Monday, 25th November 2024

Mysuru Dasara: ದಸರೆಗೆ ನಾಡಿನಾದ್ಯಂತ 2000 ವಿಶೇಷ ಬಸ್‌ ಬಿಟ್ಟ ಕೆಎಸ್‌ಆರ್‌ಟಿಸಿ

ksrtc special bus

ಬೆಂಗಳೂರು: ಮೈಸೂರು ದಸರಾ-2024 (Mysuru Dasara 2024, Mysore Dasara) ಮತ್ತು ದಸರಾ ರಜೆಗಳ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 9ರಿಂದ 12ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬೆಂಗಳೂರಿನಿಂದ (Bangalore News) ರಾಜ್ಯ ಮತ್ತು ಹೊರರಾಜ್ಯಗಳ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.

ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರು ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮ, ಪ್ರಸ್ತುತ ಕಾರ್ಯಾಚರಿಸುತ್ತಿರುವ ವೇಗದೂತ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ಲೀಪರ್, ಅಶ್ವಮೇಧ ಸಾರಿಗೆ ಸೇವೆಗಳ ಜೊತೆಗೆ ಹೆಚ್ಚುವರಿ ಬಸ್‌ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿದೆ.

09/10/2024 ರಿಂದ 12/10/2024ರವರೆಗೆ ಬೆಂಗಳೂರಿನಿಂದ ರಾಜ್ಯದ ಮತ್ತು ಹೊರ ರಾಜ್ಯದ ವಿವಿಧ ಸ್ಥಳಗಳಿಗೆ 2000ಕ್ಕೂ ಹೆಚ್ಚು ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಈ ಬಸ್‌ಗಳು ಹೊರಡಲಿವೆ. ವಿವಿಧ ಸ್ಥಳಗಳಿಂದ ವಾಪಸ್​ ಬೆಂಗಳೂರಿಗೆ ಬರಲು 13/10/2024ರಿಂದ 14/10/2024ರವರೆಗೆ ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್ಆರ್​ಟಿಸಿ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿಗೆ ವಿಶೇಷ ಬಸ್​ಗಳಿವೆ?

ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆರಾಜ್ಯಗಳಲ್ಲಿನ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪುಣೆ, ಎರ್ನಾಕುಲಂ, ಪಾಲ್ಗಾಟ್ ಹಾಗೂ ಇತರೆ ಸ್ಥಳಗಳಿಗೆ ಈ ವಿಶೇಷ ಬಸ್​ ವ್ಯವಸ್ಥೆ ಮಾಡಲಾಗಿದೆ.

ಮೈಸೂರಿಗೆ ಪ್ರತ್ಯೇಕ ವಿಶೇಷ ಬಸ್

ಮೈಸೂರು ದಸರಾ ನೋಡಲು ಹೋಗುವವರೆಗೂ ಸಹ ಹೆಚ್ಚುವರಿ ಬಸ್​ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 260 ಹೆಚ್ಚುವರಿ ಬಸ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ, ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಕೆ.ಆರ್.ಎಸ್ ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಮಡಿಕೇರಿ, ಮಂಡ್ಯ, ಮಳವಳ್ಳಿ, ಹೆಚ್. ಡಿ ಕೋಟೆ, ಚಾಮರಾಜನಗರ, ಹುಣಸೂರು. ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 400 ಹೆಚ್ಚುವರಿ ವಾಹನಗಳು ಸೇರಿ ಒಟ್ಟಾರೆ 660 ದಸರಾ ವಿಶೇಷ ವಾಹನಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಪ್ಲೈ ಬಸ್ (Fly Bus) ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ನಿಗಮ ತಿಳಿಸಿದೆ.

ಇದನ್ನೂ ಓದಿ: Mysuru Dasara: ಸರಕಾರ ಉರುಳಿಸುವ ದುರಾಲೋಚನೆ ಬರದಂತೆ ಚಾಮುಂಡಿ ದೇವಿ ತಡೆಯಲಿ: ಮೈಸೂರು ದಸರಾ ಉದ್ಘಾಟಿಸಿ ಡಾ. ಹಂಪನಾ