ಕೊಪ್ಪಳ: ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಕರ್ನಾಟಕದಲ್ಲಿ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿ ವರದಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraja Rayareddy) ಆಗ್ರಹಿಸಿದ್ದಾರೆ. ಕೊಪ್ಪಳದ ಬಸಾಪೂರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ನಾನು ಸಿಎಂ ಭೇಟಿ ಮಾಡಿ, ಮಾತನಾಡಿದ್ದೇನೆ. ಮುಂದಿನ ವಾರವೇ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆದು, ಕೂಡಲೇ ವರದಿ ಬಿಡುಗಡೆ ಮಾಡಬೇಕು. ನ.1 ರಿಂದ ಅನುಷ್ಠಾನಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದರು.
ಈ ಸುದ್ದಿಯನ್ನೂ ಓದಿ | Google Jobs: ಬೆಂಗಳೂರಿನ ಟೆಕ್ಕಿಗೆ ಗೂಗಲ್ನಲ್ಲಿ ದೊರೆತ ಪ್ಯಾಕೇಜ್ ನೋಡಿ ಐಟಿ ಮಂದಿ ಏನಂದ್ರು?
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಹೊಸ ಕಾರ್ಯದರ್ಶಿ ಜಯಪ್ರಕಾಶ ಹೆಗ್ಡೆ, ಹಿಂದುಳಿದ ವರ್ಗಗಳ ಸಚಿವರಿಗೆ ಕಳೆದ ಫೆ. 29ರಂದು ವರದಿ ನೀಡಿದ್ದಾರೆ. ಸರ್ಕಾರ ವರದಿಯನ್ನು ಒಪ್ಪಿದೆಯೋ ಇಲ್ಲವೋ ಗೊತ್ತಿಲ್ಲ. ಸರ್ಕಾರ ಅದನ್ನು ಬಿಡುಗಡೆ ಮಾಡದಿರುವುದು ಸರಿಯಲ್ಲ ಎಂದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಸರ್ಕಾರವೇ ಬರೋಬ್ಬರಿ 165 ಕೋಟಿ ರೂ. ಬಜೆಟ್ ಕೊಟ್ಟು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿ ಮಾಡಿಸಿದೆ. ಕಾಂತರಾಜು ನೇತೃತ್ವದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ನೀಡುವ ಮೊದಲೇ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದಿದ್ದರಿಂದ ವರದಿ ಆಯೋಗದಲ್ಲೇ ಉಳಿದಿತ್ತು. ಈಗ ಮತ್ತೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದಿದ್ದರಿಂದ ವರದಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ವರದಿ ಬಿಡುಗಡೆ ಮಾಡುವ ಜತೆಗೆ, ಯಾವುದಾದರೂ ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಕೊಂಡು, ಅನುಷ್ಠಾನ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರಷ್ಟು ಬದ್ಧತೆ ಇರುವ ರಾಜಕಾರಣಿ ಸದ್ಯ ಯಾರೂ ಇಲ್ಲ. ಈ ಹಿನ್ನೆಲೆ ಅವರೇ ಗಣತಿ ವರದಿ ಬಿಡುಗಡೆ ಮಾಡಬೇಕಿದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ, ಮಾತನಾಡಿ, ಒತ್ತಾಯ ಮಾಡಿದ್ದೇನೆ ಎಂದರು. ರಾಜ್ಯದಲ್ಲಿ ಅನಾವಶ್ಯಕ ಚರ್ಚೆ ನಡೆಯುತ್ತಿವೆ. ಇವೆಲ್ಲ ಬಂದ್ ಆಗಬೇಕು. ಕರ್ನಾಟಕ ಸುಸಂಸ್ಕೃತ ಪ್ರಜೆಗಳು ಇರುವ ರಾಜ್ಯ. ಈ ಹಿನ್ನೆಲೆ ಇಂದಿನ ಗೊಂದಲದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | Aero India Show 2025: ಫೆ.10ರಿಂದ ಬೆಂಗಳೂರಿನಲ್ಲಿ ‘ಏರೋ ಇಂಡಿಯಾ-2025’ ವೈಮಾನಿಕ ಪ್ರದರ್ಶನ
ಜಾತಿ ಗಣತಿಯಲ್ಲ
ಶಾಶ್ವತ ಹಿಂದುಳಿದ ವರ್ಗದ ಆಯೋಗ ಮಾಡಿದ್ದು ಜಾತಿ ಗಣತಿ ಅಲ್ಲ. ಜಾತಿ ಮತ್ತು ಧರ್ಮ ರಹಿತವಾಗಿ ಬಡವರ ಬಗ್ಗೆ ಸರ್ವೆ ಆಗಿದೆ. ನ.1 ರಿಂದ ವರದಿ ಅನುಷ್ಠಾನ ಆಗಬೇಕು. ಆಗ ಮಾತ್ರ ಮುಂದಿನ ಬಜೆಟ್ನಲ್ಲಿ ಹಿಂದುಳಿದ ಜಾತಿಗೆ ಅನುದಾನ ನೀಡಲು ಸಾಧ್ಯ. ಸುಪ್ರೀಂ ಕೋರ್ಟ್ ಕೂಡ ಈಗಾಗಲೇ ನಿರ್ದೇಶನ ನೀಡಿದೆ. ಈ ಗಣತಿ ಸಮರ್ಪಕ ಜಾರಿಯಾದರೆ ಶೇ.75 ರಷ್ಟು ಮೀಸಲಾತಿ ನೀಡಬಹುದಾಗಿದೆ. ಒಳ ಮೀಸಲಾತಿ ನೀಡಲು ಕೂಡ ಇದು ಅನುಕೂಲ ಆಗಲಿದೆ. ಇದನ್ನು ಮಾಡುವುದರಿಂದ ಅಧಿಕಾರ ಹೋಗುತ್ತೆ, ಬರುತ್ತೆ ಅಂತಾ ಅಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡಿದೆ. ಅದರಂತೆ ವರದಿ ಬಿಡುಗಡೆ ಮಾಡಬೇಕು ಎಂದು ಬಸವರಾಜ ರಾಯರೆಡ್ಡಿ ಒತ್ತಾಯಿಸಿದರು.