Monday, 25th November 2024

Hasin Jahan: ಮಗಳ ಮುಂದೆ ಶೋಕಿ ಅಷ್ಟೇ!; ಶಮಿ ವಿರುದ್ಧ ಕಿಡಿಕಾರಿದ ಮಾಜಿ ಪತ್ನಿ

Hasin Jahan

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರ ವಿರುದ್ಧ ಸದಾ ಒಂದಿಲ್ಲೊಂದು ಕಾರಣಗಳಿಂದ ಟೀಕಿಸುತ್ತಿರುವ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್(Hasin Jahan) ಮತ್ತೆ ಶಮಿ ವಿರುದ್ಧ ಕಿಡಿ ಕಾರಿದ್ದಾರೆ. ಮಗಳನ್ನು ಭೇಟಿಯಾಗಿರುವು ಕೇಲವ ಶೋಕಿಗೆ ಎಂದು ಆರೋಪಿಸಿದ್ದಾರೆ.

2 ದಿನಗಳ ಹಿಂದಷ್ಟೇ ಶಮಿ ತಮ್ಮ ಮಗಳಾದ ಐರಾರನ್ನು ಭೇಟಿ ಮಾಡಿದ್ದರು.ಇದು ಬಹಳ ವರ್ಷಗಳ ಬಳಿಕದ ಭೇಟಿಯಾಗಿತ್ತು. ಮಗಳನ್ನು ಶಮಿ ಕೆಲವು ಸ್ಥಳಗಳಿಗೆ ಕತೆದುಕೊಂಡು ಹೋಗಿ ಆಕೆಗೆ ಒಂದಷ್ಟು ವಸ್ತುಗಳನ್ನು ಕೊಡಿಸಿದ್ದರು. ಈ ವಿಡಿಯೋಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಅಪ್ಪ-ಮಗಳ ಬಾಂಧವ್ಯಕ್ಕೆ ಶಮಿ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರೀತಿಯ ಸಂದೇಶ ರವಾನಿಸಿದ್ದರು.

ಮಗಳೊಂದಿಗೆ ಕಳೆದ ಸುಂದರ ಕ್ಷಣದ ವಿಡಿಯೊವನ್ನು ಶಮಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು ಭಾವನಾತ್ಮಕ ಸಂದೇಶ ಬರೆದಿದ್ದರು. ʼಬಹಳ ಸಮಯದ ನಂತರ ನಾನು ಅವಳನ್ನು ಮತ್ತೆ ನೋಡಿದಾಗ ಗಡಿಯಾರದ ಮುಳ್ಳುಗಳೇ ನಿಂತು ಹೋದವು. ಪದಗಳಲ್ಲಿ ಹೇಳುವುದಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ ಮಗಳೆʼ ಎಂದು ಬರೆದುಕೊಂಡಿದ್ದರು.

ಆದರೆ ಹಸೀನ್ ಜಹಾನ್ ಅವರು ಶಮಿ ಇದೆಲ್ಲ ಶೋಕಿಗೆ ಮಾಡಿದ್ದು ಎಂದು ಹೇಳಿದ್ದಾರೆ. ಮಗಳ ಮೇಲೆ ಶಮಿಗೆ ಕಿಂಚಿತ್ತು ಪ್ರೀತಿ ಇಲ್ಲ. ಮಗಳಿಗೆ ಬೇಕಿದ್ದ ಅಗತ್ಯ ವಸ್ತುವನ್ನು ಶಮಿ ನೀಡಿಲ್ಲ ಎಂದಿದ್ದಾರೆ. ‘ಮಗಳನ್ನು ಭೇಟಿಯಾಗಿದ್ದೇನೋ ನಿಜ. ಆದರೆ, ಪುತ್ರಿ ಕೇಳಿದ್ದನ್ನು ಶಮಿ ಕೊಡಿಸಲಿಲ್ಲ. ಐರಾಗೆ ಗಿಟಾರ್​ ಮತ್ತು ಕ್ಯಾಮರಾ ಅಗತ್ಯವಿತ್ತು. ಅವಳು ಇವೆರಡನ್ನು ಖರೀದಿಸುವ ಬಯಕೆ ಹೊಂದಿದ್ದಳು. ಆದರೆ, ಶಮಿ ಮಾತ್ರ ಪುತ್ರಿ ಬಯಸಿದ್ದನ್ನು ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಮಗಳು ಆಸೆ ಪಟ್ಟಿದ್ದನ್ನು ಖರೀದಿಸುವ ಬದಲಿಗೆ ಅನಗತ್ಯ ವಸ್ತುಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಇದೊಂದು ಕೇವಲ ತೋರಿಕೆಯ ಪ್ರೀತಿಯಷ್ಟೇʼ ಎಂದು ಆರೋಪಿಸಿದ್ದಾರೆ.

ನನ್ನ ಮಗಳ ಪಾಸ್​ಪಾರ್ಟ್​ ಅವಧಿ ಮುಕ್ತಾಯಗೊಂಡಿತ್ತು. ಅದರ ನವೀಕರಣದ ಅಗತ್ಯವಿದೆ. ಹೀಗಾಗಿ ಆಕೆ ತನ್ನ ತಂದೆಯ ಸಹಿಗಾಗಿ ಭೇಟಿಯಾದಳು. ಒಂದು ಸಹಿ ಹಾಕುವುದನ್ನು ಬಿಟ್ಟು ಶಮಿ ತಂದೆ ವಾತ್ಸಲ್ಯದ ನಾಟಕವಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ Mohammed Shami : ಸುಳ್ಳು ಸುದ್ದಿ ಹಬ್ಬಿಸಬೇಡಿ: ಗಾಯದ ಬಗ್ಗೆ ವರದಿಗಳನ್ನು ತಳ್ಳಿಹಾಕಿದ ಶಮಿ

16 ಆಗಸ್ಟ್ 2018 ರಂದು, ಹಸಿನ್ ಜಹಾನ್(Hasin Jahan) ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.

ಜೀವನಾಂಶ ನೀಡುತ್ತಿರುವ ಶಮಿ

2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಶಮ್ಮಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕೊತಾ ನ್ಯಾಯಾಲಯ ಇದೇ ವರ್ಷದ ಜನವರಿಯಲ್ಲಿ ತೀರ್ಪು ಪ್ರಕಟಿಸಿ, ಶಮಿ ಅವರು ಪತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜಹಾನ್​ಗೆ ತಿಂಗಳಿಗೆ 50 ಸಾವಿರ ರೂ. ನೀಡುವಂತೆ ಸೂಚಿಸಿತ್ತು. ಕೋರ್ಟ್​ ಸೂಚನೆಯಂತೆ ಶಮಿ ಅವರು ಈ ಮೊತ್ತವನ್ನು ನೀಡಿತ್ತಲೇ ಬರುತ್ತಿದ್ದಾರೆ.