ಒಂದಾನೊಂದು ಕಾಡು. ಅಲ್ಲಿನ ಎಲ್ಲಾ ಪ್ರಾಣಿಗಳು ಒಬ್ಬರಿಗೊಬ್ಬರು ಸ್ನೇಹಿತರಾಗಿದ್ದವು. (Kids Story with Audio) ಅವರಲ್ಲೆಲ್ಲ ತುಂಬಾ ಎತ್ತರದ್ದೆಂದರೆ ಚಿಂಟು ಜಿರಾಫೆ. ಅದು ತನ್ನ ಕೆಲವು ಸ್ನೇಹಿತರ ಬಳಿ ಮಾತಾಡಬೇಕಂದರೆ ಕಷ್ಟ ಪಡಬೇಕಿತ್ತು. ಅಂದರೆ, ಮೊಲ, ಮುಂಗುಸಿಯಂಥ ಮಿತ್ರರು ಸಿಕ್ಕಿದರೆ ಅವರ ಬಳಿ ಮಾತಾಡುವುದಕ್ಕೇ ಚಿಂಟು ಜಿರಾಫೆ ಒದ್ದಾಡಬೇಕಿತ್ತು. ಹಾಗಾಗಿ ಕಾಡಿನ ಕೆಲವು ಪ್ರಾಣಿಗಳು ಚಿಂಟು ಜಿರಾಫೆಯನ್ನು ನೋಡಿ ನಗ್ತಾ ಇದ್ದವು. ʻಚಿಂಟೂ, ಪಕ್ಕದ ಕಾಡಿನಲ್ಲಿ ಏನು ನಡೀತಿದೆ ಸ್ವಲ್ಪ ನೋಡಿ ಹೇಳುʼ ಅಂತೆಲ್ಲಾ ರೇಗಿಸುತ್ತಿದ್ದವು. ಎಲ್ಲರೂ ತನ್ನನ್ನು ಹಾಸ್ಯ ಮಾಡುತ್ತಿದ್ದಾರೆ ಅಂತ ಚಿಂಟೂಗೆ ಕೆಲವೊಮ್ಮೆ ಬೇಸರ ಆಗುತ್ತಿತ್ತು. ಆದರೂ, ಪಾಪ ಚಿಂಟು, ಎಲ್ಲರೊಂದಿಗೂ ನಗುನಗುತ್ತಲೇ ಮಾತಾಡುತ್ತಿತ್ತು.
ಒಂದು ಸಾರಿ ಕರಡಿಯಮ್ಮ ತನ್ನ ಮರಿಗಳ ಹುಟ್ಟುಹಬ್ಬಕ್ಕೇಂತ ಭರ್ಜರಿ ಔತಣ ಏರ್ಪಡಿಸಿತು. ರುಚಿಕಟ್ಟಾದ ಜೇನು, ರಸಭರಿತ ಬಾಳೆ ಹಣ್ಣು, ಘಮಘಮಿಸುವ ಹಲಸಿನ ಹಣ್ಣುಗಳೆಲ್ಲ ಔತಣದಲ್ಲಿ ಇದ್ದವು. ಇದಕ್ಕಾಗಿ ಕಾಡಿನ ಎಲ್ಲಾ ಪ್ರಾಣಿಗಳನ್ನೂ ಕರಡಿಯಮ್ಮ ಆಹ್ವಾನಿಸಿತ್ತು. ಅವರೆಲ್ಲರನ್ನೂ ಕೂರಿಸಿಕೊಳ್ಳುವಷ್ಟು ವಿಶಾಲವಾದ ಗುಹೆಯಾಗಿತ್ತು ಕರಡಿಯದ್ದು. ಇದಕ್ಕೆ ಚಿಂಟುವಿಗೂ ಆಹ್ವಾನವಿತ್ತು. ಎಲ್ಲರೊಂದಿಗೆ ಸಂಭ್ರಮದಲ್ಲಿ ಕರಡಿ ಗುಹೆಯತ್ತ ಹೆಜ್ಜೆ ಹಾಕಿದ ಚಿಂಟುವಿಗೆ ಘೋರ ನಿರಾಸೆ ಕಾದಿತ್ತು. ಕರಡಿ ಗುಹೆ ಒಳಗೆಲ್ಲ ದೊಡ್ಡದಾಗಿದ್ದರೂ ಬಾಗಿಲು ಸಣ್ಣದಾಗಿತ್ತು. ಚಿಂಟು ಜಿರಾಫೆ ಎಷ್ಟೇ ಪ್ರಯತ್ನಿಸಿದರೂ ಗುಹೆಯ ಒಳ ಹೋಗಲೇ ಆಗಲಿಲ್ಲ. ಬಗ್ಗಿ, ಒಳ ನುಸುಳಲು ಒದ್ದಾಡುತ್ತಿದ್ದ ಜಿರಾಫೆಯನ್ನು ನೋಡಿ, ಉಳಿದ ಪ್ರಾಣಿಗಳು ಹೊಟ್ಟೆ ಬಿರಿಯುವಂತೆ ನಗತೊಡಗಿದವು. ಚಿಂಟು ಜಿರಾಫೆಗೆ ಸಿಕ್ಕಾಪಟ್ಟೆ ಬೇಸರವಾಯಿತು. ಅಲ್ಲಿಂದ ಓಡತೊಡಗಿತು.
ಓಡೀಓಡಿ ಯಾವುದೋ ಗೊತ್ತಿಲ್ಲದ ಜಾಗಕ್ಕೆ, ದೊಡ್ಡ ಮರದ ಬುಡಕ್ಕೆ ಬಂದು ನಿಂತಿತು ಚಿಂಟು ಜಿರಾಫೆ. ಅದಕ್ಕೀಗ ಅಳು ತಡೆಯಲಾಗಲಿಲ್ಲ. ಜೋರಾಗಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿತು. ನಾನು ಇಷ್ಟು ಉದ್ದ ಇದ್ದೇನೆ, ತನ್ನ ಕುತ್ತಿಗೆ ವಿಪರೀತ ಉದ್ದವಿದೆ ಎನ್ನುವುದಕ್ಕೆ ಕಾಡಿನ ಪ್ರಾಣಿಗಳು ಹಾಸ್ಯ ಮಾಡುವುದು ಹೊಸದಾಗಿರಲಿಲ್ಲ. ಆದರೆ ಇವತ್ತು ನಡೆದ ಘಟನೆಯಿಂದ ಚಿಂಟುವಿನ ಮನಸ್ಸಿಗೆ ತುಂಬಾ ನೋವಾಗಿತ್ತು. ಉದ್ದ, ಅಗಲ, ದಪ್ಪ, ಸಣ್ಣ, ಕಪ್ಪು, ಬಿಳಿ, ಸುರೂಪ, ಕುರೂಪ- ಇಂಥವನ್ನೆಲ್ಲ ನಾವು ಮಾಡಿಕೊಳ್ಳುವುದೇನಲ್ಲವಲ್ಲ. ಹುಟ್ಟುವಾಗ ನಾವು ಹೇಗಿರುತ್ತೇವೆ ಅನ್ನೋದು ನಮ್ಮ ಕೈಯಲ್ಲಿಲ್ಲ. ಹಾಗಿದ್ದ ಮೇಲೆ ತನ್ನ ಉದ್ದದ ಕುರಿತಾಗಿ ಇಷ್ಟೊಂದು ಕುಚೋದ್ಯ ಮಾಡುವುದೇಕೆ ಎನ್ನುವುದು ಚಿಂಟುವಿಗೆ ಅರ್ಥವಾಗಲಿಲ್ಲ. ತಾನು ಯಾರಿಗೂ ಬೇಡದವನು ಎನ್ನುವ ಭಾವ ಮನದಲ್ಲಿ ಬಂದು, ಇನ್ನಷ್ಟು ಅಳು ಒತ್ತರಿಸಿ ಬಂತು.
ಅತ್ತೂಅತ್ತು ಸುಸ್ತಾಗಿ ಅದೇ ದೊಡ್ಡ ಮರದ ಬುಡದ ಹೊಸ ಜಾಗದಲ್ಲಿ ನಿದ್ದೆ ಮಾಡಿಬಿಡ್ತು ಚಿಂಟು. ಅದಕ್ಕೆ ಮತ್ತೆ ಎಚ್ಚರವಾಗಿದ್ದು ಮಾರನೇ ದಿನ ಬೆಳಗ್ಗೆ. ಬೆಳಗಿನ ಬಿಸಿಲು ಹಿತವಾಗಿತ್ತು. ಹಿಂದಿನ ದಿನದ ಬೇಸರವೆಲ್ಲ ಮರೆಯಾಗಿತ್ತು. ಇನ್ನೇನು ಅಲ್ಲಿಂದ ಎದ್ದು ಹೊರಡಬೇಕು ಅನ್ನುವಷ್ಟರಲ್ಲಿ, ಯಾರೋ ಗೋಳೋ ಎಂದು ಅಳುತ್ತಿರುವುದು ಕೇಳಿಸಿತು. ಆಚೀಚೆ ನೋಡಿದರೆ ಯಾರೂ ಕಾಣಿಸಲಿಲ್ಲ. ʻಯಾರು, ಯಾರು ಅಳ್ತಾ ಇರೋದು?ʼ ವಿಚಾರಿಸಿತು ಚಿಂಟು ಜಿರಾಫೆ. ʻನಾನು, ಇಲ್ಲಿ, ಕೆಳಗೆʼ ಅಂದ ದನಿಯೊಂದು ಸೊರಕ್ಕನೆ ಮೂಗೇರಿಸಿಕೊಂಡಿತು. ಕೆಳಗೆ ನೋಡಿದ ಚಿಂಟುವಿಗೆ ಕಂಡಿದ್ದು ಬಗೆಬಗೆಯ ಪುಟಾಣಿ ಗಿಡಗಳು. ʻಓಹ್! ನೀವಾ? ಯಾಕೆ ಅಳ್ತಿದ್ದೀರಾ?ʼ ಕೇಳಿತು ಜಿರಾಫೆ. ಅಷ್ಟು ಕೇಳುತ್ತಿದ್ದಂತೆ ಆ ಪುಟ್ಟ ಗಿಡಗಳ ರೋದನ ಇನ್ನಷ್ಟು ಹೆಚ್ಚಾಯಿತು.
ಇದನ್ನೂಓದಿ: Kids Story with Audio : ಸೋಹನ್, ಮೋಹನ್ ಮತ್ತು ಮಾಯಾಶಂಖ
ʻಜಿರಾಫೆಯಣ್ಣ, ಏನೂಂತ ಹೇಳೋದು ನಮ್ಮ ಕಷ್ಟವನ್ನ! ನಮಗೂ ಎತ್ತರಕ್ಕೆ ಬೆಳೆಯುವ ಆಸೆ. ಆದರೆ ಈ ದೊಡ್ಡ ಮರದ ರೆಂಬೆಗಳೆಲ್ಲ ಅಗಲವಾಗಿ ಚಾಚಿಕೊಂಡು, ನಮಗೆ ಬಿಸಿಲೇ ದೊರೆಯುವುದಿಲ್ಲ. ಈ ನೆರಳಿನಲ್ಲಿದ್ದರೆ ಬೆಳೆಯುವುದಕ್ಕೆ ಆಗುವುದಿಲ್ಲ. ಏನು ಮಾಡೋದು? ಯಾರಿದ್ದಾರೆ ನಮ್ಮನ್ನು ಈ ಕಷ್ಟದಿಂದ ಪಾರು ಮಾಡುವವರು?ʼ ಎಂತ ಗೋಳಾಡಿದವು. ಅವರನ್ನು ಕಂಡು ಚಿಂಟುವಿಗೆ ಅಯ್ಯೋ ಎನಿಸಿತು. ಇವರಿಗೆ ಸಹಾಯ ಮಾಡಬೇಕು ಎನಿಸಿತು. ಆದರೆ ಹೇಗೆ?
ಚಿಂಟು ಮೈ ಕೊಡವಿ ಎದ್ದು ನಿಲ್ಲುತ್ತಿದ್ದಂತೆ ಅದಕ್ಕೊಂದು ಉಪಾಯ ಹೊಳೆಯಿತು. ಪುಟ್ಟ ಗಿಡಗಳ ಮೇಲೆ ಬಿಸಿಲು ಬೀಳದಂತೆ ತಡೆಯುತ್ತಿದ್ದ ರೆಂಬೆಗಳ ಎಲೆಗಳನ್ನೆಲ್ಲ ತಿಂದು ಬೋಳಿಸಿತು. ಮರದ ಆ ಭಾಗದ ಎಲೆಗಳು ಕಡಿಮೆಯಾಗುತ್ತಿದ್ದಂತೆ ಗಿಡಗಳ ಮೇಲೆ ಎಳೆಬಿಸಿಲು ತಾನೇತಾನಾಗಿ ಬೀಳಲಾರಂಭಿಸಿತು. ಇದರಿಂದ ಗಿಡಗಳ ಸಂಭ್ರಮ ಹೇಳತೀರದು. ಖುಷಿಯಿಂದ ನಲಿದಾಡಿಬಿಟ್ಟವು.
ತಾನು ಯಾರಿಗೂ ಬೇಡದವನು ಎನ್ನುವ ಭಾವದಲ್ಲಿ ನರಳುತ್ತಿದ್ದ ಚಿಂಟುವಿಗೆ, ಮೊದಲ ಬಾರಿಗೆ ತನ್ನ ವಿಪರೀತ ಎತ್ತರವೂ ಉಪಯೋಗಕ್ಕೆ ಬರಬಲ್ಲದು ಎಂಬುದು ಮನದಟ್ಟಾಯ್ತು. ಈ ಪ್ರಕೃತಿಯಲ್ಲಿ ಯಾವುದೂ ಹಾಳಲ್ಲ, ಕೀಳಲ್ಲ ಎನ್ನುವುದನ್ನು ಚಿಂಟೂ ಜಿರಾಫೆ ಅರ್ಥ ಮಾಡಿಕೊಂಡು, ಸಂತೋಷದಿಂದ ತನ್ನ ಕಾಡಿಗೆ ಮರಳಿತು.