Friday, 22nd November 2024

PM Kisan Samman: ಪಿಎಂ ಕಿಸಾನ್‌ ನಿಧಿ 18ನೇ ಕಂತಿನ ₹20 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

pm kisan yojana

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯಡಿ (PM Kisan Samman nidhi) 18ನೇ ಕಂತಿನ ₹20 ಸಾವಿರ ಕೋಟಿಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಿದರು.

ಮಹಾರಾಷ್ಟ್ರದ ವಾಶಿಮ್‌ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆಗೆ (ಡಿಬಿಟಿ) ಪ್ರಧಾನಿ ಮೋದಿ ಚಾಲನೆ ನೀಡಿದರು. ದೇಶದ 9.4 ಕೋಟಿಗೂ ಹೆಚ್ಚು ರೈತರಿಗೆ (farmers) ಈ ಯೋಜನೆಯಡಿ (PM kisan Samman yojana) ಸೌಲಭ್ಯ ಸಿಗಲಿದೆ.

9.4 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ತಲಾ 2,000 ರೂ ಸಿಗಲಿದೆ. ಕೇಂದ್ರದಿಂದ ಪಿಎಂ ಕಿಸಾನ್ ಫಲಾನುಭವಿಗಳಿಗೆ ಒಟ್ಟು 20,000 ಕೋಟಿ ರೂ ಹಣ ಬಿಡುಗಡೆ ಆಗಿದೆ. 2019ರಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ಐದು ವರ್ಷದಲ್ಲಿ 3 ಲಕ್ಷ ಕೋಟಿಗೂ ಅಧಿಕ ಹಣವನ್ನು ಸರ್ಕಾರ ವ್ಯಯಿಸಿದೆ. ಇಂದಿನ ಬಿಡುಗಡೆ ಸೇರಿಸಿದರೆ ಸರ್ಕಾರದ ವೆಚ್ಚ ಸುಮಾರು 3.45 ಲಕ್ಷ ಕೋಟಿ ರೂ ಆಗಬಹುದು.

2024ರ ಜೂನ್ 18ರಂದು ಪ್ರಧಾನಿಗಳು ವಾರಾಣಸಿಯಲ್ಲಿ ಪಿಎಂ ಕಿಸಾನ್ 17ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು. 9.26 ಕೋಟಿ ರೈತರ ಖಾತೆಗಳಿಗೆ 21,000 ಕೋಟಿ ರೂ ಹಣ ಸಂದಾಯವಾಗಿತ್ತು. ಪಿಎಂ ಕಿಸಾನ್ ಸ್ಕೀಮ್​ನಲ್ಲಿ ರೈತರಿಗೆ ಸರ್ಕಾರ ವರ್ಷಕ್ಕೆ 6,000 ರೂ ಹಣವನ್ನು ಸಹಾಯಧನವಾಗಿ ನೀಡುತ್ತದೆ. 2,000 ರೂಗಳಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಬೇಸಾಯಕ್ಕೆ ಸಹಾಯವಾಗಲೆಂದು ಸರ್ಕಾರ ಡಿಬಿಟಿ ಸ್ಕೀಮ್​ನಲ್ಲಿ ಈ ಸಹಾಯಧನ ಒದಗಿಸುತ್ತಿದೆ. ವಿಶ್ವದ ಯಾವುದೇ ದೇಶದಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಆಗುವುದಿಲ್ಲ.

ನಿಮ್ಮ ಹೆಸರಿದೆಯಾ ಪರಿಶೀಲಿಸಿ:

ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ವಿವಿಧ ಆಯ್ಕೆಗಳನ್ನು ಕಾಣಬಹುದು. ವೆಬ್​​ಸೈಟ್ ವಿಳಾಸ ಇಂತಿದೆ: pmkisan.gov.in/
ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣಬಹುದು.
ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ
ಇಲ್ಲಿ ರಾಜ್ಯ, ಜಿಲ್ಲ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಳ್ಳಬೇಕು.
ನಂತರ ‘ಗೆಟ್ ರಿಪೋರ್ಟ್’ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
ನೀವು ಆಯ್ದುಕೊಂಡಿರುವ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ನೀವು ಇತ್ತೀಚೆಗಷ್ಟೇ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಬಂದಿಲ್ಲದೇ ಇರಬಹುದು. ಆಗ ನೀವು ಪಿಎಂ ಕಿಸಾನ್ ವೆಬ್​ಸೈಟ್​ನ ಮುಖ್ಯಪುಟದ ಬಲಬದಿಯಲ್ಲಿರುವ ‘ನೋ ಯುವರ್ ಸ್ಟೇಟಸ್’ ಮೂಲಕ ನಿಮ್ಮ ಬೆನಿಫಿಶಿಯರಿ ಸ್ಟೇಟಸ್ ಪರಿಶೀಲಿಸಬಹುದು.

ನೀವು ರೈತರಾಗಿದ್ದು ಇನ್ನೂ ಕೂಡ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸದೇ ಇದ್ದಲ್ಲಿ ಈಗಲೂ ಅವಕಾಶ ಇದೆ. ಇದೇ ವೆಬ್​ಸೈಟ್ ಮುಖಾಂತರ ನೀವು ನೋಂದಾಯಿಸಬಹುದು. ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿಯೂ ನೋಂದಾಯಿಸಬಹುದು. ಈಗ ನೋಂದಾಯಿಸಿದರೆ, 18ನೇ ಕಂತಿನ ಹಣ ಸಿಗುವುದಿಲ್ಲ. ಮುಂದಿನ ಕಂತುಗಳ ಹಣವನ್ನು ಪಡೆಯಬಹುದು.

ಇದನ್ನೂ ಓದಿ: ಪಿಎಂ ಕಿಸಾನ್ ಸಮ್ಮಾನ್ ಹಣ ರೈತರ ಖಾತೆಗೆ ಜಮಾ!