Saturday, 23rd November 2024

Classical Languages: 5 ಭಾಷೆಗಳಿಗೆ ‘ಶಾಸ್ತ್ರೀಯ’ ಸ್ಥಾನಮಾನ ನೀಡಿದ ಕೇಂದ್ರ

Classical Languages

ನವದೆಹಲಿ: ಕೇಂದ್ರ ಸಚಿವ ಸಂಪುಟ (Union Cabinet)ವು ಇನ್ನೂ 5 ಭಾಷೆಗಳನ್ನು ʼಶಾಸ್ತ್ರೀಯʼ (Classical Languages) ಎಂದು ಗುರುತಿಸಲು ಅನುಮೋದನೆ ನೀಡಿದೆ. ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬೆಂಗಾಲಿ ಭಾಷೆಗಳನ್ನು ಈ ಪ್ರತಿಷ್ಠಿತ ವಿಭಾಗದಲ್ಲಿ ಸೇರಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಗುರುವಾರ ಹೇಳಿದ್ದಾರೆ.

ಈಗಾಗಲೇ ಕನ್ನಡ ಸೇರಿದಂತೆ ಒಟ್ಟು 6 ಭಾಷೆಗಳನ್ನು ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಾಗಿದೆ. ಕನ್ನಡ, ತಮಿಳು, ಸಂಸ್ಕೃತ, ತೆಲುಗು, ಮಲಯಾಳಂ ಮತ್ತು ಒಡಿಯಾ ಶಾಸ್ತ್ರೀಯ ಸ್ಥಾನಮಾನ ಪಡೆದ ಆ 6 ಭಾಷೆಗಳು. ಮೊದಲ ಬಾರಿಗೆ 2004ರಲ್ಲಿ ತಮಿಳಿಗೆ ಈ ‍ಸ್ಥಾನಮಾನ ದೊರೆತಿದ್ದರೆ ಕೊನೆಯದಾಗಿ 2014ರಲ್ಲಿ ಒಡಿಯಾ ಶಾಸ್ತ್ರೀಯ ಭಾಷೆಯಾಗಿ ಗುರುತಿಸ್ಪಟ್ಟಿತ್ತು.

ಅಶ್ವಿನಿ ವೈಷ್ಣವ್ ಹೇಳಿದ್ದೇನು?

ʼʼಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಭಾರತೀಯ ಭಾಷೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಇಂದು 5 ಭಾಷೆಗಳಾದ ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬೆಂಗಾಲಿಯನ್ನು ಶಾಸ್ತ್ರೀಯ ಭಾಷೆಗಳಾಗಿ ಅಂಗೀಕರಿಸಲಾಗಿದೆʼʼ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಧನ್ಯವಾದ ತಿಳಿಸಿದ ಹಿಮಂತ ಬಿಸ್ವಾ ಶರ್ಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಸ್ಸಾಮಿಯನ್ನು ಶಾಸ್ತ್ರೀಯ ಭಾಷೆಯಾಗಿ ಸೇರ್ಪಡೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. “ಅಸ್ಸಾಮಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡುವ ಐತಿಹಾಸಿಕ ನಿರ್ಧಾರಕ್ಕಾಗಿ ಅಸ್ಸಾಂನ ಜನರ ಪರವಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಇಡೀ ಕೇಂದ್ರ ಸಚಿವ ಸಂಪುಟಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದು ಹಿಮಂತ ಬಿಸ್ವಾ ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಇಂದಿನ ನಿರ್ಧಾರದೊಂದಿಗೆ ನಮ್ಮ ಪ್ರೀತಿಯ ಮಾತೃಭಾಷೆಯನ್ನು ಉತ್ತಮವಾಗಿ ಸಂರಕ್ಷಿಸಲು ನಮಗೆ ಸಾಧ್ಯವಾಗುತ್ತದೆ. ಇದು ನಮ್ಮ ಸಮಾಜವನ್ನು ಒಂದುಗೂಡಿಸುವುದಲ್ಲದೆ, ಅಸ್ಸಾಂನ ಸಂತರು, ಚಿಂತಕರು, ಬರಹಗಾರರು ಮತ್ತು ತತ್ವಜ್ಞಾನಿಗಳ ಪ್ರಾಚೀನ ಜ್ಞಾನದ ಕೊಂಡಿಯನ್ನು ರೂಪಿಸುತ್ತದೆʼʼ ಎಂದಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಶಾಸ್ತ್ರೀಯ ಭಾಷೆಗಳ ಸಂಖ್ಯೆ 11ಕ್ಕೆ ಏರಿದೆ.

ಶಾಸ್ತ್ರೀಯ ಭಾಷೆಯ ಮಾನದಂಡ

ಶಾಸ್ತ್ರೀಯ ಭಾಷೆಯ ಮಾನ್ಯತೆಯು ಭಾಷಾ ತಜ್ಞರ ಸಮಿತಿಯು ಸ್ಥಾಪಿಸಿದ ಮಾನದಂಡಗಳನ್ನು ಆಧರಿಸಿದೆ. ಸಮಿತಿಯ ಪ್ರಕಾರ ಒಂದು ಭಾಷೆಯನ್ನು ʼಶಾಸ್ತ್ರೀಯʼ ಎಂದು ಪರಿಗಣಿಸಲು ಈ ಕೆಳಗಿನ ಪರಿಷ್ಕೃತ ಮಾನದಂಡಗಳನ್ನು ಪೂರೈಸಬೇಕು:

ಹೆಚ್ಚಿನ ಪ್ರಾಚೀನತೆ: ಆರಂಭಿಕ ಪಠ್ಯಗಳು ಮತ್ತು ದಾಖಲಾದ ಇತಿಹಾಸವು 1500-2000 ವರ್ಷಗಳಷ್ಟು ಪ್ರಾಚೀನತೆ ಹೊಂದಿರಬೇಕು.

ಪ್ರಾಚೀನ ಸಾಹಿತ್ಯ: ಪ್ರಾಚೀನ ಸಾಹಿತ್ಯ ಅಥವಾ ಪಠ್ಯಗಳ ಒಂದು ಗುಂಪು ಅಸ್ತಿತ್ವದಲ್ಲಿರಬೇಕು.

ಜ್ಞಾನ ಪಠ್ಯಗಳು: ಕಾವ್ಯದ ಜತೆಗೆ ಭಾಷೆ ಜ್ಞಾನ ಪಠ್ಯಗಳು, ಶಾಸನಶಾಸ್ತ್ರೀಯ ಮತ್ತು ಶಾಸನಾತ್ಮಕ ಪುರಾವೆಗಳನ್ನು ಒಳಗೊಂಡಂತೆ ಗದ್ಯದ ಸಂಗ್ರಹವನ್ನು ಹೊಂದಿರಬೇಕು.

ವಿಭಿನ್ನ ವಿಕಸನ: ಶಾಸ್ತ್ರೀಯ ಭಾಷೆ ಮತ್ತು ಅದರ ಸಾಹಿತ್ಯವು ಅದರ ಆಧುನಿಕ ರೂಪದಿಂದ ಭಿನ್ನವಾಗಿರಬಹುದು ಅಥವಾ ಅದು ಹೊಸ ರೂಪಗಳಾಗಿ ವಿಕಸನಗೊಂಡಿರಬಹುದು.

ಈ ಸುದ್ದಿಯನ್ನೂ ಓದಿ: Union Cabinet: ರೈಲ್ವೆ ನೌಕರರಿಗೆ ಗುಡ್‌ನ್ಯೂಸ್‌; ಬೋನಸ್‌ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ