Saturday, 23rd November 2024

IPL 2025: ಹರಾಜಿಗೂ ಮುನ್ನ ಆರ್‌ಸಿಬಿಗೆ ಮಹತ್ವದ ಸಲಹೆ ನೀಡಿದ ಮಾಜಿ ಆಟಗಾರ

IPL 2025

ಮುಂಬಯಿ: 18ನೇ ಆವೃತ್ತಿಯ ಐಪಿಎಲ್‌(IPL 2025) ಆಟಗಾರರ ಮೆಗಾ ಹರಾಜಿಗೂ ಮುನ್ನ ಟೀಮ್‌ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌(Mohammad Kaif) ಆರ್‌ಸಿಬಿ(RCB)ಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ರೋಹಿತ್‌ ಶರ್ಮಾ(Rohit Sharma) ಅವರು ಹರಾಜಿನಲ್ಲಿ ಕಾಣಿಸಿಕೊಂಡರೆ ಅವರನ್ನು ಖರೀದಿಸಲೇ ಬೇಕು ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ರೋಹಿತ್‌ ಈ ಬಾರಿ ಮುಂಬೈ ತಂಡ ತೊರೆಯಲಿದ್ದಾರೆ ಎನ್ನಲಾಗಿದೆ. ರೋಹಿತ್‌ ಖರೀದಿಗೆ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌ ಮತ್ತು ಲಕ್ನೋ ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿವೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಕೈಫ್‌ ಆರ್‌ಸಿಬಿ ರೋಹಿತ್‌ ಖರೀದಿ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದಿದ್ದಾರೆ.

ʼರೋಹಿತ್ ಶರ್ಮಾ ಒಬ್ಬ ಶ್ರೇಷ್ಠ ಆಟಗಾರ. ಟಿ20 ವಿಶ್ವಕಪ್‌ ಗೆದ್ದ ನಾಯಕ. ಮುಂಬೈ ತಂಡವನ್ನು 5 ಬಾರಿ ಚಾಂಪಿಯನ್‌ ಮಾಡಿದ್ದಾರೆ. ಹೀಗಾಗಿ ಆರ್‌ಸಿಬಿ ಅವರ​ ಖರೀದಿಗೆ ಪ್ಲಾನ್​ ಮಾಡಬೇಕು. ಅಲ್ಲದೆ ರೋಹಿತ್‌ ಅವರನ್ನು ಹೇಗಾದರು ಮಾಡಿ ಆರ್​​ಸಿಬಿಗೆ ಬರುವಂತೆ ಒಪ್ಪಿಸಬೇಕು. ರೋಹಿತ್​ ಆರ್​​ಸಿಬಿ ನಾಯಕನಾದರೆ​, ಅವರು ರನ್​​ ಕಲೆ ಹಾಕದಿದರೂ ಕಪ್​ ಗೆಲ್ಲಿಸುತ್ತಾರೆ. ಜತೆಗೆ ಬಲಿಷ್ಠ ತಂಡವನ್ನು ಕಟ್ಟುತ್ತಾರೆʼ ಎಂದು ಕೈಫ್‌ ಸ್ಟಾರ್‌ ಸ್ಪೋರ್ಟ್ಸ್‌ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ. ಕೈಫ್‌ ಕೂಡ ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು.

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್​ ತಂಡಗಳು ರಿಲೀಸ್​​ ಮತ್ತು ರೀಟೈನ್​ ಲಿಸ್ಟ್​ ಬಿಡುಗಡೆ ಮಾಡಲಿದ್ದಾರೆ. 6 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಜತೆಗೆ ಒಂದು ಆರ್‌ಟಿಎಂ ಬಳಕೆಗೂ ಅವಕಾಶವಿದೆ. ಹೀಗಾಗಿ ಮುಂಬೈ ತಂಡ ರೋಹಿತ್‌ ಅವರನ್ನು ತಂಡದಿಂದ ಬಿಟ್ಟುಕೊಡಲಿದೆಯಾ ಎಂದು ಕಾದು ನೋಡಬೇಕಿದೆ. ರೋಹಿತ್‌ ಹರಾಜಿನಲ್ಲಿ ಕಾಣಿಸಿಕೊಂಡರೆ ದೊಡ್ಡ ಮೊತ್ತಕ್ಕೆ ಖರೀದಿಯಾಗುವ ಬಗ್ಗೆ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ IPL 2025: ವಿದೇಶಿ ಆಟಗಾರರಿಗೆ ಇನ್ನು ಕೋಟಿ ಹಣ ಪಡೆಯಲು ಸಾಧ್ಯವಿಲ್ಲ; ಕಾರಣವೇನು?

ಆರ್‌ಸಿಬಿ ಯೋಜನೆ ಏನು?

ವರದಿಗಳ ಪ್ರಕಾರ ಆರ್‌ಸಿಬಿ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರನ್ನು ತಂಡಕ್ಕೆ ಖರೀದಿಸಲು ಯೋಜನೆ ರೂಪಿಸಿಕೊಂಡಿದೆ ಎನ್ನಲಾಗಿದೆ. ರಾಹುಲ್‌ ಕೂಡ ತವರು ತಂಡದ ಪರ ಆಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಭಿಮಾನಿಗಳು ಕೂಡ ರಾಹುಲ್‌ ಖರೀದಿಗೆ ಫ್ರಾಂಚೈಸಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡುತ್ತಲೇ ಇದ್ದಾರೆ. ಅಂತಿಮವಾಗಿ ಆರ್‌ಸಿಬಿಗೆ ಯಾರು ಸೇರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹರಾಜಿನ ಬಳಿಕವೇ ಸಿಗಲಿದೆ.

ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ವಿದೇಶಿ ನೆಲದಲ್ಲಿ ಅಂದರೆ ದುಬೈನಲ್ಲಿ ನಡೆದಿತ್ತು.