Saturday, 2nd November 2024

Fraud Case: ಮುದುಕರನ್ನು ಯುವಕರನ್ನಾಗಿ ಮಾಡುವ ಆಮಿಷ! 35 ಕೋಟಿ ರೂ. ವಂಚನೆ!

Fraud Case

ಕಾನ್ಪುರ: ಇಸ್ರೇಲ್ ನಿರ್ಮಿಸಿರುವ ಟೈಮ್ ಮೆಷಿನ್‌ನಿಂದ (Israel made time machine) ಯುವಕರನ್ನಾಗಿ ಮಾಡುವುದಾಗಿ ಹೇಳಿ ಹಲವಾರು ವೃದ್ಧರನ್ನು ವಂಚಿಸಿರುವ (Fraud Case) ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ (Uttar Pradesh’s Kanpur) ನಡೆದಿದೆ. 25ಕ್ಕೂ ಹೆಚ್ಚು ವೃದ್ಧ ದಂಪತಿಗೆ ರಾಜೀವ್ ಕುಮಾರ್ ದುಬೆ ಮತ್ತು ಆತನ ಪತ್ನಿ ರಶ್ಮಿ ದುಬೆ ವಂಚಿಸಿರುವುದಾಗಿ ಕಾನ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜೀವ್ ಕುಮಾರ್ ದುಬೆ ಮತ್ತು ಆತನ ಪತ್ನಿ ರಶ್ಮಿ ದುಬೆ ತಮ್ಮ ಚಿಕಿತ್ಸಾ ಕೇಂದ್ರದ ಮೂಲಕ ಬೃಹತ್ ಹಗರಣ ನಡೆಸಿದ್ದಾರೆ. ಇಸ್ರೇಲ್ ನಿರ್ಮಿಸಿರುವ ಟೈಮ್ ಮೆಷಿನ್ ಮೂಲಕ ವೃದ್ಧರನ್ನು ಯುವಕರನ್ನಾಗಿ ಮಾಡುವುದಾಗಿ ಭರವಸೆ ನೀಡಿ 35 ಕೋಟಿ ರೂ.ಗೂ ಅಧಿಕ ಹಣ ಪಡೆದು ವಂಚಿಸಿರುವುದಾಗಿ ತಿಳಿದು ಬಂದಿದೆ.

ಕಾನ್ಪುರದ ಕಿದ್ವಾಯಿ ನಗರ ಪ್ರದೇಶದಲ್ಲಿರುವ ರಿವೈವಲ್ ವರ್ಲ್ಡ್ ಗೆ ಬಂದವರಿಗೆ ಅವರು ಇಸ್ರೇಲ್‌ನ ಈ ಯಂತ್ರವು 60 ವರ್ಷದ ವ್ಯಕ್ತಿಯನ್ನು 25 ವರ್ಷದ ಯುವಕನನ್ನಾಗಿ ಪರಿವರ್ತಿಸುತ್ತದೆ ಎಂದು ಹೇಳಿ ನಂಬಿಕೆ ಹುಟ್ಟುವಂತೆ ಮಾಡಿದ್ದಾರೆ. ಯುವಕರಾಗುವ ಆಸೆಯಿಂದ ಅನೇಕ ವೃದ್ಧರು ಅವರನ್ನು ಸಂಪರ್ಕಿಸಿದ್ದಾರೆ. ಇಸ್ರೇಲ್‌ನಿಂದ ತರಿಸಿರುವ ‘ಟೈಮ್ ಮೆಷಿನ್’ ಮೂಲಕ ಆಮ್ಲಜನಕ ಚಿಕಿತ್ಸೆ ಪಡೆದು ಯವ್ವನವನ್ನು ಪಡೆಯಬಹುದು ಎಂಬುದಾಗಿ ದುಬೆ ದಂಪತಿ ಅನೇಕರಿಗೆ ತಿಳಿಸಿದ್ದಾರೆ.

ಗಾಳಿಯಲ್ಲಿನ ಹೆಚ್ಚಿನ ಮಾಲಿನ್ಯವು ವೇಗವಾಗಿ ವಯಸ್ಸಾದಂತೆ ಕಾಣಲು ಕಾರಣವಾಗುತ್ತದೆ ಎಂದು ದುಬೆ ದಂಪತಿ ಹೇಳಿದ್ದನ್ನು ಅನೇಕ ವೃದ್ದರು ನಂಬಿದ್ದರು. ಅವರಿಗೆ ಆಕ್ಸಿಜನ್ ಥೆರಪಿ ನೀಡುವ ಭರವಸೆಯನ್ನು ದಂಪತಿ ನೀಡಿದ್ದು, ಕೆಲವು ತಿಂಗಳುಗಳ ಬಳಿಕ ಒಬ್ಬರು ಕಿರಿಯರಾಗುತ್ತಾರೆ ಎಂದು ಹೇಳಿದ್ದರು.

10 ಸೆಷನ್‌ಗಳಿಗೆ 6,000 ರೂ. ಮತ್ತು ಮೂರು ವರ್ಷಗಳ 90,000 ರೂ. ಪ್ಯಾಕೇಜ್‌ ನ ಕೊಡುಗೆಯನ್ನು ಅವರು ತಮ್ಮ ಬಳಿ ಬಂದ ವೃದ್ಧರಿಗೆ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಅಂಜಲಿ ವಿಶ್ವಕರ್ಮ ತಿಳಿಸಿದ್ದಾರೆ. ಮೂವರು ದಂಪತಿ ರಾಜೀವ್ ಕುಮಾರ್ ಮತ್ತು ರಶ್ಮಿ ದುಬೆ ಅವರಿಂದ ಮೋಸ ಹೋಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವರಿಂದ ಒಟ್ಟು 10.75 ಲಕ್ಷ ರೂ. ಪಡೆದು ವಂಚಿಸಲಾಗಿದೆ ಎಂದು ಸಂತ್ರಸ್ತರಲ್ಲಿ ಒಬ್ಬರಾದ ರೇಣು ಸಿಂಗ್ ಚಾಂಡೆಲ್ ಆರೋಪಿಸಿದ್ದಾರೆ.

Fraud Case

ಕಾನ್ಪುರ ಮೂಲದ ವಂಚಕರು ಒಟ್ಟು ₹ 35 ಕೋಟಿ ರೂ. ಪಡೆದು 12ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ದುಬೆ ದಂಪತಿ ತಮ್ಮ ಕಾರ್ಯಾಚರಣೆಯನ್ನು ಪಿರಮಿಡ್ ಯೋಜನೆಯಾಗಿ ಪರಿವರ್ತಿಸಿದ್ದರು. ಒಬ್ಬ ಗ್ರಾಹಕರು ಇನ್ನೊಬ್ಬ ವ್ಯಕ್ತಿಯನ್ನು ಕರೆತಂದರೆ ಅವರಿಗೆ ಮುಂದಿನ ಅವಧಿಯ ಥೆರಪಿ ಉಚಿತವಾಗಿರುತ್ತದೆ ಎಂದು ರೇಣು ಸಿಂಗ್ ಚಾಂಡೆಲ್ ತಿಳಿಸಿದ್ದಾರೆ.

Actor Darshan: ಇಂದು ದರ್ಶನ್‌ ಜಾಮೀನು ವಿಚಾರಣೆ, ಬೆನ್ನಿನಲ್ಲಿ ಊತ ನೆಪ ನೀಡಿ ಬಳ್ಳಾರಿ ಜೈಲಿನಿಂದ ಶಿಫ್ಟ್‌?

ಈ ಹಗರಣದಲ್ಲಿ ಸುಮಾರು 25 ಮಂದಿ ಹಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಸದ್ಯ ದುಬೆ ದಂಪತಿ ತಲೆಮರೆಸಿಕೊಂಡಿದ್ದು, ದೇಶ ಬಿಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ದಂಪತಿ ಪತ್ತೆಗೆ ತನಿಖೆ ಮುಂದುವರಿಸಲಾಗಿದ್ದು, ದೇಶ ಬಿಟ್ಟು ಪರಾರಿಯಾಗದಂತೆ ವಿಮಾನ ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.