Monday, 7th October 2024

Tirupati Laddu Row: ತಿರುಪತಿ ಲಡ್ಡು ವಿವಾದ; ಹೊಸ SIT ರಚಿಸಿ ಸುಪ್ರೀಂ ಮಹತ್ವದ ಆದೇಶ

Tirupati Laddu Row

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ತಿರುಪತಿ ತಿರುಮಲ ದೇವಸ್ಥಾನದ ಲಡ್ಡು (Tirupati Laddu Row) ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌(Supreme Court) ಮಹತ್ವದ ಆದೇಶ ಹೊರಡಿಸಿದ್ದು, ಪ್ರಕರಣ ತನಿಖೆಯನ್ನು ರಾಜ್ಯದಿಂದ ಸ್ವತಂತ್ರ ಸಂಸ್ಥೆಗೆ ವರ್ಗಾಯಿಸಿದೆ. ಲಡ್ಡು ವಿವಾದದ ತನಿಖೆ ನಡೆಸಲೆಂದು ಸುಪ್ರೀಂಕೋರ್ಟ್‌ ಹೊಸದಾದ ಐವರ ವಿಶೇಷ ತನಿಖಾ ತಂಡ(SIT)ವನ್ನು ರಚಿಸಿದೆ.

ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿಆರ್‌ ಗವಾಯಿ ಮತ್ತು ಕೆ.ವಿ. ವಿಶ್ವನಾಥನ್‌ ಇದ್ದ ನ್ಯಾಯಪೀಠ, ಸ್ವತಂತ್ರ ತನಿಖೆಗೆ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್‌ ಮತ್ತು FSSAI ಅಧಿಕಾರಿಗಳನ್ನು ಹೊಂದಿರುವ ಐವರ ವಿಶೇಷ ತನಿಖಾ ತಂಡವನ್ನು ರಚಿಸಿದ ಕೋರ್ಟ್‌ ಪ್ರಕರಣವನ್ನು ಅದಕ್ಕೆ ಹಸ್ತಾಂತರಿಸಿದೆ. ಅಲ್ಲದೇ ಈ ಪ್ರಕರಣದಲ್ಲಿ ರಾಜಕೀಯ ಕೆಸರೆರಚಾಟ ಬೇಡ. ರಾಜಕೀಯ ಸಮರಕ್ಕೆ ಕೋರ್ಟ್‌ ಅನ್ನು ಯುದ್ಧಭೂಮಿಯನ್ನಾಗಿ ಬಳಸಿಕೊಳ್ಳಲು ನಾವು ಅನುಮತಿ ನೀಡುವುದಿಲ್ಲ ಎಂದು ಕೋರ್ಟ್‌ ಖಡಕ್‌ ಆಗಿ ಹೇಳಿದೆ.

ಈ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಪತಿಯ ಪವಿತ್ರ ಪ್ರಸಾದವನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂದು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತದಲ್ಲಿ ತಿರುಪತಿ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಆಂಧ್ರ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ (Special Investigation Team)ವನ್ನು ರಚಿಸಿದೆ. ಇತ್ತ ಜಗನ್ ಮೋಹನ್ ರೆಡ್ಡಿ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ತಿರುಪತಿ ಲಡ್ಡು ಪ್ರಸಾದದ ಬಗ್ಗೆ ಸಿಎಂ ನಾಯ್ಡು ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ಈ ಸುದ್ದಿಯನ್ನೂ ಓದಿ: Tirupati Laddu Row : ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ಎಸ್ಐಟಿ ತನಿಖೆ ತಾತ್ಕಾಲಿಕ ಸ್ಥಗಿತ