ಬೆಂಗಳೂರು: ಚುನಾವಣಾ ಪ್ರಕ್ರಿಯೆಗೆ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ತಡೆಯನ್ನು ಹೈಕೋರ್ಟ್ ತೆರವು ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ (Government employees Association) ಚುನಾವಣೆ ಪ್ರಕ್ರಿಯೆ ಹಿಂದಿನ ಸೂಚನೆಯಂತೆ ನಡೆಯಲಿದೆ. ಅಕ್ಟೋಬರ್ 8ರಂದು ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂಬುದಾಗಿ ಚುನಾವಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ ನ್ಯಾಯಾಲಯದಲ್ಲಿ ಚುನಾವಣೆ ಪ್ರಕ್ರಿಯೆಗೆ ನೀಡಲಾಗಿದ್ದ ತಡೆಯನ್ನು ಹೈಕೋರ್ಟ್ ಶುಕ್ರವಾರ ರದ್ದು ಮಾಡಿದೆ. ಹೀಗಾಗಿ ಅಕ್ಟೋಬರ್ 8ರಂದು ಚುನಾವಣೆ ಪ್ರಕ್ರಿಯೆ ನಡೆಸಲು ಚುನಾವಣಾಧಿಕಾರಿ ಸಿದ್ದತೆ ನಡೆಸಿದ್ದಾರೆ. ಚುನಾವಣೆ ಸಂಬಂಧಿಸಿ ಸೆಪ್ಟೆಂಬರ್ 12ರಂದ ಹೊರಡಿಸಿದ್ದ ಅಧಿಸೂಚನೆಯೇ ಮಾನ್ಯವಾಗಿದೆ.
ಸೆಪ್ಟೆಂಬರ್ 17ರಿಂದ ಬೆಂಗಳೂರು ನಗರ ರಾಜ್ಯ ಪರಿಷತ್ನಲ್ಲಿ ನಾಮಪತ್ರ ಸಲ್ಲಿಕೆ ಆರಂಭಗೊಂಡಿತ್ತು. ಅಂತೆಯೇ ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಹಾಗೂ ಅವಿರೋಧವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸ್ಪರ್ಧಿಗಳು ಇರುವ ಕಡೆ ಚುನಾವಣೆಗಳು ನಡೆಯಲಿವೆ.
ಚುನಾವಣಾಧಿಕಾರಿ ಹೊರಡಿಸಿರುವ ಹೊಸ ಪ್ರಕಟಣೆ ಈ ಕೆಳಗಿನಂತಿದೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಚುನಾವಣಾಧಿಕಾರಿಯಾದ ಎ. ಹನುಮನರಸಯ್ಯ ಆದ ನಾನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಜಿಲ್ಲೆ, ತಾಲ್ಲೂಕು, ಯೋಜನಾ ಶಾಖೆಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯ ಸ್ಥಾನದ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ದಿನಾಂಕ: 12-09-2024 ರಂದು ಸಂಘದ ಚುನಾವಣಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿರುತ್ತೇನೆ. ದಿನಾಂಕ: 17-09-2024 ರಿಂದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯ ಸ್ಥಾನದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಈಗಾಗಲೇ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿ ಹಾಗೂ ಅವಿರೋಧವಾಗಿ ಆಯ್ಕೆಯಾದವರ ಪಟ್ಟಿ ಪ್ರಕಟಿಸಲಾಗಿದೆ. ಅವಿರೋಧವಾಗಿ ಆಯ್ಕೆಯಾಗದ ಮತಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ ಮತಕ್ಷೇತ್ರಗಳ ಚುನಾವಣೆಗಳು ದಿನಾಂಕ: 08-10-2024 ರಿಂದ ಆರಂಭವಾಗಲಿವೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಸಂಬಂಧ ಶ್ರೀ ಕೃಷ್ಣಯ್ಯ, ದ್ವಿ.ದ.ಸ. ಲೋಕೋಪಯೋಗಿ ಇಲಾಖೆ ಅವರು ಬೆಂಗಳೂರು ನಗರ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂಬಂಧ ನ್ಯಾಯಾಲಯವು ಕರ್ನಾಟಕ ರಾಜ್ಯ ಸರ್ಕಾರಿ ಸಂಘಕ್ಕೆ ಚುನಾವಣಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡದೆ ತಡೆಯಾಜ್ಞೆ ನೀಡಿತ್ತು. (O.S No: 6981/2024) ಈ ಸಂದರ್ಭದಲ್ಲಿ ದೂರುದಾರರು ಸಂಘದ ಹಳೆಯ ಬೈಲಾವನ್ನು ಸಲ್ಲಿಸಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುತ್ತಾರೆ.
ಇದನ್ನೂ ಓದಿ : Government employees Association : ನೌಕರರ ಸಂಘದ ಚುನಾವಣೆಗೆ ನೀಡಿದ್ದ ತಡೆ ತೆರವು ಮಾಡಿದ ಹೈಕೋರ್ಟ್
ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕರ್ನಾಟಕ ಉಚ್ಚ ನ್ಯಾಯಾಲಯ ಪೀಠದಲ್ಲಿ ದಿನಾಂಕ 04-10-2024 ರಂದು ಪ್ರಕರಣ ದಾಖಲಿಸಿತ್ತು. ಶ್ರೀ ಕೃಷ್ಣಯ್ಯರವರ ದೂರಿಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಸಿಟಿ ಸಿವಿಲ್ ನ್ಯಾಯಾಲಯವು ನೀಡಿದ್ದ ಮಧ್ಯಂತರ ತಡೆ ಆದೇಶಕ್ಕೆ ತಡೆಯಾಜ್ಞೆ ನೀಡಿ ಚುನಾವಣಾ ಪ್ರಕ್ರಿಯೆಗಳನ್ನು ಮುಂದುವರಿಸಲು ಘನ ಉಚ್ಚ ನ್ಯಾಯಾಲಯ ಆದೇಶ ನೀಡಿರುತ್ತದೆ.
ಕರ್ನಾಟಕ ಘನ ಉಚ್ಚ ನ್ಯಾಯಾಲಯದ ಆದೇಶದಂತೆ ದಿನಾಂಕ: 12-09-2024ರಂದು ಹೊರಡಿಸಿದ್ದ
ಎಲ್ಲಾ ಹಂತದ ಚುನಾವಣೆಗಳ ಪ್ರಕ್ರಿಯೆಗಳು ಯಥಾವತ್ತಾಗಿ ಮುಂದುವರೆಯಲಿವೆ.