ಆಗ್ರಾ: ಇತ್ತೀಚಿನ ದಿನಗಳಲ್ಲಿ ಸ್ಕ್ಯಾಂ ಕರೆಗಳ(Scam call) ಹಾವಳಿ ಹೆಚ್ಚಾಗಿದೆ. ಕರೆ ಮಾಡಿ ಜನರನ್ನು ವಂಚಿಸಿ ಲಕ್ಷ ಲಕ್ಷ ದೋಚಲೆಂದೇ ಕೆಲವು ಕಿಡಿಗೇಡಿಗಳ ತಂಡ ಹೊಂಚು ಹಾಕುತ್ತಿರುತ್ತವೆ. ಈ ಸ್ಕ್ಯಾಮರ್ಗಳ ಕೈ ಸಿಲುಕಿ ಅದೆಷ್ಟೋ ಅಮಾಯಕರು ಹಣ ಮಾತ್ರವಲ್ಲದೇ ಮಾನ-ಪ್ರಾಣ ಕಳೆದುಕೊಂಡಿದ್ದಾರೋ ಅದು ಲೆಕ್ಕಕ್ಕೆ ಸಿಗಲ್ಲ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದ ಆಗ್ರಾ(Agra)ದಲ್ಲಿ ನಡೆದಿದೆ. ಮಗಳು ಸೆಕ್ಸ್ ದಂಧೆಯಲ್ಲಿ ಸಿಲುಕಿದ್ದಾಳೆಂದು ಶಿಕ್ಷಕಿಗೆ ಕರೆಯೊಂದು ಬಂದಿದೆ. ಆಘಾತಗೊಂಡ ಶಿಕ್ಷಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ(Viral News) ವರದಿಯಾಗಿದೆ.
ಏನಿದು ಘಟನೆ?
ಆಗ್ರಾದ ಸರ್ಕಾರಿ ಶಾಲೆ ಶಿಕ್ಷಕಿ ಮಾಲತಿ ವರ್ಮಾ(58) ಅವರಿಗೆ ಅವರ ಕಾಲೇಜಿಗೆ ಹೋಗುತ್ತಿರುವ ಮಗಳು ಸೆಕ್ಸ್ ರ್ಯಾಕೆಟ್ನಲ್ಲಿ ಸಿಕ್ಕಿಬಿದ್ದಿದ್ದಾಳೆ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಅಲ್ಲದೇ ಮಗಳು ಸುರಕ್ಷಿತವಾಗಿ ಮನೆಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ₹ 1 ಲಕ್ಷವನ್ನು ನಿರ್ದಿಷ್ಟ ಖಾತೆಗೆ ಜಮಾ ಮಾಡುವಂತೆ ಆ ವ್ಯಕ್ತಿ ಕೇಳಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮಾಲತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಲತಿ ಅವರ ಪುತ್ರಿ ದೀಪಾಂಶು ಮಾತನಾಡಿದ್ದು, ನನ್ನ ತಾಯಿ ಆಗ್ರಾದ ಅಚ್ನೇರಾದಲ್ಲಿರುವ ಸರ್ಕಾರಿ ಬಾಲಕಿಯರ ಜೂನಿಯರ್ ಹೈಸ್ಕೂಲ್ನಲ್ಲಿ ಪಾಠ ಮಾಡುತ್ತಿದ್ದರು. ಆ ವ್ಯಕ್ತಿಯಿಂದ ಕರೆ ಬಂದ ನಂತರ ಅವರು ಗಾಬರಿಗೊಂಡು ನನಗೆ ಕರೆ ಮಾಡಿದರು ಮತ್ತು ಅವರು ಕರೆ ಸ್ವೀಕರಿಸಿದ ಸಂಖ್ಯೆಯನ್ನು ನಾನು ಕೇಳಿದೆ. ಅವರು ಇನ್ನೂ ತುಂಬಾ ಆತಂಕದಲ್ಲಿದ್ದರು. ಅಲ್ಲದೇ ಅವರು ಅಸ್ವಸ್ಥಗೊಂಡಿದ್ದರು.
ನಾನು ಅಮ್ಮನನ್ನು ಸಮಾಧಾನಪಡಿಸಿದೆ ಮತ್ತು ನನ್ನ ಸಹೋದರಿಯೊಂದಿಗೂ ಮಾತನಾಡಿದ್ದೇನೆ. ನಾನು ಕಾಲೇಜಿನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದೆ. ಆದರೂ ತಾಯಿಯ ಆರೋಗ್ಯವು ಹದಗೆಡುತ್ತಲೇ ಇತ್ತು, ಆದರೆ ಅವಳು ಶಾಲೆಯಿಂದ ಹಿಂತಿರುಗಿದಾಗ, ಸ್ವಲ್ಪ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಹೃದಯಾಘಾತದಿಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕರೆ ಮಾಡಿ ಕಿಡಿಗೇಡಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕಾರಿನಲ್ಲಿ ಹೋಗುತ್ತಿದ್ದ ದಂಪತಿಯನ್ನು ಮಾರಕಾಸ್ತ್ರ ಹಿಡಿದುಕೊಂಡು ಬೆನ್ನಟ್ಟಿದ ದರೋಡೆಕೋರರು; ವಿಡಿಯೊ ವೈರಲ್