-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ನವರಾತ್ರಿ ಸೆಲೆಬ್ರೇಷನ್‌ನಲ್ಲಿ (Navaratri Celebration) ಮಹಿಳೆಯರಿಗೆ ಸಾಥ್ ನೀಡಲು ನಾನಾ ಬಗೆಯ ಸೀರೆಗಳು (Navaratri saree Fashion 2024) ಮಾರುಕಟ್ಟೆಗೆ ಕಾಲಿಟ್ಟಿದ್ದು, ಅವುಗಳಲ್ಲಿ, ಇದೀಗ ದುರ್ಗೆ, ಆದಿಶಕ್ತಿ ಹಾಗೂ ನವಶಕ್ತಿಯನ್ನು ಬಿಂಬಿಸುವ ದೇವಿ ಚಿತ್ತಾರ ಮೂಡಿರುವಂತಹ ದುರ್ಗಾವತಾರ ಸೀರೆಗಳು, ಸೀರೆ ಪ್ರಿಯರನ್ನು ಸೆಳೆದಿವೆ. ಹಬ್ಬದ ಸೀಸನ್‌ನಲ್ಲಿ, ಮಾನಿನಿಯರಲ್ಲಿ ಭಕ್ತಿ ಭಾವ ಮೂಡಿಸುತ್ತಿರುವ ಕಾಳಿ, ಆದಿಶಕ್ತಿ, ಚಾಮುಂಡಿ, ನವದುರ್ಗಾ ದೇವಿ ಚಿತ್ತಾರದ ಸೀರೆಗಳು ಸದ್ಯ ಸೀರೆಲೋಕದಲ್ಲಿ ಸುದ್ದಿಯಾಗಿವೆ.
ನವರಾತ್ರಿ ಸೀರೆ –ಬ್ಲೌಸ್‌ಗಳ ಮೇಲೆ ದೇವಿಯ ಚಿತ್ತಾರದ ವಿನ್ಯಾಸ
ಈ ಹಿಂದೆ ಈ ದೇವಿಯ ಚಿತ್ತಾರವಿರುವಂತಹ ಬ್ಲೌಸ್‌ಗಳು ಟ್ರೆಂಡ್‌ನಲ್ಲಿದ್ದವು. ಯಾವುದೇ ಸೀರೆಯೊಂದಿಗೆ ಮ್ಯಾಚ್ ಮಾಡಬಹುದಾಗಿತ್ತು. ಸೀರೆಗಳು ಈ ವಿನ್ಯಾಸದಲ್ಲಿ ಇತ್ತಾದರೂ, ಅವು ಮಾನಿನಿಯರು ಕಸ್ಟಮೈಸ್ಡ್ ಮಾಡಿಸಿ ಕೊಳ್ಳುತ್ತಿದ್ದರು. ಆದರೆ, ಈ ವರ್ಷ ಮಾನಿನಿಯರ ಅಭಿಲಾಷೆಯನ್ನು ಮನಗಂಡ ನೇಕಾರರು ಹ್ಯಾಂಡ್‌ಲೂಮ್ ಹಾಗೂ ನಾನಾ ಬಗೆಯ ಬಂಗಾಲಿ ಸೀರೆಗಳಲ್ಲಿ, ನಾನಾ ಬಗೆಯ ದೇವಿಯ ಚಿತ್ತಾರ ಮೂಡಿಸಿ, ಈ ಫೆಸ್ಟಿವ್ ಸೀಸನ್‌ನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಬಂಗಾಲಿ ಸೀರೆಗಳಲ್ಲಿ ದೇವಿಯ ಅಲಂಕಾರ
ಈ ರೀತಿಯ ದೇವಿಯ ಅಲಂಕಾರ ಅಥವಾ ಚಿತ್ತಾರದ ಸೀರೆಗಳನ್ನು, ಅತಿ ಹೆಚ್ಚಾಗಿ ಪಶ್ಚಿಮ ಬಂಗಾಳದ ಸೀರೆಗಳಲ್ಲಿ ಕಾಣಬಹುದು. ಅಲ್ಲಿನ ದುರ್ಗಾ ಪೂಜೆಗಳಲ್ಲೂ ಸಾಕಷ್ಟು ಮಹಿಳೆಯರು ಉಡುತ್ತಾರೆ. ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಈ ಸೀರೆಗಳನ್ನು ನೋಡಿದ ನಂತರ, ರಾಷ್ಟ್ರದಾದ್ಯಂತ ಈ ಸೀರೆಗಳ ಪ್ರೇಮಿಗಳು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ ಪಾಯಲ್ ಸೇನ್ ಗುಪ್ತಾ.
ಆನ್‌ಲೈನ್‌ನಲ್ಲಿ ಸೀರೆಗಳ ಅಬ್ಬರ
ಆನ್‌ಲೈನ್‌ನಲ್ಲಿ ಈ ಶೈಲಿಯ ಸೀರೆಗಳು ಅತಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಸೀಸನ್‌ಗೆ ತಕ್ಕಂತೆ ಬಿಡುಗಡೆಗೊಂಡಿವೆ. ಇದೀಗ ಕಾಟನ್, ಕ್ರೇಪ್, ಮಲ್‌ಮಲ್ ಕಾಟನ್, ಖಾದಿ, ಲೆನಿನ್ ಸೇರಿದಂತೆ ನಾನಾ ಫ್ಯಾಬ್ರಿಕ್ ಹಾಗೂ ಕಲರ್‌ಗಳಲ್ಲಿ ಇವು ದೊರೆಯುತ್ತಿವೆ.
ಈ ಸುದ್ದಿಯನ್ನೂ ಓದಿ | Navaratri Colour Ideas: ನವರಾತ್ರಿ 3ನೇ ದಿನ ಬೂದು ಬಣ್ಣದ ಉಡುಗೆಗೆ ಆದ್ಯತೆ ನೀಡಿ
ನವರಾತ್ರಿ ದೇವಿ ಚಿತ್ತಾರದ ಸೀರೆ ಖರೀದಿಸುವವರಿಗೆ ಸಲಹೆಗಳು
ನವರಾತ್ರಿ ಹಾಗೂ ಇತರೆ ಧಾರ್ಮಿಕ ಸಮಾರಂಭಗಳಲ್ಲಿ ಧರಿಸಬಹುದು.
ಗ್ಲಾಮರಸ್ ಲುಕ್‌ಗಾಗಿ ಈ ಸೀರೆ ಆಯ್ಕೆ ಬೇಡ. ಸಂಸ್ಕೃತಿಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ ಎಂಬುದು ಗಮನದಲ್ಲಿರಲಿ.
ಸದಾ ಕಾಲ ಈ ಸೀರೆಯನ್ನು ಉಡಲು ಸಾಧ್ಯವಿಲ್ಲ.
ದೇಸಿ ಲುಕ್‌ಗೆ ಈ ಸೀರೆ ಉಡಬಹುದು.
ಕಾಲಿನ ಭಾಗದಲ್ಲಿ ದೇವಿ ಮುಖವಿದ್ದಲ್ಲಿ ಈ ಸೀರೆ ಆಯ್ಕೆ ಬೇಡ.
(ಲೇಖಕಿ ಫ್ಯಾಷನ್ ಪತ್ರಕರ್ತೆ)