ಜೆರುಸಲೇಂ: ಇಸ್ರೇಲ್ ಸೇನೆ ಮೂರು ತಿಂಗಳ ಹಿಂದೆ ಗಾಜಾ ಮೇಲೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ (Israel Airstrike), ಗಾಜಾದಲ್ಲಿರುವ ಹಮಾಸ್ ಸರ್ಕಾರದ ಮುಖ್ಯಸ್ಥ ರಾಹ್ವಿ ಮುಶ್ತಾಹಾ(Rawhi Mushtaha)ನ ಹತ್ಯೆಗೀಡಾಗಿದ್ದಾನೆ ಎಂಬ ವರದಿ ಬಯಲಾಗಿದೆ. ಉಗ್ರರ ಅಡಗುತಾಣ ಮತ್ತು ಕಂಟ್ರೋಲ್ ಸೆಂಟರ್ ಆಗಿರುವ ಉತ್ತರ ಗಾಜಾವನ್ನು ಗುರಿಯಾಗಿಸಿ ಇಸ್ರೇಲ್ ಈ ವೈಮಾನಿಕ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಮುಶ್ತಾಹಾ ಬಲಿಯಾಗಿದ್ದಾನೆ ಎನ್ನಲಾಗಿದೆ.
ವೈಮಾನಿಕ ದಾಳಿ ನಡೆದ ಪ್ರದೇಶದಲ್ಲಿ ಮುಶ್ತಾಹಾ ಮತ್ತು ಕಮಾಂಡರ್‌ಗಳಾದ ಸಮೇಹ್ ಅಲ್-ಸಿರಾಜ್ ಮತ್ತು ಸಮಿ ಔದೆ ಅಲ್ಲಿ ಆಶ್ರಯ ಪಡೆದಿದ್ದರು. ಮುಷ್ತಾಹಾ ಹಮಾಸ್‌ನ ಅತ್ಯಂತ ಹಿರಿಯ ಮುಖಂಡರಲ್ಲಿ ಒಬ್ಬನಾಗಿದ್ದು, ಹಮಾಸ್‌ನ ಪಡೆ ನಿಯೋಜನೆಗೆ ಸಂಬಂಧಿಸಿದ ನಿರ್ಧಾರಗಳ ಈತ ತೆಗೆದುಕೊಳ್ಳುತ್ತಿದ್ದ. ಹಮಾಸ್‌ನ ರಾಜಕೀಯ ಬ್ಯೂರೋದ ಭದ್ರತಾ ಖಾತೆಯನ್ನು ಸಮೇಹ್ ಅಲ್-ಸಿರಾಜ್ ನಿರ್ವಹಿಸುತ್ತಿದ್ದ.
ಮುಷ್ತಾಹಾ ಹಮಾಸ್‌ನ ಉನ್ನತ ನಾಯಕ ಯಾಹ್ಯಾ ಸಿನ್ವಾರ್ ಅವರ ನಿಕಟ ಸಹವರ್ತಿ ಎಂದು ವಿವರಿಸಲಾಗಿದೆ. ಇನ್ನು ಸಿನ್ವಾರ್ ಜೀವಂತವಾಗಿದ್ದಾನೆ ಮತ್ತು ಗಾಜಾದಲ್ಲಿ ಅಡಗಿಕೊಂಡಿದ್ದಾನೆ ಎಂದು ಭಾವಿಸಲಾಗಿದೆ.
ಭಯೋತ್ಪಾದಕರ ವಿರುದ್ದ ಇಸ್ರೇಲ್ ಸಮರ ಸಾರಿದೆ. ಲೆಬನಾನ್ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಈಗಾಗಲೇ ಹೆಜ್ಬುಲ್ಲಾ ಮುಖಂಡ ಹಸನ್ ನಸ್ರಲ್ಲಾ(Hassan Nasrallah) ಸೇರಿದಂತೆ ಪ್ರಮುಖ ನಾಯಕರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಪ್ಯಾಲಸ್ತೀನ್‌ನ ಉಗ್ರಗಾಮಿ ಗುಂಪು ಹಮಾಸ್ ಪ್ರಕಟಣೆ ಹೊರಡಿಸಿ, ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ತಮ್ಮ ನಾಯಕ ಫತಾಹ್ ಶರೀಫ್ ಅಬು ಅಲ್-ಅಮೀನ್ (Fatah Sharif Abu al-Amine) ಸಾವನ್ನಪ್ಪಿರುವುದಾಗಿ ತಿಳಿಸಿತ್ತು.
ಹಮಾಸ್ ನಾಯಕ ಫತಾಹ್ ಶರೀಫ್ ಅಬು ಅಲ್-ಅಮೀನ್ ಮೃತಪಟ್ಟಿದ್ದಾರೆ. ದಕ್ಷಿಣ ಲೆಬನಾನ್‌ನ ಅಲ್-ಬಾಸ್ ಶಿಬಿರದಲ್ಲಿರುವ ಅವರ ಮನೆಯ ಮೇಲೆ ನಡೆದ ಇಸ್ರೇಲ್ ಸೇನೆಯ ವಾಯು ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ತಿಳಿಸಿದೆ.
ಫತಾಹ್ ಶರೀಫ್ ಅಬು ಅಲ್-ಅಮೀನ್ ಜತೆಗೆ ಆತನ ಪತ್ನಿ, ಮಗ ಮತ್ತು ಮಗಳೊ ಮೃತಪಟ್ಟಿದ್ದಾರೆ. ಟೈರ್ ನಗರದ ಬಳಿಯ ಅಲ್-ಬಾಸ್ ಮೇಲೆ ವಾಯು ದಾಳಿ ನಡೆದಿದ್ದು, ಈ ಶಿಬಿರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಇದೇ ಮೊದಲು ಎಂದು ವರದಿಯೊಂದು ಹೇಳಿದೆ. ಬೈರುತ್‌ನ ಕೋಲಾ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದ ದಾಳಿಯಲ್ಲಿ ತನ್ನ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಪ್ಯಾಲಸ್ತೀನ್ ಹೇಳಿದ ಕೆಲವೇ ಗಂಟೆಗಳ ನಂತರ ಹಮಾಸ್ ಈ ಹೇಳಿಕೆಯನ್ನು ಹೊರಡಿಸಿದೆ.
ಸುಮಾರು ಒಂದು ವರ್ಷದ ಹಿಂದೆಯೇ ಇಸ್ರೇಲ್ ಮತ್ತು ಹಮಾಸ್ ಉಗ್ರರ ಮಧ್ಯೆ ಯುದ್ಧ ಆರಂಭವಾಗಿದ್ದು, ಈಗಲೂ ಮುಂದುವರಿದಿದೆ. ಇಸ್ರೇಲ್ ಹಮಾಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ವರ್ಷದ ಜನವರಿಯಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್ ಉಪ ನಾಯಕ ಸಲೇಹ್ ಅಲ್-ಅರೂರಿ ಮತ್ತು ಇತರ ಆರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದರು. ಇನ್ನು ಆಗಸ್ಟ್‌ನಲ್ಲಿ ದಕ್ಷಿಣ ಲೆಬನಾನ್ ನಗರ ಸಿಡೋನ್‌ನಲ್ಲಿ ಇಸ್ರೇಲ್ ದಾಳಿ ನಡೆಸಿ ಹಮಾಸ್ ಕಮಾಂಡರ್ ಸಮೀರ್ ಅಲ್-ಹಜ್‌ನನ್ನು ಹತ್ಯೆಗೈದಿದೆ.
ಈ ಸುದ್ದಿಯನ್ನೂ ಓದಿ: Iran Israel War: ಇರಾನ್-ಇಸ್ರೇಲ್ ಬಳಿ ಎಂಥೆಂಥ ಶಸ್ತ್ರಾಸ್ತ್ರಗಳಿವೆ? ಏನಿವುಗಳ ಸಾಮರ್ಥ್ಯ?