Friday, 22nd November 2024

Mysuru News: ದೇಶದಲ್ಲಿ ಪ್ರತಿವರ್ಷ 1,60000 ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದನೆ!

Mysuru News

ಮೈಸೂರು: ಹೊಸ ಹೊಸ ತಂತ್ರಜ್ಞಾನ ಬಂದಂತತೆಲ್ಲ ಅದನ್ನು ಅಳವಡಿಸಿಕೊಳ್ಳಲು ನಾವು ಅತ್ಯಂತ ಉತ್ಸುಕರಾಗುತ್ತೇವೆ. ಹೊಸ ಎಲೆಕ್ಟ್ರಾನಿಕ್ ಯಂತ್ರೋಪಕರಣ ಲಭ್ಯವಾಗುತ್ತಿದ್ದಂತೆ ಖರೀದಿಗೆ ಮುಂದಾಗುತ್ತೇವೆ. ಆದರೆ ಹಳೆಯ ಉಪಕರಣಗಳ ವಿಲೇವಾರಿ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಹಾಗಾಗಿ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಇಂದು ಬಹುದೊಡ್ಡ ಸಮಸ್ಯೆ ಆಗಿ ಮುಂದೆ ನಿಂತಿದೆ. ಈ ಬಗ್ಗೆ ಪ್ರತಿಯೊಬ್ಬರು ಸ್ವಯಂ ಜಾಗೃತಿಗೊಂಡು ಸಮಾಜವನ್ನು ಜಾಗೃತಗೊಳಿಸಬೇಕಾಗಿದೆ ಎಂದು ಮೈಸೂರಿನ (Mysuru News) ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎನ್. ಸಂತೋಷ್ ತಿಳಿಸಿದರು.

ಪರ್ಯಾವರಣ ಸಂರಕ್ಷಣಾ ಗತಿ ವಿಧಿ ಮೈಸೂರಿನ ಜೆಎಸ್ಎಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ “ಇ ಯಂತ್ರಣ ನಿಯಂತ್ರಣ” ಎಲೆಕ್ಟ್ರಾನಿಕ್ ವೇಸ್ಟ್ ಮ್ಯಾನೇಜ್‌ಮೆಂಟ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ನಾವು ಬದುಕುವ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Aero India Show 2025: ಫೆ.10ರಿಂದ ಬೆಂಗಳೂರಿನಲ್ಲಿ ‘ಏರೋ ಇಂಡಿಯಾ-2025’ ವೈಮಾನಿಕ ಪ್ರದರ್ಶನ

ಪರ್ಯಾವರಣ ಸಂರಕ್ಷಣ ಗತಿವಿಧಿ ಕಾರ್ಯಕರ್ತ ಡಾ. ಶ್ರೀಹರ್ಷ ಪ್ರಾಸ್ತಾವಿಕ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಿ ಸುಮಾರು 1,60000 ಟನ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಇದರಲ್ಲಿ ಕೇವಲ 15 ಪ್ರತಿಶತ ಮಾತ್ರ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿದೆ. ಈ ನಾಲ್ಕು ತಿಂಗಳ ಅಭಿಯಾನದಲ್ಲಿ ನಾವು ವಸತಿ ಸಮುಚ್ಚಯ, ಕಾಲೇಜು, ವಿಶ್ವವಿದ್ಯಾನಿಲಯದ ಕಾರ್ಪೋರೇಟ್ ಕಚೇರಿ ಹೀಗೆ ಹಲವಾರು ಕಡೆ ಅಭಿಯಾನದ ಮೂಲಕ ಈ ತ್ಯಾಜ್ಯ ಸಂಗ್ರಹಿಸುವ ವೈಜ್ಞಾನಿಕ ವಿಲೇವಾರಿ ಗುರಿ ಹೊಂದಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಶವ ಮತ್ತು ಅಭಿಲಾಷ ಪಿಪಿಟಿ ಮತ್ತು ವಿಡಿಯೋ ತುಣುಕುಗಳ ಪ್ರದರ್ಶನದ ಮೂಲಕ ಈ ತ್ಯಾಜ್ಯ ನಿರ್ವಹಣೆ ಏಕೆ ಹೇಗೆ ಎನ್ನುವ ಸಂಪೂರ್ಣ ಮಾಹಿತಿ ನೀಡಿದರು.

ಈ ಸುದ್ದಿಯನ್ನೂ ಓದಿ | Smoke alert: ಟೇಕ್‌ ಆಫ್‌ಗೆ ರೆಡಿಯಾಗಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ; ತಪ್ಪಿದ ಭಾರೀ ಅವಘಡ

ಈ ಸಂದರ್ಭದಲ್ಲಿ ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಯೋಜಕ ವೆಂಕಟೇಶ್ ಸಂಗನಾಳ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ, ಡಾ. ಮನೋಜ್ ಕುಮಾರ, ಪರಿಸರ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸದಾಶಿವ ಮೂರ್ತಿ ಉಪಸ್ಥಿತರಿದ್ದರು.