಿದ್ರು ಅವರೇ ಇರಲು ಬರ್ತಾರೆ, ಬಾಡಿಗೆಗೆ ಕೊಡಲ್ಲ ಎಂದು ಹೊರಟು ಬಿಡುತ್ತಾನೆ.

ಹೀಗೆ, ಯಾರು ಏನು ಕೇಳಿದರೂ ಜೋಶಿ ಬಳಿ ಸಲಹೆ, ಮಾರ್ಗದರ್ಶನ, ಕನಸು, ಕಲ್ಪನೆಗಳಿವೆ, ಕಾರ್ಯರೂಪಕಕ್ಕೆ ಬರುವುದು ಮಾತ್ರ ಯಾವೂ ಇಲ್ಲ. ಎಲ್ಲ ಕೆಲಸಗಳನ್ನು ಮಾಡುವ ತಾಕತ್ತು, ಬುದ್ದಿ ಕೌಶಲ್ಯದೆ ಆದರೆ, ಆ ಕೆಲಸ ಶುರುವಾಗುವದೇ ಇಲ್ಲ. ಇದೊಂಥರ, ಪ್ರಚಾರ, ಪೋಸ್ಟರ್, ಕಟೌಟ್, ನುರಿತ, ಪ್ರಸಿದ್ಧ, ನಟರಿರುವ ಅದ್ದೂರಿಯ ಕನ್ನಡ ಚಿತ್ರದ್ದಂತೆ, ಟಿಕೇಟ್‌ಕೊಂಡು ಒಳ ಹೊಕ್ಕರೆ ಕಥೆಯೇ ಇಲ್ಲ, ಅಸಂಬದ್ಧ ಸಂಭಾಷಣೆ, ಕೆಟ್ಟ ಹಾಡುಗಳು, ತಲೆಬುಡಲ್ಲದ ಕ್ಲೈಮಾಕ್ಸ್‌ ಏನಿದು? ಎಂದರೆ ಪಾರ್ಟ ಟೂ ಬರುತ್ತೇ ಅದರಲ್ಲಿ ನಿರೀಕ್ಷಿಸಿ ಎಂದಂತೆ.

ನನಗೆ ಡ್ರೆಸ್ ‌ಕೋಡ್ ಗೊತ್ತಿಲ್ಲ, ಇಂಥದೇ ಬ್ರಾಂಡಿನ ಬಟ್ಟೆ, ಇಂಥವನೇ ಟೇಲರ್ ಹೊಲಿಯಬೇಕು, ಇಂಥದೆ ಸಂದರ್ಭಕ್ಕೆ ಇಂಥದೇ ಬಟ್ಟೆ, ಕಲರ್ ಇರಬೇಕೆಂಬ ರೂಲ್ಸ್‌, ಖಾಯಿಶ್, ಟೇಸ್ಟ್ ಇರುವ ವ್ಯಕ್ತಿಯಲ್ಲ ನಾನು ಹೀಗಾಗಿ ನನ್ನ ಬಟ್ಟೆಗಳು ದೊಗಳೆ ಬಗಳೆ, ಡಾರ್ಕ ಕಲರ್ ಆಗಿರ‌್ತವೆ ಒಮ್ಮೆ ಜೋ ನನ್ನ ಡ್ರೆಸ್ ನೋಡಿ ಸರ್ ಬನ್ನಿ ನನ್ನ ಜೊತೆ ಬೆಸ್ಟ್‌ ಟೇಲರ್ ಇದ್ದಾನೆ, ನಮ್ಮ ಮೈ ಅಳತೆಗೆ ತಕ್ಕುದಾದ್ದೇ ಹೊಲಿತಾನೆ, ಬಟ್ಟೆ ಯಾವುದೇ ಆಗಲಿ, ಫಿಟಿಂಗ್ ಚೆನ್ನಾಗಿದ್ದರೆ ಎಂಥವರಿದ್ರೂ ಒಪ್ಪುತ್ತದೆ. ಡಾ.ರಾಜ ಕುಮಾರ್ ಎಲ್ಲ ಸಿನಿಮಾಗಳಿಗೂ ಒಬ್ಬನೇ ಟೇಲರ್, ಉತಾ ಬಚ್ಚನ್‌ಗೂ ಹಾಗೆ ಅವರ ಚಿತ್ರಗಳಿಗೆ ಅವರ ಡ್ರೆಸ್ಸೆ ಸಕ್ಸಸ್ ತಂದು ಕೊಟ್ಟಿರೋದು ಎಂದು ನನ್ನ ಒಪ್ಪಿಸಿ, ನಾಲ್ಕೆೆದು ಕಲರ್ ಬಟ್ಟೆ ಆರಿಸಿ, ಕೊಳ್ಳುವಂತೆ ಹುರಿದುಂಬಿಸಿ, ಕೊಡಿಸಿಯೂ ಬಿಟ್ಟ.
ಬಟ್ಟೆ ಇಟ್ಟುಕೊಂಡು ತಿಂಗಳು ಕಾದೆ, ಟೇಲರ್ ಊರಲ್ಲಿ ಇಲ್ಲ. ಅಂಗಡಿ ಚೇಂಜ ಮಾಡ್ಯಾನೆ, ಕರೋನಾ ಆಗಿದೆಯಂತೆ ಟೇಲರ್‌ಗೆ, ಮಗನ ಲಗ್ನವಂತೆ, ಹೊಸ ಟೈಪ್ ಸ್ಟಿಚಿಂಗ್ ಕಲಿಯಲು ಬಾಂಬೆಗೆ ಹೋಗಿದ್ದಾನಂತೆ ಎಂದು ಮತ್ತೊಂದು ತಿಂಗಳು ಹೋಯಿತು.

ಹೊಸಬಟ್ಟೆ ಹೊಲಿಗೆ ಕಾಣದೇ ಹಳೆಯದಾಗಲಾರಂಭಿಸಿತು. ಕಡೆಗೊಂದು ದಿನ ಹೊಸ ಅಂಗಡಿ ಪತ್ತೆ ಹಚ್ಚಿಕೊಂಡು ಬಂದು ‘ನಡೀರಿ ಸರ್ ಹೋಗೋಣವೆಂದ, ಹೋದೆವು. ಟೇಲರ್ ಇರದೇ ಅವರ ಮಗ ಹೊಲಿಯುತ್ತಾ ಕೂತಿದ್ದ ಅಪ್ಪನ್ನ ಕರೀಯಪ್ಪಾ, ಸರ್ ಸ್ಟೇಜ್ ಪ್ರೋಗ್ರಾಂಗೆ ಬೆಸ್ಟ್‌ ಬಟ್ಟೆ ಹೊಲಿಯಬೇಕು ಎಂದು ಮಗನಿಗೆ ಜೋಶಿ ಹೇಳಿದ್ರೆ ಮಗ ಗೋಡೆ ಮೇಲಿನ ಫೋಟೊ
ನೋಡಲಾರಂಭಿಸಿದ.

ನೋಡಿದರೆ ಅವರ ತಂದೆಯ ಫೋಟೊ ಹಾರ ಹಾಕಿಬಿಟ್ಟಿದ್ದಾರೆ. ನಮ್ಮಪ್ಪ ತೀರಿಕೊಂಡು ತಿಂಗಳಾಯಿತು ಸಾರ್, ಈಗ ನಾನೇ ಅಂಗಡಿ ನಡೆಸ್ತಿದೀನಿ ಎಂದಾಗ ಜೋಶಿ ಮೇಲೆ ನೋಡುತ್ತಾ ಸತ್ತ ಟೇಲರ್‌ನನ್ನು ಮೇಲೆ ಆಕಾಶದ ಮೋಡಗಳಲ್ಲಿ ಹುಡುಕಲಾ ರಂಭಿಸಿದ, ನಾನು ಮೂರು ಮುಚ್ಚಿಕೊಂಡು ಸುಮ್ಮನೆ ಮನೆ ಸೇರಿದೆ.

ಇಂಥ ಮನೋಭಾವವನ್ನು ನೀವು ಯಾರಲ್ಲಿಯಾದರೂ ಕಂಡಿದ್ದರೆ ಇದಕ್ಕೆ ಏನಾದರು ಮೆಡಿಕಲ್ ಶಬ್ದದೆಯೇ? ಇದು ರೋಗವೇ, ಹವ್ಯಾಸವೇ , ಸ್ವಭಾವವೇ ಇದರ ಚಿಕಿತ್ಸೆಯೇನು ಎಂಬುದನ್ನು ನನಗೆ ತಿಳಿಸಿದರೆ ತಿದ್ದಲು ಪ್ರಯತ್ನಿಸುತ್ತೇನೆ. ಒಟ್ಟಿನಲ್ಲಿ ಓದು ವವರಿಗೆ ಕೇಳುವವರಿಗೆ ಇದು ತಮಾಷೆಯ ಪ್ರಸಂಗ ಎನಿಸಿದರೆ, ಅನುಭವಿಸುವವರಿಗೆ ರಣರಂಗ ಎನಿಸುತ್ತದೆ ಅಲ್ಲವೇ?