Sunday, 6th October 2024

Salil Ankola : ಮಾಜಿ ಕ್ರಿಕೆಟಿಗ ಸಲೀಲ್‌ ಅಂಕೋಲಾ ತಾಯಿಯ ಮೃತ ದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆ

Salil Ankola

ಪುಣೆ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಲೀಲ್ ಅಂಕೋಲಾ (Salil Ankola) ಅವರ ತಾಯಿ ಪುಣೆ ನಗರದ ಪ್ರಭಾತ್ ರಸ್ತೆ ಪ್ರದೇಶದ ತಮ್ಮ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಮಾಲಾ ಅಶೋಕ್ ಅಂಕೋಲಾ (77) ಅವರು ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಣೆಯ ಡೆಕ್ಕನ್ ಪ್ರದೇಶದ ಜನಪ್ರಿಯ ಪ್ರಭಾತ್ ರಸ್ತೆಯ ಲೇನ್ ಸಂಖ್ಯೆ 14ರ ರೇಜ್ ಪಥದಲ್ಲಿರುವ ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿ ಮಾಲಾ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್ ಅವರ ಪುತ್ರಿಯ ಹೆಸರಿನಲ್ಲಿದೆ. ಅವರೂ ಸಮೀಪದಲ್ಲೇ ವಾಸಿಸುತ್ತಿದ್ದರು. ಆಗಾಗ ತನ್ನ ತಾಯಿಯ ಫ್ಲ್ಯಾಟ್‌ಗೆ ಬರುತ್ತಿದ್ದರು.

ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆಗೆಲಸದವರು ಬಂದಾಗ ಮಾಲಾ ಮನೆಯ ಬಾಗಿಲು ತೆರೆಯಲಿಲ್ಲ ಎಂದು ಅವರು ಹೇಳಿದ್ದಾರೆ. ಮಾಲಾ ಪ್ರತಿಕ್ರಿಯಿಸದ ಕಾರಣ, ಮನೆಕೆಲಸಕೆ ಅವರ ಪುತ್ರಿಯನ್ನು ಸಂಪರ್ಕಿಸಿದ್ದರು. ಅವರು ಮನೆಯ ಕೀಲಿಗಳೊಂದಿಗೆ ವ್ಯಕ್ತಿಯನ್ನು ಕಳುಹಿಸಿದ್ದಾರೆ ಎಂದು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಆ ವ್ಯಕ್ತಿ ಬಾಗಿಲು ತೆರೆದು ಭದ್ರತಾ ಸಿಬ್ಬಂದಿಯೊಂದಿಗೆ ಒಳಗೆ ಹೋದಾಗ ಮಾಲಾ ತನ್ನ ಹಾಸಿಗೆಯ ಮೇಲೆ ಗಾಯಗೊಂಡ ಸ್ಥಿತಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಮಾಲಾ ಅವರ ಕುತ್ತಿಗೆಗೆ ಗಾಯಗಳಾಗಿವೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಆಕೆಯ ಕುಟುಂಬ ಸದಸ್ಯರು ಅವಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಫಾಸ್ಟ್‌ಟ್ಯಾಗ್‌ ನಿಯಮಗಳಲ್ಲಿ ಇಂದಿನಿಂದ ಬದಲಾವಣೆ

ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಆದರೆ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ತಿಳಿಯಲು ವಿವಿಧ ಕೋನಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.