ದುಬೈ: ನ್ಯೂಜಿಲ್ಯಾಂಡ್(INDW vs NZW) ವಿರುದ್ಧ ಶುಕ್ರವಾರ ನಡೆದ ಟಿ20 ವಿಶ್ವಕಪ್‌ನ(Womens T20 World Cup 2024) ಪಂದ್ಯದಲ್ಲಿ ಭಾರತ 58 ರನ್‌ಗಳ ಹೀನಾಯ ಸೋಲು ಕಂಡಿತ್ತು. ಇದೇ ಪಂದ್ಯದಲ್ಲಿ ರನೌಟ್-ಡೆಡ್ಬಾಲ್(Dead-ball rule) ವಿವಾದ ಕೂಡ ಭಾರತವನ್ನು ಕಾಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ತಾಳ್ಮೆ ಕಳೆದುಕೊಂಡು ಅಂಪೈರ್ ಜತೆಗೆ ವಾಗ್ವಾದ ನಡೆಸಿದ್ದರು. ಐಸಿಸಿ ನೀತಿಸಂಹಿತೆಯನ್ನು ಉಲ್ಲಂಘಿಸಿದ ಕಾರಣ ಅವರು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಕಂಡುಬಂದಿದೆ.
ದೀಪ್ತಿ ಶರ್ಮ ಎಸೆದ ಪಂದ್ಯದ 14ನೇ ಓವರ್ನ ಕೊನೇ ಎಸೆತದಲ್ಲಿ ಆಲ್‌ರೌಂಡರ್ ಅಮೆಲಿಯಾ ಕೆರ್ 2ನೇ ರನ್ ಕಸಿಯಲು ಯತ್ನಿಸಿದಾಗ ಕೀಪರ್ ರಿಚಾ ಘೋಷ್, ಅಮೆಲಿಯಾರನ್ನು ರನೌಟ್ ಮಾಡಿದರು. ಆದರೆ ಅಂಪೈರ್, ಡೆಡ್ಬಾಲ್ ಎಂದು ಪರಿಗಣಿಸಿ ರನೌಟ್ ತೀರ್ಪು ನೀಡಲು ನಿರಾಕರಿಸಿದರು.
ಕೆರ್-ಡಿವೈನ್ ಮೊದಲ ರನ್ ಗಳಿಸಿದ ಬೆನ್ನಲ್ಲೇ ಅಂಪೈರ್, ಬೌಲರ್ ದೀಪ್ತಿಗೆ ಕ್ಯಾಪ್ ಮರಳಿಸಿದರು. ಈ ನಡುವೆ ಕಿವೀಸ್ ಜೋಡಿ 2ನೇ ರನ್ ಕಸಿಯಲು ಯತ್ನಿಸಿದಾಗ ಭಾರತ ರನೌಟ್ ಮಾಡಿದರೂ, ಅಂಪೈರ್ ಔಟ್ ನೀಡಲಿಲ್ಲ. ಇದರಿಂದ ಅಂಪೈರ್ ಮತ್ತು ನಾಯಕಿ ಹರ್ಮಾನ್ಪ್ರೀತ್ ಕೌರ್ ನಡುವೆ ಕೆಲಕಾಲ ವಾಗ್ವಾದ ಏರ್ಪಟ್ಟಿತು. ಈ ವಿವಾದದಿಂದಾಗಿ ಹರ್ಮಾನ್ಪ್ರೀತ್ ಕೌರ್ ಇನ್ನು ಐಸಿಸಿಯಿಂದ ದಂಡ ಅಥವಾ ನಿಷೇಧ ಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಕಾಣಿಸಿದೆ.
ರನೌಟ್ ವಿವಾದದ ಬಗ್ಗೆ ಭಾರತ ತಂಡದ ಹಿರಿಯ ಆಟಗಾರ ಆರ್.ಅಶ್ವಿನ್ ಕೂಡ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಅಂಪೈರ್ ತೀರ್ಪು ನಿಜವಾಗಿಯೂ ತಪ್ಪಾಗಿದೆ. ಇದು ನಿಜವಾಗಿಯೂ ಔಟ್ ಎಂದು ಹೇಳಿದ್ದಾರೆ. ಅಂಪೈರ್ ತಪ್ಪು ನಿರ್ಧಾರದಿಂದ ಭಾರತ ತಂಡಕ್ಕೆ ಹಿನ್ನಡೆಯಾಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ IND vs BAN 1st T20: ಬಿಗಿ ಭದ್ರತೆಯಲ್ಲಿ ನಾಳೆ ಭಾರತ-ಬಾಂಗ್ಲಾ ಟಿ20 ಫೈಟ್
ರನೌಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಆಟಗಾರ್ತಿ ಜೆಮಿಮಾ ರೋಡ್ರಿಗಸ್, ಅಮೆಲಿಯಾಗೂ ಇದು ಔಟ್ ಎಂದು ತಿಳಿದಿತ್ತು. ಹೀಗಾಗಿ ಅವರು ಮೈದಾನ ತೊರೆಯಲು ಸಿದ್ಧರಾಗಿದ್ದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಅಂಪೈರ್ ನಿರ್ಣಯವನ್ನು ಒಪ್ಪಿಕೊಳ್ಳಲು ನಮಗೆ ಕಷ್ಟವಾದರೂ ನಾವು ಅಂಪೈರ್ ನಿರ್ಣಯವನ್ನು ಗೌರವಿಸಲೇ ಬೇಕು ಎಂದು ಹೇಳಿದರು.
ಪಂದ್ಯ ಸೋತ ಭಾರತ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ನ್ಯೂಜಿಲ್ಯಾಂಡ್ 4ಕ್ಕೆ 160 ರನ್ನುಗಳ ಸವಾಲಿನ ಮೊತ್ತ ಪೇರಿಸಿದರೆ, ಭಾರತ 19 ಓವರ್‌ಗಳಲ್ಲಿ 102ಕ್ಕೆ ಆಲೌಟ್ ಆಗಿ ಸೋಲು ಕಂಡಿತು. ನ್ಯೂಜಿಲ್ಯಾಂಡ್ ಉತ್ತಮ ಆರಂಭ ಪಡೆದ ಬಳಿಕ ನಾಯಕಿ ಸೋಫಿ ಡಿವೈನ್ ಬಾರಿಸಿದ ಅರ್ಧ ಶತಕದ ನೆರವಿನಿಂದ ನೂರೈವತ್ತರ ಗಡಿ ದಾಟಿತು. ಆರಂಭಿಕರಾದ ಸುಝೀ ಬೇಟ್ಸ್-ಜಾರ್ಜಿಯಾ ಪ್ಲಿಮ್ಮರ್ 7.4 ಓವರ್‌ಗಳಿಂದ 67 ರನ್ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. 4ನೇ ಕ್ರಮಾಂಕದಲ್ಲಿ ಆಡಿದ ಸೋಫಿ ಡಿವೈನ್ 36 ಎಸೆತಗಳಿಂದ 57 ರನ್ ಬಾರಿಸಿ ಅಜೇಯರಾಗಿ ಉಳಿದರು. ಭಾರತ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಾರಿಸಿದ 15 ರನ್ ತಂಡದ ಪರ ದಾಖಲಾದ ಸರ್ವಾಧಿಕ ಮೊತ್ತ. ಮಂಧನಾ 12 ರನ್ ಬಾರಿಸಿದರು. ನಾಳೆ ನಡೆಯುವ ದ್ವಿತೀಯ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಆಡಲಿದೆ.