Sunday, 6th October 2024

Vishweshwar Bhat Column: ಇಸ್ರೇಲ್ ಪ್ರತೀಕಾರ ತೆಗೆದುಕೊಂಡರೆ, ಅದೇಕೆ ಮಹಾಪರಾಧವಾಗಿ ಕಾಣುತ್ತದೆ?

Vishweshwar Bhat Column

ಮಧ್ಯಪ್ರಾಚ್ಯ ಹೊತ್ತಿ (Vishweshwar Bhat Column) ಉರಿಯುತ್ತಿದೆ. ‘ನಾವು ಇಸ್ರೇಲ್‌ಗೆ ಹೆದರುವ ಪ್ರಶ್ನೆಯೇ ಇಲ್ಲ. ಅದು ಪ್ರತೀಕಾರಕ್ಕೆ ಇಳಿದರೆ ಆ ದೇಶವನ್ನು ನಾವು ಮುಗಿಸುತ್ತೇವೆ’ ಎಂದು ಇರಾನಿನ ಜ್ಯೇಷ್ಠ ನಾಯಕ, ಎಂಬತ್ತಾರು ವರ್ಷದ ಅಯತೊಲ್ಲಾ ಖೊಮೇನಿ ಕೈಯಲ್ಲಿ ರೈಫಲ್ ಹಿಡಿದು ಶುಕ್ರವಾರದ ಪ್ರಾರ್ಥನಾ ಸಭೆ ನಂತರ ಅಬ್ಬರಿಸಿದ್ದಾರೆ. ಮೂರು ದಿನಗಳ ಹಿಂದೆ, ಇಸ್ರೇಲ್ ಮೇಲೆ ನಡೆಸಿದ ಇನ್ನೂರು ಕ್ಷಿಪಣಿ ದಾಳಿಯನ್ನು ‘ಸಾರ್ವಜನಿಕ ಸೇವೆ’ ಎಂದು ಖೊಮೇನಿ ಸಾರಿದ್ದಾರೆ. ಅಗತ್ಯ ಬಿದ್ದರೆ ಇನ್ನೊಂದು ಸುತ್ತಿನ ಕ್ಷಿಪಣಿ ದಾಳಿಗೂ ಸಿದ್ಧ ಎಂದು ಬೊಬ್ಬಿರಿದಿದ್ದಾರೆ.

ಇದಕ್ಕೂ ಒಂದು ವಾರದ ಮುನ್ನ ಇಸ್ರೇಲ್, ‘ಆ ಖೊಮೇನಿಯನ್ನು ಸಾಯಿಸದೆ ಬಿಡುವುದಿಲ್ಲ. ನಮ್ಮ ಮುಂದಿನ ಗುರಿ ಖೊಮೇನಿ’ ಎಂದು ಇಸ್ರೇಲ್ ಹೇಳಿತ್ತು.

ಇಸ್ರೇಲ್ ವಿರುದ್ಧ ಸಂಘರ್ಷದಲ್ಲಿ ನಿರತವಾಗಿರುವ ಹಮಾಸ್ ಮತ್ತು ಹೆಜಬುಲ್ಲಾ ಉಗ್ರ ಸಂಘಟನೆಗಳಿಗೆ ಇರಾನ್ ಬೆಂಬಲವಾಗಿ ನಿಂತಿದೆ. ಹೆಜಬುಲ್ಲಾ ಉಗ್ರ ಸಂಘಟನೆ ಮುಖ್ಯಸ್ಥ ಹಾಸನ್ ನಸ್ರಲ್ಲ ಹತ್ಯೆಯ ನಂತರ, ಇರಾನ್ ಪಿತ್ತ ನೆತ್ತಿಗೇರಿದೆ. ಅದಕ್ಕೂ ಮುಂಚೆ ಇಸ್ರೇಲ್, ಹಮಾಸ್ ನಾಯಕನನ್ನೂ ಹತ್ಯೆ ಮಾಡಿತ್ತು. ಇಸ್ರೇಲಿನ ಮುಂದಿನ ಗುರಿ ಖೊಮೇನಿ ಎಂಬುದು ಇರಾನ್ ಗೆ ಮನವರಿಕೆಯಾಗಿದೆ. ಇದು ಖೊಮೇನಿಯ ನಿದ್ದೆಗೆಡಿಸಿರಲಿಕ್ಕೂ ಸಾಕು.

ಇರಾನ್ ಕ್ಷಿಪಣಿ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು ಇಸ್ರೇಲ್ ಸಜ್ಜಾಗುತ್ತಿರುವಾಗಲೇ, ‘ನೋಡ್ತಾ ಇರಿ, ಇನ್ನು ಹೆಚ್ಚು ದಿನ ಇಸ್ರೇಲ್ ಇರುವುದಿಲ್ಲ’ ಎನ್ನುವ ಮೂಲಕ ಇರಾನ್ ಬರಲಿರುವ ಕರಾಳ ದಿನಗಳ ಮುನ್ಸೂಚನೆ ನೀಡಿದೆ.

ಇಂಥ ಧಮಕಿಗಳಿಗೆಲ್ಲ ಇಸ್ರೇಲ್ ಮಣಿಯುವ, ಹಿಂದೆ ಸರಿಯುವ ಮಾತೇ ಇಲ್ಲ ಎಂಬುದು ನಿರ್ವಿವಾದ. ಇಸ್ರೇಲ್ ಧೋರಣೆ ಗೊತ್ತಿರುವವರು ಈ ಮಾತನ್ನು ಒಪ್ಪುತ್ತಾರೆ. ತನ್ನನ್ನು ಕೆಣಕಿದವರ, ತನ್ನ ಮೇಲೆ ಆಕ್ರಮಣ ಮಾಡಿದವರ ಹುಟ್ಟಡಗಿಸದೇ ಇಸ್ರೇಲ್ ಇಲ್ಲಿ ತನಕ ಯಾರನ್ನೂ ಬಿಟ್ಟಿಲ್ಲ.

ಈ ಸಂಘರ್ಷವನ್ನು ಅರ್ಥ ಮಾಡಿಕೊಳ್ಳುವ ಮುನ್ನ ಇಸ್ರೇಲ್ ಭೂಪಟವನ್ನೊಮ್ಮೆ ಕಣ್ಮುಂದೆ ತಂದುಕೊಳ್ಳಬೇಕು. ಇಸ್ರೇಲ್ ಪಕ್ಕಕ್ಕೆ ಪೂರ್ವದಲ್ಲಿ ಸಿರಿಯಾ, ಜೋರ್ಡನ್ ಮತ್ತು ಸೌದಿ ಅರೇಬಿಯಾ ಇದೆ. ಅದರಾಚೆ ಪೂರ್ವಕ್ಕೆ ಇರಾನ್ ಇದೆ. ಇಸ್ರೇಲಿಗೆ ತಾಕಿಕೊಂಡ ಉತ್ತರಕ್ಕೆ ಲೆಬನಾನ್ ಇದೆ. ನೈರುತ್ಯಕ್ಕೆ ಈಜಿಪ್ಟ್ ಇದೆ. ಈ ಎಲ್ಲ ಅರಬ್ ದೇಶಗಳೂ ಒಂದಿಲ್ಲೊಂದು ಕಾಲಘಟ್ಟದಲ್ಲಿ ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಇಸ್ರೇಲ್ ವಿರುದ್ಧ ಯುದ್ಧ ಸಾರಿದವುಗಳೇ. ಇಸ್ರೇಲಿನಿಂದ ಇಕ್ಕಿಸಿಕೊಂಡವೇ.

ಈ ಎಲ್ಲ ರಾಷ್ಟ್ರಗಳನ್ನು ಬಗಲಲ್ಲಿ ಕಟ್ಟಿಕೊಂಡೇ ಅಷ್ಟು ವರ್ಷಗಳಿಂದ ಇಸ್ರೇಲ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು ಸೋಜಿಗವಷ್ಟೇ ಅಲ್ಲ, ಅದೊಂದು ದೊಡ್ಡ ಪವಾಡ. ಪಕ್ಕದಲ್ಲಿರುವ ದೇಶ ದಾಳಿ ಮಾಡುವುದು ಸಹಜ. ಆದರೆ ಇರಾನ್ ಮತ್ತು ಇಸ್ರೇಲ್ ಮಧ್ಯೆ ಬೇರೆ ದೇಶಗಳಿವೆ. ಈಗ ಇರಾನ್, ಇಸ್ರೇಲಿನ ಉತ್ತರಕ್ಕೆ ಹೊಂದಿಕೊಂಡಿರುವ ಲೆಬನಾನ್ ನ ಹೆಜಬುಲ್ಲಾ ಉಗ್ರ ಸಂಘಟನೆಯನ್ನು ಬಳಸಿಕೊಂಡು ದಾಳಿ ಮಾಡುತ್ತಿದೆ. ನೆರೆ-ಮನೆಯವ ಜಗಳ ತೆಗೆಯುವುದು ಸಾಮಾನ್ಯ. ಆದರೆ ನೆರೆ-ಮನೆಯವನಿಗೆ ತಾಕಿಕೊಂಡಿರುವ ಆಚೆಮನೆಯವ ಈಗ ಯುದ್ಧಕ್ಕೆ ನಿಂತಿದ್ದಾನೆ. ಆಚೆಮನೆಯವನು ನೆರೆ-ಮನೆಯವನ ನೆರವನ್ನು ಪಡೆದು ಯುದ್ಧಕ್ಕೆ ನಿಂತಿದ್ದಾನೆ.

ಇಸ್ರೇಲ್ ವಿರುದ್ಧ ಆಕ್ರಮಣ ಮಾಡಬೇಕು ಎಂದು (ಇರಾನ್) ಬಯಸಿದಾಗಲೆಲ್ಲ ಈ ಭೌಗೋಲಿಕ ಕಾರಣದಿಂದ ಇರಾನ್ ಗೆ ನೇರ ಸಂಘರ್ಷ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅದು ಇಸ್ರೇಲಿಗೆ ತಾಕಿಕೊಂಡಿರುವ ಗಾಜಾದಲ್ಲಿರುವ ಹಮಾಸ್ ಮತ್ತು ಉತ್ತರಕ್ಕೆ ತಾಕಿಕೊಂಡಿರುವ ಲೆಬನಾನ್ ನಲ್ಲಿರುವ ಹೆಜಬುಲ್ಲಾ ಉಗ್ರ ಸಂಘಟನೆಗಳ ಮೂಲಕ ದಾಳಿ ಮಾಡುತ್ತದೆ.

ಇದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ, ಇಸ್ರೇಲ್ ಕೆನ್ನೆಗೆ ಹೊಡೆಯಬೇಕೆಂದು ಇರಾನ್ ಬಯಸಿದರೆ, ಅದರ ಕೈ ನಿಲುಕುವುದಿಲ್ಲ. ಅದಕ್ಕಾಗಿ ಅದು ಯಾವತ್ತೂ ಹಮಾಸ್ ಮತ್ತು ಹೆಜಬುಲ್ಲಾ ಎಂಬ ಬೇರೆ ಬೇರೆ ಎರಡು ಕೈಗಳನ್ನು ಬಳಸಿಕೊಳ್ಳುತ್ತದೆ. ಈಗ ಅದು ಮಾಡುತ್ತಿರುವುದೂ ಅದನ್ನೇ. ಇಸ್ರೇಲ್ ಕೆನ್ನೆಗೆ ಹೊಡೆಯಲೆಂದೇ ಇರಾನ್ ಆ ಎರಡೂ ಉಗ್ರ ಸಂಘಟನೆಗಳನ್ನು ಬಾಡಿಗೆಗೆ ಇಟ್ಟುಕೊಂಡಿದೆ.

ಹುಲಿ, ಜಿಂಕೆಯನ್ನು ಬೆನ್ನಟ್ಟಿ ಓಡುತ್ತಿದೆಯೆಂದರೆ, ಹುಲಿಗೆ ಅದು ಆಹಾರದ ಪ್ರಶ್ನೆ. ಆದರೆ ಜಿಂಕೆಗೆ ಸಾವು-ಬದುಕಿನ ಪ್ರಶ್ನೆ. ಇಲ್ಲಿ ಜಿಂಕೆ ಸ್ಥಾನದಲ್ಲಿರುವ ಇಸ್ರೇಲ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದರೆ ಓಡುತ್ತಲೇ ಇರಬೇಕಾಗಿದೆ, ಹೋರಾಡಲೇಬೇಕಿದೆ. ಆಗಾಗ ಬೇರೆ ಬೇರೆ ದೇಶಗಳು ಹುಲಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತವೆ. ಇಷ್ಟನ್ನು ತಿಳಿದುಕೊಂಡರೆ ಸಾಕು, ಈ ಸಮಸ್ಯೆ, ಸಂಘರ್ಷ ಅರ್ಥವಾದೀತು.

ಈಗ ಒಂದು ಸಂಗತಿ ಸ್ಪಷ್ಟವಾಗಿರಬಹುದು, ಹಮಾಸ್ ಮತ್ತು ಹೆಜಬುಲ್ಲಾ ಎರಡೂ ಒಂದೇ ಎಂಬುದು. ಇವೆರಡೂ ಇರಾನ್ ಪ್ರೇರಿತ ಉಗ್ರ ಸಂಘಟನೆಗಳು. ಅವುಗಳ ಉದ್ದೇಶ ಒಂದೇ – ಇಸ್ರೇಲ್ ಗೆ ಸದಾ ಮಗ್ಗುಲ ಮುಳ್ಳಾಗಿ ಕಾಡುವುದು ಮತ್ತು ಇಸ್ರೇಲನ್ನು ಸರ್ವನಾಶ ಮಾಡುವುದು. ಆ ನಿಟ್ಟಿನಲ್ಲಿ ಆ ಎರಡೂ ಉಗ್ರ ಸಂಘಟನೆಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಲೇ ಬಂದಿವೆ. ಆದರೆ ಯಶಸ್ಸನ್ನು ಸಾಧಿಸಲು ಸಾಧ್ಯವಾಗಿಲ್ಲ.

ದಕ್ಷಿಣದಲ್ಲಿ ಹಮಾಸ್ ಮತ್ತು ಉತ್ತರದಲ್ಲಿ ಹೆಜಬುಲ್ಲಾ, ಇಸ್ರೇಲಿನ ನಾಗರಿಕರು ವಾಸಿಸುವ ನಗರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ಮಾಡುತ್ತಲೇ ಬಂದಿವೆ. ಈ ಎರಡೂ ಸಂಘಟನೆಗಳು ಇಸ್ರೇಲಿನ ನಿದ್ದೆಗೆಡಿಸಿರುವುದಂತೂ ನಿಜ. ಯಾವ ಕ್ಷಣದಲ್ಲೂ ಇಸ್ರೇಲ್ ಮೈಮರೆಯುವಂತಿಲ್ಲ. ಈ ಎರಡು ಸಂಘಟನೆಗಳ ಪೈಕಿ ಹೆಜಬುಲ್ಲಾ ಇನ್ನೂ ಅಪಾಯಕಾರಿ. ಹೆಜಬುಲ್ಲಾ ಉಗ್ರರು ಹಮಾಸ್ ದಾಳಿಕೋರರಿಗಿಂತ ಹೆಚ್ಚು ತರಬೇತಿ ಪಡೆದವರು. ಅವರು ಬಳಸುವ ಶಸ್ತ್ರಾಸ್ತ್ರಗಳು ಹೆಚ್ಚು ಆಧುನಿಕ. ಇಸ್ರೇಲ್ ಮೇಲೆ ದಾಳಿಗೆ ಅನುಕೂಲವಾಗಲೆಂದೇ ಲೆಬನಾನಿನ ದಕ್ಷಿಣ ಭಾಗವನ್ನು ಹೆಜಬುಲ್ಲಾ ಉಗ್ರರು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದಾರೆ.

ಇಲ್ಲಿ ಇನ್ನೊಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ಇದು ಇಸ್ರೇಲ್ ಮತ್ತು ಲೆಬನಾನ್ ಸಮಸ್ಯೆ ಅಲ್ಲ. ಆ ಎರಡೂ ದೇಶಗಳ ಜನರ ಮಧ್ಯೆ ಯಾವುದೇ ಸಂಘರ್ಷಗಳಿಲ್ಲ. ಇಸ್ರೇಲ್ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಆದರೆ ಇಸ್ರೇಲ್ ನ್ನು ಮುಗಿಸಲೇಬೇಕು ಎಂದು ಹೆಜಬುಲ್ಲಾ ಪಣತೊಟ್ಟಿದೆ. ಹೆಜಬುಲ್ಲಾ ಉಗ್ರ ಸಂಘಟನೆ ಮೇಲೆ ಲೆಬನಾನ್ ಸರಕಾರಕ್ಕೆ ಯಾವ ಹತೋಟಿ ಇಲ್ಲ. ಹಮಾಸ್ ಗಾಜಾದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ, ಹೆಜಬುಲ್ಲಾ ಲೆಬನಾನ್ ನಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ಅಷ್ಟಕ್ಕೂ ಇವು ಪುಂಡ-ಪೋಕರಿ ಸಂಘಟನೆ ಅಲ್ಲ. ಇವು ಪೂರ್ಣ ಪ್ರಮಾಣದ ಸೈನಿಕ ಪಡೆಗಳನ್ನು ಹೊಂದಿರುವ ಬಲಿಷ್ಠ ಉಗ್ರಗಾಮಿ ಸಂಘಟನೆಗಳು.

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯಿದೆ. ಅದೇನೆಂದರೆ, ಲೆಬನಾನ್ ಮಿಲಿಟರಿ ಪಡೆಗಿಂತ ಹೆಜಬುಲ್ಲಾ ಉಗ್ರರ ಮಿಲಿಟರಿ ಬಲಾಢ್ಯವಾಗಿದೆ, ಆಧುನಿಕವಾಗಿದೆ. ಲೆಬನಾನ್ ಸೈನಿಕರಿಗಿಂತ ಹೆಚ್ಚು ಸೈನಿಕರು ಹೆಜಬುಲ್ಲಾ ಸಂಘಟನೆಯಲ್ಲಿದ್ದಾರೆ. ಯೂರೋಪಿನ ಮಧ್ಯಗಾತ್ರದ ಅವೆಷ್ಟೋ ರಾಷ್ಟ್ರಗಳ ಮಿಲಿಟರಿಗಿಂತ, ಹೆಜಬುಲ್ಲಾ ಉಗ್ರರ ಮಿಲಿಟರಿ ಶಕ್ತಿಶಾಲಿಯಾಗಿದೆ. ಕಳೆದ ಒಂದು ವಾರದಿಂದ ಹೆಜಬುಲ್ಲಾ ಉಗ್ರರು ಎಂಟು ಸಾವಿರಕ್ಕಿಂತ ಹೆಚ್ಚು ಕ್ಷಿಪಣಿ, ರಾಕೆಟ್ ಗಳಿಂದ ಇಸ್ರೇಲ್ ಮೇಲೆ ದಾಳಿ ಮಾಡಿದ್ದಾರೆ. ಇದು ಸಾಮಾನ್ಯ ಉಗ್ರ ಸಂಘಟನೆಗೆ ಸಾಧ್ಯವಾ? ಈ ದಾಳಿಯಲ್ಲಿ ನೂರಾರು ಇಸ್ರೇಲ್ ನಾಗರಿಕರು, ಮಕ್ಕಳು ಸತ್ತಿದ್ದಾರೆ. ಸುಮಾರು ಒಂದು ಲಕ್ಷ ಇಸ್ರೇಲಿಗರು ತಮ್ಮ ದೇಶದಲ್ಲಿಯೇ ನಿರ್ಗತಿಕರಾಗಿದ್ದಾರೆ.

ಇಸ್ರೇಲಿನ ಉತ್ತರ ಭಾಗ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ರಾತ್ರಿ ಹೊತ್ತು ರಾಕೆಟ್, ಕ್ಷಿಪಣಿಗಳ ಸದ್ದು ಮೊರೆಯುತ್ತಿದೆ. ಆಗಸದಿಂದ ಬೆಂಕಿಯ ಉಂಡೆಗಳ ಧಾರೆಯಾಗುತ್ತಿದೆ. ಒಂದೆಡೆ ಹಮಾಸ್ ಮತ್ತು ಇನ್ನೊಂದೆಡೆ ಹೆಜಬುಲ್ಲಾ. ಇವೆರಡೂ ಉಗ್ರ ಸಂಘಟನೆಗಳು ಏಕಕಾಲಕ್ಕೆ ಇಸ್ರೇಲ್ ಮೇಲೆ ದಾಳಿ ಮಾಡುತ್ತಲೇ ಇವೆ. ಹಮಾಸ್ ದಾಳಿ ನಿಲ್ಲುತ್ತಿದ್ದಂತೆ, ಹೆಜಬುಲ್ಲಾಗಳು ಶುರು ಹಚ್ಚಿಕೊಳ್ಳುತ್ತಿದ್ದಾರೆ. ಹೆಜಬುಲ್ಲಾಗಳ ನಂತರ ಹಮಾಸ್ ದಾಳಿ. ನಂತರ ಎರಡೂ ಒಂದೇ ಕಾಲಕ್ಕೆ ತೊಡೆ ತಟ್ಟುತ್ತವೆ. ಇವೆರಡನ್ನೂ ಸಾಕುತ್ತಿರುವುದು, ಕುಮ್ಮಕ್ಕು ನೀಡುತ್ತಿರುವುದು ಇರಾನ್. ಅಂದರೆ ಈ ಎರಡೂ ಸಂಘಟನೆಗಳ ಕೀಲಿಕೈ ಇರುವುದು ಇರಾನ್ ಕೈಯಲ್ಲಿ.

ಈ ಹುಚ್ಚಾಟಗಳನ್ನು ವಿಶ್ವಸಂಸ್ಥೆ ಸುಮ್ಮನೆ ನೋಡುತ್ತಾ ಕುಳಿತುಕೊಂಡಿದೆ. ಲೆಬನಾನ್ ದಕ್ಷಿಣಕ್ಕೆ ಹೆಜಬುಲ್ಲಾಗಳ ಶಸ್ತ್ರಾಸ್ತ್ರ ಕೋಠಿ ಇರುವುದು ಇಡೀ ಜಗತ್ತಿಗೆ ಗೊತ್ತಿದೆ. ಆದರೆ ವಿಶ್ವಸಂಸ್ಥೆಗೆ ಮಾತ್ರ ಗೊತ್ತಿಲ್ಲ. ಕಳೆದ ಕಾಲು ಶತಮಾನದಲ್ಲಾದ ಎಲ್ಲ ಒಪ್ಪಂದಗಳೂ ಉಲ್ಲಂಘನೆಯಾಗಿವೆ. ಆದರೆ ಹಮಾಸ್ ಮತ್ತು ಹೆಜಬುಲ್ಲಾಗಳು ಮಾತ್ರ ದಿನದಿಂದ ದಿನಕ್ಕೆ ಶಕ್ತಿಶಾಲಿಯಾಗುತ್ತಾ ಹೋಗುತ್ತಿದ್ದಾರೆ. ಇಸ್ರೇಲಿನಂಥ ದೇಶದ ಮೇಲೆ ಸತತ ಯುದ್ಧ ಮಾಡುವಷ್ಟು ಶಕ್ತಿಯನ್ನು ಬೆಳೆಸಿಕೊಂಡಿವೆ.

ಹೀಗಿರುವಾಗ ಇಸ್ರೇಲ್ ಮುಂದೆ ಬೇರೆ ಯಾವ ಆಯ್ಕೆ ಇದೆ?

ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಸ್ರೇಲ್ ಹೋರಾಡಲೇಬೇಕಿದೆ. ಒಂದು ಕ್ಷಣವೂ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಎರಡೂ ಕಡೆಗಳಲ್ಲಿ ತನ್ನ ಗಡಿ ಮತ್ತು ನಾಗರಿಕರನ್ನು ಉಳಿಸಿಕೊಳ್ಳಲು ಹೆಣಗಲೇಬೇಕಿದೆ. ಇಸ್ರೇಲನ್ನು ಸರ್ವನಾಶ ಮಾಡುತ್ತೇವೆ ಎಂದು ಜೋರ್ಡನ್, ಈಜಿಪ್ಟ್, ಇರಾಕ್ ಅಥವಾ ಸೌದಿ ಅರೇಬಿಯಾ ಹೇಳಿದ್ದಿದ್ದರೆ ಅರ್ಥವಿತ್ತು. ಕಾರಣ ಅವು ನೆರೆ ದೇಶಗಳು. ಆದರೆ ಈ ಮಾತನ್ನು ಇರಾನ್ ಹೇಳುತ್ತಿದೆ. ಹಮಾಸ್ ಮತ್ತು ಹೆಜಬುಲ್ಲಾ ಇರಾನಿನ ಒಂದೇ ನಾಣ್ಯದ ಎರಡು ರಾಕ್ಷಸ ಮುಖಗಳು.

ತಮಾಷೆ ಅಂದ್ರೆ, ಇಸ್ರೇಲ್ ವಿರುದ್ಧ ಮಾತಾಡುವವರು, ಈ ರಾಕ್ಷಸರಿಗೆ ಮಾನವೀಯತೆ ತೋರಬೇಕಿತ್ತೆಂದು ಹೇಳುತ್ತಿದ್ದಾರೆ. ಇವರ ಮಾತುಗಳನ್ನು ಕೇಳಿದರೆ, ನಾಳೆ ಜಾಗತಿಕ ಭೂಪಟದಲ್ಲಿ ಇಸ್ರೇಲ್ ಇರುವುದಿಲ್ಲ. ಮಾತಾಡುವವರು ತಮ್ಮ ಕೆಲಸ ಮುಂದುವರಿಸಲಿ, ಇಸ್ರೇಲ್ ತನ್ನ ಕೆಲಸವನ್ನು ಮುಂದುವರಿಸುತ್ತದೆ. ಹಮಾಸ್ ವಿರುದ್ಧದ ಸಂಘರ್ಷ ಇನ್ನೇನು ಒಂದು ವರ್ಷ ಪೂರೈಸಲಿದೆ. ಇಸ್ರೇಲ್ ವಿರುದ್ಧ ಎಲ್ಲ ದಿಕ್ಕುಗಳಿಂದ ವೈರಿಗಳು ಮುಗಿಬಿದ್ದಿದ್ದಾರೆ. ಆದರೆ ತನ್ನನ್ನು ರಕ್ಷಿಸಿಕೊಳ್ಳಲು ಇಸ್ರೇಲ್ ಹೋರಾಟ ಮಾಡಿದರೆ, ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕೆಲವರು ಬೊಬ್ಬೆ ಹಾಕುತ್ತಿರುವುದು ಹಾಸ್ಯಾಸ್ಪದ ಮತ್ತು ವಿಪರ್ಯಾಸ.

‘ಇನ್ನು ಹೆಚ್ಚು ದಿನ ಇಸ್ರೇಲ್ ಇರುವುದಿಲ್ಲ’ ಎಂದು ಖೊಮೇನಿ ಹೇಳಿದರೆ ಯಾರೂ ಅದನ್ನು ಖಂಡಿಸುವುದಿಲ್ಲ. ಅದಕ್ಕೆ ಇಸ್ರೇಲ್ ಪ್ರತೀಕಾರ ತೆಗೆದುಕೊಂಡರೆ, ಅದು ಮಹಾಪರಾಧವಾಗಿ ಕಾಣುತ್ತದೆ.

Enough!

ಈ ಸುದ್ದಿಯನ್ನೂ ಓದಿ: Vishweshwar Bhat Column: ಆಗಸದಲ್ಲಿ ತಪ್ಪಿದ ದುರಂತ

ಸಾವು ಏಕೆ ಮುಖ್ಯ?

ಒಮ್ಮೆ ರಾಜನಿಗೆ ಅನಿಸಿತು. ( Vishweshwar Bhat Column) ಮನುಷ್ಯ ಅರವತ್ತೋ, ಎಪ್ಪತ್ತೋ, ತೊಂಬತ್ತೋ ವರ್ಷ ಬದುಕುತ್ತಾನಲ್ಲ, ಆತನ ಸಾವಿನಲ್ಲಿ ಅವನ ಅನುಭವ, ಪರಿಶ್ರಮ, ಸಾಧನೆ, ಜ್ಞಾನ ಗಳಿಕೆ ಎಲ್ಲವೂ ಮಣ್ಣಿನಲ್ಲಿ ಹೊರಟು ಹೋಗುತ್ತವೆ. ಒಬ್ಬ ವ್ಯಕ್ತಿಯ ಅಷ್ಟು ವರ್ಷಗಳ ಹೋರಾಟ ನಿರರ್ಥಕವಾಗುತ್ತದೆ. ಅದರ ಬದಲು ಮನುಷ್ಯನಿಗೆ ಸಾವೇ ಬರದಿದ್ದರೆ?

ಈ ಕತೆಯನ್ನು ನೀವು ಕೇಳಿದ್ದೀರೋ, ಇಲ್ಲವೋ ಗೊತ್ತಿಲ್ಲ. ಇದನ್ನು ನನಗೆ ಹೇಳಿದವರು ಯೋಗಿ ದುರ್ಲಭಜೀ.
ಒಮ್ಮೆ ರಾಜನಿಗೆ ಅನಿಸಿತು. ಮನುಷ್ಯ ಅರವತ್ತೋ, ಎಪ್ಪತ್ತೋ, ತೊಂಬತ್ತೋ ವರ್ಷ ಬದುಕುತ್ತಾನಲ್ಲ, ಆತನ ಸಾವಿನಲ್ಲಿ ಅವನ ಅನುಭವ, ಪರಿಶ್ರಮ, ಸಾಧನೆ, ಜ್ಞಾನ ಗಳಿಕೆ ಎಲ್ಲವೂ ಮಣ್ಣಿನಲ್ಲಿ ಹೊರಟು ಹೋಗುತ್ತವೆ. ಒಬ್ಬ ವ್ಯಕ್ತಿಯ ಅಷ್ಟು ವರ್ಷಗಳ ಹೋರಾಟ ನಿರರ್ಥಕವಾಗುತ್ತದೆ. ಅದರ ಬದಲು ಮನುಷ್ಯನಿಗೆ ಸಾವೇ ಬರದಿದ್ದರೆ? ಬೇರೆಯವರ ವಿಷಯವಿರಲಿ, ನಾನಂತೂ ಸಾಯಬಾರದು. ಆಗ ನಾನು ಗಳಿಸಿದ ಹಣ, ಜ್ಞಾನವೆಲ್ಲವನ್ನೂ ಕಾಪಾಡಿಕೊಳ್ಳಬಹುದು ಎಂದು ಅವನಿಗೆ ಅನಿಸಿತು.

ಹಾಗಾದರೆ ಸಾವು ಬರದಿರುವಂತೆ ಮಾಡಲು ಏನು ಮಾಡಬೇಕು? ಅಮರತ್ವವನ್ನು ಪಡೆಯುವುದು ಹೇಗೆ?
ಈ ಪ್ರಶ್ನೆಯನ್ನು ರಾಜ ಒಬ್ಬ ಮಹಾತ್ಮನಿಗೆ ಕೇಳಿದ. ಆತ, ‘ಮಹಾರಾಜ, ಅಲ್ಲಿ ಕಾಣುವ ಆ ಪರ್ವತದ ತಪ್ಪಲಿನಲ್ಲಿ ಒಂದು ಕೊಳವಿದೆ. ಅದರ ನೀರನ್ನು ಕುಡಿ. ನಿನಗೆ ಸಾವೇ ಬರುವುದಿಲ್ಲ’ ಎಂದು ಹೇಳಿದ.

ಆ ಮಹಾತ್ಮ ಹೇಳಿದಂತೆ ರಾಜ ಪರ್ವತದ ತಪ್ಪಲಿಗೆ ಹೋದ. ಅಲ್ಲೊಂದು ತಿಳಿನೀಲಿ ನೀರಿನ ಕೊಳ ಕಾಣಿಸಿತು. ಆ ಕೊಳದಿಂದ ಬೊಗಸೆಯಲ್ಲಿ ಸಂತೃಪ್ತನಾಗುವಷ್ಟು ನೀರು ಕುಡಿದ. ಅಷ್ಟರಲ್ಲಿ ಅವನಿಗೆ ಯಾರದೋ ನರಳಿಕೆಯ ಸ್ವರ ಕೇಳಿಸಿತು. ರಾಜ ಆತನ ಬಳಿ ಹೋಗಿ, ‘ಯಾಕೆ ನರಳುತ್ತಿದ್ದೀಯಾ, ನಿನ್ನ ಸಮಸ್ಯೆ ಏನು?’ ಎಂದು ಕೇಳಿದ.
ಅದಕ್ಕೆ ಆತ, ‘ನಾನು ಈ ಕೊಳದ ನೀರನ್ನು ಕುಡಿದು ಅಮರತ್ವವನ್ನು ಗಳಿಸಿದೆ. ನನ್ನ ಮಗ ನನ್ನನ್ನು ಮನೆಯಿಂದ ಹೊರ ಹಾಕಿದ. ಕಳೆದ ಐವತ್ತು ವರ್ಷಗಳಿಂದ ನಾನು ಇಲ್ಲಿ ನರಳುತ್ತಾ ಬಿದ್ದಿದ್ದೇನೆ. ನನ್ನನ್ನು ನೋಡಲು ಯಾರೂ ಬಂದಿಲ್ಲ. ಈ ಮಧ್ಯೆ ನನ್ನ ಮಗ ಸತ್ತು ಹೋದ. ಈಗ ನನ್ನ ಮೊಮ್ಮಕ್ಕಳಿಗೆ ವಯಸ್ಸಾಗಿದೆ. ನಾನು ಏನನ್ನೂ ಸೇವಿಸುತ್ತಿಲ್ಲ, ಕುಡಿಯುತ್ತಿಲ್ಲ, ಆದರೂ ಬದುಕಿದ್ದೇನೆ. ಈ ಬಾಳು ಯಾರಿಗೂ ಬೇಡ’ ಎಂದು ಹೇಳಿದ.
ರಾಜ ಯೋಚನೆಗೆ ಬಿದ್ದ. ಮುದುಕನಾಗಿ ಅಮರತ್ವ ಪಡೆಯುವುದರಲ್ಲಿ ಏನು ಪ್ರಯೋಜನವಿದೆ ಎಂದು ಅವನಿಗೆ ಅನಿಸಿತು.

ತಟ್ಟನೆ ಮಹಾತ್ಮನಲ್ಲಿಗೆ ಹೋಗಿ, ‘ನನಗೆ ಅಮರತ್ವವೊಂದೇ ಬೇಡ. ಜತೆಗೆ ಯವ್ವನವೂ ಬೇಕು. ಅವೆರಡನ್ನೂ ಸಾಧಿಸುವುದು ಹೇಗೆ?’ ಎಂದು ಕೇಳಿದ. ಅದಕ್ಕೆ ಆ ಮಹಾತ್ಮ, ‘ಅಲ್ಲಿ ಇನ್ನೊಂದು ಪರ್ವತ ಕಾಣುತ್ತಿದೆಯಲ್ಲ, ಅದರಾಚೆ ಒಂದು ಕೊಳವಿದೆ. ಆ ಕೊಳದ ಪಕ್ಕದ ಮರದಲ್ಲಿರುವ ಹಣ್ಣನ್ನು ಸೇವಿಸಿದರೆ, ಯವ್ವನ ಮತ್ತು ಅಮರತ್ವ ಪ್ರಾಪ್ತವಾಗುತ್ತವೆ’ ಎಂದು ಹೇಳಿದ.

ರಾಜ ಕುದುರೆಯನ್ನೇರಿ ಅಲ್ಲಿಗೆ ಹೊರಟ. ಆತನಿಗೆ ಮರದಲ್ಲಿ ಹಳದಿ ಹಣ್ಣುಗಳು ಬಿಟ್ಟಿರುವುದು ಕಾಣಿಸಿತು. ಇನ್ನೇನು ಒಂದು ಹಣ್ಣನ್ನು ಕಿತ್ತು ಸೇವಿಸಬೇಕು ಎನ್ನುವಷ್ಟರಲ್ಲಿ ಆತನಿಗೆ ಯಾರೋ ಜೋರಾಗಿ ಜಗಳವಾಡುವ ದನಿ ಕೇಳಿಸಿತು. ಈ ನಿರ್ಜನ ಸ್ಥಳದಲ್ಲಿ ಯಾರು ಜಗಳವಾಡುತ್ತಿದ್ದಾರೆ ಎಂದು ರಾಜನಿಗೆ ಅಚ್ಚರಿಯಾಯಿತು. ನಾಲ್ವರು ಯುವಕರು ಮಾರಾಮಾರಿಗೆ ತೋಳೇರಿಸಿ ನಿಂತಿದ್ದರು.

ಅವರ ಪೈಕಿ ಒಬ್ಬ ಹೇಳಿದ – ‘ನನಗೆ ಇನ್ನೂರೈವತ್ತು ವರ್ಷಗಳಾದವು. ಈತನಿಗೆ ಮುನ್ನೂರು ವರ್ಷಗಳಾದವು. ಈತ ನನಗೆ ಆಸ್ತಿಯಲ್ಲಿ ಪಾಲು ಕೊಡುತ್ತಿಲ್ಲ’ ಎಂದು ಹೇಳಿದ.

ರಾಜ ಮುನ್ನೂರು ವರ್ಷದವನ ಹತ್ತಿರ ಹೋಗಿ, ‘ನೀನೇಕೆ ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲ’ ಎಂದು ಕೇಳಿದಾಗ, ‘ಮುನ್ನೂರೈವತ್ತು ವರ್ಷದ ನನ್ನ ತಂದೆ ಇನ್ನೂ ಬದುಕಿದ್ದಾರೆ. ಆತ ನನಗೆ ಆಸ್ತಿಯಲ್ಲಿ ಪಾಲು ನೀಡಿಲ್ಲ. ಹೀಗಿರುವಾಗ ನಾನು ಹೇಗೆ ನನ್ನ ಮಗನಿಗೆ ಪಾಲನ್ನು ನೀಡಲಿ?’ ಎಂದು ಪ್ರಶ್ನಿಸಿದ.

ಮುನ್ನೂರೈವತ್ತು ವರ್ಷದವನನ್ನು ರಾಜ ಪ್ರಶ್ನಿಸಿದ. ಅದಕ್ಕೆ ಆತ, ‘ನಾನೂರು ವರ್ಷದ ನನ್ನ ತಂದೆಯೇ ನನಗೆ ಆಸ್ತಿಯಲ್ಲಿ ಪಾಲು ನೀಡಿಲ್ಲ. ನಾನು ಹೇಗೆ ನನ್ನ ಮಗನಿಗೆ ಪಾಲು ನೀಡಲಿ?’ ಎಂದು ಕೇಳಿದ. ರಾಜನಿಗೆ ಈ ಸಮಸ್ಯೆ ಎಂದೆಂದೂ ಬಗೆಹರಿಯುವುದಿಲ್ಲ ಎಂದು ಖಾತ್ರಿಯಾಯಿತು.

ಈ ಜಗಳ ಬಗೆಹರಿಯದ್ದರಿಂದ ಊರಿನ ಜನರೆಲ್ಲ ಸೇರಿ ಅವರನ್ನು ಗಡಿಪಾರು ಮಾಡಿದ್ದರೆಂದೂ, ಅದಕ್ಕಾಗಿ ಅವರೆಲ್ಲ ಈಗ ಕೊಳದ ಸನಿಹ ಬಂದು ಜಗಳವಾಡುತ್ತಿದ್ದಾರೆಂದೂ ರಾಜನಿಗೆ ತಿಳಿಯಿತು.
ತಕ್ಷಣ ಅಲ್ಲಿಂದ ಕುದುರೆಯನ್ನೇರಿ ರಾಜ, ಮಹಾತ್ಮ ಇದ್ದಲ್ಲಿಗೆ ಧಾವಿಸಿ, ‘ಥತ್,ಈ ಅಮರತ್ವ ಮತ್ತು ಯವ್ವನ ಯಾರಿಗೆ ಬೇಕು? ಸಾವಿನ ಮಹತ್ವವನ್ನು ನನಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು. ನನಗೆ ಅಮರತ್ವವೂ ಬೇಡ, ಶಾಶ್ವತ ಯವ್ವನವೂ ಬೇಡ’ ಎಂದು ಕೈಮುಗಿದ.

ಆಗ ಮಹಾತ್ಮ ಹೇಳಿದ – ‘ಸಾವು ಇರುವುದರಿಂದಲೇ ಜಗತ್ತಿನಲ್ಲಿ ಪ್ರೀತಿ ಇದೆ. ಪ್ರತಿ ಕ್ಷಣವನ್ನೂ ಪ್ರೀತಿಯಿಂದ, ಸಂತಸದಿಂದ ಇರುವುದನ್ನು ರೂಢಿಸಿಕೊಳ್ಳಬೇಕು. ಹುಟ್ಟಿದವರೆಲ್ಲ ಸಾಯುವುದೇ ಮೇಲು. ಸಾವು ಇರದಿದ್ದರೆ ಬದುಕಿಗೆ ಅರ್ಥವೇ ಇಲ್ಲ.’

ಮಾನಸಿಕ ಬಲಿಷ್ಠರು ಯಾರು?

ಮಾನಸಿಕವಾಗಿ ಬಲಿಷ್ಠವಾಗಿರುವ ವ್ಯಕ್ತಿಗಳು ಆರು ಗುಣವಿಶೇಷಗಳನ್ನು ಹೊಂದಿರುತ್ತಾರಂತೆ. ಇದನ್ನು ನಾನು ‘ಪಾಸಿಟಿವ್ ಲೈಫ್’ ಪತ್ರಿಕೆಯಲ್ಲಿ ಓದಿದ್ದು. ಅವು ಯಾವುದೆಂದು ನೋಡೋಣ.

  1. ಅವರು ತಮ್ಮ ಬಗ್ಗೆ ಕನಿಕರಪಡುವುದಿಲ್ಲವಂತೆ. ಏನೇ ಆದರೂ ಒಂದು ಕ್ಷಣ ಆದ ಘಟನೆಗೆ ವಿಷಾದ ವ್ಯಕ್ತಪಡಿಸಿ, ಮುಂದಿನ ಕ್ಷಣದಲ್ಲಿ ಏನೂ ಆಗಿಯೇ ಇಲ್ಲ ಎಂಬಂತೆ, ತಮ್ಮ ಪಾಡಿಗೆ ಮುಂದಕ್ಕೆ ಸಾಗುತ್ತಾರಂತೆ.
  2. ಅವರು ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾರಂತೆ, ಅಪ್ಪಿಕೊಳ್ಳುತ್ತಾರಂತೆ. ಅವರು ಸವಾಲುಗಳನ್ನು ಸ್ವಾಗತಿಸುತ್ತಾರಂತೆ.
  3. ಅವರು ಸಾಧ್ಯವಾದಷ್ಟು ಸಂತಸವಾಗಿರಲು ಬಯಸುತ್ತಾರಂತೆ. ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಾನಸಿಕ ಸಮತೋಲನ ಮತ್ತು ಸಮಾಧಾನವನ್ನು ಕಳೆದುಕೊಳ್ಳುವುದಿಲ್ಲವಂತೆ. ತಮ್ಮಿಂದ ನಿಯಂತ್ರಿಸಲಾಗದ ಸಂಗತಿಗಳ ಮೇಲೆ ತಮ್ಮ ಶಕ್ತಿಯನ್ನು ಪೋಲು ಮಾಡುವುದಿಲ್ಲವಂತೆ.
  4. ಅವರು ಬೇರೆಯವರ ಅಭಿಪ್ರಾಯಗಳನ್ನು ಮನ್ನಿಸುತ್ತಾರಂತೆ. ಆದರೆ ತಮಗೆ ಅನಿಸಿದ್ದನ್ನು ನೇರವಾಗಿ ಹೇಳಲು ಹಿಂಜರಿಯುವುದಿಲ್ಲವಂತೆ.
  5. ಅವರು ಕಠಿಣ ಪರಿಸ್ಥಿತಿಯನ್ನು ಎದುರಿಸಲು ಹೆದರುವುದಿಲ್ಲವಂತೆ. ಒಂದು ಹಂತದವರೆಗಿನ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲವಂತೆ.
  6. ಅವರು ಬೇರೆಯವರ ಯಶಸ್ಸನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಾರಂತೆ ಮತ್ತು ಎಲ್ಲರ ಎದುರು ಅಂಥವರನ್ನು ಹೊಗಳುತ್ತಾರಂತೆ. ಬೇರೆಯವರನ್ನು ಹೊಗಳಿದರೆ, ತಾವು ಕುಬ್ಜರಾಗುತ್ತೇವೆ ಎಂದು ಯೋಚಿಸುವುದಿಲ್ಲವಂತೆ.

ಈ ಸುದ್ದಿಯನ್ನೂ ಓದಿ: Vishweshwar Bhat Column: ಹಿಂದಕ್ಕೆ ಬರಲಾಗದ, ಮುಂದ‌ಕ್ಕೆ ಹೋಗಲಾಗದ, ಇದ್ದಲ್ಲಿ ಇರಲಾಗದ ಸ್ಥಿತಿ