ನವದೆಹಲಿ: ಹರ್ಯಾಣ ಹಾಗೂ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ(Assembly Election)ಯ ಚುನಾವಣೋತ್ತರ ಸಮೀಕ್ಷೆ(Exit poll 2024) ಪ್ರಕಟವಾಗಿದೆ. ಪೀಪಲ್ಸ್ ಪಲ್ಸ್, ದೈನಿಕ ಭಾಸ್ಕರ್ ಸೇರಿದಂತೆ ವಿವಿಧ ಸಮೀಕ್ಷೆಗಳು ಎಕ್ಸಿಟ್ ಪೋಲ್ ಪ್ರಕಟಿಸಿದ್ದು, ಪೀಪಲ್ಸ್ ಪಲ್ಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಹರ್ಯಾಣ ಕಾಂಗ್ರೆಸ್ ಮತ್ತು ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ನ್ಯಾಷನಲ್ ಕಾನ್ಫರೆನ್ಸ್ ಮುನ್ನಡೆ ಸಾಧಿಸಲಿದೆ. ಹಾಗಿದ್ದರೆ ಉಳಿದ ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಸ್ಥಾನಗಳನ್ನು ಗಳಿಸಲಿವೆ? ಎಕ್ಸಿಟ್ ಪೋಲ್ನ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಜೆಪಿಯ ಹ್ಯಾಟ್ರಿಕ್ ವಿಕ್ಟರಿ ಕನಸು ನುಚ್ಚುನೂರು
ಪೀಪಲ್ಸ್ ಪಲ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) 54 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಭಾರತೀಯ ಜನತಾ ಪಕ್ಷದ (ಬಿಜೆಪಿ) ದಶಕದ ಆಡಳಿತದ ಹಿಡಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳವು ಸಾಧ್ಯತೆ ದಟ್ಟವಾಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಇದನ್ನೇ ಹೇಳಿದ್ದು, ಆ ಮೂಲಕ ಹ್ಯಾಟ್ರಿಕ್ ಗೆಲುವಿನ ಕನಸು ಹೊತ್ತಿರುವ ಬಿಜೆಪಿ ಆಸೆಗೆ ತನ್ನೀರೆರಚಿದಂತಾಗಿದೆ.
ಹರಿಯಾಣ | INC | BJP | JJP | INLD | ಇತರೆ |
ದೈನಿಕ ಭಾಸ್ಕರ್ | 44-54 | 19-29 | 0-1 | 1-5 | 4-9 |
ದ್ರುವ ರಿಸರ್ಚ್ | 57-64 | 27-32 | – | – | 5-8 |
ಪೀಪಲ್ಸ್ ಪಲ್ಸ್ | 55 | 26 | 0-1 | 2-3 | 3-5 |
ರಿಪಬ್ಲಿಕ್ ಮ್ಯಾಟ್ರಿಜ್ | 55-62 | 18-24 | 0-3 | 3-6 | 2-5 |
ಕಣಿವೆ ರಾಜ್ಯದ ಗದ್ದುಗೆ ಯಾರಿಗೆ?
ಬರೋಬ್ಬರಿ ಹತ್ತು ವರ್ಷಗಳ ನಂತರ ಚುನಾವಣೆ ಎದುರಿಸುತ್ತಿರುವ ಜಮ್ಮು-ಕಾಶ್ಮೀರದಲ್ಲಿ ಪೀಪಲ್ಸ್ ಪಲ್ಸ್ ವರದಿಯ ಪ್ರಕಾರ ಯಾವ ಪಕ್ಷವೂ ಸ್ಪಷ್ಟ ಬಹುಮತ ಸಾಧಿಸುವುದು ಕಷ್ಟಸಾಧ್ಯ. ಈ ಬಾರಿ ಜಂಟಿಯಾಗಿ ಕಣಕ್ಕಿಳಿದಿರುವ ಕಾಂಗ್ರೆಸ್ಮತ್ತು ಓಮರ್ ಅಬ್ದುಲ್ಲಾ ನೇತೃತ್ವದ ಎನ್ಸಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ದೈನಿಕ ಭಾಸ್ಕರ್, ಧ್ರುವ ರಿಸರ್ಚ್ ಮತ್ತು ಪೀಪಲ್ಸ್ ಪಲ್ಸ್ ಸೇರಿದಂತೆ ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಪೀಪಲ್ಸ್ ಪಲ್ಸ್ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್ 33-35 ಸ್ಥಾನಗಳೊಂದಿಗೆ J&K ನಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ 23 ರಿಂದ 27 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಎರಡನೇ ಅತಿದೊಡ್ಡ ಪಕ್ಷವಾಗಲಿದೆ.
ಜಮ್ಮು-ಕಾಶ್ಮೀರ | INC | BJP | JKNC+INC | PDP | ಇತರೆ |
ದೈನಿಕ ಭಾಸ್ಕರ್ | – | 20-25 | 35-40 | 4-7 | 12-16 |
ದ್ರುವ ರಿಸರ್ಚ್ | 3-6 | 28-30 | 28-30 | 5-7 | 8-16 |
ಪೀಪಲ್ಸ್ ಪಲ್ಸ್ | 13-15 | 23-27 | 33-35 | 7-11 | 4-5 |
ಈ ಸುದ್ದಿಯನ್ನೂ ಓದಿ: Haryana Election 2024: ಹರಿಯಾಣ ವಿಧಾನಸಭೆ ಚುನಾವಣೆ ಮತದಾನ ಆರಂಭ