Saturday, 23rd November 2024

Zakir Naik: ಕಾರ್ಯಕ್ರಮದ ಮಧ್ಯದಲ್ಲೇ ವೇದಿಕೆ ಬಿಟ್ಟು ಹೊರ ನಡೆದ ಝಾಕಿರ್ ನಾಯ್ಕ್; ಕಾರಣ ಕೇಳಿದರೆ ದಂಗಾಗುತ್ತೀರಿ

Zakir Naik

ಇಸ್ಲಾಮಾಬಾದ್‌: ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ (Zakir Naik) ಪಾಕಿಸ್ತಾನದ ಅನಾಥಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವರ್ತಿಸಿದ ರೀತಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ. ಜತೆಗೆ ಆತನ ವರ್ತನೆಗೆ ಸಾರ್ವತ್ರಿಕ ಖಂಡನೆ ವ್ಯಕ್ತವಾಗುತ್ತಿದೆ.

ಪಾಕಿಸ್ತಾನ ಮೂಲದ ಸಂಶೋಧಕ ಮತ್ತು ಪತ್ರಕರ್ತ ಉಸ್ಮಾನ್ ಚೌಧರಿ ಹಂಚಿಕೊಂಡಿರುವ ವಿಡಿಯೊದಲ್ಲಿ ಅನಾಥಾಶ್ರಮದ ಅಧಿಕಾರಿಗಳು ಝಾಕಿರ್ ನಾಯ್ಕ್‌ನನ್ನು ಸ್ವಾಗತಿಸುವ ಬದಲು ಅನಾಥ ಹುಡುಗಿಯರು ಸ್ವಾಗತಿಸುತ್ತಿರುವುದು ಕಂಡುಬಂದಿದೆ. ಅದಾಗ್ಯೂ ಝಾಕಿರ್ ನಾಯ್ಕ್‌ ಆತುರದಲ್ಲಿ ವೇದಿಕೆಯಿಂದ ಹೊರಹೋಗಿದ್ದಾನೆ. ಇಂಗ್ಲೆಂಡ್‌ ಮೂಲದ ಪ್ರಭಾವಿ ಸಾಮಾಜಿಕ ಮಾಧ್ಯಮ ಬಳಕೆದಾರ ಇಮ್ತಿಯಾಜ್ ಮಹಮೂದ್ ಈ ಬಗ್ಗೆ ಬರೆದುಕೊಂಡುದ್ದು, ʼʼಅನಾಥಾಶ್ರಮದ ಅಧಿಕಾರಿಗಳು ಹುಡುಗಿಯರನ್ನು ಝಾಕಿರ್‌ನ ಮಕ್ಕಳು ಎಂದು ಪರಿಚಯಿಸಿದ್ದರಿಂದ ಕೋಪದಿಂದ ವೇದಿಕೆಯಿಂದ ಹೊರನಡೆದಿದ್ದಾರೆʼʼ ಎಂದು ಕಾರಣ ತಿಳಿಸಿದ್ದಾರೆ.

ʼʼನೀವು ಅವರನ್ನು ಮುಟ್ಟಲು ಅಥವಾ ನನ್ನ ಹೆಣ್ಣುಮಕ್ಕಳು ಎಂದು ಕರೆಯಲು ಸಾಧ್ಯವಿಲ್ಲ ಎಂದು ಝಾಕಿರ್ ನಾಯ್ಕ್ ಹೇಳಿದ್ದಾರೆ. ಈ ಹುಡುಗಿಯರು ಮದುವೆಯ ವಯಸ್ಸಿನವರು. ಈ ಕಾರಣಕ್ಕೆ ತಮ್ಮ ಮಕ್ಕಳು ಎಂದು ಕರೆಯಲು ಸಾಧ್ಯವಿಲ್ಲ ಎನ್ನುವುದು ಝಾಕಿರ್‌ನ ವಾದʼʼ ಎಂಬುದಾಗಿ ಇಮ್ತಿಯಾಜ್ ಮಹಮೂದ್ ತಿಳಿಸಿದ್ದಾರೆ.

ʼʼಝಾಕಿರ್ ನಾಯ್ಕ್‌ನನ್ನು ಸ್ವಾಗತಿಸಿದ ಹುಡುಗಿಯರನ್ನು ಅವರ ಮಕ್ಕಳೆಂದು ಅಧಿಕಾರಿಗಳು ಪರಿಚಯಿಸಿದ್ದರಿಂದ ಕೋಪಗೊಂಡ ಅವರು ವೇದಿಕೆಯಿಂದ ನಿರ್ಗಮಿಸಿದ್ದಾರೆ. ಅವರ ಪ್ರಕಾರ ಆ ಹುಡುಗಿಯರನ್ನು ಮದುವೆಯಾಗಬಹುದಂತೆʼʼ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಸದ್ಯ ಆತನ ವರ್ತನೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಪಾಕಿಸ್ತಾನಕ್ಕೆ ಭೇಟಿ

ಒಂದು ತಿಂಗಳ ಭೇಟಿಗಾಗಿ ಪಾಕಿಸ್ತಾನಕ್ಕೆ ತೆರಳಿದ ಝಾಕಿರ್ ನಾಯ್ಕ್‌ಗೆ ಅಲ್ಲಿ ಕೆಂಪುಹಾಸಿನ ಸ್ವಾಗತ ನೀಡಲಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಉಪ ಪ್ರಧಾನಿ ಇಶಾಕ್ ದಾರ್ ಝಾಕಿರ್ ನಾಯ್ಕ್‌ನನ್ನು ಭೇಟಿಯಾಗಿದ್ದಾರೆ. ಝಾಕಿರ್ ನಾಯ್ಕ್‌ ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಸರಣಿ ಸಾರ್ವಜನಿಕ ಭಾಷಣಗಳನ್ನು ಮಾಡಲಿದ್ದಾನೆ.

ಎಕ್ಸ್’ ಖಾತೆಗೆ ಭಾರತದಲ್ಲಿ ನಿಷೇಧ

ಈ ಮಧ್ಯೆ ಝಾಕಿರ್ ನಾಯ್ಕ್ (Zakir Naik)ನ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಒಂದು ತಿಂಗಳ ಕಾಲ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಬೋಧಕನನ್ನು ಪಾಕಿಸ್ತಾನ ಸನ್ಮಾನಿಸಿದ ರೀತಿಯನ್ನು ವಿದೇಶಾಂಗ ಸಚಿವಾಲಯ (ಎಂಇಎ) ಖಂಡಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.ಝಾಕಿರ್ ನಾಯ್ಕ್‌ನನ್ನು ಪಾಕಿಸ್ತಾನದಲ್ಲಿ ಸ್ವಾಗತಿಸಲಾಗುತ್ತಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು. “ಪಲಾಯನ ಮಾಡಿದ ಭಾರತೀಯನಿಗೆ ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸ್ವಾಗತ ದೊರೆತಿರುವುದು ಆಶ್ಚರ್ಯವೇನಲ್ಲ. ಇದು ಖಂಡನೀಯ” ಎಂದು ಅವರು ಹೇಳಿದ್ದರು.

ಝಾಕಿರ್ ವಿರುದ್ಧ ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣಗಳ ಮೂಲಕ ಉಗ್ರವಾದ ಪ್ರಚೋದಿಸಿದ ಆರೋಪವಿದೆ. ಅಲ್ಲದೆ ಆತನ ವಿರುದ್ಧ ಹಲವು ಪ್ರಕರಣಗಳಿವೆ. ಹೀಗಾಗಿ ಭಾರತ ಬಿಟ್ಟು 2016ರಿಂದ ಮಲೇಷ್ಯಾದಲ್ಲಿ ನೆಲೆಸಿದ್ದಾನೆ.

ಈ ಸುದ್ದಿಯನ್ನೂ ಓದಿ: Zakir Naik : ವಿವಾದಾತ್ಮಕ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್ ‘ಎಕ್ಸ್’ ಖಾತೆಗೆ ಭಾರತದಲ್ಲಿ ನಿಷೇಧ