Sunday, 6th October 2024

Sachin Tendulkar: ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಿದ ಸಚಿನ್

Sachin Tendulkar

ವಾಷಿಂಗ್ಟನ್: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್(Sachin Tendulkar) ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್(America’s NCL) ಮಾಲೀಕರ(NCL ownership) ಗುಂಪಿಗೆ ಸೇರ್ಪಡೆಯಾಗಿದ್ದಾರೆ. ಕ್ರಿಕೆಟ್ ನನ್ನ ಜೀವನದ ಅತಿದೊಡ್ಡ ಪ್ರಯಾಣವಾಗಿದೆ. ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಈ ಉತ್ತೇಜಕ ಸಮಯದಲ್ಲಿ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಲು ಅತ್ಯಂತ ಸಂತಸಗೊಂಡಿದ್ದೇನೆ ಎಂದು ಸಚಿನ್ ಹೇಳಿದ್ದಾರೆ.

‘ಹೊಸ ಪೀಳಿಗೆಯ ಅಭಿಮಾನಿಗಳನ್ನು ಪ್ರೇರೇಪಿಸುವ ಮೂಲಕ ವಿಶ್ವ ದರ್ಜೆಯ ಕ್ರಿಕೆಟ್‌ಗೆ ವೇದಿಕೆ ಸೃಷ್ಟಿಸುವುದು ಎನ್‌ಸಿಎಲ್‌ನ ಉದ್ದೇಶವಾಗಿದೆ. ಈ ಹೊಸ ಉಪಕ್ರಮದ ಭಾಗವಾಗಲು ಮತ್ತು ಅಮೆರಿಕದಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಸಾಕ್ಷಿಯಾಗಲು ನಾನು ಎದುರು ನೋಡುತ್ತಿದ್ದೇನೆ’ಎಂದು ತೆಂಡೂಲ್ಕರ್ ಹೇಳಿದ್ದಾರೆ.

‘ದಿಗ್ಗಜ ಆಟಗಾರನಾದ ಸಚಿನ್ ತೆಂಡೂಲ್ಕರ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಲೀಗ್ ಕುಟುಂಬಕ್ಕೆ ಸ್ವಾಗತಿಸಲು ನಾವು ಅತ್ಯಂತ ಉತ್ಸುಕರಾಗಿದ್ದೇವೆ’ಎಂದು ಎನ್‌ಸಿಎಲ್ ಅಧ್ಯಕ್ಷ ಅರುಣ್ ಅಗರ್ವಾಲ್ ಹೇಳಿದ್ದಾರೆ.

ಸುನಿಲ್ ಗವಾಸ್ಕರ್, ಜಹೀರ್ ಅಬ್ಬಾಸ್, ವಾಸಿಂ ಅಕ್ರಮ್, ದಿಲೀಪ್ ವೆಂಗ್‌ಸರ್ಕರ್, ಸರ್ ವಿವಿಯನ್ ರಿಚರ್ಡ್ಸ್, ವೆಂಕಟೇಶ್ ಪ್ರಸಾದ್, ಸನತ್ ಜಯಸೂರ್ಯ, ಮೊಯಿನ್ ಖಾನ್ ಮತ್ತು ಬ್ಲೇರ್ ಫ್ರಾಂಕ್ಲಿನ್ ಅವರಂತಹ ಕ್ರಿಕೆಟ್ ದಂತಕಥೆಗಳನ್ನು ಎನ್‌ಸಿಎಲ್‌ ಒಟ್ಟುಗೂಡಿಸುತ್ತದೆ. ಕ್ರಿಕೆಟ್ ಹೀರೊಗಳು ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲಿದ್ದಾರೆ.

ಇದನ್ನೂ ಓದಿ Swacch Bharat: ಸ್ವಚ್ಛ ಭಾರತ್‌ ಮಿಷನ್‌ಗೆ 10 ವರ್ಷ; ವಿಶೇಷ ಸಂದೇಶ ನೀಡಿದ ಸಚಿನ್‌

ಎನ್‌ಸಿಎಲ್‌ನ ಉದ್ಘಾಟನಾ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ತೆಂಡೂಲ್ಕರ್ ಟ್ರೋಫಿ ಪ್ರದಾನ ಮಾಡಲಿದ್ದಾರೆ, ಇದು ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಐತಿಹಾಸಿಕ ಕ್ಷಣವಾಗಲಿದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ. ಶಾಹಿದ್ ಅಫ್ರಿದಿ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ರಾಬಿನ್ ಉತ್ತಪ್ಪ, ತಬ್ರೈಜ್ ಶಾಮ್ಸಿ, ಕ್ರಿಸ್ ಲಿನ್, ಏಂಜಲೊ ಮ್ಯಾಥ್ಯೂಸ್, ಕಾಲಿನ್ ಮುನ್ರೊ, ಸ್ಯಾಮ್ ಬಿಲ್ಲಿಂಗ್ಸ್, ಮೊಹಮ್ಮದ್ ನಬಿ ಮತ್ತು ಜಾನ್ಸನ್ ಚಾರ್ಲ್ಸ್ ಸೇರಿದಂತೆ ವಿಶ್ವದಾದ್ಯಂತದ ಖ್ಯಾತ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಸಚಿನ್​ ಅವರು ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.