ಗ್ವಾಲಿಯರ್: ಪ್ರವಾಸಿ ಬಾಂಗ್ಲಾಶದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಜೋಶ್‌ನಲ್ಲಿರುವ ಭಾರತ ತಂಡ ಈಗ ಚುಕಟು ಕ್ರಿಕೆಟ್ ಸರಣಿ ಆಡಲು ಮುಂದಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯ(IND vs BAN T20) ಮೊದಲ ಪಂದ್ಯ ಅ.6 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ(Gwalior) ನಡೆಯಲಿದೆ. 14 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದಕ್ಕೆ ಮಾಧವ್ರಾವ್ ಸಿಂಧಿಯಾ ಸ್ಟೇಡಿಯಂ ಆತಿಥ್ಯ ವಹಿಸಿಕೊಳ್ಳುತ್ತಿದೆ. ಆದರೆ, ಈ ಪಂದ್ಯಕ್ಕೆ ಬಂದ್ ಬಿಸಿ ತಟ್ಟಿದೆ. ಮೂಲಗಳ ಪ್ರಕಾರ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ.
ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯವನ್ನು ವಿರೋಧಿಸಿ, ಪಂದ್ಯ ನಡೆಯುವ ದಿನ(ಅ.6)ದಂದು ಗ್ವಾಲಿಯರ್ ಬಂದ್ ಮಾಡಲು ಹಿಂದು ಮಹಾಸಭಾ ಕರೆ ನೀಡಿದೆ. ಪಂದ್ಯವನ್ನು ರದ್ದು ಮಾಡಬೇಕೆಂದು ಹಿಂದು ಮಹಾಸಭಾದ ಉಪಾಧ್ಯಕ್ಷ ಜೈವೀರ್ ಭಾರಾಧ್ವಾಜ್, ಕೇಂದ್ರ ಸರ್ಕಾರ ಮತ್ತು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಪಂದ್ಯ ನಡೆಸುವ ಸಾಹಸಕ್ಕೆ ಕೈ ಹಾಕಿದರೆ ಇಡೀ ಗ್ವಾಲಿಯರ್ ನಗರವನ್ನು ಬಂದ್ ಮಾಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಪಿಚ್ ಅಗೆಯುವ ಮೂಲಕ ಪಂದ್ಯ ನಡೆಯದಂತೆ ತಡೆಯುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಇದು ಬಿಸಿಸಿಐಗೆ ಹೆಚ್ಚಿನ ತಾಪತ್ರಯ ಉಂಟು ಮಾಡಿದೆ.
ಇದನ್ನೂ ಓದಿ IND vs BAN: ಮುರಳೀಧರನ್ ವಿಶ್ವ ದಾಖಲೆ ಸರಿಗಟ್ಟಿದ ಅಶ್ವಿನ್
ಜಿಹಾದಿಗಳಿಂದ ಹಿಂದುಗಳ ಹತ್ಯೆ ನಡೆದ ದೇಶದ ವಿರುದ್ಧ ಪಂದ್ಯ ಆಡುವುದನ್ನು ನಾವು ಒಪ್ಪಿವುದಿಲ್ಲ. ಪ್ರತಿ ಮನೆ, ಅಂಗಡಿಯ ಬಾಗಿಲಿಗೆ ತೆರಳಿ ಬಂದ್ ಯಶಸ್ವಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಜೈವೀರ್ ಭಾರಾಧ್ವಾಜ್ ಹೇಳಿದ್ದಾರೆ. ಬಿಸಿಸಿಐ ಮುಂದಿರುವ ಸದ್ಯದ ಆಯ್ಕೆ ಎಂದರೆ ಪಂದ್ಯದ ತಾಣವನ್ನು ಬದಲಿಸುವುದು. ದ್ವಿತೀಯ ಪಂದ್ಯ ನಿಗದಿಯಾಗಿರುವ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ನಡೆಸಬಹುದು.
ಸಚಿನ್ ದ್ವಿಶತಕದ ಬಳಿಕ ಪಂದ್ಯ ನಡೆದಿಲ್ಲ
ಮಾಧವ್ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯದೆ ಸುಮಾರು 14 ವರ್ಷಗಳೇ ಕಳೆದಿವೆ. ಇಲ್ಲಿ ಕೊನೆಯ ಬಾರಿಗೆ ಭಾರತ ತಂಡ ಪಂದ್ಯವನ್ನಾಡಿದ್ದು 2010ರಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರು ದ್ವಿಶತಕ ಬಾರಿಸಿ ಚರಿತ್ರೆ ಬರೆದಿದ್ದರು. ಈ ಪಂದ್ಯ ನಡೆದ ಬಳಿಕ ಇಲ್ಲಿ ಇದುವರೆಗೂ ಯಾವುದೇ ಪಂದ್ಯ ನಡೆದಿಲ್ಲ. ಇದೀಗ 14 ವರ್ಷಗಳ ಬಳಿಕ ಪಂದ್ಯ ಆತಿಥ್ಯ ಸಿಕ್ಕರೂ ಕೂಡ ಪಂದ್ಯ ನಡೆಯುವುದು ಅನುಮಾನ ಎನ್ನುವಂತಿದೆ.