Sunday, 6th October 2024

ರಾಜೇಂದ್ರ ಭಟ್‌ ಅಂಕಣ: ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ ಗುಂಡಪ್ಪ ವಿಶ್ವನಾಥ್!

gr vishwanath

ಸ್ಫೂರ್ತಿಪಥ ಅಂಕಣ: ಅವರ ನಿರ್ಧಾರದಿಂದ ಕ್ರಿಕೆಟ್ ಗೆದ್ದಿತ್ತು, ಆದರೆ ಭಾರತವು ಸೋತಿತ್ತು!

Rajendra Bhat K
  • ರಾಜೇಂದ್ರ ಭಟ್ ಕೆ.

Rajendra Bhat Column: ಫೆಬ್ರುವರಿ 19, 1980. ಮುಂಬೈಯ ವಿಶಾಲವಾದ ವಾಂಖೆಡೆ ಸ್ಟೇಡಿಯಂ! ಹಲವಾರು ಐತಿಹಾಸಿಕ ಕ್ರಿಕೆಟ್ ದಾಖಲೆಗಳಿಗೆ ಸಾಕ್ಷಿಯಾದ ಹುಲ್ಲುಹಾಸಿನ ಸ್ಟೇಡಿಯಂ ಅದು.

ಅದು ಬಿಸಿಸಿಐ ಸುವರ್ಣ ಮಹೋತ್ಸವದ ನೆನಪಿನ ಟೆಸ್ಟ್ ಆಗಿತ್ತು!

ಅಂದು ಅಲ್ಲಿ ಆತಿಥೇಯ ಭಾರತ ಮತ್ತು ಇಂಗ್ಲೆಂಡುಗಳ ನಡುವೆ ಒಂದು ಐತಿಹಾಸಿಕವಾದ ಕ್ರಿಕೆಟ್ ಟೆಸ್ಟ್ ಪಂದ್ಯವು ಏರ್ಪಟ್ಟಿತ್ತು.

ಅದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ)ಯ ಸುವರ್ಣ ಮಹೋತ್ಸವ ವರ್ಷದ ನೆಪದಲ್ಲಿ ಆಡಲಾದ ವಿಶೇಷವಾದ ಟೆಸ್ಟ್ ಪಂದ್ಯ ಆಗಿತ್ತು. ಅದು ಭಾರತೀಯ ಕ್ರಿಕೆಟಿಗೆ ಅತ್ಯಂತ ಸ್ಮರಣೀಯ ಪಂದ್ಯವಾಗಿತ್ತು. ಅಂದು ವಾಂಖೆಡೆ ಕ್ರೀಡಾಂಗಣವು ಭರ್ತಿ ಆಗಿತ್ತು.

ಮತ್ತೂ ವಿಶೇಷ ಏನೆಂದರೆ ಅದುವರೆಗೆ ಐವತ್ತು ವರ್ಷಗಳ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡಿದ್ದ ಮತ್ತು ಅದುವರೆಗೆ ಜೀವಂತವಾಗಿದ್ದ ಎಲ್ಲ ಆಟಗಾರರನ್ನು ಅಲ್ಲಿ ಅತಿಥಿಗಳಾಗಿ ಆಮಂತ್ರಣ ನೀಡಲಾಗಿತ್ತು. ಹೆಚ್ಚಿನವರು ಬಂದಿದ್ದರು.

ಅಂದು ಭಾರತದ ಕ್ಯಾಪ್ಟನ್ ಜಿ ಆರ್ ವಿಶ್ವನಾಥ್

ಅಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿದ್ದವರು ಆಗಿನ ಕಾಲದ ಶ್ರೇಷ್ಠ ಆಟಗಾರರಾದ ಗುಂಡಪ್ಪ ವಿಶ್ವನಾಥ್ ಅವರು. ಅವರು ನಮ್ಮ ಕರ್ನಾಟಕದ ಭದ್ರಾವತಿಯವರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ! ಅವರ ಕ್ರಿಕೆಟ್ ಸಾಧನೆಯ ಬಗ್ಗೆ ಕೊನೆಗೆ ಬರೆಯುತ್ತೇನೆ. ಆದರೆ ಅವರು ಆ ಟೆಸ್ಟ್ ಪಂದ್ಯದಲ್ಲಿ ತೋರಿದ ಆ ಕ್ರೀಡಾಮನೋಭಾವವು ಇಂದಿಗೂ ನಮಗೆ ಅದ್ಭುತವೇ ಆಗಿದೆ!

ಆದರೆ ಆ ಕಾಲಕ್ಕೆ ಅವರು ವಿಲನ್ ಆಗಿ ಎಲ್ಲರಿಂದ ಬೈಗುಳ ತಿನ್ನಬೇಕಾಯಿತು ಎನ್ನುವುದು ಕೂಡ ಅಷ್ಟೇ ನಿಜ!

ಓವರ್ ಟು ವಾಂಖೆಡೆ….

ಭಾರತೀಯ ಕ್ರಿಕೆಟ್ ತಂಡ ಮೊದಲು ಆಟ ಆಡಿ 249 ರನ್ ಮಾಡಿತ್ತು. ಅದು ಆ ಕಾಲಕ್ಕೆ ಸವಾಲಿನ ಮೊತ್ತವೇ ಆಗಿತ್ತು. ನಂತರ ಬ್ಯಾಟಿಂಗ್ ಮಾಡಲು ಇಳಿದ ಇಂಗ್ಲೆಂಡ್ ಒಂದು ಹಂತಕ್ಕೆ 58/5 ಮೊತ್ತಕ್ಕೆ ಕುಸಿದಿತ್ತು. ಆಗ ಜೊತೆ ಆದವರು ಆಲ್ರೌಂಡರ್ ಇಯಾನ್ ಬಾಥಮ್ ಮತ್ತು ಕೀಪರ್ ಬಾಬ್ ಟೇಲರ್.

ಅವರಿಬ್ಬರೂ ನಿಧಾನಕ್ಕೆ ರನ್ ಪೇರಿಸುತ್ತ 85/5 ಹಂತಕ್ಕೆ ತಲುಪಿದ್ದರು. ಆಗ ಕಪಿಲದೇವ್ ಎಸೆದ ಒಂದು ವೇಗದ ಬಾಲ್ ಬಾಬ್ ಟೇಲರ್ ಬ್ಯಾಟಿಗೆ ಮುತ್ತಿಟ್ಟು ವಿಕೆಟ್ ಕೀಪರ್ ಸಯ್ಯದ್ ಕೀರ್ಮಾನಿಯವರ ಗ್ಲೌಸ್ ಒಳಗೆ ಸೇರಿತ್ತು. (ಅಥವಾ ಎಲ್ಲರಿಗೂ ಹಾಗೆ ಅನ್ನಿಸಿತು!). ಬೌಲರ್ ಮತ್ತು ಕೀಪರ್ ಇಬ್ಬರೂ ಬಲವಾಗಿ ಅಪೀಲ್ ಮಾಡಿದರು. ಅಂಪೈರ್ ಹನುಮಂತ ರಾವ್ ಹಿಂದೆ ಮುಂದೆ ಯೋಚಿಸದೆ ಬೆರಳು ಎತ್ತಿ ಔಟ್ ಕೊಟ್ಟರು.

ಬಾಬ್ ಟೈಲರ್ ತೀವ್ರ ಅಸಮಾಧಾನದಿಂದ ಭಾರವಾದ ಹೃದಯದಿಂದ ಪೆವಿಲಿಯನ್ ಕಡೆಗೆ ನಡೆಯತೊಡಗಿದರು.

ವಿಶ್ವನಾಥ್ ಅವರ ಕ್ರೀಡಾ ಮನೋಭಾವ ತಕ್ಷಣ ಜಾಗೃತ !

ಆಗ ಸ್ಲಿಪನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ಗುಂಡಪ್ಪ ವಿಶ್ವನಾಥ್ ತನ್ನ ಇತರ ಫೀಲ್ಡರಗಳ ಜೊತೆಗೆ ಒಂದರ್ಧ ನಿಮಿಷ ಚರ್ಚೆ ಮಾಡಿದರು. ನಂತರ ಅಂಪೈರ್ ಹನುಮಂತ ರಾವ್ ಅವರ ಬಳಿ ಹೋಗಿ ನಿಂತು “ನಮ್ಮ ಅಪೀಲ್ ಹಿಂದೆ ಪಡೆಯುತ್ತೇವೆ. ಬಾಬ್ ಟೈಲರ್ ಔಟ್ ಇಲ್ಲ” ಎಂದರು!ಅಂಪೈರ್ ತಕ್ಷಣ ತಮ್ಮ ತೀರ್ಪನ್ನು ಹಿಂದೆ ಪಡೆದರು.

ಆ ನಿರ್ಧಾರದಿಂದ ಒಂದು ಕ್ಷಣಕ್ಕೆ ಬಾಬ್ ಟೈಲರ್ ಅವರಿಗೇ ಅಚ್ಚರಿ ಆಗಿತ್ತು. ಬಾಬ್ ಟೈಲರ್ ಮತ್ತೆ ಕ್ರೀಸಿಗೆ ಬಂದು ತನ್ನ ಬ್ಯಾಟಿಂಗನ್ನು ಮುಂದುವರೆಸಿದರು. ಎಲ್ಲವೂ ಒಂದರ್ಧ ಕ್ಷಣದಲ್ಲಿ ನಡೆದುಹೋಯಿತು! ಪ್ರೇಕ್ಷಕರಿಗೆ ಏನಾಗ್ತಾ ಇದೆ ಎಂದು ಗೊತ್ತೇ ಆಗದೆ ಕ್ರೀಡಾಂಗಣ ಒಮ್ಮೆ ಸ್ತಬ್ಧವಾಯಿತು. ಕಾಮೆಂಟರಿ ಹೇಳುವವರು ಕೂಡ ಒಂದು ಕ್ಷಣ ಗೊಂದಲಕ್ಕೆ ಸಿಲುಕಿದರು!

ಆಗ ಥರ್ಡ್ ಅಂಪೈರ್ ಕಾಲ ಆಗಿರಲಿಲ್ಲ! ULTRA EDGE ಗೊತ್ತೇ ಇರಲಿಲ್ಲ! ಅಂಪೈರ್ ಔಟ್ ಕೊಟ್ಟರೆ ಅದನ್ನು ಪ್ರಶ್ನೆ ಮಾಡಲು ಯಾವ ವ್ಯವಸ್ಥೆ ಕೂಡ ಇರಲಿಲ್ಲ. ವಿಶ್ವನಾಥ್ ಸುಮ್ಮನೆ ಕೂತರೂ ಬಾಬ್ ಟೈಲರ್ ಹಿಂದೆ ಬಂದು ಆಡಲು ಅವಕಾಶವೇ ಇರಲಿಲ್ಲ!

ವಿಶ್ವನಾಥ್ ಅವರ ಆ ನಿರ್ಧಾರ ತುಂಬಾ ದುಬಾರಿ ಆಯ್ತು!

ಮುಂದೆ ಟೈಲರ್ ಮತ್ತು ಇಯಾನ್ ಬಾಥಮ್ 171 ರನ್ ಜೊತೆಯಾಟ ಕಟ್ಟಿದರು. ಬಾಬ್ ಟೈಲರ್ 275 ಮಿನಿಟ್ ಹಲ್ಲು ಕಚ್ಚಿ ಆಡಿ 43 ರನ್ ಮಾಡಿದರು. ಆಲರೌಂಡರ್ ಇಯಾನ್ ಬಾಥಮ್ ತನ್ನ ಅತ್ಯುತ್ತಮವಾದ ಶತಕವನ್ನು ಹೊಡೆದರು. ಆ ಗಟ್ಟಿಯಾದ ಜೊತೆಯಾಟದ ಕಾರಣ ಇಂಗ್ಲೆಂಡ್ ಆ ಟೆಸ್ಟ್ ಪಂದ್ಯವನ್ನು ಹತ್ತು ವಿಕೇಟುಗಳಿಂದ ಗೆದ್ದಿತು. ಭಾರತದ ಸ್ಟಾರ್ ಬ್ಯಾಟ್ಸಮನ್ ಆಗಿದ್ದ ನಾಯಕ ಗುಂಡಪ್ಪ ವಿಶ್ವನಾಥ್ ಅಂದು ಇಡೀ ಭಾರತದ ವಿಲನ್ ಆದರು!

ಅವರಿಗೆ ನೂರಾರು ಬೆದರಿಕೆಯ ಕರೆಗಳು ಬಂದವು. ಹಲವು ಬೈಗುಳಗಳ ಸುರಿಮಳೆ ಆಯ್ತು! ಗ್ರೌಂಡಲ್ಲಿ ಫೀಲ್ಡ್ ಮಾಡುವಾಗ ಅವರು ಕಿಡಿಗೇಡಿಗಳ ಆಕ್ರೋಶಗಳನ್ನು ಎದುರಿಸಬೇಕಾಯಿತು!

ಆದರೆ ಬಾಬ್ ಟೈಲರ್ ನಿಜವಾಗಿ ಔಟ್ ಆಗಿರಲಿಲ್ಲ!

ಗುಂಡಪ್ಪ ವಿಶ್ವನಾಥ್ ಮುಂದೆ ಪತ್ರಿಕಾ ಘೋಷ್ಠಿಯಲ್ಲಿ ತನ್ನ ನಿರ್ಧಾರವು ಸರಿ ಇತ್ತು ಎಂದರು. ಸ್ಲೀಪ್ ಬಳಿಯಿದ್ದ ಇತರ ಫೀಲ್ಡರಗಳು ಕೂಡ ಅವರ ಬೆಂಬಲಕ್ಕೆ ನಿಂತರು. ಕ್ರಿಕೆಟ್ ಇತಿಹಾಸವನ್ನು ಬರೆಯುವ ಮಂದಿ ಕೂಡ ಟೇಲರ್ ಔಟ್ ಆಗಿರಲಿಲ್ಲ, ಗುಂಡಪ್ಪ ವಿಶ್ವನಾಥ್ ಮಾಡಿದ ನಿರ್ಧಾರ ಸರಿ ಇತ್ತು ಎಂದರು!

ಶತಮಾನಗಳ ಕಾಲ ಬ್ರಿಟಿಷರಿಂದ ತುಳಿಯಲ್ಪಟ್ಟ ನಮ್ಮ ಭಾರತೀಯರಿಗೆ ವಿಶ್ವನಾಥ್ ಆ ಕ್ಷಣಕ್ಕೆ ಆ ನಿರ್ಧಾರವನ್ನು ತೆಗೆದುಕೊಂಡು ಇಂಗ್ಲೆಂಡನ್ನು ಗೆಲ್ಲಿಸಿದ್ದು ದೀರ್ಘಕಾಲ ಸರಿ ಎಂದು ಅನ್ನಿಸಲೇ ಇಲ್ಲ!

ಆದರೆ ನಮ್ಮ ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಅವರು ಅಂದು ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತುಪಡಿಸಿದ್ದರು!

ಜಿ ಆರ್ ವಿಶ್ವನಾಥ್ – ಲೆಜೆಂಡ್ ಕ್ರಿಕೆಟರ್

ಜಿ ಆರ್ ವಿಶ್ವನಾಥ್ ಅವರು 1969-1983ರ ಅವಧಿಯಲ್ಲಿ, ಹದಿನಾಲ್ಕು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಆಗಿದ್ದರು. ಆ ಅವಧಿಯಲ್ಲಿ ಅವರು 91 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಆಡಿದರು. ಮಾಡಿದ ಒಟ್ಟು ಸ್ಕೋರ್ 6000+ ಆಗಿತ್ತು. 14 ಶತಕಗಳನ್ನು ಕೂಡ ಪೇರಿಸಿದ್ದಾರೆ. ಅದ್ಭುತ ಏನೆಂದರೆ ಅವರು ಶತಕ ಸಿಡಿಸಿದ 14 ಟೆಸ್ಟ್ ಪಂದ್ಯಗಳಲ್ಲಿ ಕೂಡ ಭಾರತವೇ ಗೆದ್ದಿತ್ತು.

ಅವರ ಸಮಕಾಲೀನ ಸ್ಟಾರ್ ಆಟಗಾರರಾದ ಸುನೀಲ್ ಗವಾಸ್ಕರ್ ಮತ್ತು ಜಿ ಆರ್ ವಿಶ್ವನಾಥ್ ಅವರು ಆ 14 ವರ್ಷಗಳ ಅವಧಿಯುದ್ದಕ್ಕೂ ಜೊತೆಗೆ ಇದ್ದರು. ‘ಸುನೀಲ್ ಗವಾಸ್ಕರ್ ದಾಖಲೆಗಾಗಿ ಆಡುತ್ತಾರೆ, ಜಿ ಆರ್ ವಿಶ್ವನಾಥ್ ಭಾರತಕ್ಕಾಗಿ ಆಡುತ್ತಾರೆ ‘ಎಂಬ ಮಾತು ಆಗ ತುಂಬಾನೇ ಜನಪ್ರಿಯ ಆಗಿತ್ತು. ಆದರೆ ಅವರಿಬ್ಬರ ಸಂಬಂಧವೂ ತುಂಬಾ ಚೆನ್ನಾಗಿತ್ತು. ಗವಾಸ್ಕರ್ ಅವರ ತಂಗಿ ಕವಿತಾ ಅವರು ನಮ್ಮವಿಶ್ವನಾಥ್ ಅವರ ಕೈ ಹಿಡಿದರು. ವಿಶ್ವನಾಥ್ ಅವರ ಎತ್ತರ ಕೇವಲ ಐದು ಅಡಿ ಮೂರು ಇಂಚು ಮಾತ್ರ ಇದ್ದ ಕಾರಣ ಅವರನ್ನು ಅವರ ಅಭಿಮಾನಿಗಳು ‘ಲಿಟಲ್ ಮಾಸ್ಟರ್’ ಎಂದು ಕರೆದರು.

ಜಿ ಆರ್ ವಿಶ್ವನಾಥ್ ಅವರು ತಾಂತ್ರಿಕವಾಗಿ ಅದ್ಭುತವಾದ ಆಟಗಾರ. ಅವರೊಬ್ಬ ಪವರಫುಲ್ ಸ್ಟ್ರೋಕ್ ಪ್ಲೇಯರ್. ತುಂಬಾ ಪವರಫುಲ್ ರಿಸ್ಟ್ ಪ್ಲೇಯರ್ ಅವರು. ಅವರಷ್ಟು ಸುಂದರವಾಗಿ ಸ್ಕ್ವೇರ್ ಕಟ್ ಹೊಡೆಯುವ ಇನ್ನೊಬ್ಬ ಆಟಗಾರ ಆಗ ಜಗತ್ತಿನಲ್ಲಿಯೇ ಇರಲಿಲ್ಲ. ಎಷ್ಟೋ ಪಂದ್ಯಗಳಲ್ಲಿ ಅವರು ಏಕಾಂಗಿಯಾಗಿ ಆಡಿ ಭಾರತವನ್ನು ಗೆಲ್ಲಿಸಿದ ಉದಾಹರಣೆಗಳು ಇವೆ. ಮೊದಲ ಎರಡು ವಿಶ್ವ ಕಪ್ ಕೂಟಗಳಲ್ಲಿ ಅವರು ಭಾರತದ ಪರವಾಗಿ ಆಡಿದ್ದರು.

ನಿವೃತ್ತಿ ಆದ ನಂತರ ಅವರು ಭಾರತೀಯ ಕ್ರಿಕೆಟ್ ತಂಡದ ಮೆಂಟರ್ ಆಗಿ, ಕ್ರಿಕೆಟ್ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿ, ಭಾರತೀಯ ಕ್ರಿಕಟ್ ತಂಡದ ಮ್ಯಾನೇಜರ್ ಆಗಿ ಜನಪ್ರಿಯ ಸೇವೆ ಸಲ್ಲಿಸಿದರು. ಹಾಗೆಯೇ ನಮ್ಮ ಭಾರತದ ಕೀರ್ತಿಯ ಪ್ರಭೆಯನ್ನು ಎತ್ತರಕ್ಕೆ ಏರಿಸಿದರು.‌

ಇದನ್ನೂ ಓದಿ: Mandolin Srinivas: ಸ್ಫೂರ್ತಿಪಥ ಅಂಕಣ: ಮ್ಯಾಂಡೊಲಿನ್ ಮೂಲಕ ಪೂರ್ವ ಮತ್ತು ಪಶ್ಚಿಮಗಳನ್ನು ಬೆಸೆದ ಯು. ಶ್ರೀನಿವಾಸ್!