Monday, 25th November 2024

IND vs BAN T20I: ಮೊದಲ ಟಿ20 ಪಂದ್ಯಕ್ಕೆ 2,500 ಪೊಲೀಸರ ನಿಯೋಜನೆ

IND vs BAN T20I

ಗ್ವಾಲಿಯರ್‌: ಇಲ್ಲಿನ ಮಾಧವ್​ರಾವ್​ ಸಿಂಧಿಯಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಾಳೆ ನಡೆಯುವ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ(IND vs BAN T20I) ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಹಿಂದೂ ಪರ ಸಂಘಟನೆಗಳು ಅ.6ರಂದು ಬಂದ್‌ಗೆ ಕರೆ ನೀಡಿದ್ದು ಹಾಗೂ ಈ ಭಾಗದಲ್ಲಿ ದೊಡ್ಡ ಪ್ರತಿಭಟನೆಯ ಎಚ್ಚರಿಕೆ ನೀಡಿರುವ ಕಾರಣ ಭದ್ರತೆಗಾಗಿ ಬರೋಬ್ಬರಿ 2,500 ಪೊಲೀಸರನ್ನು ನಿಯೋಜಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ, ಹಿಂದೂಪರ ಸಂಘಟನೆಗಳು ಭಾರತ-ಬಾಂಗ್ಲಾ ಪಂದ್ಯವನ್ನು ವಿರೋಧಿಸಿ ಹಿಂದು ಮಹಾಸಭಾದ ಉಪಾಧ್ಯಕ್ಷ ಜೈವೀರ್​ ಭಾರಾಧ್ವಾಜ್ ಗ್ವಾಲಿಯರ್‌ ಬಂದ್‌ಗೆ ಕರೆ ನೀಡಿದ್ದಾರೆ. ಪಂದ್ಯ ನಡೆಸಲು ಮುಂದಾದರೆ ಪಿಚ್​ ಅಗೆಯುವ ಮೂಲಕ ಪಂದ್ಯ ನಡೆಯದಂತೆ ತಡೆಯುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಹೀಗಾಗಿ ಗ್ವಾಲಿಯರ್‌ ಸ್ಟೇಡಿಯಂ ಸುತ್ತ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.

ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೂ ಇಲ್ಲಿನ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸುವಂತೆ ಸೂಚನೆ ನೀಡಿದೆ. ಬ್ಯಾನರ್‌ಗಳು, ಪೋಸ್ಟರ್‌ಗಳು, ಧ್ವಜಗಳನ್ನು ಸ್ಟೇಡಿಯಂಗೆ ತರಬಾರದೆಂದು ಹೇಳಿದೆ. ಒಂದೊಮ್ಮೆ ಈ ನಿಯಮ ಪಾಲಿಸದೆ ಸಿಕ್ಕಿ ಬಿದ್ದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್‌‍ ವರಿಷ್ಠಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಧವ್​ರಾವ್​ ಸಿಂಧಿಯಾ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯದೆ ಸುಮಾರು 14 ವರ್ಷಗಳೇ ಕಳೆದಿವೆ. ಇಲ್ಲಿ ಕೊನೆಯ ಬಾರಿಗೆ ಭಾರತ ತಂಡ ಪಂದ್ಯವನ್ನಾಡಿದ್ದು 2010ರಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ಕ್ರಿಕೆಟ್‌ ದೇವರು ಎಂದು ಕರೆಸಿಕೊಳ್ಳುವ ಸಚಿನ್‌ ತೆಂಡೂಲ್ಕರ್‌ ಅವರು ದ್ವಿಶತಕ ಬಾರಿಸಿ ಚರಿತ್ರೆ ಬರೆದಿದ್ದರು. ಈ ಪಂದ್ಯ ನಡೆದ ಬಳಿಕ ಇಲ್ಲಿ ಇದುವರೆಗೂ ಯಾವುದೇ ಪಂದ್ಯ ನಡೆದಿಲ್ಲ. ಇದೀಗ 14 ವರ್ಷಗಳ ಬಳಿಕ ಪಂದ್ಯ ಆತಿಥ್ಯ ಸಿಕ್ಕಿದೆ.

ಇದನ್ನೂ ಓದಿ IND vs BAN 1st T20: ಪಾಂಡ್ಯ ಬೌಲಿಂಗ್‌ ಬಗ್ಗೆ ಕೋಚ್‌ ಮಾರ್ಕೆಲ್‌ಗೆ ಅಸಮಾಧಾನ

ಭಾರತ ಮತ್ತು ಬಾಂಗ್ಲಾದೇಶ ಇದುವರೆಗೆ ಒಟ್ಟು 14 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ಗರಿಷ್ಠ 13 ಪಂದ್ಯಗಳನ್ಬು ಗೆದ್ದು ಬೀಗಿದೆ. ಬಾಂಗ್ಲಾ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. 2019 ರಲ್ಲಿ ಬಾಂಗ್ಲಾಕ್ಕೆ ಈ ಗೆಲುವು ಒಲಿದಿತ್ತು. 7 ವಿಕೆಟ್‌ ಅಂತರದಿಂದ ಪಂದ್ಯವನ್ನು ಜಯಿಸಿತ್ತು. ಇತ್ತಂಡಗಳು ಕೊನೆಯ ಬಾರಿಗೆ ಟಿ20 ಮುಖಾಮುಖಿಯಾದದ್ದು ಜೂನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ. ಇಲ್ಲಿ ಭಾರತ 50 ರನ್‌ ಅಂತರದ ಗೆಲುವು ಸಾಧಿಸಿತ್ತು.

ಭಾರತ ತಂಡ: ಸೂರ್ಯಕುಮಾರ್‌ ಯಾದವ್‌ (ನಾಯಕ), ಅಭಿಷೇಕ್‌ ಶರ್ಮ, ಸಂಜು ಸ್ಯಾಮ್ಸನ್‌, ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ, ರಿಯಾನ್‌ ಪರಾಗ್‌, ನಿತೀಶ್‌ ಕುಮಾರ್‌ ರೆಡ್ಡಿ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ವರುಣ್‌ ಚಕ್ರವರ್ತಿ, ಜಿತೇಶ್‌ ಶರ್ಮ, ಅರ್ಷದೀಪ್‌ ಸಿಂಗ್‌, ಹರ್ಷಿತ್‌ ರಾಣಾ, ಮಾಯಾಂಕ್‌ ಯಾದವ್‌.