Friday, 22nd November 2024

Rajendra Prasad: ಟಾಲಿವುಡ್‌ ಹಿರಿಯ ನಟ ರಾಜೇಂದ್ರ ಪ್ರಸಾದ್‌ ಪುತ್ರಿ ಗಾಯತ್ರಿ ನಿಧನ

Rajendra Prasad

ಹೈದರಾಬಾದ್‌: ತೆಲುಗು ಚಿತ್ರರಂಗದ ಹಿರಿಯ ನಟ ರಾಜೇಂದ್ರ ಪ್ರಸಾದ್‌ (Rajendra Prasad) ಅವರ ಪುತ್ರಿ ಗಾಯತ್ರಿ (Gayatri) ಇಂದು (ಅಕ್ಟೋಬರ್‌ 5) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ಭಾನುವಾರ ಅಂತ್ಯಕ್ರಿಯೆ ನೆರವೇರಲಿದೆ.

ಎದೆನೋವು ಕಾಣಿಸಿಕೊಂಡ ಗಾಯತ್ರಿ ಅವರನ್ನು ಕೂಡಲೇ ಹೈದರಾಬಾದ್‌ನ ಎಐಜಿ ಆಸ್ಪತ್ರೆ (AIG Hospital)ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ರಾಜೇಂದ್ರ ಪ್ರಸಾದ್‌ ಅವರ ಸಹೋದರ ಕೂಡ ಮೃತಪಟ್ಟಿದ್ದರು. ವಿಜಯವಾಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅವರು ಅಸುನೀಗಿದ್ದರು.

ವೃತ್ತಿಯಲ್ಲಿ ಪೌಷ್ಟಿಕ ಆಹಾರ ತಜ್ಞೆ (Nutritionist) ಆಗಿದ್ದ ಗಾಯತ್ರಿ ಅವರ ನಿಧನಕ್ಕೆ ಇಡೀ ತೆಲುಗು ಚಿತ್ರರಂಗ ಅಘಾತ ವ್ಯಕ್ತಪಡಿಸಿದೆ. ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಗಾಯತ್ರಿ ಪ್ರೇಮ ವಿವಾಹವಾದ ಕಾರಣ ಸ್ವಲ್ಪ ಸಮಯದವರೆಗೆ ಅವರೊಂದಿಗೆ ಸಂಪರ್ಕ ಕಡಿತಗೊಳಿಸಿದ್ದಾಗಿ ರಾಜೇಂದ್ರ ಪ್ರಸಾದ್‌ ಈ ಹಿಂದೆ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಬಳಿಕ ತಂದೆ-ಮಗಳ ಸಂಬಂಧ ಮೊದಲಿನಂತಾಗಿತ್ತು.

ಈ ಹಿಂದೆ ʼಬೇವಾರ್ಸ್ʼ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಾಜೇಂದ್ರ ಪ್ರಸಾದ್ ಮಾತನಾಡಿ ಮಗಳ ಬಗ್ಗೆ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದರು. ʼʼಒಬ್ಬ ವ್ಯಕ್ತಿಯು ತನ್ನ ಮಗಳಲ್ಲಿ ತಾಯಿಯನ್ನು ಹುಡುಕಲು ಪ್ರಯತ್ನಿಸುತ್ತಾನೆ. ನಾನು ಕೇವಲ 10 ವರ್ಷದವನಿದ್ದಾಗ ತಾಯಿಯನ್ನು ಕಳೆದುಕೊಂಡೆ ಮತ್ತು ಮಗಳಲ್ಲಿ ತಾಯಿಯನ್ನು ಕಂಡುಕೊಂಡೆʼʼ ಎಂದು ಹೇಳಿದ್ದರು. ಅವರ ಭಾವನಾತ್ಮಕ ಭಾಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

1977ರಲ್ಲಿ ತೆರೆಕಂಡ ʼಸ್ನೇಹಂʼ ತೆಲುಗು ಚಿತ್ರದ ಮೂಲ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ರಾಜೇಂದ್ರ ಪ್ರಸಾದ್‌ ಟಾಲಿವುಡ್‌ನ ಪ್ರಮುಖ ನಟರಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು ಜತೆಗೆ ಕನ್ನಡ, ತಮಿಳು ಮತ್ತು ಇಂಗ್ಲಿಷ್‌ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 4 ಬಾರಿ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದ ರಾಜೇಂದ್ರ ಪ್ರಸಾದ್‌ ಡಬ್ಬಿಂಗ್‌ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. 2005ರಲ್ಲಿ ಬಿಡುಗಡೆಯಾದ ಕನ್ನಡದ ʼಮಹಾಸಾಧ್ವಿ ಮಲ್ಲಮ್ಮʼ ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. 2009ರ ʼಕ್ವಿಕ್‌ ಗನ್‌ ಮುರುಗನ್‌ʼ ಎಂಬ ಇಂಗ್ಲಿಷ್‌ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಜೇಂದ್ರ ಪ್ರಸಾದ್‌ ನಟನೆಯ ʼಕಲ್ಕಿ 2898 ಎಡಿʼ ಸಿನಿಮಾ ತೆರೆಕಂಡಿತ್ತು. ಪ್ರಭಾಸ್‌, ದೀಪಿಕಾ, ಅಮಿತಾಭ್‌ ಬಚ್ಚನ್‌ ಅಭಿನಯದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.

ಈ ಸುದ್ದಿಯನ್ನೂ ಓದಿ: Jaya Bachchan: ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದೆ ಎಂದ ಜಯಾ; ಹೇಮಾ ಪ್ರತಿಕ್ರಿಯೆ ಹೇಗಿತ್ತು ನೋಡಿ